ADVERTISEMENT

ಆತ್ಮತೃಪ್ತಿಗಾಗಿ ಕ್ರಿಕೆಟ್ ಆಡುತ್ತೇನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 20:15 IST
Last Updated 22 ನವೆಂಬರ್ 2019, 20:15 IST
ಸಂದರ್ಶನ: ಗಿರೀಶ ದೊಡ್ಡಮನಿ
ಸಂದರ್ಶನ: ಗಿರೀಶ ದೊಡ್ಡಮನಿ   

ವಿ. ಕೌಶಿಕ್, ಕರ್ನಾಟಕ ತಂಡದ ಮಧ್ಯಮ ವೇಗಿ

–––

ಸ್ಪಿನ್ನರ್ ಆಗಿದ್ದ ನೀವು ಮಧ್ಯಮವೇಗಿ ಆಗಿ ಬದಲಾಗಿದ್ದು ಏಕೆ?

ADVERTISEMENT

ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ ವೊಂದರ ವಿದ್ಯಾರ್ಥಿಯಾಗಿದ್ದಾಗ ತಂಡದ ನಾಯಕನಾಗಿದ್ದೆ. ಆಗ ಆಫ್‌ಸ್ಪಿನ್ನರ್‌ ಆಗಿದ್ದೆ. ಬಹಳಷ್ಟು ಪಂದ್ಯಗಳಲ್ಲಿ ಆಡಿದ್ದೆ. ಅದೊಂದು ಪಂದ್ಯದಲ್ಲಿ ಬಹಳಷ್ಟು ರನ್‌ಗಳನ್ನು ಬಿಟ್ಟುಕೊಟ್ಟೆ. ವೇಗದ ಬೌಲಿಂಗ್ ಆರಂಭಿಸಿದೆ. ಸ್ವಿಂಗ್ ಮತ್ತು ಯಾರ್ಕರ್‌ಗಳನ್ನು ಹಾಕುವ ರೂಢಿ ಮಾಡಿಕೊಂಡೆ.

ಕರ್ನಾಟಕ ತಂಡದಲ್ಲಿ ಎರಡು ಋತುಗಳಿಂದ ಆಡುತ್ತಿದ್ದೀರಿ. ಇಲ್ಲಿಯವರೆಗಿನ ನಿಮ್ಮ ಪಯಣದ ಬಗ್ಗೆ ಹೇಳಿ.

ನಾನು ಹವ್ಯಾಸಕ್ಕಾಗಿ ಕ್ರಿಕೆಟ್ ಆಡಿದವನು. ಕೋಚ್‌ಗಳ ಮಾರ್ಗದರ್ಶನವಿಲ್ಲದೇ ಬಹಳ ವರ್ಷ ಆಡಿದೆ. ಮೊದಲ ಸಲ ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್ ಸೇರಿದೆ. ನಂತರ ಬೆಂಗಳೂರು ಕ್ರಿಕೆಟರ್ಸ್‌ಗೆ ಆಡಿದೆ. ಬೆಂಗಳೂರು ಅಕೇಷನಲ್ಸ್‌ನಲ್ಲಿ ಈಗ ಆಡುತ್ತಿದ್ದೇನೆ. 2010ರಲ್ಲಿ ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಲು ಆರಂಭಿಸಿದಾಗಲೇ ಬೆನ್ನು ನೋವು ಕಾಡಿತು. ಚೇತರಿಸಿಕೊಂಡ ನಂತರ ಬೇರೆ ಬೇರೆ ಕ್ಲಬ್‌ಗಳಲ್ಲಿ ಅತಿಥಿ ಆಟಗಾರನಾಗಿ ಆಡಿದೆ.

ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯುವುದು ಮತ್ತು ಉಳಿಸಿಕೊಳ್ಳುವುದು ಯಾಕೆ ಕಷ್ಟ?

ಕರ್ನಾಟಕವು ಶ್ರೇಷ್ಠ ಮಧ್ಯಮ ವೇಗಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಈಗಲೂ ಪ್ರತಿಭಾವಂತರು ಇದ್ದಾರೆ. ತಂಡಕ್ಕೆ ಬರಲು ಕಾಯುತ್ತಿರುವ ಕಿರಿಯರೂ ಇದ್ದಾರೆ. ಅಂತಹವರ ನಡುವೆ ನನಗೆ
ಅವಕಾಶ ಸಿಕ್ಕಿದೆ. ಅಮೆಜಾನ್‌ ಸಂಸ್ಥೆಯಲ್ಲಿ ನಿರ್ವಹಿಸುತ್ತಿದ್ದ ನೌಕರಿ ಬಿಟ್ಟು ಕ್ರಿಕೆಟ್‌ಗೆ ಸಂಪೂರ್ಣ ಸಮರ್ಪಿಸಿಕೊಂಡೆ. ಹೋದ ವರ್ಷ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅವಕಾಶ ಸಿಕ್ಕಿತು. ವಿಜಯ್ ಹಜಾರೆ ಟ್ರೋಫಿ (ಏಕದಿನ) ಟೂರ್ನಿಯಲ್ಲಿಯೂ ಅವಕಾಶ ಸಿಕ್ಕಿತು. ಈ ಸಲ ನಾವು ಚಾಂಪಿಯನ್ ಕೂಡ ಆದೆವು. ಲಿಸ್ಟ್‌ ‘ಎ’ನಲ್ಲಿ ಒಟ್ಟು ಆರು ಪಂದ್ಯಗಳಿಂದ 12 ವಿಕೆಟ್ ಮತ್ತು ಟಿ20ಯಲ್ಲಿ 16 ಪಂದ್ಯಗಳಿಂದ 26 ವಿಕೆಟ್‌ಗಳನ್ನು ಗಳಿಸಿರುವೆ. ರಣಜಿ ತಂಡದಲ್ಲಿಯೂ ಸ್ಥಾನ ಪಡೆಯುವ ಗುರಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.