ADVERTISEMENT

ರಾಕೇಶ್ ಟಿಕಾಯತ್‌ ಸಂದರ್ಶನ: ಸಂಸತ್ ಚುನಾವಣೆವರೆಗೂ ಹೋರಾಟ ಎಂದ ರೈತ ನಾಯಕ

ಲೇಖನಿ, ಕ್ಯಾಮೆರಾಗಳನ್ನು ಮೋದಿ ಬಂದೂಕಿನ ತುದಿಯಲ್ಲಿ ನಿಯಂತ್ರಿಸುತ್ತಿದ್ದಾರೆ

ಚಂದ್ರಹಾಸ ಹಿರೇಮಳಲಿ
Published 21 ಮಾರ್ಚ್ 2021, 20:30 IST
Last Updated 21 ಮಾರ್ಚ್ 2021, 20:30 IST
ರಾಕೇಶ್ ಟಿಕಾಯಯತ್ – ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್
ರಾಕೇಶ್ ಟಿಕಾಯಯತ್ – ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್   

ಇಂದು ನಡೆಯುತ್ತಿರುವ ರೈತರ ಹೋರಾಟ ಕೇವಲ ಕೇಂದ್ರ ಸರ್ಕಾರದ ವಿರುದ್ಧವಲ್ಲ, ಸರ್ಕಾರವನ್ನು ಪರೋಕ್ಷವಾಗಿ ನಡೆಸುತ್ತಿರುವ ಅದಾನಿ, ಅಂಬಾನಿಯಂತಹ ವ್ಯಕ್ತಿಗಳ ವಿರುದ್ಧವೂ ಆಗಿದೆ. ಹೌದು. ಬೇಡಿಕೆ ಈಡೇರದಿದ್ದರೆ ಮುಂದಿನ ಲೋಕಸಭಾ ಚುನಾವಣೆಯವರೆಗೂ ಸಾಗಲು ಸಿದ್ಧರಿದ್ದೇವೆ. ಈಗಷ್ಟೆ ಹೋರಾಟದ ಬೀಜ ಬಿತ್ತಿದ್ದೇವೆ. 10 ವರ್ಷವಾದರೂ ಗೊಬ್ಬರ ಹಾಕುತ್ತಲೇ ಇರುತ್ತೇವೆ’–ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಹೋರಾಟದ ನಾಯಕತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರಲ್ಲಿ ಪ್ರಮುಖರಾದ ರಾಕೇಶ್ ಟಿಕಾಯತ್‌ ಎಚ್ಚರಿಕೆ ನೀಡಿದ ಪರಿ ಇದು.

ಶಿವಮೊಗ್ಗ: ‘ಇಂದು ನಡೆಯುತ್ತಿರುವ ರೈತರ ಹೋರಾಟ ಕೇವಲ ಕೇಂದ್ರ ಸರ್ಕಾರದ ವಿರುದ್ಧವಲ್ಲ, ಸರ್ಕಾರವನ್ನು ಪರೋಕ್ಷವಾಗಿ ನಡೆಸುತ್ತಿರುವ ಅದಾನಿ, ಅಂಬಾನಿಯಂತಹ ವ್ಯಕ್ತಿಗಳ ವಿರುದ್ಧವೂ ಆಗಿದೆ. ಹೌದು. ಬೇಡಿಕೆ ಈಡೇರದಿದ್ದರೆ ಮುಂದಿನ ಲೋಕಸಭಾ ಚುನಾವಣೆಯವರೆಗೂ ಸಾಗಲು ಸಿದ್ಧರಿದ್ದೇವೆ. ಈಗಷ್ಟೆ ಹೋರಾಟದ ಬೀಜ ಬಿತ್ತಿದ್ದೇವೆ. 10 ವರ್ಷವಾದರೂ ಗೊಬ್ಬರ ಹಾಕುತ್ತಲೇ ಇರುತ್ತೇವೆ’–ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಹೋರಾಟದ ನಾಯಕತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರಲ್ಲಿ ಪ್ರಮುಖರಾದ ರಾಕೇಶ್ ಟಿಕಾಯತ್‌ ಎಚ್ಚರಿಕೆ ನೀಡಿದ ಪರಿ ಇದು.

ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ADVERTISEMENT

* ಹೋರಾಟ ಇಷ್ಟೊಂದು ದೀರ್ಘಾವಧಿ ತೆಗೆದುಕೊಳ್ಳುತ್ತದೆ ಎಂಬ ಸುಳಿವಿತ್ತೆ?

ರೈತ ಸಂಕುಲಕ್ಕೆ ಮಾರಕವಾದ ಕೃಷಿ ಕಾಯ್ದೆಗಳ ವಿರುದ್ಧ ಎಲ್ಲ ರೈತರು ಸಂಘಟಿತವಾಗಿ ಹೋರಾಟ ಮಾಡಿದರೆ ಯಶಸ್ಸು ಸಿಗುತ್ತದೆ ಎಂದು ನಂಬಿದ್ದೆವು. ಅದಕ್ಕಾಗಿ ಎಲ್ಲ ರೈತ ಮುಖಂಡರೂ ಭಿನ್ನಾಭಿಪ್ರಾಯ ಮರೆತು ಒಂದೇ ವೇದಿಕೆಯಡಿ ಹೋರಾಟ ಆರಂಭಿಸಲು ನಿರ್ಧರಿಸಿದೆವು. ಹಂತ ಹಂತವಾಗಿ ನಡೆದ ಚಳವಳಿ ದೆಹಲಿ ಗಡಿ ತಲುಪಿತು. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ಸಂಧಾನ ಮಾತುಕತೆಗಳಲ್ಲಿ ಕಾಯ್ದೆ ರದ್ದುಪಡಿಸುವ ವಿಷಯ ತೆಗೆದುಕೊಳ್ಳಲೇ ಇಲ್ಲ. ನಾವೂ ನಮ್ಮ ಪಟ್ಟು ಸಡಿಸಲಿಲ್ಲ. ಆಗಲೇ ಈ ಹೋರಾಟವನ್ನು ಸುದೀರ್ಘ ಚಳವಳಿಯಾಗಿ ಪರಿವರ್ತಿಸುವ ನಿರ್ಧಾರ ಮಾಡಿದೆವು.

* ದೀರ್ಘ ಹೋರಾಟಕ್ಕೆ ರೈತರು ಮಾನಸಿಕವಾಗಿ ಸಿದ್ಧರಿದ್ದರೇ?

ಕೇಂದ್ರ ಸರ್ಕಾರದ ನಡೆ, ಹಠಮಾರಿ ಧೋರಣೆ ಬಲ್ಲ ಎಲ್ಲರಿಗೂ ಇದು ಬೇಗ ಬಗೆಹರಿಯುವ ಹೋರಾಟವಲ್ಲ ಎನ್ನುವ ಅರಿವಿತ್ತು. ದೆಹಲಿ
ಗಡಿಗೆ ತೆರಳುವ ಮುನ್ನವೇ ಬೇಡಿಕೆ ಈಡೇರದೆ ಮನೆಗೆ ಮರಳಬಾರದು ಎನ್ನುವ ಸಂಕಲ್ಪ ಮಾಡಿದ್ದೆವು. ಅದಕ್ಕೆ ಸಿದ್ಧರಾಗೇ ಹೊರಟೆವು. ಸೂಕ್ತ ಕಾರ್ಯತಂತ್ರ ರಚಿಸಿಕೊಂಡು ಸಾಗಿದೆವು.

*ಹಿಂದಿನ ಚಳವಳಿಗಳಿಗಿಂತ ಈ ಹೋರಾಟ ಹೇಗೆ ಭಿನ್ನ?

ಹಿಂದಿನ ಚಳವಳಿಗಳು ಸರ್ಕಾರಗಳ ವಿರುದ್ಧ ನಡೆಯುತ್ತಿದ್ದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂತಹ ಸರ್ಕಾರಗಳು ಪಕ್ಷ ಆಧಾರಿತ ವ್ಯವಸ್ಥೆಯ ಮೇಲೆ ಆಡಳಿತ ನಡೆಸುತ್ತಿದ್ದವು. ಇಂದು ನಡೆಯುತ್ತಿರುವ ಹೋರಾಟ ಕೇವಲ ಕೇಂದ್ರ ಸರ್ಕಾರದ ವಿರುದ್ಧವಲ್ಲ; ಸರ್ಕಾರವನ್ನು ಪರೋಕ್ಷವಾಗಿ ನಡೆಸುತ್ತಿರುವ ಅದಾನಿ, ಅಂಬಾನಿಯಂತಹ ವ್ಯಕ್ತಿಗಳ ವಿರುದ್ಧವೂ ಆಗಿದೆ.ಇಂದು ಕೇಂದ್ರ ಸರ್ಕಾರ ಎಂದರೆ ಖಾಸಗಿ ಕಂಪನಿಗಳಿಗೆ ಮಾರಾಟವಾದ ಸಂಸ್ಥೆಯಂತಿದೆ.ಅಭಿವೃದ್ಧಿಯ ಯಾವ ವಿಷಯಗಳೂ ಅವರ ಬಳಿ ಇಲ್ಲ. ಕರುಣೆ ಕಾಣುತ್ತಿಲ್ಲ. ಧಾರ್ಮಿಕ ಅಂಜೆಂಡಾ ಇಟ್ಟುಕೊಂಡು ಸರ್ಕಾರ ನಡೆಸುತ್ತಿದ್ದಾರೆ. ದೇಶಭಕ್ತಿ, ಧರ್ಮ ಮುಂದಿಟ್ಟುಕೊಂಡು ಸಾರ್ವಜನಿಕರ ಗಮನ ಬೇರೆ ಕಡೆ ತಿರುಗಿಸುತ್ತಾ ಸಾಗುತ್ತಿದ್ದಾರೆ.

* ನಿಮ್ಮ ಹೋರಾಟವನ್ನು ಮೋದಿ ವಿರುದ್ಧದ ಹೋರಾಟ ಎಂದು ಬಿಂಬಿಸಲಾಗುತ್ತಿದೆಯಲ್ಲ?

– ಲೇಖನಿ ಮತ್ತು ಕ್ಯಾಮೆರಾಗಳನ್ನು ಮೋದಿ ಬಂದೂಕಿನ ತುದಿಯ ಮೇಲೆ ನಿಯಂತ್ರಿಸುತ್ತಿದ್ದಾರೆ. ಅವರ ವಿರುದ್ಧ ಸುದ್ದಿ ಪ್ರಸಾರ ಮಾಡುವ ಮಾಧ್ಯಮಗಳನ್ನು ಬೇರೆ ಬೇರೆ ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ. ಹಾಗಾಗಿ, ಬಹುತೇಕ ಮಾಧ್ಯಮಗಳು ಸಮಸ್ಯೆ ಮೈಮೇಲೆ ಎಳೆದುಕೊಳ್ಳಲು ಸಿದ್ಧರಿಲ್ಲ. ವಾಸ್ತವದಲ್ಲಿ ಈ ಹೋರಾಟ ಮೋದಿಯ ವಿರುದ್ಧ ಅಲ್ಲ. ಅವರ ಧೋರಣೆ, ಸರ್ಕಾರದ ನಿರ್ಧಾರಗಳ ವಿರುದ್ಧ. ದೇಶದ ಮುಖ್ಯಸ್ಥರ ನಡೆ, ಕೇಂದ್ರ ಸರ್ಕಾರದ ನೀತಿ ವಿರುದ್ಧ ಮಾತನಾಡಿದರೆ ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ.

*ರೈತ ಚಳವಳಿಯ ಸ್ವರೂಪ ಬದಲಾಗುತ್ತಿದೆಯಲ್ಲ?

– ನಾವು ಆರಂಭದಲ್ಲಿ ರೈತರಿಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಗಮನ ಕೇಂದ್ರೀಕರಿಸಿದ್ದೆವು. ಜತೆಗೆ, ಗ್ರಾಹಕರ ಸ್ಥಾನದಲ್ಲೂ ನಿಂತು ಯೋಚಿಸಿದ್ದೆವು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ದೊರಕಬೇಕು. ಎಂಎಸ್‌ಪಿ ಕಾಯ್ದೆಯಾಗಬೇಕು ಎನ್ನುವ ಬೇಡಿಕೆ ಸೇರಿತು. ಬ್ಯಾಂಕ್‌ ವೀಲೀನ, ಜಿಎಸ್‌ಟಿ ಬವಣೆ, ಸೇವಾವಲಯ, ಎಲ್‌ಐಸಿ ನೀತಿಗಳಿಂದ ಅಲ್ಲಿನ ಉದ್ಯೋಗಿಗಳು ಹೋರಾಟಕ್ಕೆ ಸಾಥ್‌ ನೀಡಿದ್ದಾರೆ. ಬೆಲೆ ಏರಿಕೆ ಪರಿಣಾಮ ಸಾಮಾನ್ಯ ಜನರೂ ಚಳವಳಿಯ ಪ್ರವಾಹದಲ್ಲಿ ಸೇರುತ್ತಿದ್ದಾರೆ. ರೈತ ಚಳವಳಿಯ ಸ್ವರೂಪವೂ ವಿಸ್ತಾರವಾಗುತ್ತಿದೆ.

* ಕೃಷಿ ಕಾಯ್ದೆಗಳ ವಿರುದ್ಧ ದಕ್ಷಿಣದವರ ಪ್ರತಿಕ್ರಿಯೆ ವಿಳಂಬವಾಯಿತಲ್ಲ?

– ಹಾಗೇನೂ ಇಲ್ಲ. ಇಂದಿರಾಗಾಂಧಿ ಧೋರಣೆ ವಿರುದ್ಧ ಜಯಪ್ರಕಾಶ್ ನಾರಾಯಣ್ ಆರಂಭಿಸಿದ ಹೋರಾಟ ರಾಷ್ಟ್ರೀಯ ಸ್ವರೂಪ ಪಡೆಯಿತು. ಪ್ರತಿ ಚಳವಳಿಗೂ ಎಲ್ಲೋ ಒಂದು ಕಡೆ ನಾಯಕತ್ವ ದೊರೆತು ನಂತರ ಇತರೆಡೆ ಹಬ್ಬುತ್ತದೆ. ಈಗಲೂ ಅದೇ ಆಗುತ್ತಿದೆ.

* ರಾಜ್ಯಮಟ್ಟದಲ್ಲಿ ವಿಸ್ತರಣೆಯ ಸ್ವರೂಪವೇನು? ರೂಪುರೇಷೆ ಹೇಗಿರುತ್ತದೆ?

– ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶದಲ್ಲಿ ಮೊದಲು ಹೋರಾಟ ಆರಂಭಿಸಿದೆವು. ಈಗ ದೆಹಲಿ ರಸ್ತೆಗಳನ್ನು ಬಂದ್‌ ಮಾಡಿದ್ದೇವೆ. ಕರ್ನಾಟಕ ಸೇರಿ ಇತರೆ ರಾಜ್ಯಗಳಿಗೂ ಹಬ್ಬುತ್ತಿದೆ. ಅಲ್ಲಿಯಂತೆ ಎಲ್ಲ ರಾಜ್ಯಗಳ ರಾಜಧಾನಿಗಳಿಗೂ ರೈತರು ದಿಗ್ಬಂಧನ ಹಾಕಲಿದ್ದಾರೆ.

* ಕೋವಿಡ್‌ ಸನ್ನಿವೇಶ ಹೋರಾಟದ ಮೇಲೆ ಪರಿಣಾಮ ಬೀರುವುದಿಲ್ಲವೇ?

– ಇದುವರೆಗೂ ಹೋರಾಟನಿರತ ಒಬ್ಬ ರೈತರಲ್ಲೂ ಕೋವಿಡ್‌ ಕಾಣಿಸಿಲ್ಲ. ಅಲ್ಲದೇ, ನಿಯಮ ಮಾಡುವ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಆಯೋಜಿಸುತ್ತಿರುವ ರ‍್ಯಾಲಿ, ಸಭೆಗಳಲ್ಲಿ ನಿಯಮ ಪಾಲಿಸುತ್ತಿದೆಯೇ? ನಾವು ನಮ್ಮ ಕೆಲಸ ಮಾಡುತ್ತೇವೆ. ಅವರು ಅವರ ಕೆಲಸ ಮಾಡಲಿ.

* ಅಸಲಿ ಹೋರಾಟಗಾರರನ್ನು ಒಳಗೊಂಡ ನಿರ್ದಿಷ್ಟ ಒತ್ತಡ ಸಮುದಾಯವನ್ನು ಸೃಷ್ಟಿಸುವುದು ಹೇಗೆ?

– ರೈತರಿಗೆ ಮಾರಕವಾದ ಕಾಯಿದೆಗಳು ಜಾರಿಯಾಗುತ್ತಿದ್ದಂತೆ ಏಳು ಜನ ನಾಯಕರು ಸೇರಿ ಹೋರಾಟ ಕಟ್ಟಿದೆವು. ಈಗ 40 ಜನ ಪಂಚರ ರೀತಿ ನಿರ್ವಹಣೆ ಮಾಡುತ್ತಿದ್ದೇವೆ. ಸತ್ಯವನ್ನಷ್ಟೆ ಮಾತನಾಡುತ್ತೇವೆ. ಸಂಯಮ ಕಳೆದುಕೊಂಡಿಲ್ಲ. ಭರವಸೆ ಬಿಟ್ಟುಕೊಟ್ಟಿಲ್ಲ. ಜನರ ನಂಬಿಕೆ ಗಟ್ಟಿ ಮಾಡಿದ್ದೇವೆ. ಸಮುದಾಯ ನಮ್ಮ ಜತೆಗೆ ಹೆಜ್ಜೆ ಹಾಕುತ್ತಿದೆ.

* ತಂಡದ ಒಗ್ಗಟ್ಟು ಈ ಹೋರಾಟದ ನಂತರವೂ ಇರುತ್ತದಾ?

ಹಾಗೆ ಹೇಳಲು ನಾನು ಜ್ಯೋತಿಷಿ ಅಲ್ಲ. ಈ ಕುರಿತು ಯಾವ ಯೋಚನೆಯನ್ನೂ ಮಾಡಿಲ್ಲ. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ನೀಡುವುದಷ್ಟೇ ನಮ್ಮ ಮುಂದಿರುವ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.