ADVERTISEMENT

ಒಳನೋಟ: ನೆಡುತೋಪು, ಕ್ವಾರಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಮರೀಚಿಕೆ

ಟೆಂಟ್‌ ಶಾಲೆಗಳೇ ಕಣ್ಮರೆ

ಚಂದ್ರಹಾಸ ಹಿರೇಮಳಲಿ
Published 10 ಜುಲೈ 2021, 21:32 IST
Last Updated 10 ಜುಲೈ 2021, 21:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ:ಮೈಸೂರು ಕಾಗದ ಕಾರ್ಖಾನೆಗೆ (ಎಂಪಿಎಂ) ಕಚ್ಚಾ ಸಾಮಗ್ರಿ ಪೂರೈಸಲು ಮೀಸಲಿಟ್ಟ ಎಪಿಎಂ ನೆಡುತೋಪುಗಳು ಹಾಗೂ ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುತ್ತಿರುವ ಹೊರ ಜಿಲ್ಲೆ, ಹೊರ ರಾಜ್ಯಗಳ ಕಾರ್ಮಿಕರ ಮಕ್ಕಳಿಗೆ ಹಲವು ವರ್ಷಗಳಿಂದ ಅವರಿರುವ ಜಾಗದಲ್ಲೇ ಟೆಂಟ್‌ ಶಾಲೆಗಳನ್ನು ತೆರೆದು ಪಾಠ ಮಾಡಲಾಗುತ್ತಿತ್ತು. ಇಂತಹ ಶಾಲೆಗಳು, ಕೋವಿಡ್‌ ಸಂಕಷ್ಟ ಆರಂಭವಾದ ನಂತರ ಕಣ್ಮರೆಯಾಗಿವೆ.

ಶಾಲೆಗಳು ಆರಂಭವಾಗಲಿಲ್ಲ. ಆನ್‌ಲೈನ್ ಪಾಠಕ್ಕೆ ಅಗತ್ಯವಾದ ಮೊಬೈಲ್‌ ಫೋನ್, ಟ್ಯಾಬ್‌ಗಳು ಕಾರ್ಮಿಕ ಕುಟುಂಬಗಳ ಬಳಿ ಇಲ್ಲ. ಒಬ್ಬಿಬ್ಬರ ಬಳಿ ಇದ್ದರೂ ಅವರು ಕೆಲಸ ಮಾಡುವ ಸ್ಥಳಗಳಲ್ಲಿ ನೆಟ್‌ವರ್ಕ್‌ ಸಿಗುವುದಿಲ್ಲ.22,500 ಹೆಕ್ಟೇರ್ ವ್ಯಾಪಿಸಿರುವ ನೆಡುತೋಪುಗಳಲ್ಲಿ ಮರ ಕಡಿಯಲು, ಹೊಸದಾಗಿ ಸಸಿ ನೆಡುವ ಕೆಲಸಗಳಲ್ಲಿ ಹಲವು ಕುಟುಂಬಗಳು ತೊಡಗಿಸಿಕೊಂಡಿವೆ. 100ಕ್ಕೂ ಹೆಚ್ಚು ಕಲ್ಲುಕ್ವಾರಿಗಳಲ್ಲಿ ಬಿಹಾರ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶಮತ್ತಿತರ ರಾಜ್ಯಗಳ ಕಾರ್ಮಿಕರು ಇದ್ದಾರೆ. ಅಂತಹ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಹುತೇಕ ಮಕ್ಕಳು ಅಪ್ಪ, ಅಮ್ಮನ ಕೆಲಸಕ್ಕೆ ಸಹಾಯಕರಾಗಿದ್ದಾರೆ. ವಿದ್ಯಾಗಮ ಮತ್ತಿತರ ಪ್ರಯೋಗಗಳ ಸಮಯದಲ್ಲೂ ಇಂತಹ ಮಕ್ಕಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ, ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿದೆ.

‘ನಮಗೆ ಇಬ್ಬರು ಮಕ್ಕಳು, 5ನೇ ತರಗತಿಯವರೆಗೆ ಹೊಸೂರಿನಲ್ಲೇ ಓದಿದ್ದರು. ಇಲ್ಲಿ ಬಂದ ನಂತರ ಟೆಂಟ್‌ ಶಾಲೆಯಲ್ಲಿ ಕಲಿತರು. ಕೋವಿಡ್‌ ನಂತರ ಶಾಲೆಗೆ ಹೋಗಿಲ್ಲ. ಟೆಂಟ್‌ನಲ್ಲೇ ಇರಲು ಬೇಸರವಾಗಿ ನಮ್ಮ ಜತೆ ದುಡಿಯುತ್ತಿದ್ದಾರೆ. ಮತ್ತೆ ಟೆಂಟ್‌ ಶಾಲೆ ಆರಂಭಿಸಿದರೆ ಕಳುಹಿಸುತ್ತೇವೆ’ ಎನ್ನುತ್ತಾರೆ ಜಿಲ್ಲೆಯ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುವ ತಮಿಳುನಾಡಿನ ದಂಪತಿ.

ADVERTISEMENT

ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿದರೂ ಬಾಲ ಕಾರ್ಮಿಕರು ಪತ್ತೆಯಾಗಿಲ್ಲ ಎನ್ನುವುದುಜಿಲ್ಲಾ ಕಾರ್ಮಿಕ ಅಧಿಕಾರಿಗಳ ಹೇಳಿಕೆ. ಹಿಂದೆ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಬಾಲ ಕಾರ್ಮಿಕ ಶಾಲೆಗಳು ಇದ್ದವು. ಈಗ, ಅಂತಹ ಯಾವ ಶಾಲೆಯೂ ಕಾರ್ಯನಿರ್ವಹಿಸುತ್ತಿಲ್ಲ. ಇಲಾಖೆಯ ಅಂಕಿಸಂಖ್ಯೆಗಳ ಪ್ರಕಾರ, ಜಿಲ್ಲೆಯು ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತವಾಗಿದೆ. ಆದರೆ, ಶಾಲೆ ಇಲ್ಲದ ಪರಿಣಾಮ ಮಕ್ಕಳು ಹಲವು ಕಡೆ ಕೆಲಸ ಮಾಡುತ್ತಿದ್ದರೂ ಅದು ತಾತ್ಕಾಲಿಕ ಅಷ್ಟೆ ಎಂಬ ಸಮರ್ಥನೆ ಅಧಿಕಾರಿಗಳದ್ದು.

**
ಅಧಿಕಾರಿಗಳ ದಾಳಿ: 7 ಮಕ್ಕಳ ರಕ್ಷಣೆ
ಸುಬ್ರಮಣ್ಯ:
ಮಕ್ಕಳು, ಮಹಿಳೆಯರು ಸೇರಿದಂತೆ ಇತರರನ್ನು ಸಂಬಳ ನೀಡದೆ ಜೀತದಾಳಿನಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಶನಿವಾರ ಸುಳ್ಯ ತಾಲ್ಲೂಕಿನ ಪಂಬೆತ್ತಾಡಿ ಗ್ರಾಮದ ವಿಶ್ವನಾಥ ಭಟ್ ಅವರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

7 ಮಕ್ಕಳನ್ನು ರಕ್ಷಿಸಲಾಗಿದ್ದು, ಅವರನ್ನು ಜಿಲ್ಲಾ ಮಕ್ಕಳ ರಕ್ಷಣಾ ಕೇಂದ್ರದ ಎದುರು ಹಾಜರುಪಡಿಸಲಾಗಿದೆ. ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಅಂಗವಿಕಲರೂ ಈ ಮನೆಯಲ್ಲಿದ್ದು, ಸರಿಯಾದ ದಾಖಲೆ ಕಂಡು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವನಾಥ ಅವರು 8–10 ಮಕ್ಕಳು ಹಾಗೂ ಮಹಿಳೆಯರನ್ನು ದುಡಿಸಿಕೊಳ್ಳುತ್ತಿದ್ದು, ಸಂಬಳ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಪುಟ್ಟ ಮಕ್ಕಳು ದನ ಮೇಯಿಸುತ್ತಿರುವ ವಿಡಿಯೊ ವೈರಲ್ ಆಗಿತ್ತು. ಸಾಮಾಜಿಕ ಸಂಘಟನೆ ನೀತಿ ತಂಡಕ್ಕೆ ದೊರೆತ ಮಾಹಿತಿ ಹಿನ್ನೆಲೆಯಲ್ಲಿ ‘ಬಚಪನ್ ಬಚಾವೊ’ ಸಂಸ್ಥೆಯು, ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶಕರಿಗೆ ದೂರು ನೀಡಿತ್ತು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಕಾರ್ಮಿಕ ಇಲಾಖೆ ಅಧಿಕಾರಿಗಳು, ಬಚಪನ್ ಬಚಾವೋ ರಾಜ್ಯ ಸಮನ್ವಯಾಧಿಕಾರಿ ಬಿನು ವರ್ಗೀಸ್‌, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ ನೇತೃತ್ವದಲ್ಲಿ, ಸುಳ್ಯ ಸಿಡಿಪಿಒ ರಶ್ಮಿ ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.