ADVERTISEMENT

Explainer | ರೈತರ ಪಾಲಿಗೆ ‘ನೆರವಿನ ವೆಂಟಿಲೇಟರ್‌’ ಆಯ್ತು ಹರಿಯಾಣ ಮಾದರಿ

ಹಳ್ಳಿಗಳಲ್ಲೇ ಕೃಷಿ ಉತ್ಪನ್ನ ಖರೀದಿಸುವುದೇ ಅಂತರ ಕಾಯ್ದುಕೊಳ್ಳಲು ಇರುವ ಪರಿಹಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಏಪ್ರಿಲ್ 2020, 13:23 IST
Last Updated 17 ಏಪ್ರಿಲ್ 2020, 13:23 IST
ಪಂಜಾಬ್‌ನ ಬಠಿಂಡಾದಲ್ಲಿ ಗೋಧಿ ತುಂಬುತ್ತಿರುವ ಕಾರ್ಮಿಕರು
ಪಂಜಾಬ್‌ನ ಬಠಿಂಡಾದಲ್ಲಿ ಗೋಧಿ ತುಂಬುತ್ತಿರುವ ಕಾರ್ಮಿಕರು   
""
""
""

ಸಂಕಷ್ಟ ಕಾಲದಲ್ಲಿ ರೈತರ ನೆರವಿಗೆ ಧಾವಿಸಿರುವ ಹರಿಯಾಣ ಸರ್ಕಾರದ ಕ್ರಮರೈತರ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಏನಿದು ಹರಿಯಾಣ ಮಾದರಿ? ದೇಶದ ವಿವಿಧೆಡೆ ಏನೆಲ್ಲಾ ಪ್ರಯತ್ನಗಳು ನಡೆಯುತ್ತಿವೆ? ಇಲ್ಲಿದೆ ಇಣುಕುನೋಟ...

---

ಕೊರೊನಾ ವೈರಸ್‌ನ ಕಬಂಧಬಾಹು ಭಾರತದ ಎಲ್ಲೆಡೆ ವ್ಯಾಪಿಸುತ್ತಿದೆ. ಸೋಂಕಿನ ಕೊಂಡಿಯನ್ನು ಕಡಿದುಹಾಕಲು ಮೇ 3ರವರೆಗೂ ಲಾಕ್‌ಡೌನ್‌ ಮುಂದುವರಿಯುವುದಾಗಿ ಪ್ರಧಾನಿ ನರೇಂದ್ರ ಮೋದಿಘೋಷಿಸಿದ್ದಾರೆ. ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ವಲಯವು ಕೊರೊನಾ ಹೊಡತಕ್ಕೆ ಸಿಲುಕಿ ನಲುಗುತ್ತಿದೆ.

ADVERTISEMENT

ಬೆವರು ಸುರಿಸಿ ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ತಗ್ಗಿರುವುದು, ಬೆಲೆ ಕುಸಿದು ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರುವುದರಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ‘ನೆರವಿನ ವೆಂಟಿಲೇಟರ್‌’ ಮೂಲಕ ‘ಉಸಿರು’ ನೀಡಬೇಕಾಗಿದೆ.

ಮಾರ್ಚ್‌ನಿಂದ ಜೂನ್‌ ಅವಧಿಯಲ್ಲಿ ಒಂದೆಡೆ ಹಿಂಗಾರಿನ ಸುಗ್ಗಿ ನಡೆದರೆ ಮತ್ತೊಂದೆಡೆ ಮುಂಗಾರಿನ ಬಿತ್ತನೆಗೆ ರೈತರು ಹೊಲವನ್ನು ಹದಗೊಳಿಸಿಕೊಳ್ಳುತ್ತಾರೆ. ಹಿಂಗಾರಿನ ಸುಗ್ಗಿಯ ಈ ಕಾಲದಲ್ಲಿ ಕೊರೊನಾ ಭೀತಿಯಿಂದ ಮನೆಯಿಂದ ಹೊರ ಬರಲು ರೈತರು ತೊಂದರೆ ಪಡುವಂತಾಗಿದೆ. ಈ ಬಾರಿಯ ನೈರುತ್ಯ ಮುಂಗಾರು ವಾಡಿಕೆಯಂತೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ರೈತರಲ್ಲಿ ‘ಭರವಸೆಯ ಬೆಳಕು’ ಮೂಡಿಸಿದೆ. ಈ ಬಾರಿಯ ಮುಂಗಾರಿನಲ್ಲಿ ಕೃಷಿ ಚಟುವಟಿಕೆ ನಡೆಸಲು ರೈತರಿಗೆ ಬೇಕಾಗುವ ಎಲ್ಲಾ ಬಗೆಯ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸುವ ಮೂಲಕ ಸರ್ಕಾರಗಳು ಆಸರೆಯಾಗಬೇಕಾಗಿದೆ.

‘ಲಾಕ್‌ಡೌನ್‌ ಅವಧಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಹಾಗೂ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಮುಕ್ತ ಅವಕಾಶ ನೀಡಬೇಕು ಎಂಬ ಕೇಂದ್ರ ಸರ್ಕಾರದ ಆದೇಶ ಕೇವಲ ಕಡತದಲ್ಲೇ ಉಳಿಯದೇ ವಾಸ್ತವ ರೂಪದಲ್ಲಿ ಜಾರಿಗೆ ಬರಬೇಕು. ಕೊರೊನಾ ವೈರಸ್‌ನಿಂದ ಮುಕ್ತವಾಗಲು ಸರ್ಕಾರ ಹಳ್ಳಿ, ಹೋಬಳಿ ಮಟ್ಟದಲ್ಲೇ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ತೆರೆಯುತ್ತಿರುವ ಹರಿಯಾಣ ಹಾಗೂ ತೆಲಂಗಾಣದ ಮಾದರಿಗಳನ್ನು ಎಲ್ಲಾ ರಾಜ್ಯಗಳೂ ಅಳವಡಿಸಿಕೊಳ್ಳಬೇಕು. ದೇಶದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಕೃಷಿ ವಲಯವನ್ನು ಸದೃಢಗೊಳಿಸುವುದು ರಾಷ್ಟ್ರೀಯ ಆದ್ಯತೆಯಾಗಬೇಕು’ ಎಂದು ಡೈರೆಕ್ಟರ್‌ ಆಫ್‌ ದಿ ಸ್ಟೇಟ್‌ ಕೆಪೆಸಿಟಿ ಇನಿಶಿಯೇಟಿವ್‌ ಅಟ್‌ ದಿ ಸೆಂಟರ್‌ ಫಾರ್‌ ಪಾಲಿಸಿ ರೀಸರ್ಚ್‌ನ ಹಿರಿಯ ಸದಸ್ಯೆ ಮತ್ತು ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಮೇಖಲಾ ಕೃಷ್ಣಮೂರ್ತಿ ತಮ್ಮ ಲೇಖನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡುವುದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸಿದ ಬಳಿಕ ಪರಸ್ಪರ ಅಂತರ ಕಾಯ್ದುಕೊಳ್ಳುವ ಷರತ್ತಿನೊಂದಿಗೆ ಹಲವೆಡೆ ಕೃಷಿ ಮಾರುಕಟ್ಟೆಗಳು ಆರಂಭಗೊಂಡಿವೆ. ಆದರೆ, ವ್ಯಾಪಾರಿಗಳಲ್ಲಿ ಕೋವಿಡ್‌–19 ರೋಗ ಕಾಣಿಸಿಕೊಂಡಿದ್ದರಿಂದ ಮಹಾರಾಷ್ಟ್ರದ ಮುಂಬೈನ ಕೆಲವು ಎಪಿಎಂಸಿಗಳನ್ನು ಮುಚ್ಚಿಸಲಾಗಿದೆ. ಕೊರೊನಾ ವೈರಸ್‌ ಭೀತಿಯಿಂದಾಗಿ ಹಮಾಲರೂ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಯುವಂತೆ ನೋಡಿಕೊಳ್ಳುವುದು ಸವಾಲಾಗಿದೆ.

ಹಳ್ಳಿಗಳಲ್ಲೇ ಕೃಷಿ ಉತ್ಪನ್ನ ಖರೀದಿಸಿದ ಹರಿಯಾಣ

ಹಿಂಗಾರಿನ ಪ್ರಮುಖ ಕೃಷಿ ಉತ್ಪನ್ನಗಳಾದ ಗೋಧಿ, ಭತ್ತ, ಬೇಳೆಕಾಳು, ಎಣ್ಣೆಕಾಳುಗಳನ್ನು ರೈತರಿಂದ ಖರೀದಿಸಿ, ದಾಸ್ತಾನು ಮಾಡಲು ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ನೆರವು ನೀಡಲು ಕೇಂದ್ರ ಸರ್ಕಾರ ಹಾಗೂ ಇದರ ಅಂಗ ಸಂಸ್ಥೆಗಳಾದ ಭಾರತೀಯ ಆಹಾರ ನಿಗಮ (ಎಫ್‌.ಸಿ.ಐ) ಹಾಗೂ ನ್ಯಾಷನಲ್‌ ಎಗ್ರಿಕಲ್ಚರಲ್‌ ಕೊಆಪರೇಟಿವ್‌ ಮಾರ್ಕೆಟಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾ (ಎನ್‌.ಎ.ಎಫ್‌.ಇ.ಡಿ) ಸಜ್ಜಾಗಿರಬೇಕು.

ಅಪಾರವಾದ ದಾಸ್ತಾನು ಸಾಮರ್ಥ್ಯವನ್ನು ಹೊಂದಿರುವ ಹರಿಯಾಣ, ಪಂಜಾಬ್‌, ಮಧ್ಯಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ರೈತರ ಉತ್ಪನ್ನಗಳನ್ನು ಖರೀದಿಸಲು ಕೆಲವು ಯೋಜನೆಗಳನ್ನು ಈಗಾಗಲೇ ರೂಪಿಸಿವೆ. ಕೃಷಿ ಮಾರುಕಟ್ಟೆಗೆ ಎಲ್ಲರೂ ಉತ್ಪನ್ನ ತರುವುದರಿಂದ ಉಂಟಾಗುತ್ತಿದ್ದ ಜನದಟ್ಟಣೆಯನ್ನು ಕಡಿಮೆ ಮಾಡಲು ಹಳ್ಳಿಗಳಲ್ಲೇ ಖರೀದಿ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ.
ಸರ್ಕಾರದ ಏಜೆನ್ಸಿಗಳು ರೈತರ ಬಳಿಗೆ ಬರುತ್ತಿವೆ. ಜನದಟ್ಟಣೆ ಕಡಿಮೆ ಮಾಡಲು ರೈತರಿಗೆ ಇ–ಟೋಕನ್‌ ಹಾಗೂ ಎಸ್‌.ಎಂ.ಎಸ್‌. ಕಳುಹಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಇದರಿಂದಾಗಿ ರೈತರು ನಿಗದಿತ ಖರೀದಿ ಕೇಂದ್ರಕ್ಕೆ ನಿಗದಿಪಡಿಸಿದ ದಿನ ಹಾಗೂ ಸಮಯಕ್ಕೆ ಬರುತ್ತಿದ್ದಾರೆ. ಈ ವ್ಯವಸ್ಥೆಯಿಂದ ಖರೀದಿ ಕೇಂದ್ರದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುತ್ತಿದೆ.

ಹರಿಯಾಣ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, ಕೆಲ ವಾರಗಳ ಕಾಲ ಮಾರಾಟ ಮಾಡದೇ ಉತ್ಪನ್ನಗಳನ್ನು ತಮ್ಮಲ್ಲೇ ದಾಸ್ತಾನು ಮಾಡಿಕೊಂಡಿರುವ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ಹೆಚ್ಚುವರಿಯಾಗಿ ‘ಹೋಲ್ಡಿಂಗ್‌ ಬೋನಸ್‌’ ನೀಡಲು ಮುಂದಾಗಿದೆ. ಆದರೆ, ಇದರ ಜೊತೆಗೆ ಮಧ್ಯದಲ್ಲೇ ಖರೀದಿ ಕೇಂದ್ರಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂಬ ಭರವಸೆಯನ್ನೂ ಅದು ರೈತರಿಗೆ ನೀಡಬೇಕಾಗಿದೆ. ಕೂಲಿಕಾರ್ಮಿಕರು, ಗೋಣಿ ಚೀಲ, ಸಾರಿಗೆ, ದಾಸ್ತಾನು ಹಾಗೂ ಹಣ ಪಾವತಿಯಂತಹ ವಿಚಾರಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ರಾಜ್ಯ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.

ಲಾಕ್‌ಡೌನ್‌ನ ಸಂದಿಗ್ಧ ಪರಿಸ್ಥಿತಿಯಲ್ಲಿ ಖರೀದಿ ಕೇಂದ್ರಗಳನ್ನು ಸುಗಮವಾಗಿ ನಡೆಸಲು ಗ್ರಾಮೀಣ ಭಾಗಗಳಲ್ಲಿ ಚೀಲ ತುಂಬುವುದು, ತೂಕ ಮಾಡುವುದು, ಉತ್ಪನ್ನಗಳನ್ನು ವಾಹನಕ್ಕೆ ತುಂಬುವುದು ಹಾಗೂ ಇಳಿಸುವಂತಹ ಕೆಲಸಗಳನ್ನು ಹರಿಯಾಣ ಸರ್ಕಾರವು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಿಸಿಕೊಳ್ಳುವ ಮೂಲಕ ಕೂಲಿಕಾರ್ಮಿಕರಿಗೆ ಪ್ರೋತ್ಸಾಹ ನೀಡುತ್ತಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಸುಗಮವಾಗಿ ನಡೆಯಲು ಹರಿಯಾಣ ಕೈಗೊಂಡ ಇಂತಹ ಪರಿಹಾರೋಪಾಯಗಳು ಉಳಿದ ರಾಜ್ಯಗಳಿಗೂ ಮಾದರಿಯಾಗಿವೆ. ಕೊರೊನಾ ವೈರಸ್‌ ಭೀತಿ ಕಡಿಮೆಯಾಗುವವರೆಗೂ ಕೃಷಿ ಉತ್ಪನ್ನಗಳನ್ನು ಖರೀದಿಸಿ ತಮ್ಮ ಬಳಿಯೇ ಸಂಗ್ರಹಿಸಿಟ್ಟುಕೊಳ್ಳುವ ‘ದಾಸ್ತಾನು’ ಮಂತ್ರವನ್ನು ಪಠಿಸುವುದು ಅನಿವಾರ್ಯವಾದರೂ ಕೆಲ ರಾಜ್ಯಗಳಲ್ಲಿ ದಾಸ್ತಾನು ಸಾಮರ್ಥ್ಯ ಕಡಿಮೆ ಇದೆ. ಹಲವು ಉತ್ಪನ್ನಗಳನ್ನು ಸರ್ಕಾರಿ ಗೋದಾಮಿನಲ್ಲಿ ಇಟ್ಟುಕೊಳ್ಳಲಾಗುತ್ತಿಲ್ಲ ಎಂಬುದು ಕಹಿಸತ್ಯ.

ರೈತರ ಉತ್ಪನ್ನ ಮನೆ ಬಾಗಿಲಿಗೇ ತಲುಪಿಸಲಿ

ಜನಸಂಚಾರ ನಿರ್ಬಂಧಿಸಿರುವುದು ಹಾಗೂ ಹೋಟೆಲ್‌, ರೆಸ್ಟೋರಂಟ್‌, ಕೇಟರಿಂಗ್‌ಗಳು ಬಂದ್‌ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಬೇಗನೆ ಕೆಡುವ ಹಣ್ಣು–ತರಕಾರಿಗಳ ಬೇಡಿಕೆ ಗಣನೀಯವಾಗಿ ತಗ್ಗಿದೆ. ಕೆಲ ರಾಜ್ಯಗಳಲ್ಲಿ ಸರ್ಕಾರಿ ಏಜೆನ್ಸಿಗಳು ಹಾಗೂ ಜಿಲ್ಲಾಡಳಿತ ಹಳ್ಳಿ ಮಟ್ಟದಲ್ಲಿ ರೈತರಿಗೆ ಹಣ್ಣು–ತರಕಾರಿಗಳನ್ನು ಖರೀದಿಸಿ, ನೇರವಾಗಿ ಗ್ರಾಹಕರ ಮನೆ ಬಾಗಿಲಿಗೇ ತಾಜಾ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿವೆ.

ಕೇರಳ ಸರ್ಕಾರವು ಗ್ರಾಮ ಪಂಚಾಯಿತಿಗಳನ್ನು ಬಳಸಿಕೊಂಡು ರೈತರಿಂದ ಉತ್ಪನ್ನಗಳನ್ನು ಖರೀದಿಸುತ್ತಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಕೃಷಿಕರ ಬೆಳೆಗಾರರ ಸಂಘಗಳ ಮೂಲಕ ರೈತರಿಂದ ಉತ್ಪನ್ನ ಖರೀದಿಸಿ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ಹಾಪ್‌ಕಾಮ್ಸ್‌ಗಳ ಮೂಲಕ ತರಕಾರಿ, ಹಣ್ಣುಗಳನ್ನು ಖರೀದಿಸುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ತಳ್ಳುವ ಗಾಡಿಗಳ, ಗೂಡ್ಸ್‌ ಆಟೊಗಳಲ್ಲಿ ತರಕಾರಿ, ಹಣ್ಣುಗಳನ್ನು ಬಡಾವಣೆಗಳ ಮನೆ ಬಾಗಿಲಿಗೆ ತಂದು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಭವಿಷ್ಯದಲ್ಲೂ ಸರ್ಕಾರ ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು. ಪಡಿತರ ವ್ಯವಸ್ಥೆ, ಐಸಿಡಿಎಸ್‌, ಮಧ್ಯಾಹ್ನದ ಬಿಸಿಯೂಟ ಯೋಜನೆಗಳು ಹಾಗೂ ಪರಿಹಾರ ಕೇಂದ್ರಗಳಲ್ಲಿ ಊಟ ತಯಾರಿಕೆಗೆ ರೈತರ ಉತ್ಪನ್ನಗಳನ್ನು ಖರೀದಿಸಲು ವ್ಯವಸ್ಥೆ ಮಾಡಬೇಕು.

ಮುಕ್ತ ಅವಕಾಶ ಕಾರ್ಯರೂಪಕ್ಕೆ ಬರಲಿ

ಕೂಲಿಕಾರ್ಮಿಕರು, ಗ್ರಾಹಕರು, ಮಾರುಕಟ್ಟೆ, ಗೋದಾಮು, ಸಾಗಾಣಿಕೆ, ಹಣಕಾಸು ಹಾಗೂ ಸಾಲ ಮರುಪಾವತಿ ವ್ಯವಸ್ಥೆ ಮೇಲೆ ಲಾಕ್‌ಡೌನ್‌ ನೇರವಾಗಿ ಪರಿಣಾಮ ಬೀರುತ್ತಿದೆ. ಟ್ರ್ಯಾಕ್ಟರ್‌, ಲಾರಿ, ತಳ್ಳುವಗಾಡಿಗಳನ್ನು ವಶಪಡಿಸಿಕೊಂಡಿವ ಬಗ್ಗೆ ವರದಿಯಾಗಿವೆ. ಹೀಗಾಗಿ ರೈತರು ಮುಕ್ತವಾಗಿ ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಲಾಕ್‌ಡೌನ್‌ ಅವಧಿಯನ್ನು ಇನ್ನೂ ಮೂರು ವಾರಗಳ ಕಾಲ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಕೃಷಿ ಚಟುವಟಿಕೆ ಹಾಗೂ ಉತ್ಪನ್ನಗಳ ವಹಿವಾಟಿಗೆ ಮುಕ್ತ ಅವಕಾಶ ನೀಡುವುದಾಗಿ ಹೇಳಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶ ನೈಜ ರೂಪದಲ್ಲಿ ಕಾರ್ಯರೂಪಕ್ಕೆ ಬರಬೇಕು. ಕೃಷಿ ವಲಯವನ್ನು ಮರಳಿ ಸುಸ್ಥಿತಿಗೆ ತರಲು ಬೇಕಾದ ಕಾರ್ಯಯೋಜನೆಯನ್ನು ಸರ್ಕಾರ ರೂಪಿಸಬೇಕಾಗಿದೆ. ದೇಶದ ಆಹಾರ ಭದ್ರತೆಗೆ ಧಕ್ಕೆಯಾಗದಂತೆ ಮಾನವ ಸಂಪನ್ಮೂಲ, ಸಾಂಸ್ಥಿಕ ಹಾಗೂ ಹಣಕಾಸಿನ ಸಂಪನ್ಮೂಲಗಳನ್ನು ಕ್ರೊಢೀಕರಿಸಿಕೊಳ್ಳಬೇಕಾಗಿದೆ.

ಈ ಬಾರಿ ಮುಂಗಾರಿನಲ್ಲಿ ವಾಡಿಕೆಯಂತೆ ಮಳೆಯಾಗಲಿದೆ ಎಂಬ ಆಶಾದಾಯ ಸುದ್ದಿಯನ್ನು ನೀಡಿರುವ ಹವಾಮಾನ ಇಲಾಖೆಯ ವರದಿಯು ಸಂಕಷ್ಟದಲ್ಲಿರುವ ರೈತರಲ್ಲಿ ಮತ್ತೆ ಕನಸು ಚಿಗುರುವಂತೆ ಮಾಡಿದೆ. ಮುಂಗಾರು ಕೃಷಿ ಚಟುವಟಿಕೆ ನಡೆಸಲು ಅಗತ್ಯ ಬೀಜ, ಗೊಬ್ಬರ, ಸಾಲ ಸೌಲಭ್ಯಗಳು ಸಕಾಲಕ್ಕೆ ಸಿಗುವಂತೆ ಮಾಡಿ ರೈತರ ಕನಸಿಗೆ ನೀರೆರೆಯುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ.

ಕೃಷಿ ಉತ್ಪನ್ನ ಸಾಗಾಣಿಕೆಗೆ ಸಹಾಯವಾಣಿ

ಕೇಂದ್ರ ಕೃಷಿ ಇಲಾಖೆಯು ಅಂತರ ರಾಜ್ಯಗಳ ನಡುವೆ ಹಣ್ಣು–ತರಕಾರಿಗಳು, ಬಿತ್ತನೆ ಬೀಜ, ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳ ಸಾಗಾಣಿಕೆ ಅನುಕೂಲ ಕಲ್ಪಿಸಲು ಆಲ್‌ ಇಂಡಿಯಾ ಅಗ್ರಿ ಟ್ರಾನ್ಸ್‌ಪೋರ್ಟ್‌ ಕಾಲ್‌ ಸೆಂಟರ್‌ ಆರಂಭಿಸಿದೆ.

ಕಾಲ್‌ ಸೆಂಟರ್‌ನ ಟೋಲ್‌ಫ್ರೀ ಸಂಖ್ಯೆ1800 180 4200 ಮತ್ತು 14488 ಅನ್ನು ಮೊಬೈಲ್‌ ಅಥವಾ ಸ್ಥಿರ ದೂರವಾಣಿ ಮೂಲಕ ಸಂಪರ್ಕಿಸಬಹುದು. ಲಾರಿ ಚಾಲಕರು, ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ಸಾಗಾಣೆದಾರರು ಅಂತರರಾಜ್ಯ ಸಾಗಾಣಿಕೆಯಲ್ಲಿ ಸಮಸ್ಯೆ ಎದುರಿಸುತ್ತಿರುವ ಪಾಲುದಾರರು ಈ ಸಂಖ್ಯೆಗಳಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲು ಎಲ್ಲಾ ರಾಜ್ಯಗಳ ನಡುವೆ ಸಮನ್ವಯತೆ ಸಾಧಿಸಬೇಕು. ರೈತರಿಗೆ ಶಕ್ತಿ ತುಂಬಲು ದೇಶದಾದ್ಯಂತ ಮಾರುಕಟ್ಟೆಯ ಸಂಪರ್ಕಕೊಂಡಿಯ ಜಾಲವನ್ನು ಬಲಪಡಿಸಿಬೇಕು. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿದಾಗ ಮಾತ್ರ ದೇಶದ ಆರ್ಥಿಕತೆಯೂ ಸದೃಢಗೊಳ್ಳಲು ಸಾಧ್ಯ.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು, ಬರಹ: ವಿನಾಯಕ ಭಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.