ADVERTISEMENT

ಸಂದರ್ಶನ: ಜಲವಿವಾದ ಕಾನೂನು ನದಿಕಣಿವೆಯ ಕೆಳಭಾಗದ ರಾಜ್ಯಗಳ ಪರ -ಮೋಹನ ಕಾತರಕಿ

ಸಿದ್ದಯ್ಯ ಹಿರೇಮಠ
Published 29 ಮಾರ್ಚ್ 2021, 19:30 IST
Last Updated 29 ಮಾರ್ಚ್ 2021, 19:30 IST
ಮೋಹನ ಕಾತರಕಿ
ಮೋಹನ ಕಾತರಕಿ   

ಕಾವೇರಿ ನದಿಯಲ್ಲಿ ಹೆಚ್ಚುವರಿ 92 ಟಿಎಂಸಿ ನೀರು ಲಭ್ಯವಿದೆ ಎಂದು ಅಂದಾಜಿಸಿ ಕರ್ನಾಟಕವು ಮೇಕೆದಾಟು ಯೋಜನೆ ಹಮ್ಮಿಕೊಂಡಿದೆ. ಇದೇ ನೀರನ್ನು ನೆಚ್ಚಿಕೊಂಡು ತಮಿಳುನಾಡು ಕೂಡ ನದಿ ಜೋಡಣೆ ಯೋಜನೆಗೆ ಮುಂದಾಗಿದೆ. ಇದು ಎರಡು ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿದೆ ಎಂದು ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕದ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದ ವಕೀಲ ಮೋಹನ್‌ ಕಾತರಕಿ ಪ್ರಜಾವಾಣಿ ಸಂದರ್ಶನದಲ್ಲಿ ಹೇಳಿದ್ದಾರೆ

l ಕಾವೇರಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ದಿಸೆಯಲ್ಲಿ ಇದೀಗ ಮತ್ತೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ವಿವಾದ ಸೃಷ್ಟಿಯಾಗಿದೆಯಲ್ಲ?

ಬ್ರಿಟಿಷರು ಮತ್ತು ಮೈಸೂರು ಮಹಾರಾಜರ ನಡುವೆ 1892 ಮತ್ತು 1924ರಲ್ಲಿ ನಡೆದ ಐತಿಹಾಸಿಕ ಒಪ್ಪಂದದಿಂದಾಗಿ ಕಾವೇರಿ ನೀರಿನ ವಿವಾದ ಸಂಕೀರ್ಣವಾಗಿದೆ. ಕಾವೇರಿ ಕಣಿವೆಯು ನೈರುತ್ಯ ಮತ್ತು ಈಶಾನ್ಯ ಮಾರುತಗಳು ಸುರಿಸುವ ಮಳೆಯನ್ನೇ ಆಶ್ರಯಿಸಿದ್ದು, ತಮಿಳುನಾಡಿನ ವಿಭಿನ್ನ ಬೆಳೆ ವಿಧಾನ ಮತ್ತು ಕರ್ನಾಟಕದ ಬರಪೀಡಿತ ಪ್ರದೇಶಗಳ ಅಗತ್ಯಗಳನ್ನು ಪೂರೈಸುತ್ತಿದೆ. ಕಾವೇರಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪನ್ನು ಭಾಗಶಃ ಸರಿಪಡಿಸಿರುವ ಸುಪ್ರೀಂ ಕೋರ್ಟ್, ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ಪೈಕಿ 483 ಟಿಎಂಸಿ ಅಡಿ ನೀರನ್ನು ಕಣಿವೆ ರಾಜ್ಯಗಳಿಗೆ ಹಂಚಿಕೆ ಮಾಡಿದೆ. ತಮಿಳುನಾಡಿನಲ್ಲಿ ನಿರ್ಮಿಸಲಾದ ಕಡೆಯ ಆಣೆಕಟ್ಟೆವರೆಗಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರ್ಷಿಕ 740 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಅಂದಾಜಿಸಲಾಗಿದೆ. ತಮಿಳುನಾಡಿನ ಪಾಲಿನ ನೀರು ಹರಿದ ಬಳಿಕ ಒಟ್ಟು 92 ಟಿಎಂಸಿ ಅಡಿ ಹೆಚ್ಚುವರಿ ನೀರು ಲಭ್ಯವಿದೆ ಎಂದು ಅಂದಾಜಿಸಿರುವ ಕರ್ನಾಟಕ ಕೈಗೆತ್ತಿಕೊಂಡ ಯೋಜನೆಗಳು ಪೂರ್ಣಗೊಳ್ಳದ್ದರಿಂದ ಪ್ರಸ್ತುತ ತಮಿಳುನಾಡಿನ ಮೆಟ್ಟೂರು ಜಲಾಶಯದತ್ತ ಹೆಚ್ಚುವರಿ ನೀರು ಹರಿಯುತ್ತಿದೆ. ದಕ್ಷಿಣ ವೆಲ್ಲಾರು ಜಲಾನಯನ ಪ್ರದೇಶದವರೆಗೆ ಕಾಲುವೆ ನಿರ್ಮಿಸಿ ವಾರ್ಷಿಕ 45 ಟಿಎಂಸಿ ಅಡಿ ನೀರು ಬಳಸಲು ಪ್ರಯತ್ನಿಸುತ್ತಿರುವ ತಮಿಳುನಾಡು ಆರಂಭಿಸಿರುವ ₹ 6,500 ಕೋಟಿ ವೆಚ್ಚದ ನದಿ ಜೋಡಣೆ ಯೋಜನೆ ಸಾಕಾರಗೊಂಡಲ್ಲಿ ಈ ನೀರನ್ನೇ ನೆಚ್ಚಿ ಕರ್ನಾಟಕ ಕೈಗೆತ್ತಿಕೊಂಡ ಯೋಜನೆಗಳಿಗೆ ತಮಿಳುನಾಡು ಸಹಜವಾಗಿಯೇ ಅಡ್ಡಿ ಉಂಟುಮಾಡಲಿದೆ. ಕರ್ನಾಟಕವೂ ನದಿ ಜೋಡಣೆ ವಿರೋಧಿಸುತ್ತಿದ್ದು, ವಿವಾದ ಮತ್ತೆ ಸೃಷ್ಟಿಯಾಗಿದೆ.

ADVERTISEMENT

l ನದಿ ಜೋಡಣೆ ಯೋಜನೆ ಕೈಗೆತ್ತಿಕೊಂಡಿರುವ ತಮಿಳುನಾಡು ಅದೇ ನೆಪ ಮುಂದಿರಿಸಿ ಕರ್ನಾಟಕದ ಯೋಜನೆಗೆ ಅಡ್ಡಗಾಲು ಹಾಕಬಹುದೇ?

ಹಿಮಾಲಯದಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಗಂಗಾ, ಮಹಾನದಿ, ಗೋದಾವರಿ ಮೂಲಕ ಕಾವೇರಿವರೆಗೆ ಹರಿಸುವ ಯೋಜನೆಯನ್ನು ಕೇಂದ್ರ ಸಾಕಷ್ಟು ಮೊದಲೇ ರೂಪಿಸಿದೆ. ಈ ಮೂಲಕ ತಮಿಳುನಾಡಿನ ದಕ್ಷಿಣ ವೆಲ್ಲಾರು ಜಲಾನಯನ ಪ್ರದೇಶಕ್ಕೆ ಮತ್ತು ಅಂತಿಮವಾಗಿ ಗುಂಡಾರ್‌ ನದಿವರೆಗೆ ನೀರು ಹರಿಸುವ ರೂಪುರೇಷೆ ಸಿದ್ಧವಾಗಿದೆ. ಆದರೆ, ಬಿಹಾರ, ಜಾರ್ಖಂಡ್, ಒಡಿಶಾ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳು ಒಪ್ಪುವವರೆಗೆ ಕಾವೇರಿಗೆ ಹಿಮಾಲಯದ ನೀರು ಹರಿಯುವ ಯೋಜನೆ ಸಾಕಾರಗೊಳ್ಳುವುದು ಅಸಾಧ್ಯ ಹಾಗೂ ಅನಿಶ್ಚಿತ. ಕರ್ನಾಟಕವು ಬಳಸದ ಕಾವೇರಿಯ ಹೆಚ್ಚುವರಿ ನೀರನ್ನು ಇತರ ನದಿಗಳಿಗೆ ಹರಿಸಲು ಮುಂದಾಗಿರುವ ತಮಿಳುನಾಡು, ಹಿಮಾಲಯದ ನೀರಿನ ಪಾಲು ಪಡೆದಲ್ಲಿ ನಮ್ಮ ಆಕ್ಷೇಪವೇನೂ ಇಲ್ಲ. ಆದರೆ, ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಮುಂದಾಗಿರುವ ತಮಿಳುನಾಡು ನಾವು ಕೈಗೆತ್ತಿಕೊಳ್ಳುವ ಯೋಜನೆಗಳಿಗೆ ಖಂಡಿತ ಆಕ್ಷೇಪ ವ್ಯಕ್ತಪಡಿಸಲಿದೆ.

l ಕಾನೂನು ಹೋರಾಟ ಮಾಡಿ ಯಶಸ್ವಿಯಾದರೂ, ನೀರನ್ನು ಬಳಸಿಕೊಳ್ಳಲು ರಾಜಕೀಯ ಇಚ್ಛಾಶಕ್ತಿ ಬೇಕೇ?

ಯಾವುದೇ ರಾಜ್ಯಕ್ಕೆ ಹಂಚಿಕೆಯಾದ ನದಿ ನೀರಿನ ಬಳಕೆಗೆ ಸಾಕಷ್ಟು ಸಮಯದ ಅಗತ್ಯವಿದೆ. ಈ ಹಿಂದೆ ಜಾರಿಯಲ್ಲಿದ್ದ ಒಪ್ಪಂದಗಳು ಮತ್ತು ಹಣಕಾಸಿನ ಕೊರತೆಯಿಂದಾಗಿ ಕರ್ನಾಟಕವು ಕೃಷ್ಣರಾಜಸಾಗರ ಹೊರತುಪಡಿಸಿ ಬೇರೆ ಯೋಜನೆ ಅಭಿವೃದ್ಧಿಪಡಿಸಿಲ್ಲ. 1974ರ ನಂತರ ಸರ್ಕಾರವು ಈ ದಿಸೆಯಲ್ಲಿ ಗಂಭೀರ ಹೆಜ್ಜೆ ಇರಿಸಿದೆ. ರಾಜ್ಯದ ಸರ್ಕಾರಗಳು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದ ಪರಿಣಾಮ ಕಾವೇರಿಯ ಹೆಚ್ಚುವರಿ ನೀರಿನ ಬಳಕೆಗಾಗಿ ಯೋಜನೆ ರೂಪಿಸಲಾಗಿದೆ.

l ಮೇಕೆದಾಟು ಯೋಜನೆಗೆ ಇದುವರೆಗೂ ಹಸಿರು ನಿಶಾನೆ ದೊರೆಯದಿರಲು ಕಾರಣ?

ಜಲವಿದ್ಯುತ್ ಹಾಗೂ ಬೆಂಗಳೂರಿಗೆ ನೀರು ಪೂರೈಸಲು ಕರ್ನಾಟಕವು ಮೇಕೆದಾಟು ಯೋಜನೆ ರೂಪಿಸಿದೆ. ಈ ಯೋಜನೆಗಾಗಿ ನಾವು ಹೆಚ್ಚುವರಿ ನೀರು ಬಳಸಿಕೊಳ್ಳುತ್ತಿಲ್ಲ. ಬದಲಿಗೆ, ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರನ್ನು ಬಿಳಿಗುಂಡ್ಲು ಮೂಲಕ ಹರಿಸುವ ಮುನ್ನ ವಿದ್ಯುತ್ ಉತ್ಪಾದಿಸಲು ಉದ್ದೇಶಿಸಲಾಗಿದೆ. ನಮಗೆ ಹಂಚಿಕೆಯಾದ ನೀರಿನಲ್ಲೇ ಬೆಂಗಳೂರಿಗೆ ಕುಡಿಯಲು ಪೂರೈಸಲಾಗುತ್ತದೆ. ಆದರೂ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಿದ್ದರಿಂದ ಪರಿಸರ ಅನುಮತಿ ದೊರೆಯದೇ ಯೋಜನೆ ವಿಳಂಬವಾಗಿದೆ.

l ಅಂತರರಾಜ್ಯ ಜಲವಿವಾದ ಕಾನೂನು ನದಿ ಕಣಿವೆಯ ಕೆಳ ಭಾಗದ (ಲೋವರ್‌ ರೈಪೇರಿಯನ್‌ ಸ್ಟೇಟ್ಸ್‌) ರಾಜ್ಯಗಳ ಪರವಾಗಿಯೇ ಇದೆಯೇ?

ಅಂತರರಾಜ್ಯ ಜಲವಿವಾದ ಕಾನೂನು ಆಯಾ ರಾಜ್ಯಗಳ ನೀರಿನ ಹಂಚಿಕೆಗಾಗಿ ಇರುವ ಚೌಕಟ್ಟಾಗಿದೆ. ಅಮೆರಿಕದಲ್ಲಿ ಪ್ರಸ್ತಾಪಿಸಲಾದ ಹಾರ್ಮನ್ ಸಿದ್ಧಾಂತವು, ನದಿ ಕಣಿವೆಯ ಕೆಳಭಾಗದ ರಾಜ್ಯವನ್ನು ಲೆಕ್ಕಿಸದೆ ಯಾವುದೇ ಪ್ರಮಾಣದ ನೀರನ್ನು ಬಳಸಲು ಮೇಲ್ಭಾಗದ ರಾಜ್ಯಕ್ಕೆ ಅವಕಾಶ ನೀಡುತ್ತಿತ್ತು. ನಂತರದ, ನೈಸರ್ಗಿಕ ಹರಿವಿನ ಸಿದ್ಧಾಂತವು ನದಿಯ ನೈಸರ್ಗಿಕ ಹರಿವನ್ನು ತಡೆಯದಂತೆ ಮೇಲ್ಭಾಗದ ರಾಜ್ಯಕ್ಕೆ ಸೂಚಿಸಿ, ಕೆಳಭಾಗದ ರಾಜ್ಯಗಳ ಪರ ನಿಂತಿತು. ಅಂತಿಮವಾಗಿ, ಕಾನ್ಸಾಸ್ ಮತ್ತು ಕೊಲೊರಾಡೊ ಪ್ರಕರಣದಲ್ಲಿ ಮೇಲ್ಭಾಗ ಮತ್ತು ಕೆಳಭಾಗದ ರಾಜ್ಯಗಳ ಅಗತ್ಯವನ್ನು ಮನಗಂಡ ಅಮೆರಿಕದ ಸುಪ್ರೀಂ ಕೋರ್ಟ್, ಸಮಾನ ಹಂಚಿಕೆ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿತು. ಭಾರತವು 1942ರಲ್ಲಿ ಸಿಂಧೂ ಆಯೋಗದ ಮೂಲಕ ಸಮಾನ ಹಂಚಿಕೆ ಸಿದ್ಧಾಂತ ಅಳವಡಿಸಿಕೊಂಡಿದೆ. ಸಮಾನ ಹಂಚಿಕೆಯ ಹೊರತಾಗಿಯೂ ಪ್ರಸ್ತುತ ಜಲವಿವಾದ ಕಾನೂನು ಕೆಳಭಾಗದ ರಾಜ್ಯದ ಪರವಾಗಿಯೇ ಇದೆ ಎನ್ನಬಹುದು.

l ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವುದಕ್ಕೆ ಸೂಕ್ತ ಕಾನೂನು ರಚನೆಯಾಗುವ ಅಗತ್ಯವಿದೆಯೇ?

ಸಮಾನ ಹಂಚಿಕೆ ಸಿದ್ಧಾಂತದ ಪ್ರಕಾರ ಕುಡಿಯುವ ನೀರಿಗೇ ಆದ್ಯತೆ ನೀಡಲಾಗುತ್ತದೆ. ಅಂತೆಯೇ, ಬರಪೀಡಿತ ಪ್ರದೇಶಗಳ ಅಗತ್ಯವು ಮಾನ್ಯತೆ ಪಡೆದುಕೊಂಡಿದೆ. ಆದರೂ, ಇದು ಸತ್ಯಾಸತ್ಯತೆ ಮತ್ತು ವೈಶಿಷ್ಟ್ಯವನ್ನು ಅವಲಂಬಿಸಿದ್ದು, ಆಯಾ ಪ್ರಕರಣಗಳಲ್ಲಿ ಭಿನ್ನವಾಗಿದೆ.

l ಹೆಚ್ಚುವರಿ ನೀರಿನ ಲಭ್ಯತೆ ಮತ್ತು ಬಳಕೆ ಕುರಿತು ಗೊಂದಲ ಇದೆಯೇ? ಈ ಕುರಿತು ಕರ್ನಾಟಕ ಮತ್ತೆ ಕಾನೂನು ಹೋರಾಟದ ಮೊರೆ ಹೋಗಬೇಕೇ?

ಕಾವೇರಿಯ ಹೆಚ್ಚುವರಿ ನೀರಿನ ಲಭ್ಯತೆಯ ಕುರಿತು ಗೊಂದಲ ಇಲ್ಲ. ಆದರೂ ತಮಿಳುನಾಡು ಈಗಾಗಲೇ ನದಿ ಜೋಡಣೆ ಯೋಜನೆ ಆರಂಭಿಸಿದ್ದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಮೂಲಕ ಕಾನೂನು ಹೋರಾಟ ನಡೆಸಲು ಕರ್ನಾಟಕ ಆಲೋಚಿಸಿದೆ.

l ಹೆಚ್ಚುವರಿ ನೀರು ಹಂಚಿಕೆಯ ಹೊಣೆಯನ್ನೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೇ ವಹಿಸಬೇಕೇ?

ನೀರು ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಜಾರಿಗಾಗಿಯೇ 1956ರ ಅಂತರರಾಜ್ಯ ಜಲವಿವಾದ ಕಾಯ್ದೆಯ ಸೆಕ್ಷನ್– 6 ‘ಎ’ ಅಡಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸಲಾಗಿದೆ. ಆದರೆ, ಈಗ ಉದ್ಭವಿಸಿರುವ ವಿವಾದವನ್ನು ಪರಿಹರಿಸುವ ಅಧಿಕಾರ ಈ ಪ್ರಾಧಿಕಾರಕ್ಕಿಲ್ಲ. ಪ್ರಸ್ತುತ ವಿವಾದವು ಬಗೆಹರಿದ ನಂತರವಷ್ಟೇ ಸುಪ್ರೀಂ ಕೋರ್ಟ್ ಹೆಚ್ಚುವರಿ ನೀರನ್ನು ಅಂದಾಜಿಸುವ ಜವಾಬ್ದಾರಿಯನ್ನು ಪ್ರಾಧಿಕಾರಕ್ಕೆ ವಹಿಸಿಕೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.