ADVERTISEMENT

‘ಕಳೆದ’ ವರ್ಷದ ಹಿನ್ನೋಟ!

ಪ್ರಕಾಶ ಶೆಟ್ಟಿ
Published 20 ಡಿಸೆಂಬರ್ 2019, 19:37 IST
Last Updated 20 ಡಿಸೆಂಬರ್ 2019, 19:37 IST
vidambane
vidambane   

2019 ಅನ್ನು ‘ಕಳೆದ ವರ್ಷ’ ಎಂದು ಹೇಳುವುದಕ್ಕೆ ದಿನಗಣನೆ ಶುರುವಾಗಿದೆ. ಅಬ್ಬಾ! ಈ ಅಮೋಘ ವರ್ಷದಲ್ಲಿ ಯಾರು ಏನೇನೆಲ್ಲಾ ಪಡೆದಿದ್ದಾರೆ ಎಂದು ಭಾರಿ ಜೋಶ್‌ನಲ್ಲಿ ಪಟ್ಟಿ ಮಾಡಲು ಹೊರಟರೆ, ಅನೇಕರು ಕಳೆದದ್ದೇ ಜಾಸ್ತಿ ಎಂಬ ನಿಜಸಂಗತಿ ಗೋಚರವಾಗುತ್ತದೆ. ಆದ್ದರಿಂದ ಈ ಬಾರಿ ಸುಮ್ಮನೆ ‘ಕಳೆದ ವರ್ಷ’ ಎಂದು ಹೇಳಿ ಕೈ ತೊಳೆಯುವ ಹಾಗಿಲ್ಲ. ದೇಶದ ಅನೇಕ ಗಣ್ಯರು ಮತ್ತು ನಗಣ್ಯರು ಇದ್ದದ್ದನ್ನೆಲ್ಲಾ ಕಳೆದುಕೊಂಡ ವರ್ಷವಿದು!

ದುರದೃಷ್ಟವಶಾತ್ ಇದು ಜೋಕ್‌ಸಭಾ ಚುನಾವಣೆ ನಡೆದ ವರ್ಷವೂ ಆಗಿರುವುದರಿಂದ, ಉಮೇದುವಾರರಾಗಿದ್ದ ಬಹಳಷ್ಟು ಮಂದಿ ಕೋಟಿಗಟ್ಟಲೆ ಹಣ ಕಳೆದುಕೊಂಡಿರುವುದೇನೂ ದೊಡ್ಡ ವಿಷಯವಲ್ಲ. ಆದರೆ ಪೂರ್ತಿ ಕೈ ಲಾಸು ಮಾಡಿಕೊಂಡಿರುವ ಕೈಲಾಸ ಪಕ್ಷದ ಸ್ಥಿತಿ ಮಾತ್ರ ಚಿಂತಾಜನಕ. ಆ ಪಕ್ಷದ ಅಧ್ಯಕ್ಷರಂತೂ ತಮ್ಮ ಕುಟುಂಬದ ಆಸ್ತಿ ಅಮೇಠಿಯನ್ನೇ ಕಳೆದುಕೊಂಡಿದ್ದಾರೆ! ಸಮಾಧಾನಕರ ಸಂಗತಿ ಎಂದರೆ, ಅವರ ಪಕ್ಷ ಆಗೊಮ್ಮೆ ಈಗೊಮ್ಮೆ ದೆಹಲಿಯ ‘ಆಕ್ಸಿಜನ್ ಬಾರ್’ಗೆ ಹೋಗಿ ಉಸಿರಾಡುತ್ತಿದೆಯಂತೆ! ಹೊಚ್ಚ ಹೊಸ ಸರ್ಕಾರದ ಕನಸು ಕಾಣುತ್ತಿದ್ದ ದೀದಿ ಗ್ಯಾಂಗ್ ತಮ್ಮ ಧ್ವನಿಯನ್ನೇ ಕಳೆದುಕೊಂಡಿರುವುದು ಕೂಡಾ ಸುಳ್ಳಲ್ಲ.

ಕಾಶ್ಮೀರಿಗರು ದಶಕಗಳಿಂದ ತಮ್ಮೊಂದಿಗಿದ್ದದ್ದನ್ನು ಕಳೆದುಕೊಂಡಿರುವುದು ಈ ವರ್ಷವೇ. ಬಾಜಪ್ಪರು ಹೇಳಿಕೊಂಡಿರುವಂತಹ ಅತೀ ಮುಖ್ಯವಾದ ಚುನಾವಣೆ ಭರವಸೆ- ಕಾಶ್ಮೀರದಲ್ಲಿ ‘370’ರ ಮೇಲೆ ‘ಬಾಂಬ್’ ದಾಳಿ. 370 ವಿಧಿ-ವಶವಾದದ್ದು ಕಾಶ್ಮೀರಿಗರಿಗೆ ತುಂಬಲಾರದ ನಷ್ಟವಲ್ಲದೆ ಇನ್ನೇನು?

ADVERTISEMENT

ಕೆಲವು ಕಂಪನಿಗಳ ಉದ್ಯೋಗಿಗಳಂತೂ ಈ ವರ್ಷವನ್ನು ಖಂಡಿತ ಮರೆಯಲಾರರು. ಉದ್ಯೋಗಿಗಳು ಇಷ್ಟೊಂದು ಪ್ರಮಾಣದಲ್ಲಿ ಕೆಲಸ ಕಳಕೊಂಡಿರುವುದು ಇದೇ ವರ್ಷವಿರಬೇಕು! ದೇಶದ ಆರ್ಥಿಕತೆ ಎಲ್ಲಿ ಕಳೆದುಹೋಗಿದೆ ಎಂದು ಇದುವರೆಗೆ ನಮ್ಮ ವಿತ್ತ ಸಚಿವೆಗೆ ಗೊತ್ತಾಗಿಲ್ಲವಂತೆ. ಅವರಿನ್ನೂ ಅದನ್ನು ಹುಡುಕುತ್ತಲೇ ಇದ್ದಾರಂತೆ.

ದೇಶದ ಆರ್ಥಿಕ ಕುಸಿತದ ಬಗ್ಗೆ ಮಾತನಾಡುವಾಗ ಬೇಡವೆಂದರೂ ನೆನಪಾಗುವುದು ಮಾಜಿ ವಿತ್ತ ಸಚಿವ ಛೇ. ದಾನಂದ. ಅವರಿಗೆ 2019 ಖಂಡಿತವಾಗಿಯೂ ಬರೀ ಕಳೆದ ವರ್ಷವಲ್ಲ. ಅವರಿಗದು ಜೈಲಲ್ಲಿ 106 ದಿವಸಗಳನ್ನು ಕಳೆದ ವರ್ಷ! ಇನ್ನು ಅವರ ಜತೆಗಿದ್ದ ಡಿಕ್ಸಿಗೆ ಕಾರಾ-ಗ್ರಹಚಾರ ಬಂದೊದಗಿರುವುದರಿಂದ ಒಂದು ತಿಂಗಳು ತಿಹಾರ್‌ನಲ್ಲೇ ಕಳೆಯಬೇಕಾಯಿತು.

ಈಗ ಕರುನಾಟಕದತ್ತ ದೃಷ್ಟಿಹರಿಸಿ. 17 ‘ಅನರ್ಹ’ರು ಧುತ್ತೆಂದು ಎದ್ದು ಕಾಣುತ್ತಾರಲ್ಲವೇ? ಈ 17 ‘ಶೋಷಕ’ರನ್ನು ಕಳಕೊಂಡಿದ್ದೇ ಮೈತ್ರಿ ಸರ್ಕಾರ ಬೀಳುವುದಕ್ಕೆ ಕಾರಣ. ಅಂತಹ ದುಃಸ್ಥಿತಿಯಲ್ಲಿ ಆಡಳಿತ ಪಕ್ಷವು ಸದನವನ್ನು ರೋದನ ಸ್ಥಳವನ್ನಾಗಿ ಮಾಡಿ ಸುಮಾರು ಎಂಟು ದಿವಸಗಳವರೆಗೆ ಬೇಕಾಬಿಟ್ಟಿ ಕಾಲ ಕಳೆದದ್ದು ಒಂದು ದಾಖಲೆಯೇ! ಆನಂತರ ಈ ಶೋಷಕರೆಲ್ಲಾ ತಮ್ಮ ಅರ್ಹತೆಯನ್ನೇ ಕಳೆದುಕೊಂಡದ್ದು ತಲೆಚಿಟ್ಟು ಹಿಡಿಯುವಷ್ಟು ಸುದ್ದಿಯಾಗಿಬಿಟ್ಟಿತು. ಹಾಗೂ ಹೀಗೂ ತಲೆಗೊಂದು ಕಿರೀಟ ಹಾಕಿಕೊಂಡು ಆಡಿಯೋರಪ್ಪ ಸಾಹೇಬ್ರು ಒಬ್ಬನೇ ಒಬ್ಬ ಮಂತ್ರಿ ಇಲ್ಲದೆ ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದದ್ದು ಕೂಡಾ ಕರುನಾಟಕದ ಚರಿತ್ರೆಯಲ್ಲಿ ಒಂದು ಅಪೂರ್ವ ದಾಖಲೆ!

ಈ ವರ್ಷ ಗೋಡ್ರ ಕುಟುಂಬಕ್ಕಂತೂ ಪಕ್ಕಾ ‘ಕಳೆದ’ ವರ್ಷ. ಯಾಕೆಂದರೆ ಅಜ್ಜ, ಮಗ ಹಾಗೂ ಮೊಮ್ಮಗ ಮೂವರೂ ಅತ್ಯಮೂಲ್ಯವಾದುದನ್ನು ಕಳೆದುಕೊಂಡ ವರ್ಷವಿದು. ಅಜ್ಜ ‘ಹಮಾರ’ ಊರು ಬಿಟ್ಟು ತುಮಕೂರಿನಲ್ಲಿ ಜೋಕ್‌ಸಭಾ ಚುನಾವಣೆಗೆ ಸ್ಪರ್ಧಿಸಿ ಸೋತರು. ಮಂಡ್ಯ ದೇಶದಿಂದ ಎಂ.ಪಿಯಾಗಿ ರಾಜಕೀಯಕ್ಕೆ ಇಳಿಯಲು ಹೊರಟ ಮೊಮ್ಮಗ ಜಾರಿಬಿಟ್ಟರು. ಇನ್ನು ‘ಸಾಂದರ್ಭಿಕ ಶಿಶು’ ಕುರ್ಚಿಗೆ ಫೆವಿಕಾಲ್ ಸುರಿದು ಕುಳಿತರೂ, ನಯಾ ಪೈಸದ ಪ್ರಯೋಜನ ಆಗಲಿಲ್ಲ.
ಕರುನಾಟಕದಲ್ಲಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದು ಮತ್ತೊಂದು ‘ಕಳೆದುಕೊಂಡ’ ಸುದ್ದಿ. ಐ.ಎಮ್.ಎ ಎಂಬ ಕಂಪನಿ ದರೋಡೆಗೆ ಇಳಿದ ಕಾರಣ ಸುಮಾರು 4,000 ಮಂದಿ, ಅದರಲ್ಲೂ ಮುಖ್ಯವಾಗಿ ಬಡವರು ತಮ್ಮ ಹಣವನ್ನೆಲ್ಲಾ ಕಳೆದುಕೊಳ್ಳಬೇಕಾಯಿತು. ಈಗ ಹೇಳಿ, ಈ ನತದೃಷ್ಟರ ಪಾಲಿಗೆ ಇದು ‘ಕಳೆದ’ ವರ್ಷವಲ್ಲದೆ ಇನ್ನೇನು! ನತದೃಷ್ಟರು ಅಂದಾಗ, ವರುಣದೇವನ ಆರ್ಭಟಕ್ಕೆ ಸಿಕ್ಕಿ ಎಲ್ಲವನ್ನೂ ಕಳೆದುಕೊಂಡವರು ನೆನಪಾಗದೇ ಇರುವುದು ಸಾಧ್ಯವೇ?

ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಬಂದಿದ್ದೇ ತಡ, ಬಾಜಪ್ಪ ಪಕ್ಷ ಊಹಿಸದೇ ಇದ್ದದ್ದು ನಡೆದುಹೋಯಿತು. ಮೊದಲು ‘ಸೇನಾಡಳಿತ’ಕ್ಕೆ ಅನುಮತಿ ನೀಡದ್ದಕ್ಕೆ ಬಾಜಪ್ಪರು ಅಧಿಕಾರದ ಅವಕಾಶ ಕಳೆದುಕೊಂಡರು. ನಂತರ ಮರಿ ಪವಾರ್ ‘ನಾನಿದ್ದೇನೆ’ ಎಂದು ಹೇಳಿದ ಬೆನ್ನಲ್ಲೇ ನಾಪತ್ತೆಯಾಗಿಬಿಟ್ಟಾಗ ಬಾಜಪ್ಪರು ಕುರ್ಚಿಗಿಂತ ಹೆಚ್ಚು ಮಾನವನ್ನೇ ಕಳೆದುಕೊಂಡರು!

ವರ್ಷ ಮುಗಿಯುತ್ತಿದ್ದಂತೆ ಕೆಲವರು ತಾವು ಪೌರತ್ವವನ್ನೇ ಕಳೆದುಕೊಳ್ಳುತ್ತೇವೆಯೇನೋ ಎಂಬ ಭಯ
ದಿಂದ ಮಧ್ಯರಾತ್ರಿಯಲ್ಲೂ ಬೆಚ್ಚಿ ಬೀಳುತ್ತಿದ್ದಾರಂತೆ! ಇನ್ನು ಕೆಲವರಂತೂ ಈ ವರ್ಷದ ಅಂತ್ಯದೊಳಗೆ ಪ್ರಜಾಪ್ರಭುತ್ವವನ್ನೂ ಕಳೆದುಕೊಳ್ಳಲಿದ್ದೇವೆ ಎಂದು ಖಡಾಖಂಡಿತವಾಗಿ ಭವಿಷ್ಯ ನುಡಿಯುತ್ತಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.