ADVERTISEMENT

ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಿಂದ ಕೃಷಿಕನ ಭವಿಷ್ಯ ಉಜ್ವಲ: ಮನೀಷ್ ಸಬ್ನೀಸ್

ಮೆಟ್ರೊ ಕ್ಯಾಷ್‌ ಆ್ಯಂಡ್‌ ಕ್ಯಾರಿ ಸರಕು ಪೂರೈಕೆ ವಿಭಾಗದ ನಿರ್ದೇಶಕ ಮನೀಷ್‌ ಸಬ್ನಿಸ್‌

​ಕೇಶವ ಜಿ.ಝಿಂಗಾಡೆ
Published 21 ಮೇ 2020, 5:47 IST
Last Updated 21 ಮೇ 2020, 5:47 IST
ಮೆಟ್ರೊ ಕ್ಯಾಷ್‌ ಆ್ಯಂಡ್‌ ಕ್ಯಾರಿ ಸರಕು ಪೂರೈಕೆ ವಿಭಾಗದ ನಿರ್ದೇಶಕ ಮನೀಷ್‌ ಸಬ್ನಿಸ್‌
ಮೆಟ್ರೊ ಕ್ಯಾಷ್‌ ಆ್ಯಂಡ್‌ ಕ್ಯಾರಿ ಸರಕು ಪೂರೈಕೆ ವಿಭಾಗದ ನಿರ್ದೇಶಕ ಮನೀಷ್‌ ಸಬ್ನಿಸ್‌   

‘ರೈತಾಪಿ ವರ್ಗದ ಹಿತಾಸಕ್ತಿ ರಕ್ಷಣೆಗೆ ಅಗತ್ಯ ಮಾರ್ಗೋಪಾಯಗಳನ್ನು ರೂಪಿಸಿ, ಕೃಷಿ ಕ್ಷೇತ್ರದ ಭವಿಷ್ಯ ಉಜ್ವಲಗೊಳಿಸಲು ಮತ್ತು ಕೃಷಿ ಪ್ರಧಾನ ದೇಶದ ಆರ್ಥಿಕತೆಯನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ಎಪಿಎಂಸಿ ಕಾಯ್ದೆ ತಿದ್ದುಪಡಿಯಂತಹ ಸುಧಾರಣಾ ಕ್ರಮಗಳು ಸದ್ಯದ ಅಗತ್ಯಗಳಾಗಿವೆ’ ಎನ್ನುವುದುಮೆಟ್ರೊ ಕ್ಯಾಷ್‌ ಆ್ಯಂಡ್‌ ಕ್ಯಾರಿ ಸರಕು ಪೂರೈಕೆ ವಿಭಾಗದ ನಿರ್ದೇಶಕ ಮನೀಷ್‌ ಸಬ್ನಿಸ್‌ ಅವರ ಅನಿಸಿಕೆ.

‘ತಿದ್ದುಪಡಿ ಬಗ್ಗೆ ಈಗಲೇ ಮಾತನಾಡುವುದು ತುಂಬ ಅವಸರದ ನಿಲುವು ಆದೀತು’ ಎಂದೇ ‘ಪ್ರಜಾವಾಣಿ’ ಜತೆ ಮಾತು ಆರಂಭಿಸಿದ ಮನೀಷ್‌, ಇದರಿಂದ ಕೃಷಿ ಉತ್ಪನ್ನ ಮಾರುವ ರೈತರಿಗೆ, ಖರೀದಿದಾರರಿಗೆ ಆಗುವ ಪ್ರಯೋಜನಗಳನ್ನು ಪಟ್ಟಿ ಮಾಡಿದರು. ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಎಪಿಎಂಸಿ ಕಾಯ್ದೆಗೆ ಮಾಡಲಾದ ತಿದ್ದುಪಡಿಗೆ ಟೀಕೆಗಳು ಕೇಳಿ ಬರುತ್ತಿವೆಯಲ್ಲ?

ADVERTISEMENT

ರೈತರ ಹಿತಾಸಕ್ತಿ ರಕ್ಷಿಸಲು ಬದ್ಧತೆ ತೋರುತ್ತಲೇ, ಈ ಸುಧಾರಣಾ ಕ್ರಮಗಳಿಗೆ ಕೇಳಿ ಬರುತ್ತಿರುವ ಗಂಭೀರ ಸ್ವರೂಪದ ಆಕ್ಷೇಪ, ಟೀಕೆ ಮತ್ತು ಅನುಮಾನಗಳನ್ನು ಪರಿಹರಿಸುವುದು ಮತ್ತು ಬಡ ರೈತರ ಶೋಷಣೆಗೆ ಕಿಂಚಿತ್ತೂ ಅವಕಾಶ ಇಲ್ಲದಂತೆ ನೋಡಿಕೊಳ್ಳುವುದು ಕೃಷಿಕ್ಷೇತ್ರದ ಎ‌ಲ್ಲ ಭಾಗೀದಾರರ ಹೊಣೆಗಾರಿಕೆ. ತಿದ್ದುಪಡಿ ಮೂಲಕ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ನೆರವಾಗುವ ಉದ್ದೇಶ ಹೊಂದಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಕೃಷಿ ಉತ್ಪನ್ನಗಳ ಖರೀದಿದಾರರು ಮತ್ತು ಪೂರೈಕೆದಾರರ (ಕೃಷಿಕರು)ಹಿತವನ್ನುಸಮತೋಲನದಿಂದ ಕಾಯಲಾಗುತ್ತದೆ. ಎಪಿಎಂಸಿ ಮಾರುಕಟ್ಟೆಗಳಲ್ಲಿ ಸದ್ಯಕ್ಕೆ ಬೆಲೆ ಮತ್ತು ವಹಿವಾಟಿನ ಪಾರದರ್ಶಕತೆ ಕೊರತೆ ಇದೆ. ಅದೀಗ ನಿವಾರಣೆಯಾಗಲಿದೆ.

* ಫಸಲು ಖರೀದಿಗೆ ಮುಕ್ತ ಅವಕಾಶದಿಂದ ಸಿಗುವ ಪ್ರಯೋಜನಗಳೇನು?

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಎಪಿಎಂಸಿ ಮಾರುಕಟ್ಟೆಗಳು ಕೆಲಕಾಲ ಕಾರ್ಯನಿರ್ವಹಿಸಿರಲಿಲ್ಲ. ಬೆಳೆದ ಫಸಲನ್ನು ರೈತರು ಮಾರುಕಟ್ಟೆಗೆ ಸಾಗಿಸಲು ವಾಹನಗಳೇ ಇರಲಿಲ್ಲ. ಇದರಿಂದ ರೈತಾಪಿ ವರ್ಗ ಕೈಸುಟ್ಟುಕೊಂಡಿದೆ. ಫಸಲು ಬೆಳೆದವರೇ ಅದನ್ನು ನಾಶ ಮಾಡಿದ, ಹೊಲದಲ್ಲಿಯೇ ಬೆಳೆ ಕೊಳೆತುಹೋದ ಹೃದಯ ಹಿಂಡುವ ಅಸಂಖ್ಯ ನಿದರ್ಶನಗಳಿವೆ. ಆಹಾರ ಸಂಸ್ಕರಣಾ ಕಂಪನಿಗಳು ಸೇರಿದಂತೆ ಯಾರೇ ಆಗಲಿ ರೈತರಿಂದಲೇ ಫಸಲು ಖರೀದಿಸುವ ಮುಕ್ತ ಅವಕಾಶ ಇದ್ದಿದ್ದರೆ ರೈತರ ಇಂತಹ ಗೋಳು ತಪ್ಪುತ್ತಿತ್ತು. ಮೆಟ್ರೊ ಕ್ಯಾಷ್‌ ಆ್ಯಂಡ್‌ ಕ್ಯಾರಿ, ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿನ ಸಂಗ್ರಹಣಾ ಕೇಂದ್ರಗಳಿಂದ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸಿ ಅವರ ನೆರವಿಗೆ ಧಾವಿಸಿತ್ತು.

* ತಿದ್ದುಪಡಿಯ ಅತಿ ಹೆಚ್ಚಿನ ಲಾಭಗಳೇನು?

ರೈತರು ತಾವು ಬೆಳೆಯುವ ಫಸಲಿಗೆ ಅಂಗಡಿಗಳಿಂದ ಮುಂಗಡವಾಗಿಯೇ ಹಣ ಪಡೆಯುವ ವ್ಯವಸ್ಥೆ ಬಹುತೇಕ ಕಡೆ ಚಾಲ್ತಿಯಲ್ಲಿದೆ. ಈ ವ್ಯವಸ್ಥೆ ಈಗ ಕೊನೆಗೊಳ್ಳಲಿದೆ. ಹಣದ ಅಗತ್ಯ ಇತರರಿಗಿಂತ ರೈತರಿಗೆ ಹೆಚ್ಚಿಗೆ ಇರುತ್ತದೆ. ಕಂಪನಿಗಳು ಅಥವಾ ಇತರ ಯಾವುದೇ ಖರೀದಿದಾರರು ರೈತರ ಫಸಲನ್ನು ನಿಗದಿತ ದಿನಕ್ಕೆ ಖರೀದಿಸಲು ಒಪ್ಪಂದ ಮಾಡಿಕೊಳ್ಳುವುದರಿಂದ ರೈತರಿಗೆ ಲಾಭ ಇದೆ. ಪೂರ್ವ ನಿಗದಿತ ಬೆಲೆಗೆ ಸರಕು ಮಾರಾಟಗೊಳ್ಳುವ ಖಾತರಿ ದೊರೆಯಲಿದೆ. ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಪಾವತಿಯಾಗಲಿದೆ. ಇದೊಂದು ಬಗೆಯಲ್ಲಿ ವಿಮೆ ಖಾತರಿ ಸೌಲಭ್ಯ ಇದ್ದಂತೆ.

* ಆಹಾರ ಸಂಸ್ಕರಣಾ ಕಂಪನಿಗಳ ಪಾತ್ರವೇನು?

'ಟೊಮೆಟೊ ಕೆಚಪ್‌, ಹಣ್ಣಿನ ಜಾಮ್‌, ಗೋಧಿ ಹಿಟ್ಟು, ಬಿಸ್ಕಿಟ್‌ ತಯಾರಿಕೆಗೆ ಬಳಸುವ ಮೈದಾ ತಯಾರಿಸುವುದೂ ಸೇರಿದಂತೆ ವಿವಿಧ ಆಹಾರ ಸಂಸ್ಕರಣೆ ಕಂಪನಿಗಳು ಕೃಷಿ ಉತ್ಪನ್ನಗಳನ್ನು ಬಹುವಾಗಿ ನೆಚ್ಚಿಕೊಂಡಿವೆ. ಇವುಗಳೂ ಎಪಿಎಂಸಿ ವ್ಯವಸ್ಥೆಯನ್ನು ಅವಲಂಬಿಸಿವೆ. ಇನ್ನುಮುಂದೆ ಇಂತಹ ಕಂಪನಿಗಳು ಮಧ್ಯವರ್ತಿಗಳ ನೆರವಿಲ್ಲದೆ ರೈತರಿಂದ ನೇರವಾಗಿ ಉತ್ಪನ್ನ ಖರೀದಿಸಬಹುದು. ಕಂಪನಿಗಳಷ್ಟೇ ಅಲ್ಲ, ಯಾರೇ ಆಗಲಿ ಮುಕ್ತ ಮಾರುಕಟ್ಟೆಯಿಂದ ಉತ್ಪನ್ನ ಖರೀದಿಸುವುದರಿಂದ ರೈತರಿಗೆ ಖಂಡಿತವಾಗಿಯೂ ಪ್ರಯೋಜನ ಇದೆ. ಫಸಲು ಬೇರೆ, ಬೇರೆ ಕೈಗಳನ್ನು ಬದಲಿಸಿದಾಗ, ಪ್ರತಿ ಹಂತದಲ್ಲಿನ ಲಾಭದ ಲೆಕ್ಕಾಚಾರದಿಂದ ಖರೀದಿದಾರರಿಗೆ ಬೆಲೆ ದುಬಾರಿಯಾಗಿ ಪರಿಣಮಿಸುವುದು ತಪ್ಪಲಿದೆ. ಕಂಪನಿಗಳು
ರೈತನಿಂದ ನೇರವಾಗಿ ಖರೀದಿಸುವುದರಿಂದ ಇಬ್ಬರಿಗೂ ಲಾಭ ಇದೆ.

* ರೈತನ ಸಬಲೀಕರಣ ಸಾಧ್ಯವೇ?

ಖಂಡಿತವಾಗಿಯೂ ಸಾಧ್ಯ. ಲೇವಾದೇವಿಗಾರರು ಮತ್ತು ದಲ್ಲಾಳಿಗಳ ಶೋಷಣೆ ದೂರ ಮಾಡಲು ಈಗ ಅವಕಾಶ ಇದೆ. ಹೀಗಾಗಿ ಇದೊಂದು ಉತ್ತಮ ಬೆಳವಣಿಗೆ. ಸುಧಾರಣಾ ಕ್ರಮಗಳ ಅತಿದೊಡ್ಡ ಪ್ರಯೋಜನ ಇದಾಗಿದೆ. ನ್ಯಾಯೋಚಿತ ಬೆಲೆ ಪಡೆದು ರೈತರು ಆರ್ಥಿಕವಾಗಿ ಸಬಲಗೊಳ್ಳುತ್ತಾರೆ.

* ಕೃಷಿಕರ ಜೀವನಮಟ್ಟ ಸುಧಾರಣೆಗೊಳ್ಳುವುದೇ?

ರೈತರು ಉತ್ಪನ್ನದ ಸಾಗಾಣಿಕೆ, ಮಾರುಕಟ್ಟೆ, ಬೆಲೆ ಬಗ್ಗೆ ತಲೆಕೆಡಿಸಿಕೊಳ್ಳದೆ ಕೃಷಿ ಚಟುವಟಿಕೆಗಳಿಗೆ
ಹೆಚ್ಚಿನ ಗಮನ ನೀಡಲು, ನ್ಯಾಯಯುತ ಬೆಲೆ ಪಡೆಯಲು, ನೆಮ್ಮದಿಯಿಂದ ಉತ್ತಮ ಜೀವನ ನಡೆಸಲೂ ಇದರಿಂದ ಸಾಧ್ಯವಾಗಲಿದೆ.

* ಮಾರುಕಟ್ಟೆ ಶಕ್ತಿಗಳ ಪಾತ್ರವೇನು?

ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಯಲ್ಲಿ ಗ್ರಾಹಕರ ಹಿತಾಸಕ್ತಿ ದೃಷ್ಟಿಯಿಂದಲೂ ಯಾವುದೇ ನಿರ್ಬಂಧ ಇರಬಾರದು. ಬೆಲೆ ಮಟ್ಟವನ್ನು ಮಾರುಕಟ್ಟೆ ಶಕ್ತಿಗಳೇ ನಿರ್ಧರಿಸುವಂತಿರಬೇಕು. ಎಪಿಎಂಸಿಗಳ ನಿಯಂತ್ರಣದಲ್ಲಿ ಇರುವ ವಹಿವಾಟನ್ನು ಮುಕ್ತಗೊಳಿಸಿರುವುದು ಸರಿಯಾದ ನಿರ್ಧಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.