ADVERTISEMENT

ಒಳನೋಟ: ಕ್ವಾರಂಟೈನ್ ಕೇಂದ್ರ ತೆರೆಯಲು ಹಿಂದೇಟು

ಮೂಲಸೌಕರ್ಯ ಕಲ್ಪಿಸಬೇಕಾದ ಸವಾಲಿಗೆ ಬೆನ್ನು ತೋರಿಸಿದ ಜಿಲ್ಲಾಡಳಿತಗಳು; ವೈದ್ಯರ ಕೊರತೆಯೂ ಕಾರಣ

​ಪ್ರಜಾವಾಣಿ ವಾರ್ತೆ
Published 22 ಮೇ 2021, 19:31 IST
Last Updated 22 ಮೇ 2021, 19:31 IST
ಕಲಬುರ್ಗಿ ಜಿಲ್ಲೆ ಚಿತ್ತಾಪುರ ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲಾಗಿದೆ
ಕಲಬುರ್ಗಿ ಜಿಲ್ಲೆ ಚಿತ್ತಾಪುರ ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲಾಗಿದೆ   

ಕಲಬುರ್ಗಿ: ಸೌಮ್ಯ ಸ್ವರೂಪದ ಹಾಗೂ ಲಕ್ಷಣರಹಿತ ಕೊರೊನಾ ಸೋಂಕಿತರ ಆರೈಕೆಗಾಗಿಸೋಂಕಿತರ ಊರಿನ ಸಮೀಪದಲ್ಲೇ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲು ಕಲ್ಯಾಣ ಕರ್ನಾಟಕದ ಬಹುತೇಕಜಿಲ್ಲಾಡಳಿತಗಳು ಆಸಕ್ತಿ ತೋರಿಸುತ್ತಿಲ್ಲ.

ಲಕ್ಷಣರಹಿತ ಸೋಂಕಿತರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಿ ಆರೈಕೆ ಮಾಡಲು ವೈದ್ಯರು, ನರ್ಸ್‌ಗಳು, ಔಷಧಿ, ಊಟ, ವಾಸ್ತವ್ಯದ ಸೌಲಭ್ಯ ಕಲ್ಪಿಸುವುದು ದೊಡ್ಡ ಸವಾಲು ಎಂಬುದನ್ನು ಅರಿತು ತಮ್ಮ ಕರ್ತವ್ಯದಿಂದ ವಿಮುಖವಾಗಿವೆ. ಈ ವಾಸ್ತವವನ್ನು ಒಪ್ಪಿಕೊಳ್ಳುವ ಬದಲು ‘ಸೋಂಕಿತರು ಕ್ವಾರಂಟೈನ್ ಕೇಂದ್ರಗಳಿಗೆ ಬರುತ್ತಿಲ್ಲ’ ಎಂಬ ನೆಪ ಹೇಳುತ್ತಿವೆ. ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯೂ ತಕ್ಕಮಟ್ಟಿಗೆ ಕ್ವಾರಂಟೈನ್ ಕೇಂದ್ರ ಆರಂಭಿಸದಿರಲು ಕಾರಣವಾಗಿದೆ.

ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಚಂದಾಪುರ, ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲು ವಸತಿ ನಿಲಯಗಳನ್ನು ಗುರುತಿಸಲಾಗಿದೆ. ಆದರೆ, ಇನ್ನೂ ಆರಂಭಿಸಿಲ್ಲ. ಅಫಜಲಪುರ ಹೊರವಲಯದಲ್ಲಿಯೂ ಕೇಂದ್ರ ಆರಂಭವಾಗಿಲ್ಲ. ಚಿಕಿತ್ಸೆ ನೀಡಬೇಕಿದ್ದ ವೈದ್ಯರಿಗೇ ಕೋವಿಡ್ ಆಗಿರುವುದರಿಂದ ಕೇಂದ್ರಕ್ಕೆ ಸೋಂಕಿತರನ್ನು ಕರೆತರಲು ಆಗಿಲ್ಲ ಎಂದು ವೈದ್ಯಾಧಿಕಾರಿಗಳು ಕಾರಣ ನೀಡುತ್ತಾರೆ.

ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಮೂರು ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಹೋಂ ಐಸೊಲೇಷನ್ ಆಗಲು ಮನೆಗಳಲ್ಲಿ ಪ್ರತ್ಯೇಕ ಕೊಠಡಿ ಇಲ್ಲದ ಸೋಂಕಿತರನ್ನು ವಿವಿಧ ವಸತಿ ನಿಲಯಗಳಲ್ಲಿ ಇರಿಸಲಾಗುತ್ತದೆ.

ಕೊಪ್ಪಳ ಜಿಲ್ಲೆಯಲ್ಲಿ ಹೋಂ ಐಸೋಲೇಷನ್‌ ರದ್ದುಗೊಳಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ವಸತಿ ನಿಲಯಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ತೀರ್ಮಾನಿಸಲಾಗಿದೆ. ಬಹುತೇಕ ವಸತಿ ನಿಲಯಗಳು ಜನವಸತಿಯಿಂದ ದೂರ ಇರುವುದು, ಸಾರಿಗೆ, ಸಂಚಾರ ಸಮಸ್ಯೆ, ಸಕಾಲಕ್ಕೆ ದೊರೆಯದ ಊಟ, ಉಪಾಹಾರ, ವೈದ್ಯರ ಕೊರತೆಯಿಂದ ಕೇಂದ್ರಕ್ಕೆ ತೆರಳಲು ಸೋಂಕಿತರು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ, ನಗರ, ಪಟ್ಟಣ ಸೇರಿ ಒಟ್ಟು 159 ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸೋಂಕಿತರು ದಾಖಲಾಗಿಲ್ಲ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಕೋವಿಡ್ ರೋಗಿಗಳಿಗಾಗಿ 100 ಹಾಸಿಗೆ ಸೌಲಭ್ಯವಿರುವ ಆಸ್ಪತ್ರೆಯನ್ನು ತೆರೆಯಲಾಗಿದೆ. ಸಿರವಾರ ತಾಲ್ಲೂಕಿನ ನವಲಕಲ್ಲು ಗ್ರಾಮದ ಹೊರವಲಯದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಸದ್ಯಕ್ಕೆ 30 ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ಇದುವರೆಗೆ ಸೋಂಕಿತರು ದಾಖಲಾಗಿಲ್ಲ.

ಗ್ರಾಮೀಣ ಪ್ರದೇಶದಲ್ಲೂ ಕೋವಿಡ್‌ ಆರೈಕೆ ಕೇಂದ್ರ

ಹಳ್ಳಿಗಳಲ್ಲಿನ ಸೋಂಕಿತರಲ್ಲಿ ಬಹುತೇಕರಿಗೆ ತಮ್ಮ ಮನೆಗಳಲ್ಲೇ ಹೋಂ ಐಸೋಲೇಷನ್‌ ಆಗಲು ಸೂಕ್ತ ಸೌಲಭ್ಯಗಳಿಲ್ಲ. ಇಂತಹವರು ಮನೆಯಲ್ಲೇ ಉಳಿಯುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂಬುದನ್ನು ಮನಗಂಡ ಆಯಾ ಜಿಲ್ಲಾಡಳಿತಗಳು ಇದೀಗ ಗ್ರಾಮೀಣ ಪ್ರದೇಶದಲ್ಲೂ ಕೋವಿಡ್‌ ಆರೈಕೆ ಕೇಂದ್ರಗಳನ್ನು ಆರಂಭಿಸಿವೆ.

ಮೈಸೂರಿನಲ್ಲಿ ಪ್ರಸ್ತುತ 14 ಕೋವಿಡ್‌ ಆರೈಕೆ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದರೆ, ಹಾಸನದಲ್ಲಿ 27, ಚಾಮರಾಜನಗರದಲ್ಲಿ 16, ಮಂಡ್ಯದಲ್ಲಿ 10, ಕೊಡಗು ಜಿಲ್ಲೆಯಲ್ಲಿ 6 ಕೋವಿಡ್‌ ಆರೈಕೆ ಕೇಂದ್ರಗಳು ಸೋಂಕಿತರ ಆರೈಕೆ ಮಾಡುತ್ತಿವೆ.

ಸಂಕಷ್ಟದ ಈ ಹೊತ್ತಿನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಹಲವರ ಪಾಲಿಗೆ ಇವು ಉಚಿತ ಸೇವೆ ನೀಡುತ್ತಿದ್ದು, ‘ಸಂಜೀವಿನಿ’ಯಂತಾಗಿವೆ. ಸರ್ಕಾರಿ ಕೋವಿಡ್‌ ಆರೈಕೆ ಕೇಂದ್ರ ಹಾಗೂ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕೊಂಚ ತಗ್ಗಿಸುವಲ್ಲಿಯೂ ಸಹಕಾರಿಯಾಗಿವೆ.

ಕೆ.ಆರ್‌.ನಗರ ಶಾಸಕ ಸಾ.ರಾ.ಮಹೇಶ್‌, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಂಕಿತರ ಆರೈಕೆಗಾಗಿ ಸಾ.ರಾ.ಸ್ನೇಹ ಬಳಗ ಹಾಗೂ ತಾಲ್ಲೂಕು ಆಡಳಿತದ ಸಹಕಾರದಿಂದ ಕಗ್ಗೆರೆ ಬಳಿ 200 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರವೊಂದನ್ನು ಆರಂಭಿಸಿದ್ದಾರೆ.

ವೈದ್ಯರಿಗೆ ಸರ್ಕಾರ ಪಾವತಿಸುವ ₹ 60 ಸಾವಿರ ಸಂಬಳದ ಜೊತೆಗೆ, ತಮ್ಮ ಬಳಗದಿಂದಲೇ ಪ್ರತಿ ವೈದ್ಯರಿಗೂ ಮಾಸಿಕ ₹ 40 ಸಾವಿರವನ್ನು ಗೌರವಧನವಾಗಿ ಕೊಡುತ್ತಿದ್ದಾರೆ. ಆಮ್ಲಜನಕದ ಕಾನ್ಸನ್‌ಟ್ರೇಟರ್‌ ಸೌಲಭ್ಯವೂ ಇಲ್ಲಿದೆ.

ಹಾಸನದ ಹೊಸಲೈನ್‌ ರಸ್ತೆಯಲ್ಲಿರುವ ಈದ್ಗಾ ಮೈದಾನದ ಬಳಿಯ ಚೈಲ್ಡ್‌ ಹೋಂ ಕಟ್ಟಡದಲ್ಲಿ ಕೆಲವೊಂದು ಮುಸ್ಲಿಂ ಸಂಘಟನೆಗಳು ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ 100 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರ ಆರಂಭಿಸಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿವೆ. ದಾನಿಗಳು ಸಹ ಈ ಕೇಂದ್ರಕ್ಕೆ ನೆರವಾಗಿದ್ದಾರೆ.ಆಮ್ಲಜನಕ ಸಹಿತ ಹಾಸಿಗೆಗಳಿವೆ. 50 ಯುವಕರು–ಹಿರಿಯರನ್ನೊಳಗೊಂಡ ತಂಡ, ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದೆ.

ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ವಿವೇಕಾನಂದ ಫೌಂಡೇಷನ್‌ನ ಲೋಪಾಮುದ್ರ ಕರುಣಾ ಟ್ರಸ್ಟ್, ಆರೈಕೆ ಕೇಂದ್ರವೊಂದನ್ನು ಆರಂಭಿಸಿದೆ. ಜಿಲ್ಲಾಡಳಿತ ಸಾಥ್‌ ನೀಡಿದೆ. 30 ಹಾಸಿಗೆ ಸಾಮರ್ಥ್ಯದ ಈ ಕೇಂದ್ರದಲ್ಲಿ ಆಮ್ಲಜನಕ ಸಹಿತ ಹಾಸಿಗೆಯ ಸೌಲಭ್ಯವೂ ಇದೆ. ಟ್ರಸ್ಟ್‌ನಡಿ ಕಾರ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಯನ್ನೇ ಕೋವಿಡ್‌ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಿ, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರು ತಾಲ್ಲೂಕಿನ 7 ಗ್ರಾಮ ಪಂಚಾಯಿತಿ ವ್ಯಾಪ್ತಿಯ 56 ಗ್ರಾಮಗಳನ್ನು ಕೋವಿಡ್‌ ಮುಕ್ತ ಗ್ರಾಮಗಳನ್ನಾಗಿಸಲು ಗ್ರಾಮ್‌ (ಗ್ರಾಸ್‌ರೂಟ್ಸ್‌ ರಿಸರ್ಚ್‌ ಅಂಡ್‌ ಅಡ್ವೋಕಸಿ ಮೂವ್‌ಮೆಂಟ್‌) ಸ್ವಯಂ ಸೇವಾ ಸಂಸ್ಥೆ, ಆಂದೋಲನವೊಂದನ್ನು ರೂಪಿಸಿದೆ. ಇದಕ್ಕೆ ಗುರುವಾರ (ಮೇ 20) ಚಾಲನೆ ನೀಡಿದೆ.

ಆಂಬುಲೆನ್ಸ್ ಆದ ಆಟೊ...

ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ಧುಪತಮಹಾಗಾಂವ್ ಗ್ರಾಮ ಪಂಚಾಯಿತಿಯವರು 18 ಕಿ.ಮೀ. ದೂರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೋಗಿಗಳನ್ನು ಕರೆದೊಯ್ಯಲು ಆಟೊಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಆಂಬುಲೆನ್ಸ್‌ ಕೊರತೆಯೇ ಇದಕ್ಕೆ ಕಾರಣ.

ಎರಡು ಆಟೊಗಳಲ್ಲಿ ಒಂದು ಕೋವಿಡ್‌ ರೋಗಿಗಳಿಗೆ ಬಳಸಿದರೆ, ಮತ್ತೊಂದನ್ನು ಇತರ ರೋಗಿಗಳಿಗೆ ಬಳಸಲಾಗುತ್ತಿದೆ.

ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮ ಪಂಚಾಯಿತಿ ಒಂದು ಆಂಬುಲೆನ್ಸ್‌ ಪಡೆದು ಜನರ ಸೇವೆಗೆ ಮೀಸಲಿಟ್ಟಿದೆ.

ದೂರು, ಸೇವೆ ಸ್ಥಗಿತ

ಮೈಸೂರು: ಕೊಡಗು ಜಿಲ್ಲೆಯ ಆರೈಕೆ ಕೇಂದ್ರಗಳಲ್ಲಿ ಬಿಸಿಯೂಟ, ಬಿಸಿ ನೀರು ಕೊಡುತ್ತಿಲ್ಲ. ಚಾಮರಾಜನಗರ ಜಿಲ್ಲೆಯ ಶಿವಪುರ, ಸಂತೆಮರಹಳ್ಳಿಯಲ್ಲಿ ಸಮರ್ಪಕವಾಗಿ ಊಟ ಕೊಡುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.

ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆಗಳು ನಿರ್ವಹಿಸುತ್ತಿದ್ದ 16 ಕೋವಿಡ್‌ ಆರೈಕೆ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕೆ ಡಿಎಚ್‌ಒ ಡಾ.ಟಿ.ಅಮರನಾಥ್‌ ಈ ಸೇವೆ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.