ADVERTISEMENT

ತಮಿಳುನಾಡು ಯೋಜನೆಗೆ ರಾಜ್ಯವು ಒಮ್ಮತದ ವಿರೋಧ ವ್ಯಕ್ತಪಡಿಸಬೇಕು: ಎಂ.ಬಿ.ಪಾಟೀಲ

ಸಂದರ್ಶನ

ಬಸವರಾಜ ಸಂಪಳ್ಳಿ
Published 4 ಏಪ್ರಿಲ್ 2021, 19:57 IST
Last Updated 4 ಏಪ್ರಿಲ್ 2021, 19:57 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಕಾವೇರಿ ನೀರನ್ನು ವೈಗೈ–ಗುಂಡಾರ್‌ ನದಿಗೆ ಹರಿಸುವತಮಿಳುನಾಡಿನ ಯೋಜನೆ ಕಾನೂನುಬಾಹಿರವಾಗಿದೆ. ಇದು ಕರ್ನಾಟಕಕ್ಕೆ ಮಾರಕವಾಗಿದೆ. ರಾಜ್ಯ ಸರ್ಕಾರವು ತಕ್ಷಣವೇ ಸುಪ್ರೀಂ ಕೋರ್ಟ್‌, ಕೇಂದ್ರ ಜಲ ಆಯೋಗ, ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಕೇಂದ್ರ ಸರ್ಕಾರದ ಎದುರು ಈ ಪ್ರಕರಣ ತೆಗೆದುಕೊಂಡು ಹೋಗಿ ರಾಜ್ಯದ ಹಿತ ಕಾಯಬೇಕು. ಈ ಕುರಿತು ಮುಖ್ಯಮಂತ್ರಿ, ನೀರಾವರಿ ಮತ್ತು ಕಾನೂನು ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಮಾಜಿ ಜಲ ಸಂಪನ್ಮೂಲ ಸಚಿವ, ಶಾಸಕ ಎಂ.ಬಿ.ಪಾಟೀಲ ‘ಪ್ರಜಾವಾಣಿ’ ಸಂದರ್ಶನದಲ್ಲಿ ಹೇಳಿದ್ದಾರೆ.

* ನಿಮ್ಮ ಅವಧಿಯಲ್ಲಿ ರೂಪುಗೊಂಡ ಮೇಕೆದಾಟು ಯೋಜನೆಗೆ ತಮಿಳುನಾಡಿನ ವಿರೋಧವಿದೆ. ಆ ರಾಜ್ಯದ ನದಿ ತಿರುವು ಯೋಜನೆ ಮತ್ತು ನಮ್ಮ ಮೇಕೆದಾಟು ಯೋಜನೆಗಳೆರಡೂ ಹೆಚ್ಚುವರಿ ನೀರು ಅವಲಂಬಿಸಿವೆ ಎನ್ನಲಾಗುತ್ತಿದೆ. ಹೆಚ್ಚುವರಿ ನೀರು ನಿಜಕ್ಕೂ ಇದೆಯೇ?

ಕಾವೇರಿಯಲ್ಲಿ ಹೆಚ್ಚುವರಿ ನೀರಿನ ಪ್ರಶ್ನೆಯೇ ಉದ್ಭವಿಸಲ್ಲ. ಅದು ಮುಂದಿನ ನ್ಯಾಯಮಂಡಳಿಯ ತೀರ್ಪಿನಲ್ಲಿ ಹೇಳಬೇಕಾಗುತ್ತದೆ. ಮೇಕೆದಾಟು ಯೋಜನೆ ಹೆಚ್ಚುವರಿ ನೀರು ಆಧರಿಸಿ ರೂಪಿಸಿದ್ದಲ್ಲ, ನಮಗೆ ಹಂಚಿಕೆಯಾಗಿರುವ ಕುಡಿಯುವ ನೀರನ್ನು ಆಧರಿಸಿ ರೂಪಿಸಲಾಗಿದೆ. ಆದರೆ, ತಮಿಳುನಾಡು ಹೆಚ್ಚುವರಿ ನೀರಿನ ಮೇಲೆ ಕಣ್ಣಿಟ್ಟು ನದಿ ಜೋಡಣೆ ಯೋಜನೆ ರೂಪಿಸಿದೆ. ಇದುಸಾಧುವಲ್ಲ.ಬೃಹತ್‌ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಸುತ್ತ–ಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು (27 ಟಿಎಂಸಿ ಅಡಿ), ತಮಿಳುನಾಡಿಗೆ ಬೇಸಿಗೆಯಲ್ಲಿ ಹರಿಸಬೇಕಾಗಿರುವ ನಾಲ್ಕು ತಿಂಗಳಲ್ಲಿನ 10 ಟಿಎಂಸಿ ಅಡಿ, ಹಾಗೂ ನದಿ ಪಾತ್ರದಲ್ಲಿ ನೈಸರ್ಗಿಕವಾಗಿ ಹರಿಯುವ 10 ಟಿಎಂಸಿ ಅಡಿ ನೀರು ಸೇರಿದಂತೆ ಒಟ್ಟು 47 ಟಿಎಂಸಿ ಅಡಿ ನೀರನ್ನು ಮೇಕೆದಾಟು ಯೋಜನೆ ಒಳಗೊಂಡಿದೆ. ನಾನು, ಜಲ ಸಂಪನ್ಮೂಲ ಸಚಿವನಾಗಿದ್ದಾಗ ಹಿರಿಯ ವಕೀಲ ಫಾಲಿ ನರಿಮನ್‌ ಅವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗಿದೆ. ಇದರಿಂದ ತಮಿಳುನಾಡಿಗೂ ಅನುಕೂಲವಾಗಲಿದೆ. ಆ ರಾಜ್ಯಕ್ಕೆ ಈಗಾಗಲೇ ಹಂಚಿಕೆಯಾಗಿರುವ 177.25 ಟಿಎಂಸಿ ಅಡಿ ನೀರಿಗೆ ಮೇಕೆದಾಟು ಯೋಜನೆಯಿಂದ ಎಲ್ಲಿಯೂ ಬಾಧಕವಾಗದಂತೆ ನಮ್ಮ ಸರಹದ್ದಿನಲ್ಲಿ ಕೈಗೊಳ್ಳಲಾಗಿದೆ.

ADVERTISEMENT

* ಮಳೆ ಪ್ರಮಾಣ, ಬೆಳೆ ವಿನ್ಯಾಸ, ಭೂ ಬಳಕೆ ಎಲ್ಲವೂ ಬದಲಾಗಿದೆ. ಕಾವೇರಿ ನದಿಯಲ್ಲಿ ಎಷ್ಟು ನೀರು ಲಭ್ಯವಿದೆ ಎಂಬುದರ ಸಮೀಕ್ಷೆ ಅಥವಾ ಅಧ್ಯಯನ 1972ರ ಬಳಿಕ ಆಗಿಲ್ಲ. ಹಾಗಿರುವಾಗ ಮೇಕೆದಾಟು ಯೋಜನೆ ಮತ್ತು ತಮಿಳುನಾಡಿನ ನದಿ ಜೋಡಣೆ ಯೋಜನೆಯನ್ನು ಯಾವ ಆಧಾರದಲ್ಲಿ ರೂಪಿಸಲಾಗಿದೆ?

ತಮಿಳುನಾಡು ರಾಜ್ಯವು ಕಾವೇರಿಯನ್ನು ವೈಗೈ– ಗುಂಡಾರ್‌ ನದಿಗೆ ಜೋಡಿಸಲು ಮುಂದಾಗಿರುವುದು ಸಂಪೂರ್ಣ ಕಾನೂನು ಬಾಹಿರವಾಗಿದೆ. ಹೆಚ್ಚುವರಿ ನೀರು ಇನ್ನೂ ನಿರ್ಧಾರವಾಗಿಲ್ಲ. ಮೇಕೆದಾಟು ಯೋಜನೆ ಒಂದೇ ಒಂದು ಹನಿ ಹೆಚ್ಚುವರಿ ನೀರನ್ನು ಆಧರಿಸಿಲ್ಲ. ಮೇಕೆದಾಟು ಯೋಜನೆಯಲ್ಲಿ ಎಲ್ಲಿಯೂ ಕಾನೂನು ಉಲ್ಲಂಘನೆಯಾಗಿಲ್ಲ.

* ತಮಿಳುನಾಡು ಯೋಜನೆ ರೂಪಿಸುವಾಗ ಅಗತ್ಯ ಪೂರ್ವ ಸಿದ್ಧತೆಗಳೆಲ್ಲವನ್ನೂ ಮಾಡುತ್ತದೆ. ಆದರೆ, ನಮ್ಮಲ್ಲಿ ತರಾತುರಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಪೂರ್ವ ಸಿದ್ಧತೆ ಇಲ್ಲದ ಕಾರಣ ಅಗತ್ಯ ಅನುಮತಿಗಳು ಸಿಗುವುದಿಲ್ಲ (ಪರಿಸರ ಅನುಮತಿ ಇತ್ಯಾದಿ), ಯೋಜನೆ ವಿಳಂಬವಾಗುತ್ತದೆ ಅಥವಾ ನನೆಗುದಿಗೆ ಬೀಳುತ್ತದೆ. ಯೋಜನಾ ವೆಚ್ಚ ವಿಪರೀತ ಏರಿಕೆಯಾಗುತ್ತದೆ. ಮೇಕೆದಾಟು ಯೋಜನೆ ಕೂಡ ಇದಕ್ಕೆ ಒಂದು ಉದಾಹರಣೆ. ಇದಕ್ಕೆ ಪರಿಹಾರ ಇಲ್ಲವೆ?

ತಮಿಳುನಾಡು ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಪೂರ್ವ ಸಿದ್ಧತೆ ಮಾಡಿಲ್ಲ. ಕಾನೂನು ಬಾಹಿರವಾಗಿಯೇ ಮಾಡಿಕೊಂಡು ಬರುತ್ತಿದೆ. ಯಾರ ಅನುಮತಿ ಪಡೆಯದೇ ಅನುಷ್ಠಾನಕ್ಕೆ ಮುಂದಾಗಿದೆ. ಆದರೆ, ಕರ್ನಾಟಕ ಯಾವಾಗಲೂ ಕಾನೂನುಬದ್ಧವಾಗಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡುತ್ತ ಬಂದಿದೆ. ಕೇಂದ್ರ ಜಲ ಆಯೋಗ ಡಿಪಿಆರ್‌ಗೆ ಒಪ್ಪಿಗೆ ನೀಡಿದ ಬಳಿಕ ಜಾಗತಿಕ ಟೆಂಡರ್‌ ಕರೆಯಲಾಗಿತ್ತು. ಆದರೆ, ಅದರಲ್ಲಿ ಯಾರೂ ಭಾಗವಹಿಸಿರಲಿಲ್ಲ. ಬಳಿಕ ರಾಷ್ಟ್ರಮಟ್ಟದಲ್ಲಿ ಟೆಂಡರ್‌ ಕರೆಯಲಾಯಿತು.ನೆರೆಯ ರಾಜ್ಯಗಳು ವಿರೋಧ ಮಾಡಿದಾಗ ಹಾಗೂ ಕೋರ್ಟ್‌ಗಳು‌ ಮಧ್ಯ ಪ್ರವೇಶಿಸಿದಾಗ ಕೃಷ್ಣಾ, ಕಾವೇರಿ ಯೋಜನೆಗಳ ವೆಚ್ಚ ಹೆಚ್ಚಳ ಹಾಗೂ ಅನುಷ್ಠಾನ ವಿಳಂಬವಾಗಿದೆಯೇ ಹೊರತು, ಯೋಜನೆ ರೂಪಿಸುವಲ್ಲಿ ತಪ್ಪು ಮಾಡಿಲ್ಲ. ಪೂರ್ವ ಸಿದ್ಧತೆಯೊಂದಿಗೆ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ.

* ಮೇಕೆದಾಟು ಮತ್ತು ತಮಿಳುನಾಡಿನ ನದಿ ಜೋಡಣೆ ಯೋಜನೆಯನ್ನು ನಿಭಾಯಿಸುವ ವಿಚಾರದಲ್ಲಿ ಈಗಿನ ಸರ್ಕಾರಕ್ಕೆ ನೀವು ಕೊಡುವ ಸಲಹೆ ಏನು?

ರಾಜ್ಯ ಸರ್ಕಾರ ತಕ್ಷಣ ಸರ್ವಪಕ್ಷಗಳ ಸಭೆ ಕರೆದು ತಮಿಳುನಾಡಿನ ನದಿ ಜೋಡಣೆ ಯೋಜನೆ ಬಗ್ಗೆ ಚರ್ಚಿಸಿ ಕೇಂದ್ರ ಜಲ ಆಯೋಗ, ಕೇಂದ್ರ ಜಲಶಕ್ತಿ ಸಚಿವರು ಹಾಗೂ ಪ್ರಧಾನಮಂತ್ರಿಗಳ ಬಳಿ ನಿಯೋಗ ಕೊಂಡೊಯ್ದು, ಒಮ್ಮತದ ವಿರೋಧ ವ್ಯಕ್ತಪಡಿಸಬೇಕು. ಜೊತೆಗೆ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರುವ ಮೂಲಕ ವ್ಯಾಪಕವಾಗಿ ವಿರೋಧಿಸಬೇಕು. ಕಾನೂನು ತಜ್ಞರ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬೇಕು.ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯ ಕಾನೂನಾತ್ಮಕವಾಗಿ ನಡೆದುಕೊಳ್ಳುತ್ತಿದೆ. ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅನುಮತಿಗಳನ್ನು ಪಡೆಯಲು ಕಾನೂನು ತಂಡ, ತಾಂತ್ರಿಕ ತಂಡದೊಂದಿಗೆ ಜಲಸಂಪನ್ಮೂಲ ಸಚಿವರು, ಮುಖ್ಯಮಂತ್ರಿಯವರು ಸಂಬಂಧಿಸಿದ ಕೇಂದ್ರ ಸಚಿವರು, ಪ್ರಾಧಿಕಾರದ ಬಳಿಗೆ ಹೋಗಿ ಅಗತ್ಯ ಅನುಮತಿ ಪಡೆಯಲು ಮುಂದಾಗಬೇಕು.

* ಅಕ್ಸಲರೇಟೆಡ್‌ ಇರಿಗೇಷನ್‌ ಬೆನಿಫಿಟ್‌ ಪ್ರಾಜೆಕ್ಟ್‌ (ಎಐಬಿಪಿ) ಅನ್ನು ಕೇಂದ್ರ ಸರ್ಕಾರವು ರದ್ದುಪಡಿಸಿದೆ. ಇದರ ಮೂಲಕ ಸಿಗುತ್ತಿದ್ದ ನೆರವು ಕೈತಪ್ಪಿದೆ. ಈ ವಿಚಾರದಲ್ಲಿ ಕೇಂದ್ರವನ್ನು ಮನವೊಲಿಸುವ ಕೆಲಸವೂ ಆಗಿಲ್ಲ. ಕೇಂದ್ರದ ವಿರುದ್ಧ ಆಂದೋಲನ ನಡೆಸುವ ಕೆಲಸವೂ ಆಗಿಲ್ಲ ಏಕೆ?

ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗಎಐಬಿಪಿ ಜಾರಿಗೆ ತಂದಿದ್ದರು ಎಂಬುದನ್ನುಹೆಮ್ಮೆಯಿಂದ ಹೇಳಿಕೊಳ್ಳಬೇಕಾಗುತ್ತದೆ. ಇದರಿಂದ ನೀರಾವರಿ ಯೋಜನೆಗಳ ಅನುಷ್ಠಾನ, ಆಧುನೀಕರಣದ ಸಂದರ್ಭದಲ್ಲಿ ರಾಜ್ಯಕ್ಕೆ ಹೊರೆ ಕಡಿಮೆಯಾಗುತ್ತಿತ್ತು. ₹ 15 ಸಾವಿರ ಕೋಟಿಯಿಂದ ₹ 20 ಸಾವಿರ ಕೋಟಿ ಅನುದಾನ ಲಭಿಸುತ್ತಿತ್ತು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರುಎಐಬಿಪಿ ರದ್ದುಗೊಳಿಸಿ, ಪಿಎಂಕೆಎಸ್‌ವೈನಲ್ಲಿ ವಿಲೀನಗೊಳಿಸಿದರು. ಹೀಗಾಗಿ, ಈ ಮೊದಲುಎಐಬಿಪಿಯಡಿ ಲಭಿಸುತ್ತಿದ್ದ ದೊಡ್ಡ ಪ್ರಮಾಣದ ಅನುದಾನ ಲಭಿಸುತ್ತಿಲ್ಲ. ಪಿಎಂಕೆಎಸ್‌ವೈನಲ್ಲಿ ರೈತರು ವೈಯಕ್ತಿಕವಾಗಿ ಸಹಾಯ ಪಡೆಯುತ್ತಿದ್ದಾರೆ. ಆದರೆ, ಸರ್ಕಾರ ಜಾರಿಗೊಳಿಸುವ ಏತ ನೀರಾವರಿಯಂತಹ ದೊಡ್ಡ ಯೋಜನೆಗಳಿಗೆ, ನಾಲೆಗಳ ಆಧುನೀಕರಣಕ್ಕೆ ಇದರಿಂದ ನೆರವಾಗುತ್ತಿಲ್ಲ. ಎಐಬಿಪಿಯನ್ನು ಪುನರಾರಂಭಿಸಲು ಕೇಂದ್ರದ ಮೇಲೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಒತ್ತಡ ಹೇರಬೇಕು. ಎಐಬಿಪಿ ಇಡೀ ದೇಶಕ್ಕೆ ಅನ್ವಯಿಸುವುದರಿಂದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗಲಿದೆ.

**
ರಾಜಕೀಯ ಬದಿಗೊತ್ತಿ
ಕೇವಲ ರಾಜಕೀಯ ಉದ್ದೇಶಗಳಿಗಾಗಿ ಮೇಕೆದಾಟು ಹೆಸರು ಪದೇ ಪದೇ ಪ್ರಸ್ತಾಪ ಆಗುತ್ತಿದೆ. 2013ರಲ್ಲಿಯೇ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ತೆಗೆದಿಟ್ಟರೂ ಈವರೆಗೆ ಯೋಜನೆಗೆ ಚಾಲನೆ ನೀಡದಿರುವುದು ವಿಷಾದದ ಸಂಗತಿ. ಇದರಿಂದಾಗಿ ಯೋಜನೆ ವೆಚ್ಚ ₹5,912 ಕೋಟಿಯಿಂದ ₹ 9 ಸಾವಿರ ಕೋಟಿಗೆ ಏರಿಕೆ ಆಗಿದೆ. ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳಲು ಯಾರ ಅನುಮತಿಯೂ ಬೇಕಿಲ್ಲ ಎಂದು ನ್ಯಾಯಾಲಯವೇ ಹಿಂದೊಮ್ಮೆ ಹೇಳಿದೆ. ಹೀಗಾಗಿ ಸರ್ಕಾರ ರಾಜಕೀಯ ಬದಿಗೊತ್ತಿ ಅಣೆಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಬೇಕು.
-ಸಂಪತ್‌ಕುಮಾರ್, ಸಂಚಾಲಕ, ಮೇಕೆದಾಟು ಹೋರಾಟ ಸಮಿತಿ

**
ಕೆರೆ ತುಂಬಿಸುವ ಕೆಲಸ ಆಗಲಿ
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಶೀಘ್ರ ಹಸಿರು ನಿಶಾನೆ ತೋರಲಿದೆ. ಇದರೊಟ್ಟಿಗೆ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ದಶಕಗಳಿಂದ ಬಾಕಿ ಉಳಿದಿರುವ ಏತ ನೀರಾವರಿ ಯೋಜನೆಗಳನ್ನು ಸರ್ಕಾರ ಪೂರ್ಣಗೊಳಿಸಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡಬೇಕು. ನಾನು ಕಾವೇರಿ ನೀರಾವರಿ ನಿಗಮದ ಎಂ.ಡಿ. ಆಗಿದ್ದಾಗ ಹೇಮಾವತಿ ನದಿ ವ್ಯಾಪ್ತಿಯಲ್ಲಿ ಕೆರೆಗಳ ಹೂಳೆತ್ತಿ ತುಂಬಿಸಿದ್ದೆವು. ಕಾವೇರಿ ನದಿ ನೀರಿನಿಂದ ಕೆರೆಗಳನ್ನು ತುಂಬಿಸುವುದರಿಂದ ಕುಡಿಯುವ ನೀರಿನ ಜೊತೆಗೆ ಅಂತರ್ಜಲ ಮಟ್ಟವೂ ವೃದ್ಧಿ ಆಗುತ್ತದೆ.ಕಾವೇರಿ ಕಣಿವೆ ಜಲಾಶಯಗಳ ಮುಖ್ಯ ಕಾಲುವೆಗಳ ಮುಖಾಂತರ ಕೆರೆಗಳನ್ನು ತುಂಬಿಸಲು ಸಂಪರ್ಕ ನಾಲೆಗಳನ್ನು ಸರ್ಕಾರ ಅಭಿವೃದ್ಧಿಪಡಿಸಬೇಕು. ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ನೀರಿನ ಅಭಾವದ ವರ್ಷಗಳಲ್ಲಿ ಬೆಳೆ ಪದ್ಧತಿಯನ್ನು ವಿಮರ್ಶೆ ಮಾಡಬೇಕು.
-ಟಿ. ತಿಮ್ಮೇಗೌಡ, ನಿವೃತ್ತ ಐಎಎಸ್‌ ಅಧಿಕಾರಿ

**
ತಮಿಳುನಾಡು ರೈತರ ವಿರೋಧವಿಲ್ಲ
ಮೇಕೆದಾಟು ಅಣೆಕಟ್ಟೆ ನಿರ್ಮಾಣದಿಂದ ಯಾರಿಗೂ ಅನ್ಯಾಯ ಆಗದು. ಕಾವೇರಿ ಒಪ್ಪಂದಕ್ಕೆ ಬದ್ಧವಾಗಿಯೇ ನಮ್ಮ ಪಾಲಿಗೆ ಲಭ್ಯ ಇರುವ ಹೆಚ್ಚುವರಿ ನೀರಿನ ಬಳಕೆಗೆ ಸರ್ಕಾರ ಯೋಜನೆ ರೂಪಿಸಿದೆ. ಈ ಸಂಬಂಧ ರೈತ ಸಂಘವು ತಮಿಳುನಾಡಿನ ‘ಕಾವೇರಿ ಕುಟುಂಬ’ ರೈತರ ಜೊತೆಗೂ ಮಾತುಕತೆ ನಡೆಸಿದೆ. ಯೋಜನೆಗೆ ಅಲ್ಲಿನ ರೈತರ ವಿರೋಧ ಇಲ್ಲ. ಆದರೆ ತಮಿಳುನಾಡು ಕೇವಲ ರಾಜಕೀಯ ಉದ್ದೇಶಕ್ಕಾಗಿ ಇದನ್ನು ವಿರೋಧಿಸುತ್ತ ಬಂದಿದೆ. ಹೀಗಾಗಿ ರಾಜ್ಯ ಸರ್ಕಾರ ಹೆದರುವ ಅಗತ್ಯ ಇಲ್ಲ.
-ಎಂ. ರಾಮು, ಕಾರ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.