ADVERTISEMENT

ಒಳನೋಟ | ಕಲಬೆರಕೆ ಮಾಫಿಯಾ, ಖಾದ್ಯ ತೈಲದಲ್ಲೂ ವಿಷ

ಮಿನರಲ್‌ ಆಯಿಲ್‌, ಅಗ್ಗದ ಎಣ್ಣೆ ಮಿಶ್ರಣ

ಕೆ.ಓಂಕಾರ ಮೂರ್ತಿ
Published 15 ಮಾರ್ಚ್ 2020, 2:57 IST
Last Updated 15 ಮಾರ್ಚ್ 2020, 2:57 IST
ಕಲೆ: ಭಾವು ಪತ್ತಾರ್‌
ಕಲೆ: ಭಾವು ಪತ್ತಾರ್‌   
""

ಮೈಸೂರು: ನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಬಳಸುವ ಅಡುಗೆ ಎಣ್ಣೆಗೇ ವಿಷ ಬೆರೆಸಲಾಗುತ್ತಿದೆ. ರಕ್ಕಸ ರೂಪದಲ್ಲಿ ಬೆಳೆದಿರುವ ಕಲಬೆರಕೆ ಜಾಲವು ಅಧಿಕ ಲಾಭದಾಸೆಗೆ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ.

ದೊಡ್ಡ ಮಿಲ್‌, ಕಾರ್ಖಾನೆಗಳಲ್ಲಿ, ಸಣ್ಣಪುಟ್ಟ ಘಟಕಗಳಲ್ಲಿ ಪ್ಯಾಕ್‌ ಆಗಿ ಮಾರುಕಟ್ಟೆಗೆ ಬರುವ ಹಾಗೂ ಮಾರುಕಟ್ಟೆಯಲ್ಲಿ ಚಿಲ್ಲರೆಯಾಗಿ ಸಿಗುವ ಅಡುಗೆ ಎಣ್ಣೆಯು ಶೇ 50ರಿಂದ 80ರಷ್ಟು ಕಲಬೆರಕೆಯಿಂದ ಕೂಡಿರುವ ಬಗ್ಗೆ ವಿಜ್ಞಾನಿಗಳು, ಆಹಾರ ತಜ್ಞರು ಹಾಗೂ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಸಿರುವ ಪರೀಕ್ಷೆಯೂ ಅದನ್ನು ದೃಢಪಡಿಸಿದೆ.

ಧಾರಾಳವಾಗಿ ಹಾಗೂ ಕಡಿಮೆ ಬೆಲೆಗೆ ಸಿಗುವ ಪೆಟ್ರೋಲಿಯಂ ಉಪ ಉತ್ಪನ್ನ ‘ಮಿನರಲ್‌ ಆಯಿಲ್‌’ ಅನ್ನು ಅಡುಗೆ ಎಣ್ಣೆಗೆ ಬೆರೆಸುವ ಜಾಲ ಸಕ್ರಿಯವಾಗಿದ್ದು, ಹಲವು ರಾಜ್ಯಗಳಲ್ಲಿ ಹರಡಿಕೊಂಡಿದೆ. ದೊಡ್ಡ ದೊಡ್ಡ ಕಂಪನಿಗಳು, ವರ್ತಕರು, ರಾಜಕೀಯ ಮುಖಂಡರು, ಅಧಿಕಾರಿಗಳು ಈ ಜಾಲದೊಂದಿಗೆ ಕೈಜೋಡಿಸಿದ್ದಾರೆ.

ADVERTISEMENT

ಲೀಟರ್‌ ಮಿನರಲ್‌ ಆಯಿಲ್‌ ಬೆಲೆ ₹ 40ರಿಂದ ₹60. ಇದನ್ನು ಅಡುಗೆ ಎಣ್ಣೆಗೆ ಮಿಶ್ರಣ ಮಾಡುವ ಖದೀಮರು ಪ್ರತಿ ಲೀಟರ್‌ಗೆ ಏನಿಲ್ಲವೆಂದರೂ ₹ 50 ಲಾಭ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಖಾದ್ಯ ತೈಲದಲ್ಲೂ ಇದು ಸುಲಭವಾಗಿ ಮಿಶ್ರಣವಾಗುತ್ತದೆ. ಯಾವುದೇ ವಾಸನೆ, ರುಚಿ, ಬಣ್ಣ ಹೊಂದಿಲ್ಲದೇ ಇರುವುದು ದಂಧೆಕೋರರ ಪಾಲಿಗೆ ವರವಾಗಿದೆ. ಶೇ 10ರಷ್ಟು ಕೊಬ್ಬರಿ ಎಣ್ಣೆಗೆ ಶೇ 90ರಷ್ಟು ಮಿನರಲ್‌ ಆಯಿಲ್‌ ಬೆರೆಸಿದರೂ ಅದು ಕೊಬ್ಬರಿ ಎಣ್ಣೆಯಾಗಿಯೇ ಕಾಣಿಸುತ್ತದೆ. ಪತ್ತೆ ಹಚ್ಚುವುದೂ ಕಷ್ಟ.

‘ಮೈಸೂರು ಅಥವಾ ಇತರ ನಗರಗಳಿಗೆ ಪೂರೈಕೆಯಾದ ಮೇಲೆ ಮಿಶ್ರಣ ಮಾಡುವುದಿಲ್ಲ; ಪ್ಯಾಕ್‌ ಮಾಡುವ ದೊಡ್ಡ ಕಂಪನಿಗಳ ಎಣ್ಣೆ ಮಿಲ್‌ಗಳಲ್ಲೇ ಈ ಕಲಬೆರಕೆ ದಂಧೆ ನಡೆಯುತ್ತಿದೆ. ಇಂಥ ಪೊಟ್ಟಣಗಳಿಗೆ ಸರ್ಕಾರ ಮುದ್ರೆ ಒತ್ತಿ ಕಳಿಸುತ್ತಿದೆ. ಮಾಫಿಯಾಕ್ಕೆ ಸರ್ಕಾರವೇ ಏಜೆಂಟ್‌’ ಎಂದು ಹೇಳುತ್ತಾರೆ ಆಹಾರ ತಜ್ಞ ಡಾ. ಖಾದರ್‌.

ಬೀಜಗಳ ಬೆಲೆ, ಬೇಕಾದ ಪ್ರಮಾಣ, ಸಾಗಣೆ ಹಾಗೂ ಇತರ ವೆಚ್ಚ ಪರಿಗಣಿಸಿದರೆ ಒಂದು ಲೀಟರ್‌ ಶೇಂಗಾ ಎಣ್ಣೆ ಉತ್ಪಾದಿಸಲು ಸುಮಾರು ₹300 ಖರ್ಚಾಗುತ್ತದೆ. ಆದರೆ, ಮಾರುಕಟ್ಟೆಯಲ್ಲೆ ಕೇವಲ ₹ 130ರ ಆಸುಪಾಸಿನಲ್ಲಿ ಸಿಗುತ್ತದೆ. ಕಲಬೆರಕೆ ದಂಧೆ ನಡೆಸದೇ ಕಂಪನಿಗಳು ಇಷ್ಟು ಕಡಿಮೆ ಬೆಲೆಗೆ ಮಾರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎತ್ತುತ್ತಾರೆ.

ಕಡಿಮೆ ಬೆಲೆ, ಕೊಬ್ಬಿನ ಅಂಶ ಹೆಚ್ಚಿರುವ ತಾಳೆಎಣ್ಣೆಯನ್ನು (ಪಾಮ್ ಆಯಿಲ್‌) ಅತಿ ಹೆಚ್ಚಿನ ಪ್ರಮಾಣದಲ್ಲಿ ಮಲೇಷ್ಯಾ ಹಾಗೂ ಇಂಡೊನೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಪಾಯಕಾರಿಯಾದ ಈ ಎಣ್ಣೆಯನ್ನು ಹೆಚ್ಚಿನ ದರದ ಶೇಂಗಾ ಹಾಗೂ ಇತರೆ ಎಣ್ಣೆ ಜೊತೆ ಮಿಶ್ರಣ ಮಾಡಿ ಮಾರಲಾಗುತ್ತಿದೆ.

ಹೃದಯ ಹಾಗೂ ಇತರ ಅಂಗಾಂಗಳನ್ನು ಹಾನಿಗೊಳಿಸುತ್ತಿರುವ, ರಾಸಾಯನಿಕಗಳಿಂದ ಶುದ್ಧೀಕರಿಸಿದ (ರಿಫೈನ್ಡ್‌) ಅಡುಗೆ ಎಣ್ಣೆಯೇ ಆರೋಗ್ಯಕ್ಕೆ ಉತ್ತಮ ಎಂದು ಬಿಂಬಿಸಲಾಗುತ್ತಿದೆ. ಬಾಟಲಿ, ಪೊಟ್ಟಣಗಳ ಮೇಲೆಶೇ 100ರಷ್ಟು ಪ್ಯೂರ್‌ ಎಡಿಬಲ್‌ ಆಯಿಲ್‌ ಎಂದೇ ಲೇಬಲ್‌ ಹಾಕಿಕೊಂಡು ಗ್ರಾಹಕರ ದಾರಿ ತಪ್ಪಿಸಲಾಗುತ್ತಿದೆ. ಹೆಸರಾಂತ ಬ್ರ್ಯಾಂಡ್‌ಗಳ ಒಂದು ಲೀಟರ್‌ ಅಡುಗೆ ಎಣ್ಣೆ ಪೊಟ್ಟಣಕ್ಕೆ
₹150ರವರೆಗೆ ಇದ್ದರೆ, ಇನ್ನು ಕೆಲವುಗಳ ದರ ಲೀಟರ್‌ಗೆ ₹ 80 ಇದೆ. ಸ್ಪರ್ಧೆ ಜೋರಾದಂತೆ ಕಲಬೆರಕೆಯೂ ಹೆಚ್ಚಾಗುತ್ತಿದೆ.

ಕಲಬೆರಕೆ ಎಣ್ಣೆಯು ಸ್ಥಳೀಯವಾಗಿ ಪೂರೈಕೆ ಆಗುವುದಲ್ಲದೇ, ತಮಿಳು ನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ರಾಜ್ಯಕ್ಕೆ ಸರಬರಾಜಾಗುತ್ತಿದೆ. ತೆಂಗು, ಶೇಂಗಾ, ಸೂರ್ಯಕಾಂತಿ ಬೆಳೆಯುವ ಪ್ರದೇಶಗಳಲ್ಲಿ ಮಿಶ್ರಣ ದಂಧೆ ಹೆಚ್ಚಿದೆ. ಡ್ರಮ್‌ಗಳಲ್ಲಿ ಎಣ್ಣೆ ತಂದು ಅದನ್ನು ಸ್ಥಳೀಯವಾಗಿ ಕ್ಯಾನ್‌ ಹಾಗೂ ಟಿನ್‌ಗೆ ತುಂಬಿಸುವಾಗಲೂ ಮಿಶ್ರಣ ದಂಧೆ ನಡೆಯುತ್ತಿದೆ.

ಕಡಿಮೆ ದರದ, ಕಳಪೆ ಎಣ್ಣೆಯನ್ನು ಮಿಶ್ರಣ ಮಾಡಲಾಗುತ್ತಿದೆ. ಹಂದಿ ಮತ್ತು ನಾಯಿ ಕೊಬ್ಬಿನಿಂದ ತೆಗೆದ ಎಣ್ಣೆಯನ್ನು ಸೇರಿಸಿ ಮಾರಾಟ ಮಾಡುತ್ತಿರುವ ದಂಧೆಯೂ ನಡೆಯುತ್ತಿದೆ. ಆಂಧ್ರದಲ್ಲಿ ಈ ದಂಧೆಯಲ್ಲಿ ತೊಡಗಿದ್ದವರನ್ನು ಇತ್ತೀಚೆಗೆ ಬಂಧಿಸಲಾಗಿದೆ.

‘ಚಿಲ್ಲರೆಯಾಗಿ ಅಡುಗೆ ಎಣ್ಣೆ ಮಾರಾಟ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ, ನಿಷೇಧಿಸಲಾಗಿದೆ. ಅತ್ಯು ತ್ತಮ ಗುಣಮಟ್ಟದ ಎಣ್ಣೆಯಾಗಿದ್ದರೂ ಅದನ್ನು ಕಲಬೆರಕೆ ಎಂದೇ ಪರಿಗಣಿಸಲಾಗುತ್ತದೆ’ ಎನ್ನುತ್ತಾರೆ ಪ್ರಾಧಿಕಾರದ ವಿಜ್ಞಾನಿ ಶೇಷಗಿರಿ.

ದೊಡ್ಡ ದೊಡ್ಡ ನಗರಗಳಿಂದ ಹಿಡಿದು ಸಣ್ಣ ಹಳ್ಳಿಗಳವರೆಗೆ ಈ ರೀತಿಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಅಧಿಕಾರಿಗಳು ಮಾತ್ರ ಕಣ್ಮುಚ್ಚಿಕೊಂಡು ಕುಳಿತಿದ್ದಾರೆ.

ಹೃದಯಾಘಾತ, ಕ್ಯಾನ್ಸರ್‌!
ಈಚೆಗೆ ಕಡಿಮೆ ವಯಸ್ಸಿನವರಲ್ಲೇ ಹೃದಯಾಘಾತ,ಕ್ಯಾನ್ಸರ್‌, ಮೂತ್ರಪಿಂಡ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಆಹಾರ ಪದಾರ್ಥದ ಕಲಬೆರಕೆಯೂ ಪ್ರಮುಖ ಕಾರಣ ಎನ್ನುತ್ತಾರೆ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌.

‘ಅಡುಗೆ ಎಣ್ಣೆಗೆ ಮಿಶ್ರಣ ಮಾಡುವ ರಾಸಾಯನಿಕ ಅಂಶಗಳು ದೇಹಕ್ಕೆ ಅತ್ಯಂತ ವಿಷಕಾರಿ. ಅಡುಗೆ ಎಣ್ಣೆಯಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಅಥವಾ ಪ್ರಾಣಿಗಳ ಕೊಬ್ಬು ಇರಬಾರದು. ಇದ್ದರೆ ಹೃದಯಾಘಾತ ಸಂಭವ ಹೆಚ್ಚು’ ಎಂದು ಅವರು ಹೇಳುತ್ತಾರೆ.

ಎಲ್ಲಿಂದ ಬರುತ್ತಿದೆ ಈ ಎಣ್ಣೆ?
ಪ್ರಪಂಚದಲ್ಲಿ ಉತ್ಪಾದನೆ ಆಗುತ್ತಿರುವ ಆಲೀವ್‌ ಬೀಜಗಳಿಂದ ಬೆಂಗಳೂರು, ಮುಂಬೈ, ನ್ಯೂಯಾರ್ಕ್‌ನಂಥ ನಗರಗಳಿಗೆ ಎಣ್ಣೆ ಪೂರೈಸಲು ಸಾಧ್ಯವಾಗುವುದಿಲ್ಲ. ಹಾಗೆಯೇ, ಉಳಿದ ಎಣ್ಣೆ ಬೀಜಗಳ ಸ್ಥಿತಿಯೂ ಇದೆ. ಹೀಗಾದರೆ ಜಗತ್ತಿಗೆ ಅಗತ್ಯವಿರುವಷ್ಟು ಪ್ರಮಾಣದ ಎಣ್ಣೆಯನ್ನು ಕಂಪನಿಗಳು ಎಲ್ಲಿಂದ ಪೂರೈಸುತ್ತಿವೆ?

ಇಂಥ ಸಮಸ್ಯೆಗಳ ನಡುವೆಯೂ ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ಅಡುಗೆ ಎಣ್ಣೆ ಸಿಗಲು ಏಕೈಕ ಕಾರಣ ಮಿನರಲ್‌ ಆಯಿಲ್‌ ಮಿಶ್ರಣ ದಂಧೆ ಎನ್ನುತ್ತಾರೆ ಆಹಾರ ತಜ್ಞ ಡಾ. ಖಾದರ್.

ಅಡುಗೆ ಎಣ್ಣೆ ಬಳಕೆ ಎಷ್ಟು?
ದೇಶದಲ್ಲಿ ವಾರ್ಷಿಕವಾಗಿ 2.35 ಕೋಟಿ ಟನ್‌ ಅಡುಗೆ ಎಣ್ಣೆ ಬಳಸಲಾಗುತ್ತಿದೆ. ಕಳೆದ ವರ್ಷ ₹ 70 ಸಾವಿರ ಕೋಟಿ ಮೌಲ್ಯದ 1.49 ಕೋಟಿ ಟನ್‌ ಅಡುಗೆ ಎಣ್ಣೆಯನ್ನು ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಅದರಲ್ಲಿ ತಾಳೆಎಣ್ಣೆ, ಸೂರ್ಯಕಾಂತಿ ಎಣ್ಣೆ, ಸೋಯಾಎಣ್ಣೆ ಅಧಿಕ. ದೇಶದ ಬೆಳೆಗಳಿಂದ ವಾರ್ಷಿಕ 73.10 ಲಕ್ಷ ಟನ್‌ ಅಡುಗೆ ಎಣ್ಣೆ ಉತ್ಪಾದಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.