ADVERTISEMENT

ಇಷ್ಟಪಟ್ಟು ಓದಿದಾಗ ಕನಸು ನನಸು

ಎಂ.ಜಿ.ಬಾಲಕೃಷ್ಣ
Published 28 ಜೂನ್ 2019, 20:00 IST
Last Updated 28 ಜೂನ್ 2019, 20:00 IST
ಕೆ.ಬಿ.ಶ್ಯಾಂ
ಕೆ.ಬಿ.ಶ್ಯಾಂ   

ಗೂಗಲ್‌ನಲ್ಲಿ ಕೆಲಸ ಸಿಕ್ಕಿದೆ ಎಂದು ತಿಳಿದಾಗ ಹೇಗನಿಸಿತು?

ತುಂಬಾ ಖುಷಿಯಾಯಿತು. ಅಪ್ಪ–ಅಮ್ಮ ಸಹ ಬಹಳ ಸಂತೋಷಪಟ್ಟರು. ಅಮೆರಿಕದಲ್ಲಿ ಇಂಧನ ಕೋಶಗಳ ವಿಷಯದಲ್ಲಿ ಸಂಶೋಧನೆ ನಡೆಸುತ್ತಿರುವ ನನ್ನ ಸಹೋದರ ಸಹ ಸಂಭ್ರಮಪಟ್ಟ.

ಅಪ್ಪ–ಅಮ್ಮ ಏನು ಮಾಡುತ್ತಿದ್ದಾರೆ?

ADVERTISEMENT

ಅಪ್ಪ ಚೆನ್ನೈಯಲ್ಲಿ ರೈಲ್ವೆ ಕೋಚ್‌ ಫ್ಯಾಕ್ಟರಿಯಲ್ಲಿ ಉದ್ಯೋಗಿ, ಅಮ್ಮ ತಮಿಳುನಾಡು ವಿದ್ಯುತ್ ಕಂಪನಿಯಲ್ಲಿ ಉದ್ಯೋಗಿ.

ನಿಮ್ಮ ವ್ಯಾಸಂಗದ ಬಗ್ಗೆ ಹೇಳಿ?

ಬೆಂಗಳೂರಿನ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫರ್ಮೇಷನ್‌ ಟೆಕ್ನಾಲಜಿಯಲ್ಲಿ (ಐಐಐಟಿ–ಬಿ) ಓದಿದ್ದೇನೆ. ಕಂಪ್ಯೂಟರ್‌ ಸೈನ್ಸ್‌ ನನ್ನ ಇಷ್ಟದ ಕ್ಷೇತ್ರವಾಗಿತ್ತು. ಅದರಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದೆ. ಕಳೆದ ವರ್ಷ ಲಂಡನ್‌ನಲ್ಲಿ ಫೇಸ್‌ಬುಕ್‌ ಕಂಪನಿಯಲ್ಲಿ ಇಂಟರ್ನ್‌ಶಿಪ್‌ ಮಾಡಿದ್ದೆ.ಇಷ್ಟದ ಕ್ಷೇತ್ರದಲ್ಲಿ ಇಷ್ಟಪಟ್ಟು ಓದಿದಾಗ ನಮ್ಮ ಕನಸು ನನಸಾಗುವುದು ಕಷ್ಟವೇನಲ್ಲ.

ಬೆಂಗಳೂರಿನ ಕಲಿಕಾ ವಾತಾವರಣ ಹೇಗಿದೆ?

ನಿಜಕ್ಕೂ ಐಐಐಟಿ–ಬಿ ಕ್ಯಾಂಪಸ್‌ ಬಹಳ ಚೆನ್ನಾಗಿದೆ. ಅತ್ಯುತ್ತಮ ಉಪನ್ಯಾಸಕರಿದ್ದಾರೆ. ಅವರು ನೀಡುವ ಮಾರ್ಗದರ್ಶನ ಎಷ್ಟು ಮಹತ್ವವೋ, ನಾವು ಮಾಡುವ ಸ್ವಂತ ಪ್ರಯತ್ನವೂ ಅಷ್ಟೇ ಮಹತ್ವದ್ದು. ನಮ್ಮ ಸ್ವಂತ ಶ್ರಮಕ್ಕೆ ಮತ್ತು ಸೂಕ್ತ ಮಾರ್ಗದರ್ಶನಕ್ಕೆ ಇಲ್ಲಿ ಸಾಕಷ್ಟು ಅವಕಾಶ ಸಿಕ್ಕಿದ್ದರಿಂದ ಗೂಗಲ್‌ನಲ್ಲಿ ಕೆಲಸ ದೊರೆಯುವುದು ಸಾಧ್ಯವಾಯಿತು.

ಗೂಗಲ್‌ನಲ್ಲೇ ಕೆಲಸ ಮಾಡಬೇಕೆಂಬ ಕನಸು ಮೊದಲಿನಿಂದಲೂ ಇತ್ತೇ?

ಹಾಗೇನಿಲ್ಲ, ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದೆ. ಪ್ರೋಗ್ರಾಮಿಂಗ್ ಸ್ಪರ್ಧೆಗಳಲ್ಲಿ ಸಹ ಪಾಲ್ಗೊಳ್ಳುವ ಹವ್ಯಾಸ ಬೆಳೆಸಿಕೊಂಡಿದ್ದೆ. ನಾನು ಇತರ ಮೂವರೊಂದಿಗೆ ಎರಡು ಬಾರಿ ಜಾಗತಿಕ ಮಟ್ಟದ ಎಸಿಎಂ–ಐಸಿಪಿಸಿ ಅಂತರಕಾಲೇಜು ಸ್ಪರ್ಧೆಯ ಫೈನಲ್ಸ್‌ಗೆ ಪ್ರವೇಶ ಪಡೆದಿದ್ದೆ. ಅಲ್ಲಿ ಗಳಿಸಿದ ಅನುಭವ ಅಪಾರ.

ಎಲ್ಲಿ ಕೆಲಸ? ಭಾರತಕ್ಕೆ ಬರುತ್ತೀರಾ?

‘ಗೂಗಲ್‌ ಕ್ಲೌಡ್‌ ಪ್ಲಾಟ್‌ಫಾರಂ’ ನನ್ನ ಕೆಲಸದ ಕ್ಷೇತ್ರ. ಪೋಲಂಡ್‌ನ ವಾರ್ಸಾದಲ್ಲಿ ನನಗೆ ಉದ್ಯೋಗ. ಅಕ್ಟೋಬರ್‌ನಲ್ಲಿ ಕೆಲಸಕ್ಕೆ ಸೇರಿಕೊಳ್ಳುವೆ. ದೀರ್ಘಾವಧಿ ವಿದೇಶದಲ್ಲಿ ಇರುವ ಕನಸಿಲ್ಲ, ಕೆಲವು ಸಮಯದ ಬಳಿಕ ಭಾರತಕ್ಕೆ ಮರಳಿ ಇಲ್ಲೇ ಸೇವೆ ಸಲ್ಲಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.