ADVERTISEMENT

ಸಂವಿಧಾನವೇ ಮಾನದಂಡ, ಬೀದಿ ಹೋರಾಟವಲ್ಲ: ಸಿದ್ದರಾಮಯ್ಯ ದೃಢ ನುಡಿ

ಸಂದರ್ಶನ

ರಾಜೇಶ್ ರೈ ಚಟ್ಲ
Published 25 ಫೆಬ್ರುವರಿ 2021, 21:45 IST
Last Updated 25 ಫೆಬ್ರುವರಿ 2021, 21:45 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೀಸಲಾತಿ ನೀಡಲು ಸಂವಿಧಾನ ಮಾನದಂಡವೇ ಹೊರತು ಬೀದಿ ಹೋರಾಟ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

***

*ಪರಿಶಿಷ್ಟ ಪಂಗಡ ಪಟ್ಟಿಗೆ ಕುರುಬರು, ಹಿಂದುಳಿದ ವರ್ಗಗಳ ‘ಪ್ರವರ್ಗ 2ಎ’ ಮೀಸಲಾತಿಗೆ ಪಂಚಮಸಾಲಿಗಳು, ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ವಾಲ್ಮೀಕಿಗಳು... ಹೀಗೆ ರಾಜ್ಯದಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಬೇಡಿಕೆಗಳ ಬಗ್ಗೆ ನಿಮ್ಮ ನಿಲುವೇನು?

ADVERTISEMENT

ನನ್ನದು ಸಂವಿಧಾನದ ನಿಲುವು. ಸಂವಿಧಾನ ಏನು ಹೇಳುತ್ತದೆ ಅದೇ ನನ್ನ ನಿಲುವು (ಗಟ್ಟಿ ಧ್ವನಿಯಲ್ಲಿ). ಯಾರು ಮೀಸಲಾತಿಗೆ ಅರ್ಹರಿದ್ದಾರೆ ಅವರಿಗೆ ಮೀಸಲಾತಿ ಕೊಡಬೇಕು. ಸಂವಿಧಾನದ ವಿಧಿ 15, 16 ಏನು ಹೇಳುತ್ತದೆ ಅದರ ಪ್ರಕಾರ ಕೊಡಬೇಕು.

*ಈವರೆಗೆ ನೀಡಿದ ಜಾತಿ ಮೀಸಲಾತಿ ಸಮರ್ಪಕವಾಗಿ ತಲುಪಿದೆಯೇ?

ಇನ್ನೂ ಅನೇಕರಿಗೆ ಮೀಸಲಾತಿ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್‌ನವರು ಶೇ 50ಕ್ಕಿಂತ ಜಾಸ್ತಿ ಇರಬಾರದು ಮೀಸಲಾತಿ ಎಂದು ಹೇಳಿಬಿಟ್ಟಿದ್ದಾರೆ. ಅದನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಬೇಕು. ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ಕೊಡಬೇಕು.

*ಕೇಳಿದವರಿಗೆಲ್ಲ ಮೀಸಲಾತಿ ಕೊಡುತ್ತಾ ಹೋದರೆ ಸಾಮಾಜಿಕ ನ್ಯಾಯ ಹೇಗೆ ಸಾಧ್ಯ?

ಎಲ್ಲರಿಗೂ ಕೊಡಿ ಎಂದು ನಾನು ಹೇಳಿಲ್ಲ. ಸಂವಿಧಾನದ ಪ್ರಕಾರ ಯಾರು ಅರ್ಹರಿದ್ದಾರೆ ಅವರಿಗೆ ಕೊಡಬೇಕು.

*ಹಾಗಿದ್ದರೆ, ಯಾವುದು ಮಾನದಂಡ?

ಸಂವಿಧಾನದ ಷೆಡ್ಯೂಲ್‌ 15 ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂದು ಹೇಳಿದೆ. ಅದೇ ಮಾನದಂಡ. ಬೇರೆ ಇನ್ನೇನೂ ಇಲ್ಲ. ಜಾತಿ ಮಾನದಂಡ ಅಲ್ಲ. ದೊಡ್ಡದಾಗಿ ಪ್ರತಿಭಟನೆ ಮಾಡುವುದೂ ಮಾನದಂಡ ಅಲ್ಲ.

*ಸ್ವಾಮೀಜಿಗಳೇ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ?

ಯಾರಾದರೂ ಬೀದಿಗೆ ಇಳಿಯಲಿ. ಹೋರಾಟ ಮಾಡೋಕೆ, ಮೀಸಲಾತಿ ಕೇಳೋಕೆ ಎಲ್ಲರಿಗೂ ಹಕ್ಕಿದೆ. ಅಂತಿಮವಾಗಿ ಸರ್ಕಾರ ಸಂವಿಧಾನದ ಪ್ರಕಾರವೇ ಹೋಗಬೇಕು.

*ಬೆದರಿಕೆ ಒಡ್ಡುವುದು ಸರಿಯೇ?

ನಾನು ಸರಿ, ತಪ್ಪು ಎಂದು ಹೇಳೋಕೆ ಹೋಗಲ್ಲ. ಅವರು (ಸ್ವಾಮೀಜಿಗಳು) ಕೇಳುತ್ತಾ ಇದ್ದಾರೆ. ನೀವು (ಸರ್ಕಾರ), ಅವರು ಮೀಸಲಾತಿಗೆ ಅರ್ಹರೊ, ಅಲ್ಲವೊ ಎಂಬುವುದನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ವರದಿ ತಂದು ನೋಡಬೇಕು.

*ಸಚಿವರುಗಳೇ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರಲ್ಲ?

ಅದು ಬಿಜೆಪಿಯವರು ತೀರ್ಮಾನ ಮಾಡಬೇಕು. ಅವರ ಸರ್ಕಾರದ ವಿರುದ್ಧ ಮಾಡುತ್ತಿದ್ದಾರೆ ಅಲ್ವಾ.. ಯಾರು ಮೀಸಲಾತಿ ಕೊಡಬೇಕು. ಯತ್ನಾಳ ಯಾವ ಪಕ್ಷದವನು? ಬಿಜೆಪಿಯವನು. ಈಶ್ವರಪ್ಪ ಯಾವ ಪಕ್ಷವನು? ಬಿಜೆಪಿಯವನು. ಅವರ ಸರ್ಕಾರದ ವಿರುದ್ಧ ಅವರೇ ಹೋರಾಟ ಮಾಡುತ್ತಿದ್ದಾರೆ.

*ನೀವು ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿಸಿದಿರಿ. ಆ ವರದಿಯನ್ನು ಸರ್ಕಾರ ಸ್ವೀಕರಿಸಿಲ್ಲ. ಸ್ವೀಕರಿಸಬೇಕೆಂದು ಆಗ್ರಹಿಸಿದ್ದೀರಿ. ಬಿಜೆಪಿಯವರು ನಿಮ್ಮ ಕಡೆ ಬೆರಳು ತೋರಿಸುತ್ತಿದ್ದಾರೆ?

ಕೂಡಲೇ ಸರ್ಕಾರ ವರದಿಯನ್ನು ಸ್ವೀಕರಿಸಬೇಕು. ನಾನು ಇದ್ದಾಗ (ಮುಖ್ಯಮಂತ್ರಿ ಆಗಿದ್ದಾಗ) ಅದು ಪೂರ್ಣ ಆಗಿರಲಿಲ್ಲ. ಈಗ ಪೂರ್ಣ ಆಗಿದೆ. ಈಗ ಅವರು (ಹಿಂದುಳಿದ ವರ್ಗಗಳ ಆಯೋಗ) ಸಲ್ಲಿಸಲು ತಯಾರಾಗಿದ್ದಾರೆ. ಅದನ್ನು ಆಧಾರವಾಗಿಟ್ಟುಕೊಂಡು ಸಾಮಾಜಿಕ ನ್ಯಾಯ ಕೊಡಲು, ಮೀಸಲಾತಿ ಕೊಡಲು ಅನುಕೂಲ ಆಗುತ್ತದೆ.

*ಕುರುಬ ಸಮುದಾಯದ ಎಸ್‌ಟಿ ಹೋರಾಟದ ಹಿಂದೆ ಆರೆಸ್ಸೆಸ್, ಬಿಜೆಪಿಯವರು ಇದ್ದಾರೆ ಎಂದು ನೀವು ಆರೋಪಿಸಿದ್ದಿರಿ?

ನೋಡಿ ನಾನು ಏನು ಹೇಳಿದೆ... ಹೋರಾಟದ ಅಗತ್ಯ ಇಲ್ಲ. ಇನ್ನೂ ಕುಲಶಾಸ್ತ್ರ ಅಧ್ಯಯನ ವರದಿಯೇ ಬಂದಿಲ್ಲ. ಅದು ಬರೋಕೆ ಮುಂಚಿತವಾಗಿ ಹೋರಾಟ ಏನು ಮಾಡುತ್ತೀರಿ. ಬೇಡ ಈಗ, ಅನಗತ್ಯ ಅಂತ ಹೇಳಿದೆ. ನಾನು ಎಸ್‌ಟಿ ಮೀಸಲಾತಿ ಬೇಡಿಕೆಯ ವಿರುದ್ಧ ಇಲ್ಲ. ಈಗ ಆತುರ ಅಗತ್ಯ ಇಲ್ಲ ಎಂದೆ. ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಸಂಬಂಧ ಕುಲಶಾಸ್ತ್ರ ಅಧ್ಯಯನ ಮಾಡುವಂತೆ ನಾನು ಮುಖ್ಯಮಂತ್ರಿಯಾಗಿದ್ದಾಗ ಆದೇಶಿಸಿದ್ದೆ. ಈಗಲೂ ಅಧ್ಯಯನ ನಡೆಯುತ್ತಿದೆ. ಅದು ಮುಗಿದು ವರದಿ ಬಂದ ನಂತರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಅನ್ನೋದು ನನ್ನ ಅನಿಸಿಕೆ.

*ಕುರುಬರ ಎಸ್‌ಟಿ ಹೋರಾಟದ ಮುಂಚೂಣಿಯಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ ಇದ್ದಾರೆಂಬ ಕಾರಣಕ್ಕೆ ನೀವು ಹಿಂದೆಸರಿದಿರಾ?

ಈಶ್ವರಪ್ಪನೇ ಮಂತ್ರಿ ಇದ್ದಾನೆ ಅಲ್ವಾರೀ. ಚಳವಳಿ ಏಕೆ ಬೇಕು? ಕ್ಯಾಬಿನೆಟ್‌ನಲ್ಲಿ ಇಲ್ವಾ ಈಶ್ವರಪ್ಪ. ಯಾರ ಸರ್ಕಾರ ಇದೆ? ಕೇಂದ್ರದಲ್ಲಿ ಯಾರದ್ದು ಸರ್ಕಾರ? ರಾಜ್ಯದಲ್ಲಿ ಯಾರದ್ದು ಸರ್ಕಾರ? ಒತ್ತಡ ಹಾಕಿ ಮಾಡಿಸು (ಈಶ್ವರಪ್ಪಗೆ). ಅದಕ್ಕೆ ಪಾದಯಾತ್ರೆ ಯಾಕೆ ಮಾಡುತ್ತಿ. ಜನರಿಗೆಲ್ಲ ತೊಂದರೆ ಕೊಡೋಕೆ. ಈಶ್ವರಪ್ಪ ಇದ್ದಾರೆ ಅಂತ ಅಲ್ಲ, ಅನಗತ್ಯವಾಗಿ ಈಶ್ವರಪ್ಪ ರಾಜಕಾರಣ ಮಾಡುತ್ತಿದ್ದಾರೆ. ನೀವು ಶಿಫಾರಸು ಮಾಡಬೇಕಾದರೆ ಕುಲಶಾಸ್ತ್ರ ಅಧ್ಯಯನ ವರದಿ ಬೇಕು. ಅದು ಬಾರದೇನೆ ಈಶ್ವರಪ್ಪ ಮುಂದುಗಡೆ ಇದ್ದಾನೆ, ಅದಕ್ಕೆ ನೀವು ಬಂದಿಲ್ಲ ಎಂದರೆ ಏನರ್ಥ.

*ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮೀಸಲಾತಿ ಶೇ 50 ದಾಟುವಂತಿಲ್ಲ. ಹೆಚ್ಚಿಸಿದರೆ ಸಮತೋಲನ ಹೇಗೆ ಸಾಧ್ಯ?

ಸಂವಿಧಾನ ತಿದ್ದುಪಡಿ ಆಗಬೇಕು. ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಶೇ 50 ಮೀರಬಾರದು ಎಂದಿದೆ. ಕೇಂದ್ರದವರು ಮತ್ತೆ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರೂ ಸೇರಿದಂತೆ ಇತರರಿಗೆ ಶೇ 10 ಮೀಸಲಾತಿ ಮಾಡಿಬಿಟ್ಟಿದ್ದಾರೆ. ನಾಯಕರು (ವಾಲ್ಮೀಕಿ ಸಮುದಾಯ) ಬೇರೆ ಶೇ 3ರಿಂದ ಶೇ 7 ಮಾಡಬೇಕು ಎಂದು ಕೇಳುತ್ತಿದ್ದಾರೆ. ಅದು ಬೇರೆ ಕೊಡಬೇಕು. ನಾಗಮೋಹನದಾಸ ವರದಿ ಕೊಟ್ಟಿದ್ದಾರೆ. ಆ ವರದಿ ಮೇಲೆ ಸಚಿವ ಸಂಪುಟ ಉಪ ಸಮಿತಿ ಆಗಿದೆ. ಅವರಿನ್ನೂ ವರದಿ ಕೊಟ್ಟಿಲ್ಲ. ಇವೆಲ್ಲ ಗೊಂದಲಗಳಿವೆ. ಇದು ಆರೆಸ್ಸೆಸ್‌ನವರು ಏನೊ ಮಾಡೋಕೆ ಹೋಗಿ, ಅದೇನೊ ತಾಳ ಹಾಕೋಕೆ ಹೋಗಿ ಸಿಕ್ಕಿ ಹಾಕಿಕೊಳ್ಳುತ್ತಾರಲ್ಲ ಹಾಗಾಗಿದೆ.

*ಈಗಿನ ಹೋರಾಟದ ಹಿಂದೆ ರಾಜಕೀಯ ಹಿತಾಸಕ್ತಿ, ಲಾಭನಷ್ಟ ಕಾಣುತ್ತಿದೆಯೇ?

ನಾನು ಮೀಸಲಾತಿ ಕೇಳೋರಿಗೆ ಯಾಕೆ ಕೇಳುತ್ತೀರಿ ಎಂದು ಕೇಳೋಕೆ ಹೋಗಲ್ಲ. ಮೀಸಲಾತಿ ಅರ್ಹತೆ ಇದ್ದವರು ಎಲ್ಲರೂ ಕೇಳಬೇಕು. ಅರ್ಹತೆ ಇದ್ದವರಿಗೆ ಕೊಡಬೇಕು. ಸಂವಿಧಾನದ ಚೌಕಟ್ಟಿನ ಒಳಗಡೆ ಕೊಡಬೇಕು ಅಷ್ಟೆ.

*ಅಂದರೆ, ಹೋರಾಟಗಳಲ್ಲಿ ರಾಜಕೀಯ ಇಲ್ಲ ಎಂದೇ?

ಹೋರಾಟಕ್ಕೂ ಸಕಾರಣ ಇರಬೇಕಲ್ಲರೀ. ರಾಜಕಾರಣಕ್ಕಾಗಿ ಹೋರಾಟ ಮಾಡಬಾರದು. ಕುರುಬರು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ಹೋರಾಟ ಮಾಡುತ್ತಿದ್ದಾರೆ. ಓಕೆ ಫೈನ್‌. ಅದಕ್ಕೂ ಸಂದರ್ಭ ಇರಬೇಕಲ್ಲ. ಯಾವಾಗ ಮಾಡಬೇಕು? ಈಗ ಮಾಡುವ ಅಗತ್ಯ ಇದೆಯಾ? ಇನ್ನೂ ಕುಲಶಾಸ್ತ್ರ ಅಧ್ಯಯನ ಆಗಬೇಕು. ಅದು ಇನ್ನೂ ನಡೆಯುತ್ತಿದೆ. ಅದು ಬಂದ ಬಳಿಕ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಎಸ್‌ಟಿಗೆ ಸೇರಿಸುವ ಕೆಲಸವನ್ನು ಕೇಂದ್ರದವರು ಮಾಡಬೇಕು.

*ಮೀಸಲಾತಿ ಹೋರಾಟವನ್ನು ನಿಭಾಯಿಸಲು ಸರ್ಕಾರ ವಿಫಲ ಆಗಿದೆಯೇ?

ಸರ್ಕಾರ ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಿಲ್ಲ. ಹೋರಾಟಗಾರರ ಜೊತೆ ಮಾತುಕತೆ ನಡೆಸಿ, ಮನವೊಲಿಸಬೇಕು. ಪಂಚಮಸಾಲಿ ಸಮುದಾಯದವರು 2 ಎಗೆ ಸೇರಿಸುವಂತೆ ಹೋರಾಟ ಮಾಡುತ್ತಿದ್ದಾರೆ. ಸೇರಿಸುವ ಮೊದಲು ಅವರ ಮನವಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಹೋಗಬೇಕು. ಆಯೋಗದವರು ಅಧ್ಯಯನ ಮಾಡಿ ಶಿಫಾರಸು ಮಾಡಬೇಕು. ಅದು ಸಚಿವ ಸಂಪುಟಕ್ಕೆ ಹೋಗಬೇಕು. ಅಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಹೀಗಾಗಿ, ಮೊದಲು ಮುಖ್ಯಮಂತ್ರಿ ಕರೆದು ಅವರ ಮನವೊಲಿಸಬೇಕು.

***

ರಾಜಕೀಯ ಲಾಭನಷ್ಟ, ಹಿತಾಸಕ್ತಿ, ಸಮುದಾಯಗಳ ಮೇಲಿನ ಹಿಡಿತದ ದಾಳವಾಗಿ ಪ್ರಯೋಗವಾಗುತ್ತಿರುವ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಗಳ ಈಡೇರಿಕೆಗೆ ಸಂವಿಧಾನದಲ್ಲಿರುವ ಅಂಶ– ಆಶಯ ಮಾನದಂಡ ಆಗಬೇಕೇ ಹೊರತು ಜಾತಿ ಅಲ್ಲ; ಬೀದಿ ಹೋರಾಟವಲ್ಲ.

-ಸಿದ್ದರಾಮಯ್ಯ,ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.