ADVERTISEMENT

ಮಹದಾಯಿ: ‘ತಾರ್ಕಿಕ ಅಂತ್ಯ ಶೀಘ್ರ ಸಿಗಲಿದೆ’

ಬಿ.ಎಸ್.ಷಣ್ಮುಖಪ್ಪ
Published 21 ಫೆಬ್ರುವರಿ 2020, 19:30 IST
Last Updated 21 ಫೆಬ್ರುವರಿ 2020, 19:30 IST
ಪ್ರಭುಲಿಂಗ ಕೆ. ನಾವದಗಿ, ಅಡ್ವೊಕೇಟ್‌ ಜನರಲ್‌ ಕರ್ನಾಟಕ ಹೈಕೋರ್ಟ್‌
ಪ್ರಭುಲಿಂಗ ಕೆ. ನಾವದಗಿ, ಅಡ್ವೊಕೇಟ್‌ ಜನರಲ್‌ ಕರ್ನಾಟಕ ಹೈಕೋರ್ಟ್‌   

* ಮಹದಾಯಿ ಜಲವಿವಾದ ನ್ಯಾಯಮಂಡಳಿ ನೀಡಿರುವ ಐತೀರ್ಪು ಕುರಿತಂತೆ ಅಧಿಸೂಚನೆ ಹೊರಡಿಸಲು ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಿರಿ. ಮೂರು ದಶಕಗಳ ಹೋರಾಟದಲ್ಲಿ ಈಗಲಾದರೂ ಕಿಂಚಿತ್‌ ಯಶಸ್ಸು ಸಿಕ್ಕಂತಾಗಿದೆಯೇ?

ಕಾವೇರಿ ವಿವಾದದಲ್ಲೂ ಇದೇ ರೀತಿಯ ಪೂರ್ವನಿದರ್ಶನ ಇದ್ದುದರಿಂದ ನಿಶ್ಚಿತವಾಗಿಯೂ ನಮಗಿದು ದೊಡ್ಡ ಮಧ್ಯಂತರ ಗೆಲುವೇ ಸರಿ. ಯಾಕೆಂದರೆ, ಸುಪ್ರೀಂ ಕೋರ್ಟ್‌ನಲ್ಲಿ ಒಮ್ಮೆ ಮುಂದಿನ ವಿಚಾರಣಾ ಪ್ರಕ್ರಿಯೆ ಆರಂಭವಾಯಿತು ಎಂದರೆ ಅದಕ್ಕೊಂದು ತಾರ್ಕಿಕ ಅಂತ್ಯ ಬೇಗನೇ ಸಿಗುತ್ತದೆ. ಇದರಿಂದ ನೆರೆ ರಾಜ್ಯಗಳ ಜೊತೆಗಿನ ನಮ್ಮ ಸೌಹಾರ್ದಕ್ಕೂ ಅನುಕೂಲವಾಗುತ್ತದೆ.

* ವಿಶೇಷ ಮೇಲ್ಮನವಿ ಏನಿತ್ತು?

ADVERTISEMENT

ಅಂತರರಾಜ್ಯ ಜಲವಿವಾದ ಕಾಯ್ದೆಯ ಅನ್ವಯ ಕೇಂದ್ರ ಸರ್ಕಾರ ಇದಕ್ಕೊಂದು ಸ್ಕೀಂ ಫ್ರೇಮ್‌ ಮಾಡಬೇಕು ಮತ್ತು ಗೆಜೆಟ್‌ ಅಧಿಸೂಚನೆ ಹೊರಡಿಸಬೇಕು ಎಂದು ನಾವು ಕೇಳಿದ್ದೆವು. ಈ ದಿಸೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಜಲಸಂಪನ್ಮೂಲ ತಜ್ಞರ ಜೊತೆ ನಡೆಸಿದ್ದ ಚರ್ಚೆಯ ಪರಿಣಾಮವಾಗಿ ನಮ್ಮ ವಕೀಲರ ತಂಡ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ.

* ಐತೀರ್ಪಿನ ಅನ್ವಯ ಅಧಿಸೂಚನೆ ಹೊರಡಿಸಿದರೆ ರಾಜ್ಯಕ್ಕೆ ದಕ್ಕುವ ನೀರೆಷ್ಟು?

ಇದರಲ್ಲಿ ರಾಜ್ಯದ ಪಾಲು ಒಟ್ಟು 13.42 ಟಿಎಂಸಿ ಅಡಿ ನೀರು. ಕುಡಿಯುವ ನೀರಿಗೆ 5.4 ಟಿಎಂಸಿಅಡಿ ನೀರು ಮತ್ತು ಮಹದಾಯಿ ಜಲವಿದ್ಯುತ್‌ ಯೋಜನೆಗೆ 8.02 ಟಿಎಂಸಿ ಅಡಿ ನೀರು ವಿನಿಯೋಗವಾಗಲಿದೆ.

* ಕರ್ನಾಟಕದ ಪಾಲಿನ ನೀರು ಹಂಚಿಕೆ ಪ್ರಮಾಣ ಹೆಚ್ಚಿಸುವುದರಿಂದ ಗೋವಾ ಮತ್ತು ಮಹಾರಾಷ್ಟ್ರಕ್ಕೆ ನಿಜಕ್ಕೂ ನಷ್ಟವಾಗುವುದೇ?

ನಷ್ಟ ಇಲ್ಲವೇ ಇಲ್ಲ. ಪಶ್ಚಿಮ ಘಟ್ಟದ ಅಮೂಲ್ಯ ಪರಿಸರ ನಾಶ ಆಗುತ್ತದೆ ಎಂಬುದಷ್ಟೇ ಗೋವಾದ ವಾದ. ಇದು ಬಿಟ್ಟು ಬೇರೆ ಆಕ್ಷೇಪ ಇಲ್ಲ. ಐತೀರ್ಪಿನಲ್ಲಿ ನೀಡಿರುವ ನೀರಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವಂತೆ ಕೋರಿರುವ ನಮ್ಮ ಮೇಲ್ಮನವಿಗೆ ಖಂಡಿತಾ ಜಯ ಸಿಗಲಿದೆ.

* ಕೇಂದ್ರ ಸರ್ಕಾರ ವಿಳಂಬ ಮಾಡಿದ್ದಕ್ಕೆ ಕಾರಣವೇನು? ಇದರ ಹಿಂದೆ ರಾಜಕೀಯ ಇತ್ತೇ?

ನಾನು ಹಾಗೆ ಹೇಳಲಾರೆ. ಅಷ್ಟಕ್ಕೂ ಈ ವಿಷಯ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದ್ದ ಕಾರಣ ಸಹಜವಾಗಿಯೇ ವಿಳಂಬವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.