ADVERTISEMENT

ಒಳನೋಟ: ಗಾರ್ಮೆಂಟ್ಸ್‌ ಉದ್ಯಮಕ್ಕೆ ಕೋವಿಡ್‌ ಬರೆ

​ಪ್ರಜಾವಾಣಿ ವಾರ್ತೆ
Published 29 ಮೇ 2021, 21:59 IST
Last Updated 29 ಮೇ 2021, 21:59 IST
ಬಳ್ಳಾರಿಯಲ್ಲಿರುವ ಜೀನ್ಸ್‌ ಪ್ಯಾಂಟ್‌ ಘಟಕ
ಬಳ್ಳಾರಿಯಲ್ಲಿರುವ ಜೀನ್ಸ್‌ ಪ್ಯಾಂಟ್‌ ಘಟಕ   

ಮೈಸೂರು: ಲಾಕ್‌ಡೌನ್‌ನಿಂದಾಗಿ ಗಾರ್ಮೆಂಟ್ಸ್‌ ಉದ್ಯಮದ ಮೇಲೆ ಬಿದ್ದಿರುವ ಹೊಡೆತವು ಕಾರ್ಮಿಕರನ್ನೂ ಉದ್ಯಮಿಗಳನ್ನೂ ಕಂಗಾಲು ಮಾಡಿದೆ.

ಎಲ್ಲ ಸಂಕಷ್ಟ ಕಳೆದು ಮತ್ತೆ ಕೆಲಸ ಸಿಕ್ಕೀತೇ ಎಂಬುದು ಕಾರ್ಮಿಕರ ಪ್ರಶ್ನೆಯಾದರೆ, ಆಗಿರುವ ನಷ್ಟ ಸರಿದೂಗಿಸುವ, ನುರಿತ ಕಾರ್ಮಿಕರನ್ನು ಮತ್ತೆ ವಾಪಸ್‌ ಕರೆತರುವ, ಅವರು ಬಾರದಿದ್ದರೆ ಹೊಸ ಕಾರ್ಮಿಕರನ್ನು ಸಜ್ಜುಗೊಳಿಸುವ ಸವಾಲು ಗಾರ್ಮೆಂಟ್ಸ್‌ ಉದ್ಯಮಿಗಳದ್ದು.

‘ಮೈಸೂರು ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಗಾರ್ಮೆಂಟ್ಸ್‌ಗಳಿವೆ. ಇವು 27 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ. ಪ್ರತಿಷ್ಠಿತ ಕಂಪನಿಗಳು ಇಲ್ಲಿವೆ. ಆದರೆ, ಕೋವಿಡ್‌ನ ಎರಡನೇ ಅಲೆಯ ತೀವ್ರತೆ ಮತ್ತು ಲಾಕ್‌ಡೌನ್‌ ಹೊಡೆತಕ್ಕೆ ಉದ್ಯಮವೇ ತತ್ತರಿಸಿದೆ’ ಎನ್ನುತ್ತಾರೆ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಡಿ.ಕೆ. ಲಿಂಗರಾಜು.

ADVERTISEMENT

ಕಾರ್ಯನಿರ್ವಹಿಸಲು ಅವಕಾಶವಿದ್ದರೂ, ಉದ್ಯೋಗಿಗಳಲ್ಲೇ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗಿದ್ದರಿಂದ ‘ರೀಡ್‌ ಅಂಡ್‌ ಟೇಲರ್‌’ ಬಾಗಿಲು ಮುಚ್ಚಿದೆ. ಪ್ರಸ್ತುತ ಶೇ 30ರಿಂದ ಶೇ 40ರಷ್ಟು ಗಾರ್ಮೆಂಟ್ಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ವೈದ್ಯಕೀಯ ಪರಿಕರಗಳಾದ ಪಿಪಿಇ ಕಿಟ್‌, ಮಾಸ್ಕ್‌, ಗ್ಲೌಸ್‌, ಡೈಪರ್‌ ತಯಾರಿಸಲಷ್ಟೇ ಸೀಮಿತವಾಗಿವೆ ಎಂದರು.

‘ನಮ್ಮ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದೇವೆ. ಕಾರ್ಮಿಕರಿಗೆ ರಜೆ ಕೊಡಲಾಗಿದೆ. ವರ್ಷದಿಂದಲೂ ಶಾಲೆ–ಕಾಲೇಜುಗಳು ನಡೆಯುತ್ತಿಲ್ಲವಾದ್ದರಿಂದ ಸಮವಸ್ತ್ರ, ಕ್ರೀಡಾ ದಿರಿಸುಗಳ ತಯಾರಿಕೆ ನಿಂತಿದ್ದು, ನಮ್ಮ ವ್ಯಾಪಾರದ ಮೇಲೆ ಕಾರ್ಮೋಡ ಕವಿದಿದೆ’ ಎನ್ನುತ್ತಾರೆ ಆಲನಹಳ್ಳಿಯ ವಿಜಯಾ ಸ್ಪೋರ್ಟ್ಸ್‌ ವೇರ್‌ನ ಮಾಲೀಕ ಗಣೇಶ್‌.

ಹಾಸನದಲ್ಲಿ ಗಾರ್ಮೆಂಟ್ಸ್‌ ಉದ್ಯಮವನ್ನೇ ನೆಚ್ಚಿಕೊಂಡು ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಇದೀಗ ಕೆಲಸವೂ ಇಲ್ಲದೆ, ಸಂಬಳವೂ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಅಸ್ಸಾಂ, ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಳದ ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದರು. ಹಿಂದಿನ ವರ್ಷದ ಲಾಕ್‌ಡೌನ್‌ ಅವಧಿಯಲ್ಲಿ ಊರಿಗೆ ಹೋಗಿದ್ದವರಲ್ಲಿ ಹಲವರು ಹಿಂತಿರುಗಿಲ್ಲ.

‘ಲಾಕ್‌ಡೌನ್‌ನಿಂದಾಗಿ ಪೂರ್ಣ ಪ್ರಮಾಣದಲ್ಲಿ ಉದ್ಯಮ ನಡೆಯುತ್ತಿಲ್ಲ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಸರ್ಕಾರ ಯಾವುದೇ ಪ್ಯಾಕೇಜ್‌ ಘೋಷಣೆ ಮಾಡಿದರೂ, ಪರಿಸ್ಥಿತಿ ಸರಿದಾರಿಗೆ ಬರುವುದು ಕಷ್ಟ’ ಎನ್ನುತ್ತಾರೆ ಹಾಸನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿ ಕಾರ್ಯದರ್ಶಿ ದಲಿಚಂದ್‌ ಜೈನ್‌.

ಜೀನ್ಸ್‌ ಗಾರ್ಮೆಂಟ್ಸ್‌:₹ 10 ಕೋಟಿ ನಷ್ಟ
ಬಳ್ಳಾರಿ: ‘ಜಿಲ್ಲೆಯ ಜೀನ್ಸ್‌ ಗಾರ್ಮೆಂಟ್ಸ್‌ ಉದ್ಯಮ ತಿಂಗಳ ಅವಧಿಯಲ್ಲೇ ₹ 10 ಕೋಟಿಯಿಂದ ₹ 15 ಕೋಟಿವರೆಗೆ ನಷ್ಟ ಅನುಭವಿಸಿದೆ’ ಎನ್ನುತ್ತಾರೆ ಉದ್ಯಮಿ ಮಲ್ಲಿಕಾರ್ಜುನ.

‘ನಗರದಲ್ಲಿ ಜೀನ್ಸ್‌ ಗಾರ್ಮೆಂಟ್ಸ್‌ ಉದ್ಯಮಿಗಳ ಸಂಖ್ಯೆ 500ಕ್ಕೂ ಹೆಚ್ಚು ಇದೆ. ಈಗ ಇಡೀ ಉದ್ಯಮ ನೆಲಕಚ್ಚಿದೆ. ಮೊದಲ ಅಲೆಯ ಲಾಕ್‌ಡೌನ್‌ ಸಂದರ್ಭದಲ್ಲಿ ನಮ್ಮ ಬಳಿ ಇದ್ದ ಕುಶಲ ಕೆಲಸಗಾರರು ಬೇರೆ ಕಡೆಗೆ ಸೇರಿಕೊಂಡಿದ್ದರು. ಹೊಸಬರಿಗೆ ಕೆಲಸ ಕಲಿಸಿ, ಎಲ್ಲವೂ ಸರಿಹೋಯಿತೆನ್ನುವ ಹೊತ್ತಿಗೆ ಎದುರಾದ ಎರಡನೇ ಅಲೆಯ ಲಾಕ್‌ಡೌನ್‌ ಮತ್ತೆ ಎಲ್ಲವನ್ನೂ ಹಾಳು ಮಾಡಿದೆ. ಮತ್ತೆ ಕೆಲಸಗಾರರು ಸಿಗುವುದಿಲ್ಲ’ ಎಂದು ಅಲವತ್ತುಕೊಂಡರು.

ಬಳ್ಳಾರಿ ನಗರವೂ ಸೇರಿದಂತೆ ಸುತ್ತಮುತ್ತಲ ತಾಲ್ಲೂಕಿನ 10 ಸಾವಿರ ಕುಟುಂಬಗಳು ಈ ಉದ್ಯಮವನ್ನೇ ನೆಚ್ಚಿಕೊಂಡಿದ್ದು, ಹೆಣ್ಣುಮಕ್ಕಳೇ ಹೆಚ್ಚು ಅವಲಂಬಿತರು. ಅವರು ಬೇರೆ ಕೆಲಸಕ್ಕೂ ಹೋಗಲಾರದ ಪರಿಸ್ಥಿತಿಯಲ್ಲಿದ್ದಾರೆ.

‘ಮನೆಯಲ್ಲೇ ಹೊಲಿಗೆ ಯಂತ್ರ ಇಟ್ಟುಕೊಂಡು ಪ್ಯಾಂಟ್‌ ಹೊಲಿದುಕೊಡುತ್ತಿದ್ದೆವು. ಈಗ ಕೆಲಸವೇ ಇಲ್ಲವಾಗಿದೆ. ಸಾಲ ಮಾಡುವುದು ಅನಿವಾರ್ಯ. ಆದರೆ ಎಲ್ಲಿಯೂ ಸಾಲ ದೊರಕುತ್ತಿಲ್ಲ’ ಎಂದು ಗುತ್ತಿಗೆ ನೌಕರ ನಾಗರಾಜು ತಿಳಿಸಿದರು.

ಉಸಿರಾದ ಪಿಪಿಇ ಕಿಟ್‌
ಚಿಕ್ಕಬಳ್ಳಾಪುರದಲ್ಲಿ ಶೆಲ್ ಆಪಾರೆಲ್ಸ್ ಸಂಸ್ಥೆ2,500 ಜನರಿಗೆ ಉದ್ಯೋಗ ನೀಡಿತ್ತು. ಇದೀಗ ಇಲ್ಲಿ ಪಿಪಿಇ ಕಿಟ್‌ ತಯಾರಿಕೆಯಲ್ಲಿ ತಲ್ಲೀನರಾಗಿರುವವರು ಕೇವಲ 100 ಮಂದಿ. ‘ಬಹಳಷ್ಟು ಕಾರ್ಮಿಕರು ಕರೆ ಮಾಡಿ ಕೆಲಸಕ್ಕೆ ಯಾವಾಗ ಬರಬೇಕು ಎಂದು ಕೇಳುತ್ತಿದ್ದಾರೆ. ನಮಗೆ ಯಾವುದೇ ಕೆಲಸ ದೊರೆತಿಲ್ಲ. ಹಾಗಾಗಿಕಾರ್ಮಿಕರಿಗೆ ಬನ್ನಿ ಎಂದು ಹೇಳಲು ಆಗದ ಸ್ಥಿತಿ ನಮ್ಮದಾಗಿದೆ’ ಎನ್ನುತ್ತಾರೆ ಗಾರ್ಮೆಂಟ್ಸ್‌ ಕಂಪನಿ ಅಧಿಕಾರಿಗಳು.

***

ಗಾರ್ಮೆಂಟ್ಸ್‌ ಬಾಗಿಲು ಮುಚ್ಚಿದ್ದರಿಂದ ದಿಕ್ಕೇ ತೋಚದಂತಾಗಿದೆ. ಒಂದೊಂದು ದಿನ ಕಳೆಯುವುದೂ ಕಷ್ಟವಾಗುತ್ತಿದೆ
-ಕಲ್ಪನಾ, ಕಾರ್ಮಿಕರು

ಮಾಹಿತಿ: ಡಿ.ಬಿ. ನಾಗರಾಜ್, ಕೆ.ಎಸ್. ಸುನಿಲ್, ಕೆ. ನರಸಿಂಹಮೂರ್ತಿ, ಡಿ.ಎಂ. ಕುರ್ಕೆ ಪ್ರಶಾಂತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.