ADVERTISEMENT

ಒಳನೋಟ | ಕಳಪೆ ಬಿತ್ತನೆ ಬೀಜ ಹಾವಳಿ: ಬಿತ್ತನೆ ಬೀಜ ಬಂಜೆಯಾದೊಡೆ...

ಇ.ಎಸ್.ಸುಧೀಂದ್ರ ಪ್ರಸಾದ್
Published 21 ಮೇ 2022, 19:45 IST
Last Updated 21 ಮೇ 2022, 19:45 IST
ಕುಮಟಾದ ನಾಗರಾಜ ನಾಯ್ಕ ಅವರ ಮನೆಯ ಅಂಗಳದಲ್ಲಿ ಭತ್ತದ ಸಸಿ ಮಡಿ (ಸಂಗ್ರಹ ಚಿತ್ರ)
ಕುಮಟಾದ ನಾಗರಾಜ ನಾಯ್ಕ ಅವರ ಮನೆಯ ಅಂಗಳದಲ್ಲಿ ಭತ್ತದ ಸಸಿ ಮಡಿ (ಸಂಗ್ರಹ ಚಿತ್ರ)   

ಧಾರವಾಡ: ‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ನೀಡುತ್ತದೆ’ ಎಂಬ ದೇವನೂರ ಮಹಾದೇವ ಅವರ ಮಾತು ಇಂದಿನ ಕಾಳಸಂತೆಯಲ್ಲಿ ಮಾರಾಟವಾಗುವ ಬಿತ್ತನೆ ಬೀಜಗಳಿಗೆ ಅನ್ವಯವಾಗದು.

ಕಳಪೆ ಗುಣಮಟ್ಟದ ಬೀಜಗಳ ಮಾರಾಟ ಜಾಲದಿಂದ ಬಂಜೆ ಬೀಜಗಳ ಹಾವಳಿ ತಪ್ಪದಂತಾಗಿದೆ. 2020–21ನೇ ಸಾಲಿನಲ್ಲಿ ₹14.71ಕೋಟಿ ಮೊತ್ತದ 8,957 ಕ್ವಿಂಟಲ್ ಕಳಪೆ ಬಿತ್ತನೆ ಬೀಜವನ್ನು ಜಾಗೃತ ದಳ ವಶಪಡಿಸಿಕೊಂಡಿದೆ. ಕಳೆದ ಮೂರು ತಿಂಗಳಲ್ಲಿ ಬೆಳಗಾವಿ, ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳ ವಿವಿಧೆಡೆ ನಡೆದ ದಾಳಿಯಲ್ಲಿ ₹5 ಲಕ್ಷ ಮೌಲ್ಯದ 35 ಕ್ವಿಂಟಲ್ ಕಳಪೆ ಬೀಜ ಪತ್ತೆಯಾಗಿದೆ. ಹೆಚ್ಚಾಗಿ ಗೋವಿನಜೋಳ, ಸೂರ್ಯಕಾಂತಿ, ಸಜ್ಜೆ, ಮುಸುಕಿನ ಜೋಳ ಸೇರಿವೆ.

ಪರವಾನಗಿ ಹೊಂದಿದ ವರ್ತಕರಿಂದ ಗುಣಮಟ್ಟದ ಬೀಜ ಖರೀದಿಸುವಂತೆ ಮತ್ತು ಅವುಗಳ ಖರೀದಿಯ ರಶೀದಿಯನ್ನು ಹಂಗಾಮು ಮುಗಿಯುವವರೆಗೂ ಇಟ್ಟುಕೊಳ್ಳುವಂತೆ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಸೂಚಿಸುತ್ತಲೇ ಇವೆ.

ADVERTISEMENT

ಪ್ರತಿ ವರ್ಷ ಬಹಳಷ್ಟು ರೈತರು ಕೃಷಿ ಸಾಲ ಮಾಡಿಯೇ ಹಂಗಾಮಿಗೆ ಸಜ್ಜಾಗುತ್ತಾರೆ. ಕಳಪೆ ಬೀಜಗಳ ಬಿತ್ತನೆಯಿಂದ ಇಳುವರಿ ಕುಂಠಿತ ಗೊಂಡು, ಸಾಲದ ಹೊರೆಗೆ ಸಿಲುಕುತ್ತಿದ್ದಾರೆ. ರೈತರ ಆತ್ಮಹತ್ಯೆಗೆ ಇದೂ ಒಂದು ಕಾರಣ ಎಂದು ಅಂದಾಜಿಸ ಲಾಗಿದೆ. ಶೇ 60ಕ್ಕಿಂತಲೂ ಕಡಿಮೆ ಮೊಳೆಕೆಯೊಡೆಯುವ ಪ್ರಮಾಣವಿರುವ ಈ ಬೀಜಗಳನ್ನು ತಿರಸ್ಕೃತ ಬೀಜ ಗಳೊಂದಿಗೆ ಸೇರಿಸಿ ಮಾರಾಟ ಮಾಡುವ ಜಾಲವೂ ವ್ಯವಸ್ಥಿತವಾಗಿ ಬೇರು ಬಿಟ್ಟಿದೆ.

ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು ಮುಂಗಾರಿ ಮತ್ತು ಹಿಂಗಾರಿ ಸೇರಿದಂತೆ 110 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತವೆ. ರಾಷ್ಟ್ರೀಯ ಬೀಜ ನಿಗಮ, ರಾಜ್ಯ ಬೀಜ ನಿಗಮ, ವಿಶ್ವವಿದ್ಯಾಲಯಗಳ ಬೀಜ ಘಟಕಗಳು ಅಗತ್ಯ ಇರುವಷ್ಟು ಬೀಜಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿವೆ. ಉತ್ತರಾಖಂಡದ ಪಂತ್‌ನಗರ, ಪಂಜಾಬ್‌ನ ಲುಧಿಯಾನ ಹೊರತುಪಡಿಸಿದರೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ವಾರ್ಷಿಕ ಅತಿ ಹೆಚ್ಚು– ಸುಮಾರು ಎಂಟು ಸಾವಿರ ಕ್ವಿಂಟಲ್‌ ಬೀಜೋತ್ಪಾದನೆ ಮಾಡುತ್ತಿದೆ.

‘ಪ್ರಸಕ್ತ ವರ್ಷ ಕೃಷಿ ಹಂಗಾಮಿಗೆ ಸುಮಾರು 5.90 ಲಕ್ಷ ಕ್ವಿಂಟಲ್ ಬೀಜಕ್ಕೆ ಬೇಡಿಕೆ ಇದೆ. ಇದರಲ್ಲಿ ಶೇ 35ರಷ್ಟು ಖಾಸಗಿ ಕಂಪನಿಗಳ ಪಾಲು ಇದೆ. ಸೂರ್ಯಕಾಂತಿ, ಸೋಯಾಬೀನ್, ಮೆಕ್ಕೆಜೋಳ ಬೆಳೆಯುವ ಕ್ಷೇತ್ರಗಳು ಹೆಚ್ಚಾಗಿವೆ’ ಎಂದು ಕೃಷಿ ಇಲಾಖೆ ಬೀಜ ವಿಭಾಗದ ಜಂಟಿ ನಿರ್ದೇಶಕ ದೇವರಾಜ್ ತಿಳಿಸಿದರು.

ಸಿಬ್ಬಂದಿ ಕೊರತೆ: ಜಾಗೃತ ದಳದ ಕಾರ್ಯನಿರ್ವಹಣೆಯಿಂದ ಸಾಕಷ್ಟು ಪ್ರಕರಣಗಳು ಪತ್ತೆಯಾಗಿದ್ದರೂ, ಈಗಲೂ ಕಳಪೆ ಗುಣಮಟ್ಟದ ಬೀಜಗಳ ಮಾರಾಟ ಅಲ್ಲಲ್ಲಿ ಪತ್ತೆಯಾಗುತ್ತಲೇ ಇದೆ. ಬೀಜಗಳು ಹೆಚ್ಚಾಗಿ ಮಾರಾಟವಾಗುವ ರೈತ ಸಂಪರ್ಕ ಕೇಂದ್ರಗಳ ಮೂಲಕವೇ ನಕಲಿ ಜಾಲದ ಪತ್ತೆ ಸಾಧ್ಯ. ಇಲಾಖೆಯಲ್ಲಿ ಒಟ್ಟು ಮಂಜೂರಾದ ಸುಮಾರು 5,300 ಹುದ್ದೆಗಳು ಖಾಲಿ ಇವೆ. ಇತ್ತೀಚೆಗೆ 300 ಹುದ್ದೆಗಳಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಅದರ ನೇಮಕಾತಿ ಇನ್ನಷ್ಟೇ ಆಗಬೇಕಿದೆ. ಹೀಗಾಗಿ ನಕಲಿ ಬಿತ್ತನೆ ಬೀಜ ವಿತರಣಾ ಜಾಲ ಪತ್ತೆ ಕಾರ್ಯ ಅಷ್ಟಾಗಿ ನಡೆಯುತ್ತಿಲ್ಲ.

ಕಳಪೆ ಬೀಜ; ಆಂಧ್ರದ ಮೂಲ: ಆಂಧ್ರದಲ್ಲಿರುವ ಬಹಳಷ್ಟು ಬೀಜ ತಯಾರಿಕಾ ಕಂಪನಿಗಳು ತಮ್ಮದೇ ಸಂಶೋಧನಾ ಕೇಂದ್ರದಲ್ಲಿ ಸಣ್ಣದೊಂದು ಪರೀಕ್ಷೆ ನಡೆಸಿ, ಆಕರ್ಷಕ ಹೆಸರನ್ನಿಟ್ಟು ಬೀಜಗಳನ್ನು ಬಿಡುಗಡೆ ಮಾಡುತ್ತವೆ. ಕಳಪೆ ಬೀಜ, ಗೊಬ್ಬರ ಮತ್ತು ಕೀಟನಾಶಕಗಳನ್ನು ಅಲ್ಲಿಂದಲೇ ಕಳುಹಿಸುತ್ತಿದೆ.

ಖಾಸಗಿ ಕಂಪನಿಗಳ ನೆಚ್ಚಿನ ಹೈಬ್ರಿಡ್‌: ಖಾಸಗಿ ಕಂಪೆನಿಗಳು ಹೆಚ್ಚಾಗಿ ಕಡಿಮೆ ಬಂಡವಾಳ, ಹೆಚ್ಚಿನ ಲಾಭದ ಬೆಳೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಪರಕೀಯ ಪರಾಗಸ್ಪರ್ಶದ ಹೈಬ್ರಿಡ್ ತಳಿಗಳಾದ ಹತ್ತಿ, ಈರುಳ್ಳಿ, ಮೆಣಸು, ತರಕಾರಿ, ಸೂರ್ಯಕಾಂತಿ ಬೀಜಗಳನ್ನು ಹೆಚ್ಚಾಗಿ ಉತ್ಪಾದಿಸುತ್ತವೆ. ಆದರೆ ಮತ್ತೊಂದೆಡೆ ಸ್ವಪರಾಗಸ್ಪರ್ಶ ಬೆಳೆಗಳಾದ ಗೋಧಿ, ಹಿಂಗಾರಿ ಜೋಳ, ಹೆಸರು, ಉದ್ದು, ಸೋಯಾಬೀನ್‌ ಬೆಳೆಗಳ ಬೀಜಗಳನ್ನು ಇಂದಿಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೇ ಅಭಿವೃದ್ಧಿಪಡಿಸುತ್ತವೆ.

ಖಾಸಗಿ ಕಂಪನಿಗಳು ಇಳುವರಿ ಕಡಿಮೆ, ಕಳಪೆ ಆರೋಪಗಳು ಕೇಳಿಬಂದ ತಕ್ಷಣ, ಅವೇ ಬೀಜಗಳನ್ನು ಬೇರೊಂದು ಹೆಸರಿನಲ್ಲಿ ಮಾರಾಟ ಮಾಡುವ ತಂತ್ರವನ್ನೂ ಅನುಸರಿಸುತ್ತವೆ. ಒಂದೆಡೆ ಬೇಡಿಕೆ ಹೆಚ್ಚಿಸುವುದು, ನಂತರ ಕೃತಕ ಅಭಾವ ಸೃಷ್ಟಿಸುವುದು, ಬೆಲೆ ಹೆಚ್ಚಳ ಮಾಡಿ ಮಾರಾಟ ಮಾಡುವುದು ಒಂದು ಜಾಲ. ಇಂಥ ಬೇಡಿಕೆ ಸಂದರ್ಭದಲ್ಲೇ ಅಗ್ಗದ ಬೆಲೆಗೆ ಕಳಪೆ ಬೀಜಗಳನ್ನು ಮಾರುಕಟ್ಟೆಗೆ ಬಿಡುವುದು ಮತ್ತೊಂದು ಜಾಲ. ಈ ಜಾಲಗಳ ನಡುವೆ ಸಿಲುಕಿ ರೈತ ನಲುಗಿದ್ದಾನೆ. ದೂರು ಬಂದ ತಕ್ಷಣ ಇಲಾಖೆಯು ತನಿಖಾ ಸಮಿತಿ ರಚಿಸಿ ಕೈತೊಳೆದುಕೊಳ್ಳುತ್ತದೆ. ಹವಾಮಾನ ವೈಪರೀತ್ಯ, ಶಿಫಾರಸಿನಂತೆ ಬಿತ್ತನೆ ಮಾಡದಿರುವುದು, ಅಧಿಕ ಒಣ ಹವೆ ದಿನಗಳ ನೆಪವೊಡ್ಡಿ ಕಂಪನಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತವೆ.

ಕಾವೇರಿ ಚಾಂಪ್ ಪ್ರಕರಣ

2014ರಲ್ಲಿ ಗದಗ ಜಿಲ್ಲೆಯಲ್ಲಿ ಕಾವೇರಿ ಚಾಂಪ್ ಹೆಸರಿನಲ್ಲಿ ಮಾರಾಟವಾದ ಸೂರ್ಯಕಾಂತಿ ಬೀಜಕ್ಕೆ ಕೃತಕ ಬೇಡಿಕೆ ಸೃಷ್ಟಿಸಲಾಗಿತ್ತು. ಒಂದು ಪೊಟ್ಟಣಕ್ಕೆ ₹1,500 ಮುಖಬೆಲೆ ಇದ್ದರೂ, ಅದನ್ನು ₹3,500ಕ್ಕೂ ಆಗ ಮಾರಾಟ ಮಾಡಲಾಗಿತ್ತು. ಎಕರೆಗೆ 5ರಿಂದ 6 ಕ್ವಿಂಟಲ್ ಇಳುವರಿ ನಿರೀಕ್ಷಿಸಿದ್ದ ರೈತರಿಗೆ ಸಿಕ್ಕಿದ್ದು 50 ಕೆ.ಜಿ. ಮಾತ್ರ. ಇದು ಆಂದೋಲನ ಸ್ವರೂಪ ಪಡೆದುಕೊಂಡಿತು. ರಸೀದಿ ಪಡೆದ ಸುಮಾರು 60 ರೈತರು ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿದರು. ಇವರಲ್ಲಿ ಈವರೆಗೆ 8ರಿಂದ 10 ರೈತರು ಮೃತಪಟ್ಟಿದ್ದಾರೆ. ಆದರೆ ಪ್ರಕರಣ ಇತ್ಯರ್ಥಗೊಂಡಿಲ್ಲ.

ಪರವಾನಗಿ ರದ್ದು: ಬಿ.ಸಿ.ಪಾಟೀಲ

‘ಕಳಪೆ ಬಿತ್ತನೆ ಬೀಜ ಮಾರುವುದು ಮತ್ತು ದುಬಾರಿ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವುದನ್ನು ನಾನು ಸಹಿಸು ವುದಿಲ್ಲ. ಮೋಸ ಮಾಡುವ ವ್ಯಕ್ತಿಗಳು ಎಷ್ಟೇ ದೊಡ್ಡ ವ್ಯಕ್ತಿಗ ಳಾಗಿದ್ದರೂ, ಪ್ರಭಾವಶಾಲಿಯಾದರೂ ಮುಲಾಜಿಲ್ಲದೆ ಅಂಥ ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಖಡಕ್‌ ಎಚ್ಚರಿಕೆ ನೀಡಿದರು.

‘ರಾಜ್ಯದಲ್ಲಿ ರಸಗೊಬ್ಬರ, ಬಿತ್ತನೆ ಬೀಜದ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರಸಗೊಬ್ಬರ ಮತ್ತು ಬಿತ್ತನೆ ಬೀಜದ ಅಕ್ರಮ ದಾಸ್ತಾನು ಮಾಡಿದ್ದರೆ ಅಂತಹ ಅಂಗಡಿಗಳ ಪರವಾನಿಗೆ ರದ್ದುಪಡಿಸಲಾಗುವುದು. ನಾನು ಕೃಷಿ ಸಚಿವನಾದ ನಂತರ ಸುಮಾರು 14 ಸಾವಿರ ಕ್ವಿಂಟಲ್‌ ಕಳಪೆ ಬಿತ್ತನೆ ಬೀಜ ಹಾಗೂ ಕೀಟನಾಶಕ ಪತ್ತೆ ಹಚ್ಚಲಾಗಿದೆ. ರಾಜ್ಯದಲ್ಲಿ ಕಳಪೆ ಬೀಜ, ಕ್ರಿಮಿನಾಶಕ ಮಾರಾಟ ಮಾಡಿ ಸಿಕ್ಕಿಬಿದ್ದ 184 ಅಂಗಡಿಗಳ ಲೈಸೆನ್ಸ್‌ ರದ್ದುಪಡಿಸಲಾಗಿದೆ’ ಎಂದು ಹೇಳಿದರು.

ಜಾಗೃತ ದಳದ ಕಡಿವಾಣ

ಇಡೀ ದೇಶದಲ್ಲೇ ಮೊದಲ ಬಾರಿಗೆ ಜಾಗೃತ ದಳ ಜಾರಿಗೆ ತಂದ ಪರಿಣಾಮ ರಾಜ್ಯದಲ್ಲಿ ಕಳಪೆ ಬೀಜಗಳ ಮಾರಾಟ ಜಾಲಕ್ಕೆ ಕಡಿವಾಣ ಬಿದ್ದಿದೆ. 2019ರಿಂದ 21ರವರೆಗೆ ನಿರಂತರವಾಗಿ ದಾಳಿಗಳನ್ನು ನಡೆಸಿ ಪ್ರಕರಣ ದಾಖಲಿಸಲಾಗಿದೆ. 15 ಪ್ರಕರಣಗಳಲ್ಲಿ ಇಲಾಖೆ ಪರವಾಗಿಯೇ ತೀರ್ಪುಗಳು ಬಂದಿವೆ. ಈಗಲೂ ಅಪರೂಪಕ್ಕೆ ಪ್ರಕರಣಗಳು ಕಂಡುಬರುತ್ತಿವೆ. ಜಾಗೃತ ದಳ ಈಗಾಗಲೇ ಒಂದು ಸುತ್ತಿನ ತಪಾಸಣೆ ಕಾರ್ಯ ಪೂರ್ಣಗೊಳಿಸಿದೆ. ನಮ್ಮ ಈ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿರುವ ಕೃಷಿ ಇಲಾಖೆಯ ಸಿಬ್ಬಂದಿಯ ಸಹಕಾರ ದೊರೆತಲ್ಲಿ ಕಳಪೆ ಬೀಜ, ಗೊಬ್ಬರ ಹಾಗೂ ಕೀಟನಾಶಕದ ಜಾಲವನ್ನು ಬೇರುಸಹಿತ ಕಿತ್ತೊಗೆಯಬಹುದು.

–ಡಾ. ಎಚ್.ಕೆ.ಶಿವಕುಮಾರ, ಪ್ರಭಾರ ಅಪರ ಕೃಷಿ ನಿರ್ದೇಶಕ, ಜಾಗೃತ ದಳ

* ಕಳಪೆ ಬಿತ್ತನೆ ಬೀಜಕ್ಕಾಗಿ ಈವರೆಗೆ ಯಾವುದೇ ಕಂಪನಿ ಮುಚ್ಚಿಸಿದ, ಕಪ್ಪು ಪಟ್ಟಿಗೆ ಸೇರಿಸಿದ ಉದಾಹರಣೆಗಳಿಲ್ಲ. ಅಧಿಕಾರಿಗಳು ಶಾಮೀಲಾಗದ ಹೊರತು ಇದು ನಡೆಯಲು ಸಾಧ್ಯವೇ ಇಲ್ಲ.

–ಎಚ್‌.ವಿ. ದಿವಾಕರ್, ಐಎಕೆಕೆಎಂಎಸ್ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.