ADVERTISEMENT

ಒಳನೋಟ: ಅನುಭವ ಮಂಟಪ– ₹ 200 ಕೋಟಿ ಬಂದರೂ ಆರಂಭವಾಗದ ಕಾಮಗಾರಿ

ಚಂದ್ರಕಾಂತ ಮಸಾನಿ
Published 11 ಸೆಪ್ಟೆಂಬರ್ 2021, 20:42 IST
Last Updated 11 ಸೆಪ್ಟೆಂಬರ್ 2021, 20:42 IST
ಬಸವಕಲ್ಯಾಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಅನುಭವ ಮಂಟಪದ ನೀಲನಕ್ಷೆ
ಬಸವಕಲ್ಯಾಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಅನುಭವ ಮಂಟಪದ ನೀಲನಕ್ಷೆ   

ಬೀದರ್‌: ಬಸವಕಲ್ಯಾಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅನುಭವ ಮಂಟಪವು ರಾಜಕೀಯ ಸುಳಿಯಲ್ಲಿ ಸಿಲುಕಿದೆ. ಈ ವರ್ಷವೂ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಾರಣ ಭೂಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಚಿಸಿದ ಗೊ.ರು.ಚನ್ನಬಸಪ್ಪ ನೇತೃತ್ವದ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿ ₹650 ಕೋಟಿ ಒದಗಿಸುವಂತೆ ಕೋರಿತ್ತು. ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡುವ ಭರವಸೆ ನೀಡಿದ್ದರು.

2021ರ ಜನವರಿ 6ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನೂತನ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸಿ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಮಾಡಿಸಲಾಗುವುದು ಎಂದಿದ್ದರು. ಈ ವರೆಗೆ ₹ 200 ಕೋಟಿ ಬಿಡುಗಡೆಯಾದರೂ ಕಾಮಗಾರಿ ಆರಂಭವಾಗಿಲ್ಲ.

ADVERTISEMENT

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಅನುಭವ ಮಂಟಪ ನಿರ್ಮಾಣ ಯೋಜನೆ ಘೋಷಣೆಯಾಗಿದೆ. ಬಸವಕಲ್ಯಾಣ ಉಪ ಚುನಾವಣೆ ಪೂರ್ವದಲ್ಲಿ ಯಡಿಯೂರಪ್ಪ ಅವರು ತಕ್ಷಣ ಅನುಭವ ಮಂಟಪ ನಿರ್ಮಾಣ ಮಾಡುತ್ತೇವೆ ಎಂದು ವಾಗ್ದಾನ ಮಾಡಿದ್ದರು. ಅನುಭವ ಮಂಟಪಕ್ಕೆ ಒಟ್ಟು 100 ಎಕರೆ ಭೂಮಿ ಬೇಕು. 69 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ತಕ್ಷಣ ರೈತರಿಂದ ಜಮೀನು ಖರೀದಿಸಬೇಕು ಹಾಗೂ ಕಟ್ಟಡದ ನಿರ್ಮಾಣ ಕಾಮಗಾರಿ ಆರಂಭಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಒತ್ತಾಯಿಸುತ್ತಾರೆ.

ಪ್ರಸ್ತುತ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಬಳಿ 20 ಎಕರೆ ಹಾಗೂ ದಾನವಾಗಿ ಬಂದಿರುವ 11 ಎಕರೆ ಸೇರಿ 31 ಎಕರೆ ಭೂಮಿ ಇದೆ. ಇನ್ನುಳಿದ 69 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ.

ಜಿಲ್ಲಾಡಳಿತ ಭೂ ಮಾಲೀಕರನ್ನು ಕರೆಯಿಸಿ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನ ನಡೆಸಿದೆ. ಪ್ರತಿ ಎಕರೆಗೆ ₹ 25 ಲಕ್ಷ ಕೊಡಬೇಕು ಎಂದು ರೈತರು ಕೇಳುತ್ತಿದ್ದಾರೆ. ಯಾವುದೂ ಅಂತಿಮವಾಗಿಲ್ಲ.

ಅನುಭವ ಮಂಟಪ ಟ್ರಸ್ಟ್‌ನವರು ಒಂದು ಜಾಗ ಹೇಳಿದರೆ, ಟ್ರಸ್ಟ್‌ನಲ್ಲಿ ಇಲ್ಲದವರು ಬೇರೊಂದು ಜಾಗದಲ್ಲಿ ಅನುಭವ ಮಂಟಪ ನಿರ್ಮಾಣವಾಗಬೇಕು ಎಂದು ಒತ್ತಾಯಿಸುತ್ತಾರೆ. ಮೂಲ ಅನುಭವ ಮಂಟಪದ ಸಂಶೋಧನೆ ನಡೆಸಿ, ನಂತರ ಹೊಸ ಅನುಭವ ಮಂಟಪ ನಿರ್ಮಿಸಬೇಕು ಎನ್ನುವುದು ಇನ್ನೂ ಕೆಲವರ ಬೇಡಿಕೆಯಾಗಿದೆ.‌

ನೂತನ ಅನುಭವ ಮಂಟಪದಲ್ಲಿ..

ಶರಣರ ಚಳವಳಿಯ ನೆನಪುಗಳನ್ನು ಮರುಸೃಷ್ಟಿಸುವ ದಿಸೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದೆ. ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ 7.5 ಎಕರೆ ವಿಸ್ತೀರ್ಣದಲ್ಲಿ 6 ಅಂತಸ್ತಿನ, 770 ಕಂಬಗಳ ನೂತನ ಅನುಭವ ಮಂಟಪ ನಿರ್ಮಾಣವಾಗಲಿದೆ. 182 ಅಡಿ ಎತ್ತರ, 2,884 ಅಡಿ‌ ಸುತ್ತಳತೆಯನ್ನು ಹೊಂದಿರಲಿದೆ. ಮಂಟಪಕ್ಕೆ ಒಟ್ಟು 25 ಎಕರೆಗಳಷ್ಟು ಜಾಗ ಮೀಸಲಿಡಲು ನಿರ್ಧರಿಸಲಾಗಿದೆ.

ಕಂಬದ ಮೇಲೆ 12ನೇ ಶತಮಾನದ ಶರಣ, ಶರಣೆಯರ ಹೆಸರುಗಳ ಕೆತ್ತನೆ, ಒಂದನೆಯ ಅಂತಸ್ತು ಭಕ್ತ ಸ್ಥಳ, ಎರಡನೆಯ ಅಂತಸ್ತು ಮಹೇಶ ಸ್ಥಳ, ಮೂರನೇ ಅಂತಸ್ತು ಪ್ರಸಾದ ಸ್ಥಳ, ನಾಲ್ಕನೆಯ ಅಂತಸ್ತು ಪ್ರಾಣಲಿಂಗ ಸ್ಥಳ, ಐದನೇ ಅಂತಸ್ತು ಶರಣ ಸ್ಥಳ, ಆರನೇ ಅಂತಸ್ತು ಐಕ್ಯ ಸ್ಥಳಗಳಾಗಿ ವಿಂಗಡಣೆ ಮಾಡಲಾಗಿದೆ.

ಮಂಟಪದ ತುದಿಯಲ್ಲಿ ನೂರು ಅಡಿ ವ್ಯಾಸದ ಬೃಹತ್ ಲಿಂಗಾಕಾರದ ಗೋಪುರ ಹಾಗೂ ನೆಲ ಮಾಳಿಗೆಯಲ್ಲಿ ಸಾವಿರ ಜನರು ಪ್ರಸಾದ ಸ್ವೀಕರಿಸುವ ದಾಸೋಹ ಭವನ. ಶರಣ, ಶರಣೆಯರ ಜೀವನ ಚರಿತ್ರೆ, ಅವರ ವೇಷ ಭೂಷಣ, ಬದುಕಿನ‌ ಶೈಲಿ ತಿಳಿಸುವ ಚಿತ್ರಣ ಸೃಷ್ಟಿಸಲು ಯೋಜನೆ ರೂಪಿಸಲಾಗಿದೆ.

₹ 500 ಕೋಟಿ ಮಂಜೂರು ಮಾಡಿ, ₹ 200 ಕೋಟಿ ಬಿಡುಗಡೆ ಮಾಡಿದೆ ಎಂದು ಅಧಿಕಾರಿ ಗಳು ಹೇಳಿದ್ದಾರೆ. ಬೇಗ ಕಾಮಗಾರಿ ಆರಂಭವಾಗುವ ವಿಶ್ವಾಸವಿದೆ

– ಬಸವಲಿಂಗ ಪಟ್ಟದ್ದೇವರು, ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ

ಮೂವರು ಮುಖ್ಯಮಂತ್ರಿಗಳು ಬಂದು ಹೋದರೂ ಅಗತ್ಯವಿರುವಷ್ಟು ಭೂಮಿಯನ್ನೇ ಇನ್ನೂ ಪಡೆದಿಲ್ಲ. ಕಾಮಗಾರಿ ಆರಂಭವಾಗಲು ಹೇಗೆ ಸಾಧ್ಯ?

– ಶ್ರೀಕಾಂತ ಸ್ವಾಮಿ, ಬೀದರ್‌ ಜಿಲ್ಲಾ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ

ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 200 ಕೋಟಿ ಬಿಡುಗಡೆ ಮಾಡಿದೆ.

– ಭುವನ್‌ ಪಾಟೀಲ, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.