ADVERTISEMENT

ಬೆಳಗಾವಿ ಉಪಚುನಾವಣೆ | ಮತದಾರರು ಮಗಳ ಕೈ ಬಿಡಲಾರರು: ಮಂಗಲಾ ಅಂಗಡಿ

ಎಂ.ಮಹೇಶ
Published 10 ಏಪ್ರಿಲ್ 2021, 21:16 IST
Last Updated 10 ಏಪ್ರಿಲ್ 2021, 21:16 IST
ಮಂಗಲಾ ಅಂಗಡಿ
ಮಂಗಲಾ ಅಂಗಡಿ   

ಬೆಲೆ ಏರಿಕೆ ಮತ್ತು ಅನುಕಂಪದ ಅಲೆ ಇವೆರಡರ ನಡುವಿನ ಸ್ಪರ್ಧೆಯ ಕಣದಂತೆ ಬೆಳಗಾವಿ ಉಪಚುನಾವಣೆಯ ಕಣ ಬದಲಾಗಿದೆ. ಇಬ್ಬರು ಪ್ರಬಲ ಅಭ್ಯರ್ಥಿಗಳು ತಮ್ಮ ಯೋಜನೆಗಳನ್ನು, ಆತಂಕಗಳನ್ನು ಹಾಗೂ ಯಶಸ್ಸಿನನಿರೀಕ್ಷೆಗಳನ್ನು ‘ಪ್ರಜಾವಾಣಿ’ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

*ಅಭ್ಯರ್ಥಿಯಾಗಿ ಹೇಗೆ ಸಮರ್ಥಿಸಿಕೊಳ್ತೀರಿ?
ಕುಟುಂಬಕ್ಕೆ ಟಿಕೆಟ್ ಸಿಗಲಿ ಎಂದು ಬಹಳ ಮಂದಿ ಬಯಸಿದ್ದರು. ಅಪ್ಪನ ಅಭಿವೃದ್ಧಿ ಕೆಲಸಗಳನ್ನು ಪರಿಗಣಿಸಲಿ ಎಂಬುದು ಮಕ್ಕಳ ವಾದವಾಗಿತ್ತು. ನಾವು ಅನಾಥರಂತಾಗಿದ್ದೇವೆ, ನೀವು ಸ್ಪರ್ಧಿಸಿ ಎಂದು ಕಾರ್ಯಕರ್ತರು ಹಾಗೂ ಬೆಂಬಲಿಗರು ಹೇಳುತ್ತಿದ್ದರು. ಅದಕ್ಕೆ ‍ಪಕ್ಷದವರು ಅವಕಾಶ ಕೊಟ್ಟಿದ್ದಾರೆ.

* ಟಿಕೆಟ್ ಆಕಾಂಕ್ಷಿಗಳ ಪ್ರತಿಕ್ರಿಯೆ ಹೇಗಿದೆ?
ಆಕಾಂಕ್ಷಿಗಳಾಗಿದ್ದ ಸಂಜಯ ಪಾಟೀಲ, ಡಾ.ರವಿ ಪಾಟೀಲ ಸೇರಿದಂತೆ ಎಲ್ಲರೂ ಬೆಂಬಲಿಸುತ್ತಿದ್ದಾರೆ. ‘ನಿಮಗೆ ಕೊಡಲಿಲ್ಲವೆಂದರೆ ನಮಗೆ ಕೊಡಿ ಎಂದಷ್ಟೇ ಕೇಳಿದ್ದೆವು. ನಿಮ್ಮನ್ನೇ ‍ಪರಿಗಣಿಸಿದ್ದರಿಂದ ಖುಷಿಯಾಗಿದೆ’ ಎಂದು ಮನೆಗೇ ಬಂದು ಹೇಳಿದ್ದಾರೆ.ಕಾರ್ಯಕರ್ತರು ಖುಷಿಯಾಗಿದ್ದಾರೆ. ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ.

ADVERTISEMENT

*ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?
ನನ್ನದು ಕೌಜಲಗಿ ಕುಟುಂಬ. ರಾಜಕಾರಣದ ಮನೆತನದಿಂದಲೇ ಬಂದವಳು. 20 ವರ್ಷಗಳಿಂದಲೂ ಪತಿ ಸುರೇಶ ಅಂಗಡಿ ಅವರ ಹಿಂದೆ ಇರುತ್ತಿದ್ದೆ. ಆದರೆ, ಹೊರಗಡೆ ಕಾಣಿಸಿಕೊಳ್ಳುತ್ತಿರಲಿಲ್ಲವಷ್ಟೆ. ಈಗ ಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ.ಅಂಗಡಿ ಅವರು ರೈಲ್ವೆ ಯೋಜನೆಗಳನ್ನು ತಂದಿದ್ದಾರೆ. ಅವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲೂ ನಮ್ಮದೇ ಪಕ್ಷವಿದೆ. ಹೆಚ್ಚಿನ ಅನುದಾನ ತರಬಹುದಾಗಿದೆ.

*ಅನುಕಂಪದ ಅಲೆ ಗೆಲುವಿನ ಮೇಲೆ ಪರಿಣಾಮ ಬೀರಲಿದೆಯೇ?
ಸತೀಶ ಜಾರಕಿಹೊಳಿ ಕಾಂಗ್ರೆಸ್ಸಿನ ಅಭ್ಯರ್ಥಿ ಆಗಿದ್ದಾರೆ. ಅವರೂ ಗೋಕಾಕಿನವರು, ನಾನೂ. ನಾಲ್ಕು ಬಾರಿಯೂ ಸುರೇಶ ಅಂಗಡಿ ಅವರನ್ನು ಗೋಕಾಕದ ಅಳಿಯ ಎಂದು ಆಯ್ಕೆ ಮಾಡಿದ್ದರು. ಈ ಸಲ ಮಗಳನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ.

*ಬೆಲೆ ಏರಿಕೆಯು ಚುನಾವಣೆಯ ಪ್ರಮುಖ ಅಸ್ತ್ರವಾಗಲಿದೆಯೇ?
ಉಪ ಚುನಾವಣೆಯಲ್ಲಿ ಜನರು ಅದ್ಯಾವುದಕ್ಕೂ ಗಮನ ಕೊಡುವುದಿಲ್ಲ. ಆ ಬಗ್ಗೆ ಏನೂ ಕೇಳಿಲ್ಲ.

*ಸಿ.ಡಿ. ಪ್ರಕರಣ ಪರಿಣಾಮ ಬೀರುತ್ತದೆಯೇ?
ಸಿ.ಡಿ. ಪ್ರಕರಣದಿಂದ ಯಾವ ಪರಿಣಾಮವೂ ಆಗುವುದಿಲ್ಲ.ಗೋಕಾಕ ಮತ್ತು ಅರಭಾವಿ ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ನಮ್ಮ ಪಕ್ಷದಲ್ಲೇ ಇದ್ದಾರೆ. ಅವರ ಸಹೋದರ ಲಖನ್ ಕೂಡ ಬೆಂಬಲಿಸುವುದಾಗಿ ಹೇಳಿದ್ದಾರೆ. ಪಕ್ಷದ ನಾಯಕರೂ ಅವರೊಂದಿಗೆ ಚರ್ಚಿಸಿದ್ದಾರೆ.

*ಗೆದ್ದರೆ ಯೋಜನೆಗಳೇನು?
ಅಭಿವೃದ್ಧಿಗಾಗಿ ಅಂಗಡಿ ಅವರ ಕನಸುಗಳಿವೆ. ಅವನ್ನು ನನಸಾಗಿಸಬೇಕಿದೆ. ನಗರದಲ್ಲಿ ವರ್ತುಲ‌ ರಸ್ತೆ ನಿರ್ಮಿಸಬೇಕಾಗಿದೆ. ಕೋಲ್ಡ್‌ ಸ್ಟೋರೇಜ್‌ ನಿರ್ಮಾಣ, ಇತರ ಯೋಜನೆಗಳಿದ್ದವು. ಜನರ ಆಶೋತ್ತರ ಈಡೇರಿಸಲು ಪ್ರಯತ್ನಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.