ADVERTISEMENT

ವರುಣ್ ಶ್ರೀಧರ್ ಸಂದರ್ಶನ | ಹಣಕಾಸು ಸೇವೆ ಎಲ್ಲರಿಗೂ ಸಿಗಬೇಕು

ಹೂಡಿಕೆ ಮಾಡಬೇಕೆಂಬ ಅರಿವನ್ನು ಜನರಲ್ಲಿ ಮೂಡಿಸುವುದು ಬಹಳ ಮುಖ್ಯ

ವಿಜಯ್ ಜೋಷಿ
Published 31 ಡಿಸೆಂಬರ್ 2020, 19:45 IST
Last Updated 31 ಡಿಸೆಂಬರ್ 2020, 19:45 IST
ಚಿತ್ರ: ಪೇಟಿಎಂ ಬ್ಲಾಗ್
ಚಿತ್ರ: ಪೇಟಿಎಂ ಬ್ಲಾಗ್   

ಡೈರೆಕ್ಟ್ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸುವುದರ ಮೂಲಕ ಹಣಕಾಸು ಸೇವೆಗಳನ್ನು ಆರಂಭಿಸಿದ ‘ಪೇಟಿಎಂ ಮನಿ’, ಈಗ ಕೆಲವು ತಿಂಗಳುಗಳಿಂದ ಷೇರು ಖರೀದಿ, ಮಾರಾಟದ ಸೇವೆಗಳನ್ನೂ ಗ್ರಾಹಕರಿಗೆ ಒದಗಿಸುತ್ತಿದೆ. ಇವುಗಳ ಜೊತೆಯಲ್ಲೇ ಎನ್‌ಪಿಎಸ್‌, ಇಟಿಎಫ್‌ ಹಾಗೂ ಚಿನ್ನದ ಮೇಲಿನ ಹೂಡಿಕೆಯ ಅವಕಾಶಗಳನ್ನು ಕೂಡ ಇದು ನೀಡುತ್ತಿದೆ. ತನ್ನ ಗ್ರಾಹಕರು ಕನಿಷ್ಠ ಒಂದು ಷೇರು, ಒಂದು ಎಸ್‌ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಎಂಬುದು ‘ಪೇಟಿಎಂ ಮನಿ’ಯ ಗುರಿ. ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವರುಣ್ ಶ್ರೀಧರ್ ಜೊತೆ ಈ ಬಗ್ಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಷೇರುಗಳ ನೇರ ಖರೀದಿ–ಮಾರಾಟ ಸೇವೆಗಳಿಗೆ ಬಳಕೆದಾರರ ಸ್ಪಂದನ ಹೇಗಿದೆ?
ನಮ್ಮ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಗ್ರಾಹಕರು ದೊಡ್ಡ ಸಂಖ್ಯೆಯಲ್ಲಿದ್ದರು. ಷೇರು ಮಾರಾಟ–ಖರೀದಿ ಆಯ್ಕೆ ನೀಡುವ ಮೊದಲು ಅದಕ್ಕೆ ಬಹಳ ಕಡಿಮೆ ಶುಲ್ಕ ನಿಗದಿ ಮಾಡಲು ತೀರ್ಮಾನಿಸಿದ್ದೆವು. ಅದರಂತೆಯೇ ಮಾಡಿದ್ದೇವೆ. ಈಗ ಇಟಿಎಫ್‌ (ಎಕ್ಸ್‌ಚೇಂಜ್‌ ಟ್ರೇಡೆಡ್ ಫಂಡ್ಸ್‌) ಮತ್ತು ಐಪಿಒ (ಷೇರುಗಳ ಆರಂಭಿಕ ಖರೀದಿ ಆಯ್ಕೆ) ಹೂಡಿಕೆಯ ಅವಕಾಶ ಕೂಡ ನಮ್ಮಲ್ಲಿ ಸಿಗುತ್ತಿದೆ. ಜನರ ಪ್ರತಿಕ್ರಿಯೆ ಬಹಳ ಖುಷಿ ಕೊಡುವಂತಿದೆ. ನಮ್ಮ ಹೆಚ್ಚಿನ ಗ್ರಾಹಕರು ಇರುವುದು ಬೆಂಗಳೂರಿನಲ್ಲಿ. ಅಂದಹಾಗೆ, ಎನ್‌ಪಿಎಸ್‌ಗೆ ಗ್ರಾಹಕರು ಕಡಿಮೆ, ಭಾರತೀಯರು ತಮ್ಮ ನಿವೃತ್ತಿ ನಂತರದ ಜೀವನಕ್ಕೆ ಹೆಚ್ಚು ಉಳಿತಾಯ ಮಾಡಲು ಬಯಸುತ್ತಿಲ್ಲ ಅನಿಸುತ್ತದೆ!

* ಸಾಂಪ್ರದಾಯಿಕ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸುವ ಆಲೋಚನೆ ಇದೆಯೇ?
50 ಕೋಟಿ ಭಾರತೀಯರು ಹಣಕಾಸು ಸೇವೆಗಳ ಬಳಕೆದಾರರಾಗುವಂತೆ ಮಾಡುವುದು ನಮ್ಮ ಗುರಿ. ಶೇಕಡ 25ರಷ್ಟು ಭಾರತೀಯರು ಕನಿಷ್ಠ ಒಂದು ಷೇರು, ಒಂದು ನಿಶ್ಚಿತ ಠೇವಣಿ, ಒಂದು ಮ್ಯೂಚುವಲ್‌ ಫಂಡ್‌ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಿರಬೇಕು ಎಂಬುದು ನಮ್ಮ ಕನಸು. ಹಣ ಸಂಪಾದಿಸುವಪ್ರತಿಯೊಬ್ಬರೂ ಅದನ್ನು ಉಳಿಸುವ ಉದ್ದೇಶವನ್ನೂ ಹೊಂದಿರುತ್ತಾರೆ. ಎಫ್‌.ಡಿ., ಕಾರ್ಪೊರೇಟ್‌ ಬಾಂಡ್‌ ತರಹದ ಹೂಡಿಕೆ ಆಯ್ಕೆಗಳನ್ನೂ ನಾವು ನೀಡಲಿದ್ದೇವೆ. ರಿಟೇಲ್ ಹೂಡಿಕೆದಾರರ ಹಣ ಬಹಳ ಮುಖ್ಯ ಎಂದು ಹೇಳುವ ಕೆಲಸವನ್ನು ನಾವು ಮಾಡಲಿದ್ದೇವೆ.

ADVERTISEMENT

* ಹಲವು ಯತ್ನಗಳ ನಂತರವೂ ಭಾರತೀಯರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬೆರಳೆಣಿಕೆಯ ಪ್ರಮಾಣದಲ್ಲಿದೆ. ಈ ವಿಚಾರವಾಗಿ ಅವರಿಗೆ ಮಾಹಿತಿ ನೀಡುವ ಉದ್ದೇಶ ಇದೆಯೇ?

ಭಾರತದಲ್ಲಿ ವೈಯಕ್ತಿಕ ಹಣಕಾಸಿನ ಶಿಕ್ಷಣವೇ ಇಲ್ಲ. ಹೂಡಿಕೆ ಮಾಡಬೇಕು ಎಂಬ ಅರಿವು ನೀಡುವುದು ಬಹಳ ಮುಖ್ಯ. ಮುಂದಿನ ಒಂದೂವರೆ ವರ್ಷದಲ್ಲಿ ಈ ನಿಟ್ಟಿನಲ್ಲಿ ಬಹಳ ದೊಡ್ಡ ಯತ್ನವನ್ನು, ಹೂಡಿಕೆಯನ್ನು ನಾವು ಮಾಡಲಿದ್ದೇವೆ. ಈ ಶಿಕ್ಷಣವು ಕನ್ನಡ ಸೇರಿದಂತೆ ಕನಿಷ್ಠ ಐದು ಪ್ರಾದೇಶಿಕ ಭಾಷೆಗಳಲ್ಲಿ ಬರಲಿದೆ. ಭಾರತದ ಶೇಕಡ 15ರಿಂದ ಶೇ 20ರಷ್ಟು ಜನ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವಂತೆ ಆಗಬೇಕು. ಅದು ಆಗಬೇಕೆಂದರೆ, ವೈಯಕ್ತಿಕ ಹಣಕಾಸಿನ ಬಗ್ಗೆ ಶಿಕ್ಷಣ ಇರಬೇಕು, ಹಣಕಾಸಿನ ಸೇವೆ ಒದಗಿಸುವವರಲ್ಲಿ ಪಾರದರ್ಶಕತೆ ಬೇಕು.

* ಐಪಿಒ ಆಲೋಚನೆ ಇದೆಯೇ?
ಅಂತಹ ಯಾವ ಆಲೋಚನೆಯೂ ಇಲ್ಲ. ನಮ್ಮಲ್ಲಿ ಅಗತ್ಯ ಹಣ ಇದೆ. ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಯಾವ ಅಗತ್ಯವೂ ನಮಗೆ ಈಗ ಕಾಣುತ್ತಿಲ್ಲ.

* ಹಣಕಾಸು ಸೇವೆಗಳು ಎಲ್ಲರನ್ನೂ ಒಳಗೊಳ್ಳುವಂತಾಗುವುದು ಹೇಗೆ?
ಎಲ್ಲರಿಗೂ ವೈಯಕ್ತಿಕ ಹಣಕಾಸು ನಿಭಾಯಿಸುವುದು ಸುಲಭಕ್ಕೆ ಆಗುತ್ತಿಲ್ಲ. ನಾವು ಎಸ್‌ಐಪಿ ಮಾರುಕಟ್ಟೆಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಸರಾಸರಿ ಎಸ್‌ಐಪಿ ಮೊತ್ತ ದೇಶದಲ್ಲಿ ₹ 4,000 ಆಗಿತ್ತು. ಬ್ಯಾಂಕ್‌ಗಳಿಗೆ ಹೋದರೆ ಒಂದು ಎಸ್‌ಐಪಿ ಅಂದರೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಹೂಡಿಕೆ ಎನ್ನುತ್ತಿದ್ದರು. ಆದರೆ ನಾವು ತಿಂಗಳಿಗೆ ಬರೀ ₹ 100 ಇದ್ದರೆ ಸಾಕು, ಎಸ್‌ಐಪಿ ಆರಂಭಿಸಬಹುದು ಎಂದು ಗ್ರಾಹಕರಿಗೆ ಹೇಳಿದೆವು. ಇದು, ಜನ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಐಪಿ ಆರಂಭಿಸಲು ಸಹಾಯ ಮಾಡಿತು. ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ಗಳ ಮೂಲಕ ಹೂಡಿಕೆ ಹೆಚ್ಚೆಚ್ಚು ಜನಪ್ರಿಯವಾಗಲಿದೆ ಎಂದು ಭಾವಿಸಿದ್ದೇನೆ. ಬಹಳ ಕಡಿಮೆ ಶುಲ್ಕಕ್ಕೆ ಇದರಲ್ಲಿ ಹೂಡಿಕೆ ಮಾಡಬಹುದು. ಭಾರತದಲ್ಲಿ ಇಂದು ಇಟಿಎಫ್‌ ಮಾರುಕಟ್ಟೆ ಬಹಳ ಚಿಕ್ಕದಿದೆ. ಅಮೆರಿಕದಲ್ಲಿ ರಿಟೇಲ್ ಹೂಡಿಕೆದಾರರಲ್ಲಿ ಬಹುತೇಕರು ಇಟಿಎಫ್‌ ಮೂಲಕ ಹೂಡಿಕೆ ಮಾಡುತ್ತಾರೆ. ನಾವು ಕೂಡ ಇಟಿಎಫ್‌ ಆರಂಭಿಸಿದ್ದೇವೆ.

ಎಲ್ಲರನ್ನೂ ಒಳಗೊಳ್ಳುವುದು ಅಂದರೆ, ಹಣಕಾಸು ನಿರ್ವಹಣೆಯ ವಿಚಾರದಲ್ಲಿ ಎಲ್ಲರಿಗೂ ಎಲ್ಲ ಬಗೆಯ ಮಾಹಿತಿಯೂ ಸಿಗುವಂತೆ ಆಗಬೇಕು. ಸಣ್ಣ ಅಂಗಡಿಯವ ಕೂಡ ಮುಂಬೈನ ಶ್ರೀಮಂತನೊಬ್ಬ ಷೇರು ಮಾರುಕಟ್ಟೆಯಲ್ಲಿ ಏನು ಮಾಡಬಲ್ಲನೋ ಅದನ್ನು ಮಾಡುವಂತೆ ಆಗಬೇಕು. ಇದು ಒಳಗೊಳ್ಳುವಿಕೆಗೆ ನಮ್ಮ ವ್ಯಾಖ್ಯಾನ.

–ವರುಣ್ ಶ್ರೀಧರ್, ಸಿಇಒ, ಪೇಟಿಎಂ ಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.