ADVERTISEMENT

ಸಂದರ್ಶನ | ಕಾವೇರಿ: ಮೇಕೆದಾಟು ಸಾಕಾರ ಕೆಲ ಸಮಸ್ಯೆಗಳಿಗೆ ಪರಿಹಾರ -ಟಿ.ಬಿ.ಜಯಚಂದ್ರ

ಕೆ.ಜೆ.ಮರಿಯಪ್ಪ
Published 31 ಮಾರ್ಚ್ 2021, 2:28 IST
Last Updated 31 ಮಾರ್ಚ್ 2021, 2:28 IST
ಟಿ.ಬಿ.ಜಯಚಂದ್ರ
ಟಿ.ಬಿ.ಜಯಚಂದ್ರ   

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಾಣಕ್ಕೆ ಪ್ರಯತ್ನ ನಡೆಸಿದ್ದರು. ಕಾನೂನು ತೊಡಕುಗಳನ್ನು ನಿವಾರಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಜಲಸಂಪನ್ಮೂಲ ಇಲಾಖೆಗೆ ನಿರ್ದೇಶನ ಕೊಡಿಸಿದ್ದರು. ಮೇಕೆದಾಟು ಮತ್ತು ನದಿ ಜೋಡಣೆ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ

l ಕಾವೇರಿಯ ‘ಹೆಚ್ಚುವರಿ’ ನೀರನ್ನು ವೈಗೈ– ಗುಂಡಾರ್‌ ನದಿಗಳಿಗೆ ಹರಿಸುವ ತಮಿಳುನಾಡಿನ ಯೋಜನೆಯು ಕರ್ನಾಟಕ– ತಮಿಳುನಾಡು ಮಧ್ಯೆ ಮತ್ತೆ ಜಲ ವಿವಾದಕ್ಕೆ ನಾಂದಿ ಹಾಡಿದೆಯಲ್ಲ...

ಈಗಾಗಲೇ ವಿವಾದ ಹುಟ್ಟು ಹಾಕಿದೆ. ಈ ವಿಚಾರ ಬಂದಾಗಲೆಲ್ಲ ಎರಡೂ ರಾಜ್ಯಗಳ ನಡುವೆ ಸಂಘರ್ಷ ಆರಂಭವಾಗುತ್ತದೆ. ಕಾವೇರಿ ನೀರನ್ನು ನಾವು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಸೋತಿರುವುದು ಇಷ್ಟೆಲ್ಲ ಸಮಸ್ಯೆ,ರಾದ್ಧಾಂತಕ್ಕೆ ಕಾರಣವಾಗಿದೆ.ಕಾವೇರಿ ನ್ಯಾಯಮಂಡಳಿ ಐತೀರ್ಪು ನಮ್ಮ ಮುಂದಿದೆ. ತಮಿಳುನಾಡಿಗೆ ಹಿಂದೆ 192 ಟಿಎಂಸಿ ಅಡಿ ನೀರು ಬಿಡಬೇಕಿತ್ತು. ನ್ಯಾಯ ಮಂಡಳಿ ತೀರ್ಪಿನಂತೆ ಈಗ 177 ಟಿಎಂಸಿ ಅಡಿ ಹರಿಸಬೇಕಿದೆ. ನಂತರ ನಮಗೆ ಹೆಚ್ಚುವರಿ ನೀರು ಲಭ್ಯವಾಗಿದೆ. ಒಟ್ಟಾರೆಯಾಗಿ ಸಮುದ್ರಕ್ಕೆ ನೀರು ಹರಿದು ಹೋಗುವುದನ್ನು ತಡೆದು, ಬಳಸಿಕೊಳ್ಳಬೇಕಿದೆ. ಇದಕ್ಕೆ ಮೇಕೆದಾಟು ಬಳಿ ಅಣೆಕಟ್ಟೆ ಕಟ್ಟುವುದೊಂದೇ ಪರಿಹಾರ. ಈ ಯೋಜನೆ ಸಾಕಾರಗೊಂಡರೆ ತಮಿಳುನಾಡಿಗೆ ಕಾಲಕಾಲಕ್ಕೆ ನಿಗದಿಪಡಿಸಿದಷ್ಟು ನೀರು ಹರಿಸಬಹುದು. ಇದರಿಂದ ಅವರ ಪಾಲಿನ ನೀರನ್ನಷ್ಟೇ ಬಿಟ್ಟು, ಉಳಿದ ಹೆಚ್ಚುವರಿ ನೀರನ್ನು ರಾಜ್ಯದಲ್ಲಿ ಬಳಸಿಕೊಳ್ಳಬಹುದು. ಜತೆಗೆ 500ರಿಂದ 600 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇದು ಕೈಗೂಡಿಲ್ಲ.

ADVERTISEMENT

l ಮೇಕೆದಾಟು ಯೋಜನೆಗೆ ಕೇಂದ್ರ ಒಪ್ಪಿಗೆ ನೀಡುತ್ತಿಲ್ಲವಲ್ಲ?

ಹೌದು, ರಾಜಕೀಯ ಇಲ್ಲಿ ಕೆಲಸ ಮಾಡುತ್ತಿದೆ. ಪ್ರಸ್ತುತ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ನದಿ ಜೋಡಣೆಗೆ ಅವಕಾಶ ಮಾಡಿಕೊಡಲಾಗಿದೆ. ಲೋಕಸಭೆಯಲ್ಲೂ ನೀರಾವರಿ ವಿಚಾರದಲ್ಲಿ ತಮಿಳುನಾಡಿನ ಎಲ್ಲಾ ಸಂಸದರು ಒಟ್ಟಾಗುತ್ತಾರೆ ಎಂಬ ಭಯ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ನಮ್ಮಲ್ಲಿ ಬಿಜೆಪಿ ಸಂಸದರಿದ್ದರೂ ಒಟ್ಟಾಗಿ ಪ್ರಧಾನಿ ಬಳಿಗೆ ಹೋಗಿ ಯೋಜನೆಗೆ ಒಪ್ಪಿಗೆ ಪಡೆಯುವ ಪ್ರಯತ್ನ ಮಾಡಲಿಲ್ಲ. ಮೇಲಿಂದ ಕೆಳಗಿನ ತನಕ ಒಂದೇ ಸರ್ಕಾರ ಇದ್ದರೆ ಅಭಿವೃದ್ಧಿಯ ಹೊಳೆ ಹರಿಯುತ್ತದೆ ಎಂದು ಸುಳ್ಳು ಹೇಳಿ ಜನರನ್ನು ನಂಬಿಸಿದರು. ಜನ ಬೆಂಬಲಿಸಿದರೂ ಅವರ ಕೆಲಸ ಮಾಡುತ್ತಿಲ್ಲ.ಮೇಕೆದಾಟು ಯೋಜನೆ ಜಾರಿಗೆ ಈಗಲೂ ಎರಡು ಮಾರ್ಗ ಇವೆ. ಒಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿ ಬಳಿಗೆ ಹೋಗಿ ಒಪ್ಪಿಗೆ ಪಡೆದುಕೊಳ್ಳುವುದು. ಇದು ಸಾಧ್ಯವಾಗದಿದ್ದರೆ ಎರಡನೆಯದಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು. ತಮಿಳುನಾಡಿನಲ್ಲಿ ನದಿ ಜೋಡಣೆಗೆ ಅವಕಾಶ ನೀಡಲಾಗಿದೆ. ಅದರಂತೆ ಅಣೆಕಟ್ಟೆ ನಿರ್ಮಿಸಲು ನಮಗೂ ಒಪ್ಪಿಗೆ ಕೊಡಿ ಎಂದು ಕೇಳುವುದು. ತಮಿಳುನಾಡಿಗೆ ನಿಗದಿತ ಪ್ರಮಾಣದಷ್ಟು ನೀರು ಬಿಡುಗಡೆ ಮಾಡುವ ಭರವಸೆಯನ್ನು ಕೋರ್ಟ್‌ಗೆ ನೀಡಬೇಕು. ಬೆಂಗಳೂರಿನ ಜನತೆ ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿರುವುದು ಹಾಗೂ ವಿದ್ಯುತ್ ಸಮಸ್ಯೆ ಬಗ್ಗೆಯೂ ಮನದಟ್ಟು ಮಾಡಿಕೊಟ್ಟು ಒಪ್ಪಿಗೆ ಪಡೆಯುವುದೊಂದೇ ಉಳಿದಿರುವ ಮಾರ್ಗ.

l ನುಗು ರೀತಿಯಲ್ಲಿ ಸಣ್ಣ ಅಣೆಕಟ್ಟೆಗಳನ್ನು ನಿರ್ಮಿಸಿಕೊಂಡರೆ ಮಳೆಗಾಲದಲ್ಲಿ ನೀರು ಸಂಗ್ರಹಿಸಬಹುದು. ಆದರೆ ಆ ಕೆಲಸವನ್ನೂ ಸರ್ಕಾರ ಮಾಡುತ್ತಿಲ್ಲ? ಇದಕ್ಕೆ ಇರುವ ತೊಡಕುಗಳು ಏನು?

ಯಾವ ತೊಡಕುಗಳೂ ಇಲ್ಲ. ಆದರೆ ಮಾಡುತ್ತಿಲ್ಲ. ಸಾಕಷ್ಟು ಕಡೆಗಳಲ್ಲಿ ಸಣ್ಣ ಪ್ರಮಾಣದ ಅಣೆಕಟ್ಟೆಗಳನ್ನು ನಿರ್ಮಿಸಿದರೆ ನೀರು ಸಂಗ್ರಹಿಸಬಹುದು. ನನಗೆ ನೆನಪಿರುವ ಒಂದು ಉದಾಹರಣೆ ಹೇಳುತ್ತೇನೆ. ಮಡಿಕೇರಿ ಬಳಿ ಒಂದು ಸ್ಥಳ ಗುರುತಿಸಲಾಗಿತ್ತು. ಅಲ್ಲಿ ಪುಟ್ಟದಾದ ಅಣೆಕಟ್ಟೆ ನಿರ್ಮಿಸಿದರೆ 4ರಿಂದ 5 ಟಿಎಂಸಿ ನೀರು ಸಂಗ್ರಹಿಸಬಹುದು. ಇದೇ ರೀತಿಯಲ್ಲಿ ಹಲವು ಕಡೆಗಳಲ್ಲಿ ಪ್ರಯತ್ನ ಮಾಡಬಹುದು. ಸಂಗ್ರಹಿಸಿದ ನೀರನ್ನು ಸ್ಥಳೀಯವಾಗಿ ಬಳಸಬಹುದು. ಹೆಚ್ಚಿನ ಆರ್ಥಿಕ ಹೊರೆಯೂ ಆಗುವುದಿಲ್ಲ. ಕೇಂದ್ರವನ್ನು ಬೇಡುವ ಸ್ಥಿತಿಯೂ ಬರುವುದಿಲ್ಲ.

l ಕಾಲುವೆಯ ಕೊನೆ ಭಾಗಕ್ಕೆ ನೀರು ಹರಿಯುವುದೇ ಇಲ್ಲ. ಆ ಭಾಗದ ಜನರು ಪ್ರತಿ ವರ್ಷವೂ ಹೋರಾಟ ನಡೆಸುವುದು ನಿಂತಿಲ್ಲ? ಆದರೂ ಸರ್ಕಾರ, ಜನಪ್ರತಿನಿಧಿಗಳು ಸ್ಪಂದಿಸುವುದಿಲ್ಲ ಏಕೆ?

ಯಾವುದೇ ಸರ್ಕಾರವಿದ್ದರೂ ನೀರಾವರಿ ವಿಚಾರ ಹಾಗೂ ಯೋಜನೆಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. ಯೋಜನೆ ರೂಪಿಸಿ ಜಾರಿ ಮಾಡಿ ಸುಮ್ಮನಾಗುತ್ತೇವೆ. ನಾಲೆ ಆಧುನೀಕರಣ ಮಾಡುವುದಿಲ್ಲ. ಗೊರೂರು ಜಲಾಶಯದಿಂದ ತುಮಕೂರು ಭಾಗಕ್ಕೆ ನೀರು ಹರಿದು ಬರುವ ಹೇಮಾವತಿ ನಾಲೆಯ ಆಧುನೀಕರಣಕ್ಕೆ ನಾನು ಹೋರಾಟಮಾಡಿ ಕಾರ್ಯಗತ ಮಾಡಿಸಬೇಕಾಯಿತು. ಜನಪ್ರತಿನಿಧಿಗಳು ತಮ್ಮ ಅಗತ್ಯವನ್ನಷ್ಟೇ ನೋಡಿಕೊಂಡು ಸುಮ್ಮನಾಗುವುದರಿಂದ ನಾಲೆಯ ಕೊನೆ ಭಾಗಕ್ಕೆ ನೀರು ಹರಿಯುವುದಿಲ್ಲ.

l ಕುಡಿಯಲು ನೀರು ಬಳಕೆ ಮಾಡುವಲ್ಲೂ ಇದೇ ಮನಸ್ಥಿತಿ ಇದೆಯಲ್ಲ?

ಈ ಬಗ್ಗೆ ಯಾರೂ ಸರಿಯಾಗಿ ಯೋಚಿಸುವುದಿಲ್ಲ. ಬೆಂಗಳೂರುಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಂಡು ದಶಕ ಕಳೆದಿದ್ದರೂ ಈವರೆಗೂ ಕುಡಿಯಲು ನೀರು ಕೊಡಲು ಸಾಧ್ಯವಾಗಿಲ್ಲ. ಬೆಂಗಳೂರು ನಗರದ ಜನಸಂಖ್ಯೆ ಬೆಳವಣಿಗೆಯನ್ನು ನೋಡಿದರೆ 2030ರ ವೇಳೆಗೆ 2.25 ಕೋಟಿ ದಾಟುತ್ತದೆ. ಆ ವೇಳೆಗೆ 80 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಮಾಹಿತಿ ತಂತ್ರಜ್ಞಾನ ಕಂಪನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನಗರದ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಮುಂದೆ ಕುಡಿಯುವ ನೀರಿಗೆ ಏನು ಮಾಡಬೇಕು ಎಂಬ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಈಗಲೇ ಯೋಚಿಸದಿದ್ದರೆ ಮುಂದೆ ನಗರದ ಜನರು ನೀರಿಲ್ಲದೆ ಪರಿತಪಿಸುತ್ತಾರೆ. ಮೇಕೆದಾಟು ಜಲಾಶಯ ನಿರ್ಮಾಣವಾದರೆ ಮಾತ್ರ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

l ನೀವು ಸಚಿವರಾಗಿದ್ದಾಗ ಯಾವೆಲ್ಲ ಪ್ರಯತ್ನಗಳು ನಡೆದಿದ್ದವು?

ನಾನು ಕಾನೂನು ಸಚಿವನಾಗಿದ್ದಾಗ ಮೇಕೆದಾಟು ಯೋಜನೆಗೆ ಸ್ಥಳೀಯವಾಗಿ ಇದ್ದ ಎಲ್ಲಾ ಅಡೆತಡೆಗಳನ್ನು ನಿವಾರಿಸಿದ್ದೆ. ಹಿರಿಯ ವಕೀಲ ಫಾಲಿ ನರಿಮನ್ ಅವರಿಂದ ಸಲಹೆ ಪಡೆದುಕೊಂಡಿದ್ದೆ. ತಾಂತ್ರಿಕ ಒಪ್ಪಿಗೆಯೂ ಸಿಕ್ಕಿತ್ತು. ನಂತರ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಜಲಸಂಪನ್ಮೂಲ ಇಲಾಖೆಗೆ ಸೂಚಿಸಲಾಗಿತ್ತು. ನಂತರ ಬಂದ ಸರ್ಕಾರಗಳು ಕೇಂದ್ರದ ಒಪ್ಪಿಗೆ ಕೋರಿ ಯೋಜನಾ ವರದಿ ಸಲ್ಲಿಸಿದ್ದರೂ ರಾಜಕೀಯ ಉದ್ದೇಶದಿಂದ ಈವರೆಗೂ ಅನುಮತಿ ಸಿಕ್ಕಿಲ್ಲ.ತಮಿಳುನಾಡಿನ ರಾಜಕೀಯ ಒತ್ತಡಕ್ಕೆ ಮಣಿದು ನದಿ ಜೋಡಣೆಗೆ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಹೆಚ್ಚಿನ ಸಂಖ್ಯೆಯ ಬಿಜೆಪಿ ಸಂಸದರು ಇದ್ದರೂ ಕೇಂದ್ರದ ಮೇಲೆ ಒತ್ತಡ ಹಾಕಲು ಸಾಧ್ಯವಾಗಿಲ್ಲ. ಹಾಗಾಗಿ ನಾವು ಹಿಂದುಳಿದಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.