ADVERTISEMENT

ಪ್ರಜಾವಾಣಿ ಸಂದರ್ಶನ: ‘ಕರ್ಮಚಾರಿ’ಯನ್ನು ‘ಕರ್ಮಯೋಗಿ’ ಆಗಿಸುವತ್ತ

ಸಿದ್ದಯ್ಯ ಹಿರೇಮಠ
Published 5 ಜುಲೈ 2021, 19:30 IST
Last Updated 5 ಜುಲೈ 2021, 19:30 IST
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಡಾ.ಆರ್. ಬಾಲಸುಬ್ರಹ್ಮಣ್ಯಂ
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಡಾ.ಆರ್. ಬಾಲಸುಬ್ರಹ್ಮಣ್ಯಂ   

ಸರ್ಕಾರಿ ನೌಕರರಲ್ಲಿನ ಸಾಮರ್ಥ್ಯ ಬಲಪಡಿಸಿ ಜನತೆಗೆ ಉತ್ತಮ ಸೇವೆ ಒದಗಿಸಬೇಕು ಎಂಬ ಉದ್ದೇಶದಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ‘ಕರ್ಮಯೋಗಿ’ ಮಿಷನ್‌ ಅಡಿ ಸಾಮರ್ಥ್ಯ ವೃದ್ಧಿ ಆಯೋಗ (ಕೆಪ್ಯಾಸಿಟಿ ಬಿಲ್ಡಿಂಗ್ ಕಮಿಷನ್) ಸ್ಥಾಪಿಸಲಾಗಿದೆ. ವಿವಿಧ ಕ್ಷೇತ್ರಗಳ ಮೂವರು ‘ಸಮರ್ಥ’ರನ್ನು ಈ ಆಯೋಗದ ಆಯುಕ್ತರನ್ನಾಗಿ ನೇಮಿಸಲಾಗಿದೆ. ಆ ಪೈಕಿ ಒಬ್ಬರು ಕನ್ನಡಿಗರು.ಮೈಸೂರಿನ ಸ್ವಾಮಿ ವಿವೇಕಾನಂದ ಯುಥ್ ಮೂವ್‌ಮೆಂಟ್ ಸಂಸ್ಥೆಯ ಸಂಸ್ಥಾಪಕ, ವೃತ್ತಿಯಿಂದ ವೈದ್ಯರಾಗಿರುವ ಡಾ.ಆರ್. ಬಾಲಸುಬ್ರಹ್ಮಣ್ಯಂ ಅವರೇ ಆ ಹೆಮ್ಮೆಯ ಕನ್ನಡಿಗ. ಆಯೋಗದ ಸ್ವರೂಪ, ಕಾರ್ಯವೈಖರಿ, ಜವಾಬ್ದಾರಿ ಕುರಿತು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದಲ್ಲಿ ವಿವರ ನೀಡಿದ್ದಾರೆ.

* ಆಯೋಗದ ಸ್ವರೂಪ ಮತ್ತು ಕಾರ್ಯವೈಖರಿ ಎಂಥದು?
ಮೂರು ಕ್ಷೇತ್ರಗಳ ವಿಷಯ ತಜ್ಞರನ್ನು ಆಯೋಗಕ್ಕೆ ನೇಮಿಸಲಾಗಿದೆ. ಕ್ವಾಲಿಟಿ ಕೌನ್ಸಿಲ್‌ ಆಫ್ ಇಂಡಿಯಾದ ಅಧ್ಯಕ್ಷರೂ ಆಗಿರುವ ಆದಿಲ್‌ ಝೈನುಲ್‌ಭಾಯಿ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಗ್ರೇಟರ್‌ ಮುಂಬೈ ಮಹಾನಗರ ಪಾಲಿಕೆಯ ಆಯುಕ್ತರೂ, ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಹಿರಿಯ ಐಎಎಸ್‌ ಅಧಿಕಾರಿ ಪ್ರವೀಣ ಪರ್ದೇಶಿ ಮತ್ತು ನಾನು ಸದಸ್ಯರಾಗಿದ್ದೇವೆ.

ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳಿಗೆ ಆರಂಭದಲ್ಲಿ ಸೇವೆ ಮತ್ತು ನೈಪುಣ್ಯ ತರಬೇತಿ ನೀಡಲಾಗುತ್ತದೆ. ಸ್ವಾತಂತ್ರ್ಯಾನಂತರ ಆ ವ್ಯವಸ್ಥೆಯೇ ಮುಂದುವರಿದಿದೆ. ಸೇವೆಯ ಕೆಲ ವರ್ಷಗಳ ನಂತರ ಅವರು ಜನಸಂಪರ್ಕದಿಂದ ದೂರವಾಗುತ್ತಾರೆ. ಆದರೂ ಮಿಡ್‌ ಕೆರಿಯರ್‌ ತರಬೇತಿಗೂ, ವಿದೇಶಗಳಿಗೆ ತೆರಳಿ ವಿಧವಿಧವಾದ ತರಬೇತಿ ಪಡೆಯುವುದಕ್ಕೂ ಅವಕಾಶ ಇದೆ. ಆದರೆ, ಆ ಅವಕಾಶ ಜನಸಾಮಾನ್ಯರ ನೇರ ಸಂಪರ್ಕದ ಕ್ಲೆರಿಕಲ್‌ ಹಂತದಿಂದ ಮೇಲ್ಮಟ್ಟದ ಅಧಿಕಾರಿಗಳಿಗೆ ಇರುವುದಿಲ್ಲ. ಅಂಥ ಸಿಬ್ಬಂದಿಯಲ್ಲೂ ಸೇವಾ ಮನೋಭಾವ ರೂಢಿಸುವ, ‘ನಾನೊಬ್ಬ ಸರ್ಕಾರಿ ನೌಕರ ಅಲ್ಲ, ಸರ್ಕಾರಿ ಸೇವಕ’ ಎಂಬ ಭಾವನೆ ಮೂಡಿಸುವಲ್ಲಿ ಅಗತ್ಯ ತರಬೇತಿ ನೀಡಿ, ಜನರಿಗೆ ನೀಡುವ ಸೇವಾ ವಿಧಾನದಲ್ಲಿ ಪರಿವರ್ತನೆ ತರುವ ಹೊಣೆ ಆಯೋಗದ್ದಾಗಿದೆ.

ADVERTISEMENT

ನಮ್ಮದು ಇತರ ಆಯೋಗಗಳಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸುವುದಕ್ಕೆ ಸೀಮಿತವಾಗಿರದೆ, ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರುವ ಶಾಶ್ವತ ಆಯೋಗ. ನೀತಿ ರೂಪಿಸುವ ಸಲಹೆಯನ್ನೂ ಆಯೋಗವು ಪ್ರಧಾನಿ ಕಾರ್ಯಾಲಯಕ್ಕೆ ನೀಡಲಿದೆ. ಮಾನವ ಸಂಪನ್ಮೂಲದ ಲೆಕ್ಕ ಪರಿಶೋಧನೆ ಕಾರ್ಯವನ್ನೂ ಮಾಡಲಿದೆ.

* ತರಬೇತಿಯಿಂದ ಮಾತ್ರ ಪರಿವರ್ತನೆ ಸಾಧ್ಯವೇ?
ಮಾನವ ಸಂಪನ್ಮೂಲ ಬಳಸಿ ಸಂದಿಗ್ಧ ಸ್ಥಿತಿಗಳನ್ನು ನಿರ್ವಹಿಸುವುದು ಸರ್ಕಾರಕ್ಕೆ ಮಾತ್ರ ಸಾಧ್ಯ. ಅದಕ್ಕೆ ಕೋವಿಡ್‌–19 ಸ್ಥಿತಿ ಸೂಕ್ತ ನಿದರ್ಶನ. ಹಾಗಾಗಿ, ಪ್ರತಿಯೊಬ್ಬ ನೌಕರನ ನೆರವಿನೊಂದಿಗೆ ಜನರ ಜೀವನವನ್ನು ಸುಲಭಗೊಳಿಸುವಲ್ಲಿ ಸರ್ಕಾರದ ಪಾತ್ರ ಮುಖ್ಯ. ಆ ದಿಸೆಯಲ್ಲೇ ತರಬೇತಿ ಅತ್ಯಗತ್ಯ. ಪ್ರತಿ ಸಿಬ್ಬಂದಿಯ ಮನಃ ಪರಿವರ್ತನೆಯೂ ಈ ತರಬೇತಿಯಿಂದ ಸಾಧ್ಯ.

* ಈಗ ಸಮರ್ಪಕ ತರಬೇತಿಯ ಕೊರತೆ ಇದೆಯೇ?
ಹೌದು. ಕೆಳಹಂತದ ನೌಕರರಿಗೆ ಅಗತ್ಯ ಸಂದರ್ಭದ ತರಬೇತಿಯ ಕಲ್ಪನೆಯೇ ಈಗ ಇಲ್ಲ. ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ವರ್ಗವಾಗಿ, ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಅಧಿಕಾರಿಗಳ, ಸಿಬ್ಬಂದಿಯ ನಿರ್ದಿಷ್ಟ ಪಾತ್ರವನ್ನು ಅರ್ಥೈಸಿಕೊಂಡು, ಕೌಶಲವನ್ನೂ ಗುರುತಿಸಲಾಗುವುದು. ಅವರಲ್ಲಿ ಮನಃ ಪರಿವರ್ತನೆ ತರುವುದು ದೊಡ್ಡ ಸವಾಲು. ಈ ಕಾರ್ಯಕ್ಕೆ ದಶಕವೇ ಬೇಕಾಗಬಹುದು.

ಸರ್ಕಾರಿ ಸೇವೆ ಒದಗಿಸುವ ವೇಳೆ ನಿಯಮಾಧಾರಿತ ವಿಧಾನ (ರೂಲ್‌ ಬೇಸ್ಡ್‌) ಕೈಬಿಟ್ಟು ಪಾತ್ರಾಧಾರಿತ (ರೋಲ್‌ ಬೇಸ್ಡ್‌) ವಿಧಾನಕ್ಕೆ ಆದ್ಯತೆ ನೀಡುವಂತಾಗಬೇಕು. ಪ್ರತಿ ನೌಕರ ತನ್ನ ಹೊಣೆ ಅಥವಾ ಪಾತ್ರಕ್ಕೆ ಅನುಗುಣವಾಗಿ ವರ್ತಿಸುವುದೂ ಮುಖ್ಯ. ಆರಂಭಿಕ ಹಂತದಲ್ಲಿ ಕೇಂದ್ರ ಸರ್ಕಾರದ 51 ಇಲಾಖೆಗಳಲ್ಲಿನ ನಾಗರಿಕ ಸಂಪರ್ಕದಲ್ಲಿರುವ ಸಿಬ್ಬಂದಿಗೆ ಕಡ್ಡಾಯ ತರಬೇತಿ ನೀಡಲಾಗುತ್ತದೆ. ತರಬೇತಿ ಸಂಸ್ಥೆಗಳಿಗೂ ಹೊಸ ರೂಪ ನೀಡಿ, ಆಯಾ ಇಲಾಖಾವಾರು ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಸಾಮರ್ಥ್ಯ ವೃದ್ಧಿಸುವ ಆಲೋಚನೆ ಇದೆ. ಪ್ರಜಾಕೇಂದ್ರಿತ ಆಡಳಿತ ವ್ಯವಸ್ಥೆಯ ಜಾರಿಯೇ ಆಯೋಗದ ಗುರಿ.

* ಆಯೋಗ ತರಲು ಹೊರಟಿರುವ ಪರಿವರ್ತನೆ ಎಂಥದು?
ಇದುವರೆಗೂ ಕೆಳಹಂತದ ಸಿಬ್ಬಂದಿಗೆ ನಿರ್ದಿಷ್ಟ ತರಬೇತಿ ದೊರೆತಿಲ್ಲ. ಮನಃ ಪರಿವರ್ತಿಸುವ ಕೆಲಸಗಳೇ ಆಗಿಲ್ಲ. ಜೊತೆಗೆ ನಮ್ರತೆ, ವಿನಮ್ರತೆಯನ್ನೂ, ರಾಷ್ಟ್ರಸೇವೆಯ ಪರಿಕಲ್ಪನೆಯನ್ನೂ ಅಳವಡಿಸಿಕೊಳ್ಳಬೇಕು. ‘ನಾನೊಬ್ಬ ನೌಕರ’ ಎಂಬ ಪರಿಕಲ್ಪನೆ ಬಿಟ್ಟು ‘ನಾನೊಬ್ಬ ಸೇವಕ’ ಎಂದೇ ಭಾವಿಸುವಂತೆ ಪ್ರೇರೇಪಿಸಲಾಗುವುದು.

ದೇಶದಾದ್ಯಂತ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ 739 ತರಬೇತಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ನಾಯಕತ್ವ ತರಬೇತಿ ನೀಡುವವರು ಸಾಮಾನ್ಯವಾಗಿ ಒಂದೇ ರೀತಿಯ ತರಬೇತಿ ನೀಡುತ್ತಾರೆ. ಅಂಥವರನ್ನು ಬಿಡಿಬಿಡಿಯಾಗಿ ಬಳಸಿಕೊಳ್ಳದೆ, ಎಲ್ಲರಿಗೂ ಉಪಯುಕ್ತವಾಗುವಂತೆ ಬಳಸಿಕೊಳ್ಳುವುದೂ ನಮ್ಮ ಉದ್ದೇಶ.

ಮುಖ್ಯವಾಗಿ ಯಾವುದೇ ವಿಷಯದ ಕುರಿತು ಉದಾಹರಣೆ ನೀಡುವಾಗ ಸ್ಥಳೀಯ ವಿವರಣೆ ಒಳಗೊಂಡ ನಮ್ಮ ಅನುಭವಗಳನ್ನೇ ಬೋಧಿಸುವ ಅಗತ್ಯವಿದೆ. ಸವಾಲು ಸ್ವೀಕರಿಸಿ ಸಾಧಿಸಿ ತೋರಿದವರ ನಿದರ್ಶನವನ್ನೇ ನೀಡುವ ಜ್ಞಾನ ಭಂಡಾರ ಸೃಷ್ಟಿಸುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಿದ್ದೇವೆ.

* ತರಬೇತುದಾರರ ಪಾತ್ರ ಮತ್ತು ಸಾಮರ್ಥ್ಯ ಏನು?
ತರಬೇತುದಾರನ ಹುದ್ದೆ ಎಂದರೆ ಕಾಟಾಚಾರದ ಹುದ್ದೆ, ನಿರ್ಲಕ್ಷಿತ ಹುದ್ದೆ ಎಂಬ ಕಲ್ಪನೆ ಇದೆ. ತರಬೇತುದಾರ ಮಹಾನ್‌ ವ್ಯಕ್ತಿ ಎಂಬ ಭಾವನೆ ಮೂಡುವಂತಾಗಬೇಕು. ಅವರ ಆತ್ಮವಿಶ್ವಾಸ ವೃದ್ಧಿಸಿ, ಅವರ ನೆರವಿನಿದಲೇ ಮೂರು ಹಂತದ ಸಾಮರ್ಥ್ಯ ವೃದ್ಧಿಯ ಕಾರ್ಯ ಮಾಡುತ್ತೇವೆ. ವೈಯಕ್ತಿಕ ಹಂತ, ಇಲಾಖಾ ಹಂತ ಮತ್ತು ಸರ್ಕಾರಿ ಹಂತ ನಮ್ಮ ಗುರಿ. ಪ್ರತಿ ನೌಕರನ ದಕ್ಷತೆಯ ಮೌಲ್ಯಮಾಪನವನ್ನೂ ತಂತ್ರಜ್ಞಾನ ಬಳಸಿ ಮಾಡಲಾಗುತ್ತದೆ.

* ಆಯೋಗ ಮತ್ತೆ ಯಾವ ಗುರಿ ಇರಿಸಿಕೊಂಡಿದೆ?
ವಿವಿಧ ವಿಷಯಗಳ ಕುರಿತ ಚರ್ಚೆಗೆ ಜಗತ್ತಿನಾದ್ಯಂತ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಆದರೆ, ಮಾನವ ಸಂಪನ್ಮೂಲದ ಸದ್ಬಳಕೆಗೆ ತರಲಾದ ಸುಧಾರಣೆ ಕುರಿತು ಚರ್ಚಿಸಲು ಜಾಗತಿಕ ಸಮಾವೇಶ ಏರ್ಪಡಿಸುವುದು ನಮ್ಮ ಗುರಿ. ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಸಾಮರ್ಥ್ಯ ಹೆಚ್ಚಳಕ್ಕೆ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕೆಂಬುದೇ ಈ ಸಮಾವೇಶದ ಉದ್ದೇಶ. ಆ ಮಾದರಿಯ ಸಮಾವೇಶ ಜಗತ್ತಿನಲ್ಲೇ ಪ್ರಥಮ ಎಂಬುದೂ ವಿಶೇಷ. ಜನರು ಮತ್ತು ನೌಕರರು ಏನನ್ನು ಬಯಸುತ್ತಾರೆ ಎಂಬುದನ್ನೂ ಸಮೀಕ್ಷೆ ಮೂಲಕ ಕಂಡುಕೊಳ್ಳುತ್ತೇವೆ.

-ಡಾ.ಆರ್. ಬಾಲಸುಬ್ರಹ್ಮಣ್ಯಂ

* ಭ್ರಷ್ಟಾಚಾರ ಕೊನೆಗಾಣಿಸುವ ಉದ್ದೇಶವೂ ಇದೆಯೇ?
ಭ್ರಷ್ಟಾಚಾರದ ಬಗ್ಗೇ ಮಾತನಾಡುವುದು ನಕಾರಾತ್ಮಕವಾದ ವಿಚಾರ. ಹಾಗಾಗಿ, ಸಕಾರಾತ್ಮಕತೆಯೇ ನಮ್ಮ ಆಲೋಚನೆ. ನಾವು ಸದ್ವಿಚಾರ, ಸದ್ಭಾವನೆ, ಸದ್ಮೌಲ್ಯಗಳನ್ನು ಹೊಂದಿರುವ ಮನಃಸ್ಥಿತಿಯನ್ನು ರೂಪಿಸಿದಲ್ಲಿ ಇಂದಲ್ಲ ನಾಳೆ ವ್ಯವಸ್ಥೆಯೇ ಬದಲಾಗುತ್ತದೆ. ಆ ದಿಸೆಯಲ್ಲಿ ಇರಿಸಲಾದ ಮೊದಲ ಹೆಜ್ಜೆ ಇದಾಗಿದೆ. ಈಗಿರುವ ಭ್ರಷ್ಟ ವ್ಯವಸ್ಥೆಯಿಂದ ಲಾಭ ಪಡೆಯುವವರು ಇದನ್ನು ವಿರೋಧಿಸುತ್ತಾರೆ. ನಮ್ಮ ವೈಫಲ್ಯ ಬಯಸುತ್ತಾರೆ. ಪ್ರತಿ ನೌಕರನನ್ನೂ ‘ಕರ್ಮಚಾರಿ’ ಎಂಬ ಧೋರಣೆಯಿಂದ ‘ಕರ್ಮಯೋಗಿ’ ಎಂಬ ಧೋರಣೆಯತ್ತ ಕೊಂಡೊಯ್ಯುವುದೇ ನಮ್ಮ ಉದ್ದೇಶ.

ಸಾಮರ್ಥ್ಯ ವೃದ್ಧಿ ಆಯೋಗ
ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರ, ಈ ಸಂಬಂಧ ಮಹತ್ವದ ಹೆಜ್ಜೆ ಇರಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು.

ಅಖಿಲ ಭಾರತ ಸೇವಾ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಯ ಕೌಶಲ, ದಕ್ಷತೆ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ನಾಗರಿಕ ಸೇವಾ ಸಾಮರ್ಥ್ಯ ವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮ (ನ್ಯಾಷನಲ್‌ ಪ್ರೋಗ್ರಾಂ ಫಾರ್‌ ಸಿವಿಲ್‌ ಸರ್ವೀಸಸ್‌ ಕೆಪಾಸಿಟಿ ಬಿಲ್ಡಿಂಗ್‌) ಎಂಬ ವಿನೂತನ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಗೆ ‘ಮಿಷನ್ ಕರ್ಮಯೋಗಿ’ ಎಂಬ ಹೆಸರನ್ನು ಇರಿಸಲಾಗಿದೆ.

ಈ ರಾಷ್ಟ್ರೀಯ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತಿದ್ದು, ಇದರ ಮೇಲುಸ್ತುವಾರಿಗಾಗಿ ಸಾಮರ್ಥ್ಯ ವೃದ್ಧಿ ಆಯೋಗವನ್ನು (ಕೆಪ್ಯಾಸಿಟಿ ಬಿಲ್ಡಿಂಗ್ ಕಮಿಷನ್) ರಚಿಸಲಾಗಿದೆ.

ನಾಗರಿಕ ಸೇವೆಯಲ್ಲಿರುವ ಅಧಿಕಾರಿ, ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಗಾಗಿ ಯೋಜನೆ ಅಡಿ ರೂಪಿಸಲಾಗುವ ಕಾರ್ಯಕ್ರಮಗಳನ್ನು ಈ ಆಯೋಗವು ಪರಿಶೀಲಿಸಿ, ಸಮ್ಮತಿ ನೀಡಲಿದೆ. ಸಿಬ್ಬಂದಿಗೆ ಒದಗಿಸುವ ತರಬೇತಿಯಲ್ಲಿ ಏಕರೂಪದ ವಿಧಾನ ಜಾರಿಗೊಳಿಸುವುದು ಹಾಗೂ ಸಹಕಾರ ತತ್ವದ ಆಧಾರದಲ್ಲಿ ಸಾಮರ್ಥ್ಯ ವೃದ್ಧಿಸುವ ವ್ಯವಸ್ಥೆಯನ್ನು ಈ ಆಯೋಗ ನಿರ್ವಹಿಸಲಿದೆ.

ಆರಂಭಿಕ ಹಂತದಲ್ಲಿ ಕೇಂದ್ರ ಸರ್ಕಾರದ ಅಂದಾಜು 50 ಲಕ್ಷ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಗೆ ಆಯೋಗವು ಕ್ರಮ ಕೈಗೊಳ್ಳಲಿದೆ. ಆಯಾ ರಾಜ್ಯ ಸರ್ಕಾರಗಳೂ ಆಯೋಗದ ಸಲಹೆ– ಸಹಕಾರದ ಮೂಲಕ ತನ್ನ ನೌಕರರ ಸಾಮರ್ಥ್ಯ ವೃದ್ಧಿಗೂ ಮುಕ್ತ ಅವಕಾಶ ಕಲ್ಪಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.