ADVERTISEMENT

ಸಂದರ್ಶನ | ನೈಜ ನಿಯಂತ್ರಣ ರೇಖೆ ತಿದ್ದಲು ಚೀನಾ ಸೇನೆ ಒತ್ತಡ: ಲೆ.ಜನರಲ್ ಹೂಡಾ

ಕಲ್ಯಾಣ್‌ ರೇ
Published 27 ಜೂನ್ 2020, 4:29 IST
Last Updated 27 ಜೂನ್ 2020, 4:29 IST
ಲೆ.ಜನರಲ್ ದೀಪೇಂದ್ರ ಸಿಂಗ್ ಹೂಡಾ
ಲೆ.ಜನರಲ್ ದೀಪೇಂದ್ರ ಸಿಂಗ್ ಹೂಡಾ   

ಪೂರ್ವ ಲಡಾಖ್‌ ನೈಜ ನಿಯಂತ್ರಣ ರೇಖೆ​ (ಎಲ್‌ಎಸಿ) ಬಳಿ ಚೀನಾ ಹಠಾತ್ತಾಗಿ ಬಲ ಪ್ರದರ್ಶನಕ್ಕೆ ಮುಂದಾಗಿರುವುದು ಭಾರತ ಸರ್ಕಾರವು ದಿಢೀರಾಗಿ ಆ ಪ್ರದೇಶದಲ್ಲಿ ಸಶಸ್ತ್ರ ಪಡೆಗಳ ನಿಯೋಜನೆ ಹೆಚ್ಚಿಸಿ ರಕ್ಷಣೆಗೆ ಸನ್ನದ್ಧವಾಗಿರುವಂತೆ ಮಾಡಲು ಕಾರಣವಾಗಿದೆ. ಭಾರತೀಯ ಸೇನೆಯ ಉತ್ತರ ಕಮಾಂಡ್‌ನಲ್ಲಿ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಕಾರ್ಯನಿರ್ವಹಿಸಿದ್ದ, 4 ದಶಕಗಳ ವಿಶೇಷ ವೃತ್ತಿ ಅನುಭವ ಹೊಂದಿರುವ ಲೆಫ್ಟಿನೆಂಟ್ ಜನರಲ್ ದೀಪೇಂದ್ರ ಸಿಂಗ್ ಹೂಡಾ ಅವರು ಚೀನಾದ ‘ಪೀಪಲ್ಸ್ ಲಿಬರೇಶನ್ ಆರ್ಮಿ’ಯ (ಪಿಎಲ್‌ಎ) ಹಲವು ಮುಖಗಳನ್ನು ನೋಡಿದವರು. ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಕಲ್ಯಾಣ್ ರೇ ಅವರಿಗೆ ನೀಡಿದ ಸಂದರ್ಶನದಲ್ಲಿ ಸದ್ಯದ ಬಿಕ್ಕಟ್ಟಿನ ಬಗ್ಗೆ ವಿಶ್ಲೇಷಿಸಿದ್ದಾರೆ.

ಪ್ರಶ್ನೆ: ಗಾಲ್ವನ್ ಕಣಿವೆಯಲ್ಲಿ 20 ಮಂದಿ ಯೋಧರು ಹುತಾತ್ಮರಾಗಲು ಕಾರಣವಾದ ಸಂಘರ್ಷ ಮತ್ತು ಪೂರ್ವ ಲಡಾಖ್‌ನಲ್ಲಿ ಪಿಎಲ್‌ಎ ಯೋಧರ ಆಕ್ರಮಣಕಾರಿ ವರ್ತನೆಯು ಚೀನಾ ಸೇನೆಯ ಮಾಮೂಲಿ ಗಡಿ ಉಲ್ಲಂಘನೆ ಪ್ರಕರಣಗಳಿಗಿಂತ ಹೇಗೆ ಭಿನ್ನವಾಗಿದೆ?

ಉತ್ತರ: ಈಗಿನ ಪರಿಸ್ಥಿತಿಯು 2013ರ ಡೆಸ್ಪಾಂಗ್, 2014ರ ಚುಮಾರ್‌ ಮತ್ತು 2017ರ ಡೊಕ್ಲಾಂ ಮುಖಾಮುಖಿಗಿಂತ ಸಂಪೂರ್ಣ ಭಿನ್ನವಾಗಿದೆ. ಗಮನಾರ್ಹ ಸಂಗತಿಯೆಂದರೆ, ಅಸ್ತಿತ್ವದಲ್ಲಿರುವ ಒಪ್ಪಂದಗಳು ಮತ್ತು ಶಿಷ್ಟಾಚಾರಗಳನ್ನು ಚೀನಾ ಸೇನೆಯು ಪೂರ್ತಿಯಾಗಿ ಕಡೆಗಣಿಸಿದೆ. ಅವರು ಸಂಯಮವನ್ನು ಗಾಳಿಗೆ ತೂರಿ ಉದ್ದೇಶಪೂರ್ವಕ ದೊಡ್ಡ ಪ್ರಮಾಣದ ಹಿಂಸಾಚಾರಕ್ಕಿಳಿದಿದ್ದಾರೆ. ಇದು ಭಾರತೀಯ ಯೋಧರ ಮುಂದಿನ ಕ್ರಮಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ. ಪ್ರಸ್ತುತ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿದರೂ ಎಲ್‌ಎಸಿಯಲ್ಲಿ ಸಂಘರ್ಷಮಯ ವಾತಾವರಣ ಮುಂದುವರಿಯುವ ಸಾಧ್ಯತೆಯೇ ಹೆಚ್ಚು.

ADVERTISEMENT

ಪ್ರಶ್ನೆ: ಗಾಲ್ವನ್ ಕಣಿವೆಯ ಸಾರ್ವಭೌಮತ್ವವನ್ನು ಪ್ರತಿಪಾದಿಸುವಲ್ಲಿ ಪಿಎಲ್‌ಎ ಮತ್ತು ಚೀನಾ ಸರ್ಕಾರ ಉದ್ದೇಶ ಏನಿರಬಹುದು?

ಉತ್ತರ: ಗಾಲ್ವನ್ ಕಣಿವೆ ಪ್ರದೇಶದಲ್ಲಿ ನಮ್ಮ ಭೂಪ್ರದೇಶ ಸ್ವಾಧೀನಪಡಿಸಿಕೊಳ್ಳುವ ಮೂಲಕ ದೌಲತ್ ಬೇಗ್ ಒಲ್ಡಿ ರಸ್ತೆ ಮೇಲೆ ಪ್ರಾಬಲ್ಯ ಸಾಧಿಸುವುದು ಚೀನಾದ ತಂತ್ರ. ಕಾರಕೋರಂ ಪಾಸ್‌ವರೆಗೆ ಉತ್ತರ ಲಡಾಖ್‌ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ನಮ್ಮ ಪಡೆಗಳ ನಿಟ್ಟಿನಲ್ಲಿಯೂ ನಮಗೀ ರಸ್ತೆ ಬಹಳ ಮುಖ್ಯವಾದದ್ದು. ಅವರ ಬೇಡಿಕೆಯನ್ನು ಅಂಗೀಕರಿಸಬೇಕು ಎಂದು ಒತ್ತಡ ಹೇರುವ ಸಲುವಾಗಿ ಸೇನಾ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ನನಗನಿಸುತ್ತಿದೆ. ಚೀನಾದೊಂದಿಗಿನ ವ್ಯವಹಾರದ ತಂತ್ರವನ್ನು ಮರುಪರಿಶೀಲಿಸಲು ಈ ಪ್ರಕರಣದಿಂದ ನಾವು ಮನಮಾಡಬೇಕಿದೆ.

ಪ್ರಶ್ನೆ: ಪಾಂಗಾಂಗ್‌ ಸರೋವರದ ಉತ್ತರ ದಂಡೆಯಲ್ಲಿ ಪಿಎಲ್‌ಎ ಸೇನಾ ನಿಯೋಜನೆ ಹೆಚ್ಚಿಸುತ್ತಿದೆ. ಎಲ್‌ಎಸಿ ಕುರಿತಾದ ಭಾರತದ ಗ್ರಹಿಕೆಯನ್ನು ಬದಲಿಸುವುದು ಅವರ ಉದ್ದೇಶವೆಂದು ನಿಮಗೆ ಅನ್ನಿಸುತ್ತದೆಯೇ?

ಉತ್ತರ: ನಿಜ ಹೇಳಬೇಕೆಂದರೆ, ಪಾಂಗಾಂಗ್‌ ಸರೋವರದ ಉತ್ತರ ದಂಡೆಯ ಎಲ್‌ಎಸಿಯಲ್ಲಿ ಭಾರತದ ಗ್ರಹಿಕೆ ಬದಲಾವಣೆಗೆ ಅವರು ಈಗಾಗಲೇ ಒತ್ತಡ ಹೇರಿದ್ದಾರೆ. ಚೀನಾ ಯೋಧರು ಅವರ ದೃಷ್ಟಿಕೋನಕ್ಕೆ ತಕ್ಕಂತೆ ಕೆಲವು ಪ್ರದೇಶಗಳಲ್ಲಿ ಪೋಸ್ಟ್‌ಗಳನ್ನು ನಿರ್ಮಿಸಿದ್ದಾರೆ. ಇಂತಹ ಪ್ರದೇಶಗಳಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವ ಸಲುವಾಗಿ ಮಾತುಕತೆ ಮೂಲಕ ಚೀನಿಯರ ಮನವೊಲಿಸುವುದು ದೊಡ್ಡ ಸವಾಲಾಗಿದೆ.

ಪ್ರಶ್ನೆ: ಭಾರತದ ಪ್ರತಿಕ್ರಿಯೆ ಏನಿರಬೇಕು ಎಂದು ನೀವು ಭಾವಿಸುತ್ತೀರಿ?

ಉತ್ತರ: ನಮ್ಮ ಪ್ರತಿಕ್ರಿಯೆಯು ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ವಾಸ್ತವಿಕ ಮೌಲ್ಯಮಾಪನ ಆಧರಿಸಿರಬೇಕು. ಇದು ರಾಜತಾಂತ್ರಿಕ, ಆರ್ಥಿಕ ಮತ್ತು ಸೇನಾ ಕ್ರಮಗಳ ಮಿಶ್ರಣವಾಗಿರಬೇಕು. ಈ ವಿಚಾರದಲ್ಲಿ ರಾಜಕೀಯ ಬೆಂಬಲ ಗಟ್ಟಿಯಾಗಿದ್ದರೆ ಗಂಭೀರ ಸಮಸ್ಯೆ ಎದುರಿಸುವ ನಿಟ್ಟಿನಲ್ಲಿ ನಾವೆಲ್ಲ ಒಗ್ಗೂಡುತ್ತೇವೆ. ಈ ಬಿಕ್ಕಟ್ಟನ್ನು ನಿಭಾಯಿಸುವ ಪ್ರತಿಯೊಂದು ಅಂಶವನ್ನೂ ಪ್ರತಿಪಕ್ಷಗಳು ಪ್ರಶ್ನಿಸುತ್ತಾ ಇದ್ದರೆ, ಆಡಳಿತ ಪಕ್ಷವು ಈ ಹಿಂದೆ ಚೀನಾ ಸೇನೆಯು ಎಲ್‌ಎಸಿ ಉದ್ದಕ್ಕೂ ಮುಕ್ತವಾಗಿ ಓಡಾಡುತ್ತಿದ್ದ ಚಿತ್ರಣವನ್ನು ನೀಡುತ್ತದೆ. ಈ ಎರಡೂ ನಿರೂಪಣೆಗಳು ಸದ್ಯ ಗಡಿಯಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಯೋಧರಿಗೆ ಹಾಗೂ ಹಿಂದೆ ಗಡಿಯನ್ನು ಕೆಚ್ಚೆದೆಯಿಂದ ರಕ್ಷಿಸಿದ್ದವರಿಗೆ ತೀವ್ರ ಅನ್ಯಾಯ ಮಾಡುವಂಥದ್ದಾಗಿವೆ.

ಪ್ರಶ್ನೆ: 19 ಯೋಧರು ಹುತಾತ್ಮರಾಗಲು ಕಾರಣವಾದ ಉರಿ ಉಗ್ರ ದಾಳಿಯ ಬಳಿಕ ಸೇನೆಯು ನಡೆಸಿದ ನಿರ್ದಿಷ್ಟ ದಾಳಿಯ (ಸರ್ಜಿಕಲ್ ಸ್ಟ್ರೈಕ್) ಯೋಜನೆ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ನೀವು. ಈ ಬಾರಿ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈಗಲೂ ನಿರ್ದಿಷ್ಟ ದಾಳಿಯಂಥದ್ದೇ ಕ್ರಮ ಕೈಗೊಳ್ಳಬೇಕು ಎಂದು ನೀವು ಹೇಳುತ್ತೀರಾ?

ಉತ್ತರ: ಎರಡೂ ಪರಿಸ್ಥಿತಿಗಳು ಭಿನ್ನವಾಗಿವೆ. ಚೀನಾಕ್ಕೂ ಪಾಕಿಸ್ತಾನದ ಹಣೆಪಟ್ಟಿ ಕಟ್ಟುವುದರಿಂದ ಉಪಯೋಗವಾಗದು. ನಾವು ಸಮರ್ಥ ಸೇನಾ ಸಾಮರ್ಥ್ಯ ಹೊಂದಿದ್ದೇವೆ. ಸೇನಾ ನಾಯಕರು ತಮ್ಮ ಮುಂದಿರುವ ಆಯ್ಕೆಗಳನ್ನು ಪರಿಣಾಮದ ಸಹಿತ ಸರ್ಕಾರದ ಮುಂದಿಡಬೇಕು. ಈ ಬಿಕ್ಕಟ್ಟು ರಾಜತಾಂತ್ರಿಕವಾಗಿ ಬಗೆಹರಿದರೆ ಬಹಳ ಒಳ್ಳೆಯದು. ಆದರೆ ನಾವು ಎಲ್ಲದಕ್ಕೂ ಸಿದ್ಧರಾಗಿರಬೇಕು. ಏನೇ ಇದ್ದರೂ, ಈಗಿನ ಸಂದರ್ಭದಲ್ಲಿ ಎಲ್‌ಎಸಿಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾವು ಸೇನಾ ಸಾಮರ್ಥ್ಯ ಬಳಸಿಕೊಳ್ಳಲು ಹಿಂಜರಿದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಪ್ರಶ್ನೆ: ಹಲ್ಲೆಗೆ ಒಳಗಾದಾಗ ಭಾರತೀಯ ಯೋಧರು ಗುಂಡಿನ ದಾಳಿ ನಡೆಸದ್ದು (ಈ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿಕೆ ನೀಡಿದ್ದಾರೆ) ಯಾಕೆ ಎಂದು ಭಾವಿಸುತ್ತೀರಿ? ದಾಳಿಗೆ ಗುರಿಯಾದಾಗಲೂ, ತಮ್ಮ ಕರ್ನಲ್ ಅವರೇ ಹತ್ಯೆಗೀಡಾದಾಗಲೂ ಯೋಧರು ಅಂತರರಾಷ್ಟ್ರೀಯ ಒಪ್ಪಂದಗಳ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಭಾವಿಸುತ್ತೀರಾ?

ಉತ್ತರ: ಈ ವಿಚಾರವಾಗಿ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಸಂಘರ್ಷದ ವೇಳೆ ಅಲ್ಲಿದ್ದ ಯೋಧರು ಮಾತ್ರ ನಿಜವಾಗಿ ಅಲ್ಲಿ ಏನು ನಡೆದಿದೆ ಮತ್ತು ಅವರ ಮನದಲ್ಲಿ ಏನಿತ್ತು ಎಂಬುದನ್ನು ಹೇಳಬಲ್ಲರು. ಯೋಧರು ಶಸ್ತ್ರಸಜ್ಜಿತರಾಗಿ ಇದ್ದರು ಎಂದಾದರೆ, ಆಕ್ರಮಣಕ್ಕೆ ಒಳಗಾದಾಗ ಅದನ್ನು ಬಳಸಬೇಕಾಗಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಒಬ್ಬ ವ್ಯಕ್ತಿಯು ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಬಳಸುವುದು ಒಪ್ಪಂದಗಳ ಉಲ್ಲಂಘನೆಯಾಗುವುದಿಲ್ಲ. ಈಗ ನಿಯಮಗಳನ್ನು ಮರುಪರಿಶೀಲಿಸಲಾಗುತ್ತಿದೆ ಮತ್ತು ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.

ಪ್ರಶ್ನೆ: ದೈಹಿಕ ಹಿಂಸೆಯು ಭಾರತ–ಚೀನಾ ಗಡಿ ಮಾತುಕತೆಯ ಮೇಲೆ ಪರಿಣಾಮ ಬೀರಬಹುದೇ?

ಉತ್ತರ: ಖಂಡಿತವಾಗಿಯೂ. ಉಭಯ ಕಡೆಗಳಲ್ಲಿನ ನಿಲುವುಗಳು ಗಟ್ಟಿಯಾಗಲಿವೆ. ಇದರಿಂದ ಒಮ್ಮತಕ್ಕೆ ಬರುವುದು ಕಷ್ಟವಾಗಲಿದೆ. ಜೂನ್ 15ರಂದು ಭಾರತದ ಪ್ರದೇಶದಲ್ಲಿ ಚೀನಾ ಸೇನೆ ಕೈಗೊಂಡ ಕ್ರಮಗಳು, ಪೋಸ್ಟ್‌ ನಿರ್ಮಿಸಿದ್ದು, ಆ ನಂತರ ಗಾಲ್ವನ್ ಕಣಿವೆಯ ಸಾರ್ವಭೌಮತ್ವ ಪ್ರತಿಪಾದಿಸಿದ್ದು ಮಾತುಕತೆ ಪ್ರಕ್ರಿಯೆಯನ್ನೇ ಹಾಳು ಮಾಡಿದೆ. ಚೀನಾದ ಉದ್ದೇಶಗಳ ಮೇಲೆ ಈಗ ಸಾಕಷ್ಟು ಅನುಮಾನಗಳಿವೆ. ವಿಶ್ವಾಸದ ನೆಲೆಗಟ್ಟಿನಿಂದ ಕೂಡಿರದಿದ್ದರೆ ಮಾತುಕತೆ ಕಷ್ಟ.

ಪ್ರಶ್ನೆ: ಗಡಿ ಪ್ರದೇಶದಲ್ಲಿನ ಮೂಲಸೌಕರ್ಯ ಹೆಚ್ಚಿಸುವುದನ್ನು ಭಾರತ ಮುಂದುವರಿಸಬೇಕೇ ಅಥವಾ ಈ ವಿಚಾರದಲ್ಲಿ ರಾಜಿಯಾಗಬೇಕೇ?

ಉತ್ತರ: ಗಡಿ ವಿವಾದವನ್ನು ತನಗೆ ಬೇಕಾದಂತೆ ಪರಿವರ್ತಿಸಿಕೊಳ್ಳಲು ಸೇನಾ ಸಾಮರ್ಥ್ಯ ಬಳಸಲು ಸಿದ್ಧವಿರುವ ಬಲವಂತ, ಸಮರ್ಥ ಎದುರಾಳಿಯನ್ನು ನಾವು ಎದುರಿಸುತ್ತಿದ್ದೇವೆ. ಹೀಗಾಗಿ ಸೇನಾ ಸಾಮರ್ಥ್ಯ ಬಲಪಡಿಸಿಕೊಳ್ಳುವುದರ ಜತೆ ಗಡಿ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಪಡಿಸಲೇಬೇಕು. ಇದಕ್ಕೆ ನಮಗೆ ಚೀನಾ ಕಡೆಯಿಂದ ವಿರೋಧ ವ್ಯಕ್ತವಾಗಬಹುದು. ಆದರೆ ಈ ವಿಚಾರದಲ್ಲಿ ನಾವು ದೃಢವಾಗಿರಬೇಕು. ಓಲೈಕೆ ನೀತಿಯು ಓಲೈಕೆದಾರನಿಗೆ ಶಾಂತಿಯ ಫಲಿತಾಂಶ ತಂದುಕೊಟ್ಟಿರುವುದುಬಹಳ ಕಡಿಮೆ ಎಂಬುದು ಇತಿಹಾಸ ನಮಗೆ ಕಲಿಸಿದ ಪಾಠವಾಗಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.