ADVERTISEMENT

ಸವಾಲು ಮೀರಿನಿಂತ ಸ್ನೇಹಪರ ನಡೆ

ಭಾರತ-–ಚೀನಾ–-ಪಾಕಿಸ್ತಾನದ ನಡುವಿನ ಮಾತುಕತೆಗೆ ಸಮಯ ಕೂಡಿಬಂದಿದೆ

ಸುಧೀಂದ್ರ ಕುಲಕರ್ಣಿ
Published 13 ಅಕ್ಟೋಬರ್ 2019, 20:00 IST
Last Updated 13 ಅಕ್ಟೋಬರ್ 2019, 20:00 IST
   

‘ಅಂತರರಾಷ್ಟ್ರೀಯ ಹಾಗೂ ಪ್ರಾದೇಶಿಕ ಪರಿಸ್ಥಿತಿ ಬದಲಾದರೂ ಪಾಕಿಸ್ತಾನ ಮತ್ತು ಚೀನಾ ನಡುವಿನ ಸ್ನೇಹ ಮುರಿಯಲಾರದ್ದು’ ಎಂದು, ಈ ವರ್ಷ ಮೂರನೆಯ ಬಾರಿ ಬೀಜಿಂಗ್‌ಗೆ ಬಂದಿದ್ದ ಇಮ್ರಾನ್‌ ಖಾನ್‌ ಬಳಿ ಅವರು ಹೇಳಿದ್ದರು. ಹಾಗೆ ಹೇಳುವ ಮೂಲಕ ಅವರು, ಭಾರತದ ಹಿತಾಸಕ್ತಿಯ ದೃಷ್ಟಿಯಿಂದ, ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ ಎಂದು ಹಲವರು ಭಾವಿಸಿದ್ದರು. ಏಕೆಂದರೆ, ಇಮ್ರಾನ್ ಜೊತೆ ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಜನರಲ್ ಬಾಜ್ವಾ, ಐಎಸ್ಐ ಮುಖ್ಯಸ್ಥ ಫೈಜ್ ಹಮೀದ್ ಅವರೂ ಇದ್ದರು.

ತಮಿಳುನಾಡಿನ ಮಹಾಬಲಿಪುರಂಗೆ (ಮಾಮಲ್ಲಪುರಂ) ಪ್ರಯಾಣ ಬೆಳೆಸುವ ಎರಡು ದಿನಗಳ ಮೊದಲಷ್ಟೇ ಅವರು ಪಾಕಿಸ್ತಾನಕ್ಕೆ ಈ ಭರವಸೆ ನೀಡಿದ್ದರು. ಎಲ್ಲವೂ ಚೆನ್ನಾಗಿದ್ದ ಹೊತ್ತಿನಲ್ಲೂ, ಭಾರತದಲ್ಲಿನ ಮಿಲಿಟರಿ ವಿದ್ಯಮಾನಗಳ ಬಹುತೇಕ ತಜ್ಞರು ಚೀನಾ ಬಗ್ಗೆ ಸ್ನೇಹಭಾವ ಹೊಂದಿಲ್ಲ; ಭಾರತದ ಮಾಧ್ಯಮಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳಲ್ಲೂ ಸ್ನೇಹಭಾವ ವ್ಯಕ್ತವಾಗುವುದಿಲ್ಲ. ಹಾಗಾಗಿ ಅವರು ಅ. 9ರಂದು ಇಮ್ರಾನ್ ಜೊತೆ ಕೈಕುಲುಕಿದಾಗ, ಅ. 11ರಂದು ನರೇಂದ್ರ ಮೋದಿ ಅವರ ಕೈಕುಲುಕಿದಾಗ ಭಾರತದ ಟಿ.ವಿ., ಮುದ್ರಣ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ತೀರ್ಪು ಬಹುತೇಕ ಒಂದೇ ಆಗಿತ್ತು: ‘ವುಹಾನ್ ಶೃಂಗಸಭೆಯ ಆಶಯ ಸತ್ತಿದೆ. ಚೆನ್ನೈ ಶೃಂಗಸಭೆ ವಿಫಲವಾಗಲಿದೆ’.

ಹೀಗಿದ್ದರೂ, ಅವರ ಜೊತೆಗಿನ ಎರಡು ದಿನಗಳ ಶೃಂಗಸಭೆಯ ಕೊನೆಯಲ್ಲಿ ಮೋದಿ ಅವರು ಆಡಿದ ಮಾತು ಭಿನ್ನವಾಗಿತ್ತು– ‘ಪರಸ್ಪರ ನಂಬಿಕೆ ಆಧರಿಸಿ, ಭಾರತ-ಚೀನಾ ಸಹಕಾರದಲ್ಲಿ ಹೊಸದೊಂದು ಶಕೆ ಚೆನ್ನೈ ಮೂಲಕ ಆರಂಭವಾಗಿದೆ’. ಪಾಕಿಸ್ತಾನ ಹಾಗೂ ಭಾರತದ ಜೊತೆ ರಾಜತಾಂತ್ರಿಕ ಗೆಲುವು ಸಾಧಿಸಿದ ಆ ವ್ಯಕ್ತಿ ಯಾರು? ಅವರು ಮಾವೊ ಝೆಡಾಂಗ್ ನಂತರ ಚೀನಾ ಕಂಡ ಅತ್ಯಂತ ಶಕ್ತಿಶಾಲಿ ನಾಯಕ ಷಿ ಜಿನ್‌ಪಿಂಗ್‌.

ADVERTISEMENT

ಸಾಂಪ್ರದಾಯಿಕವಾಗಿ ಪಾಕಿಸ್ತಾನದ ಜೊತೆ ಹೊಂದಿರುವ ಗಾಢ ಬಾಂಧವ್ಯವನ್ನು ಕೆಡಿಸಿಕೊಳ್ಳದೆಯೇ, ಭಾರತದ ಜೊತೆ ಸಂಬಂಧ ಉತ್ತಮಪಡಿಸಿಕೊಳ್ಳುವುದು ಷಿ ಅವರು ವಿದೇಶಾಂಗ ನೀತಿ ವಿಚಾರದಲ್ಲಿ ಎದುರಿಸುತ್ತಿರುವ ಅತ್ಯಂತ ಸಂಕೀರ್ಣವಾದ ಒಂದು ಸವಾಲು. ಪಾಕಿಸ್ತಾನದ ಜೊತೆ ಒಳ್ಳೆಯ ಸಂಬಂಧ ಹೊಂದಿರುವ ಯಾವುದೇ ದೇಶ ಭಾರತದ ಜೊತೆ ಸ್ನೇಹದಿಂದ ಇರುತ್ತದೆ ಎಂಬುದನ್ನು ನಂಬಲಾಗದು ಎಂದು ಭಾರತದಲ್ಲಿ ಹಲವರು ಭಾವಿಸಿದ್ದಾರೆ. ಹಾಗೆಯೇ, ಚೀನಾವು ಭಾರತದ ಜೊತೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವುದನ್ನು ಪಾಕಿಸ್ತಾನೀಯರು ಅನುಮಾನದಿಂದಲೂ ಆತಂಕದಿಂದಲೂ ನೋಡುತ್ತಾರೆ.

ಈ ಹಿನ್ನೆಲೆಯಲ್ಲಿ, ಇಮ್ರಾನ್ ಮತ್ತು ಮೋದಿ ಅವರನ್ನು ಎರಡು ದಿನಗಳ ಅಂತರದಲ್ಲಿ ಭೇಟಿ ಮಾಡಿ, ಇಬ್ಬರಿಗೂ ಸ್ನೇಹದ ಭರವಸೆ ನೀಡಿರುವ ಷಿ ಅವರದ್ದು ನಿಜಕ್ಕೂ ಎದೆಗಾರಿಕೆಯೇ ಹೌದು! ಮೋದಿ ಹಾಗೂ ಇಮ್ರಾನ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಷಿ ಅವರನ್ನು ಗಮನಿಸಿದವರಿಗೆ, ಷಿ ಅವರು ಮೋದಿ ಅವರ ಜೊತೆಗಿನ ಅನೌಪಚಾರಿಕ ಮಾತುಕತೆ ವೇಳೆ ಹೆಚ್ಚು ಸ್ನೇಹಪರವಾಗಿ ಇದ್ದಂತೆ ಕಾಣಿಸಿತು. ಮಹಾಬಲಿಪುರಂನಲ್ಲಿ ನಡೆದ ಭೇಟಿಯು ಷಿ ಮತ್ತು ಮೋದಿ ಅವರ ನಡುವೆ ರೂಪುಗೊಳ್ಳುತ್ತಿರುವ ಸಂಬಂಧದ ಅಧಿಕೃತ ಅಭಿವ್ಯಕ್ತಿ ಎಂಬುದನ್ನು ಇದು ತೋರಿಸುತ್ತದೆ. ಅತಿದೊಡ್ಡ ನೆರೆರಾಷ್ಟ್ರದ ಜೊತೆ ಸಂಬಂಧ ಪೋಷಿಸುವಲ್ಲಿ, ಆ ಸಂಬಂಧಕ್ಕೆ ನಿಧಾನವಾಗಿ ಆಯಕಟ್ಟಿನ ಮಹತ್ವವನ್ನು ಸೇರಿಸುವುದರಲ್ಲಿ ಮೋದಿ ಅವರು ಸ್ತುತ್ಯರ್ಹವಾದ ಪ್ರಬುದ್ಧತೆ ಹಾಗೂ ಕೌಶಲವನ್ನು ತೋರಿದ್ದಾರೆ ಎನ್ನುವುದನ್ನು ಅವರ ಟೀಕಾಕಾರರೂ ಒಪ್ಪಿಕೊಳ್ಳಬೇಕು.

ಕಷ್ಟದ ಈ ಗುರಿಯನ್ನು ಸಾಧಿಸುವಲ್ಲಿ ಮೋದಿ ಅವರಿಗೆ ಸಮಸ್ಯೆಗಳಿರುವುದು ಸ್ಪಷ್ಟ. ಅವರು ಐದೂವರೆ ವರ್ಷಗಳ ಆಡಳಿತದಲ್ಲಿ ಪಾಕಿಸ್ತಾನದ ವಿಚಾರದಲ್ಲಿ ಸ್ಥಿರ ನೀತಿಯನ್ನು ಹೊಂದಿಲ್ಲ. ಮೋದಿ ಅವರು ಪಾಕಿಸ್ತಾನದ ಕಡೆ ಸ್ನೇಹಹಸ್ತ ಚಾಚಿದಾಗ ಆ ಕಡೆಯವರು ವಿಶ್ವಾಸ ವೃದ್ಧಿಸುವ ಹೆಜ್ಜೆ ಇರಿಸಲಿಲ್ಲ. ಮೋದಿ ಅವರನ್ನು ರಾಜಕೀಯವಾಗಿ ಬೆಂಬಲಿಸುವ ವರ್ಗವು ಪಾಕಿಸ್ತಾನ ವಿರೋಧಿ ಧೋರಣೆ ಹೊಂದಿದೆ. ಈ ವಿರೋಧವು ಮೋದಿ ಅವರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಗಣನೀಯ ಪ್ರಮಾಣದಲ್ಲಿ ನೆರವಿಗೆ ಬಂತು. ಹಾಗಾಗಿ, ಪಾಕಿಸ್ತಾನದ ಕೈಬಿಡಲು ಒಲ್ಲೆ ಎನ್ನುವ ಚೀನಾದ ಜೊತೆ ತಮ್ಮ ಮಾತುಕತೆ ಮುಂದುವರಿಸುವುದು ಮೋದಿ ಅವರಿಗೆ ಸುಲಭದ್ದಾಗಿರಲಿಲ್ಲ. ಹೀಗಿದ್ದರೂ, ಭಾರತಚೀನಾ-ಪಾಕಿಸ್ತಾನ ದೇಶಗಳ ನಡುವೆ ಅಂತರ್ಗತವಾಗಿ ಇರುವ ಬಗೆಹರಿಸಲಾಗದ ವೈರುಧ್ಯಗಳ ಭಾರದಿಂದಾಗಿ ಚೆನ್ನೈ ಶೃಂಗಸಭೆ ಮುರಿದುಬೀಳುತ್ತದೆ ಎಂಬ ಭವಿಷ್ಯ
ವಾಣಿಗಳನ್ನು ಮೋದಿ ಸುಳ್ಳುಮಾಡಿದರು.

ವಾಸ್ತವದಲ್ಲಿ, ಷಿ ಅವರ ಮಹಾಬಲಿಪುರಂ ಭೇಟಿಯು ಪಡೆದಷ್ಟು ಆಕರ್ಷಣೆಯನ್ನು, ಅದು ಸಾರ್ವಜನಿಕರಲ್ಲಿ ಹುಟ್ಟಿಸಿದಷ್ಟು ಆಸಕ್ತಿಯನ್ನು ಈಚಿನ ವರ್ಷಗಳಲ್ಲಿ ಭಾರತದಲ್ಲಿ ಇನ್ಯಾವುದೇ ವಿದೇಶಿ ಪ್ರಮುಖರ ಭೇಟಿಯು ಸೃಷ್ಟಿಸಿರಲಿಲ್ಲ. ಇಮ್ರಾನ್ ಮತ್ತು ಷಿ ನಡುವಿನ ಮಾತುಕತೆಯು ಇಬ್ಬರು ಸಮಾನರ ನಡುವೆ ಆದಂತೆ ಇರಲಿಲ್ಲ. ಆದರೆ ಮೋದಿ ಅವರು ಸಮಾನ ನೆಲೆಯ ಸ್ನೇಹಿತನಂತೆ ಷಿ ಜೊತೆ ವ್ಯವಹರಿಸಿದರು.

ಮೋದಿ– ಷಿ ಭೇಟಿಯು ಭಾರತೀಯರಿಗೆ ಇನ್ನೊಂದು ಕಾರಣಕ್ಕೆ ಇಷ್ಟವಾಗಿದೆ. ಭಯೋತ್ಪಾದನೆ ಹಾಗೂ ಧಾರ್ಮಿಕ ತೀವ್ರವಾದವು ಭಾರತ, ಚೀನಾ ಹಾಗೂ ಇಡೀ ವಿಶ್ವಕ್ಕೆ ಒಡ್ಡಿರುವ ಅಪಾಯದ ವಿಚಾರದಲ್ಲಿ ಇಬ್ಬರೂ ನಾಯಕರು ಏಕಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಷಿ ಅವರು ಇಮ್ರಾನ್, ಬಾಜ್ವಾ ಹಾಗೂ ಐಎಸ್‌ಐ ಮುಖ್ಯಸ್ಥರ ಜೊತೆ ಬೀಜಿಂಗ್‌ನಲ್ಲಿ ಕೂಡ ಮಾತನಾಡಿರುವ ಸಾಧ್ಯತೆ ಹೆಚ್ಚಿದೆ. ಇದನ್ನು ಷಿ ಅವರು ಮೋದಿ ಅವರ ಜೊತೆ ಮಾತನಾಡಿರುವ ಸಾಧ್ಯತೆಯೂ ಹೆಚ್ಚಿದೆ. ಅಷ್ಟಕ್ಕೂ, ಮುಸ್ಲಿಂ ಬಾಹುಳ್ಯದ ಷಿನ್‌ಜಿಯಾಂಗ್‌ ಪ್ರದೇಶದಲ್ಲಿ ಬೆದರಿಕೆ ಎದುರಿಸುತ್ತಿರುವ ಚೀನಾವು ಭಯೋತ್ಪಾದನೆ ಹಾಗೂ ಇಸ್ಲಾಮಿಕ್ ಪ್ರತ್ಯೇಕತಾವಾದದ ಬಗ್ಗೆ ಮೃದು ಧೋರಣೆ ಹೊಂದುವುದನ್ನು ಆಲೋಚಿಸಲೂ ಸಾಧ್ಯವಿಲ್ಲ.

ಧಾರ್ಮಿಕ ತೀವ್ರವಾದದಿಂದ ಮೂಡಿದ ಭಯೋತ್ಪಾದನೆಗೆ ಪಾಕಿಸ್ತಾನವೂ ಪ್ರಮುಖ ಗುರಿಯಾಗಿರುವ ಕಾರಣ, ಈ ಅಪಾಯವನ್ನು ಕೇಂದ್ರವಾಗಿಸಿಕೊಂಡ ಭಾರತ-ಚೀನಾ-ಪಾಕಿಸ್ತಾನ ಮಾತುಕತೆಗೆ ಸಮಯ ಕೂಡಿ ಬಂದಿದೆ. ಷಿ ಜೊತೆ ಮಹಾಬಲಿಪುರಂನಲ್ಲಿ ನಡೆಸಿದ ಮಾತುಕತೆಯಲ್ಲಿ ಮೋದಿ ಅವರು ಇನ್ನೊಂದು ಅಂಶವನ್ನೂ ಸೇರಿಸಿಕೊಂಡರು. ಇದು ಭಾರತದ ಸಾರ್ವಜನಿಕರ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ. ಅವರು ಮಾತುಕತೆ ನಡೆಸಿದ್ದು ಸಮುದ್ರದ ಕಡೆ ಮುಖ ಮಾಡಿರುವ ಪುರಾತನವಾದ ದೇವಸ್ಥಾನಗಳ ಪಟ್ಟಣದಲ್ಲಿ– ಮಾತುಕತೆ ಸ್ಥಳ ಅದ್ಭುತವಾಗಿತ್ತು. ಅದು ಚೀನಾದ ಅಧ್ಯಕ್ಷರಿಗೆ ಹಾಗೂ ಆ ಸ್ಥಳವನ್ನು ಮೊದಲ ಬಾರಿಗೆ ಕಾಣುತ್ತಿರುವ ಭಾರತೀಯರಿಗೆ, ಹಿಂದೂ ದೇವಸ್ಥಾನಗಳ, ಸಂಸ್ಕೃತಿಯ ಭವ್ಯತೆಯನ್ನು ತೋರಿಸಿತು. ಭಾರತ ಮತ್ತು ಚೀನಾ ನಡುವಿನ ಪುರಾತನ ಸಾಂಸ್ಕೃತಿಕ ಕೊಂಡಿಗಳನ್ನು ಇದು ವಿವರಿಸಿ ಹೇಳಿತು. ಇದರ ಬಗ್ಗೆ ಷಿ ಅವರಿಗೂ ತಿಳಿದಿದೆ. ಷಿ ಅವರು ಕಮ್ಯುನಿಸ್ಟ್ ಪಕ್ಷದ ಕಿರಿಯ ಅಧಿಕಾರಿಯಾಗಿ ಚೀನಾದ ಫುಜಿಯಾನ್ ಪ್ರಾಂತ್ಯದಲ್ಲಿ 18 ವರ್ಷ ಇದ್ದವರು. ಈ ಪ್ರಾಂತ್ಯವು ಭಾರತದ ಜೊತೆಗಿನ– ಅದರಲ್ಲೂ ಮುಖ್ಯವಾಗಿ ತಮಿಳುನಾಡಿನ ಜೊತೆಗಿನ– ಹಿಂದಿನ ನಂಟುಗಳನ್ನು ತೋರಿಸುವ ಹಲವು ಸ್ಥಳಗಳನ್ನು ಹೊಂದಿದೆ. ಉದಾಹರಣೆಗೆ, ಕ್ವಾಂಜೌ ಪ್ರಾಂತ್ಯದಲ್ಲಿನ ಕೈಯುವಾನ್ ದೇವಸ್ಥಾನದಲ್ಲಿ ಶಿವ, ಕೃಷ್ಣ ಮತ್ತು ನರಸಿಂಹನ ಚಿತ್ರಗಳು ಇವೆ.

ಮೋದಿ ಅವರು ಮಹಾಬಲಿಪುರಂ ದೇವಸ್ಥಾನದ ವಾಸ್ತುಶಿಲ್ಪವನ್ನು ತೋರಿಸುತ್ತಿದ್ದಾಗ, ಷಿ ಅವರು ಕ್ವಾಂಜೌ ಬಗ್ಗೆ ಉಲ್ಲೇಖಿಸಿದರು. ಚೀನಾ ಮತ್ತು ಭಾರತದ ನಡುವೆ ಭಿನ್ನಾಭಿಪ್ರಾಯಗಳು ಇವೆ, ನಿಜ. ಆದರೆ, ವಿವಾದಿತ ಬಹುಪಾಲು ವಿಚಾರಗಳನ್ನು ನಾವು ಇಬ್ಬರಿಗೂ ನಷ್ಟವಾಗದ ರೀತಿಯಲ್ಲಿ ಬಗೆಹರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.