ADVERTISEMENT

ಒಳನೋಟ: ಮೊಬೈಲ್‌ ಎಂಬ 'ಮಾಣಿಕ್ಯ'

ಜೀವನ ಶೈಲಿ ಬದಲಿಸಿರುವ ಸ್ಮಾರ್ಟ್‌ಫೋನ್ ಗೀಳು * ಚಿಕಿತ್ಸೆಗೆ ಕ್ಲಿನಿಕ್ ಆರಂಭಿಸಿದ ನಿಮ್ಹಾನ್ಸ್

ಎಸ್.ರವಿಪ್ರಕಾಶ್
Published 16 ನವೆಂಬರ್ 2019, 21:18 IST
Last Updated 16 ನವೆಂಬರ್ 2019, 21:18 IST
   

ಬೆಂಗಳೂರು: ಮಂಗನ ಕೈಗೆ ಮಾಣಿಕ್ಯ ಎಂಬುದನ್ನು ‘ಮನುಷ್ಯನ ಕೈನಲ್ಲಿ ಮೊಬೈಲ್’ ಎಂದರೂ ತಪ್ಪಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಮಂಗಗಳನ್ನು ಹೀಯಾಳಿಸುತ್ತಿದ್ದ ‘ನಾಗರಿಕ’ ಮನು ಷ್ಯನ ಕೈಗೆ ಸ್ಮಾರ್ಟ್‌ಫೋನ್‌ ಸಿಕ್ಕಿದೆ. ಅದರಿಂದ ಅನುಕೂಲಕ್ಕಿಂತ ಅವಾಂತರಗಳೇ ಹೆಚ್ಚಾಗಿವೆ. ಸಾಮಾಜಿಕ ಮತ್ತು ದೈಹಿಕ ಆರೋಗ್ಯವನ್ನೂ ಹಾಳು ಮಾಡುತ್ತಿದೆ ಮಾತ್ರವಲ್ಲ, ವೈಯಕ್ತಿಕ ಬದುಕನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲಾರಂಭಿಸಿದೆ.

ಬದುಕನ್ನು ಇನ್ನಷ್ಟು ‘ಸ್ಮಾರ್ಟ್‌’ ಆಗಿಸುತ್ತದೆ ಎಂಬ ಜಾಹೀರಾತಿನಿಂದ ಆಕರ್ಷಿತರಾಗಿ ಸ್ಮಾರ್ಟ್‌ ಫೋನ್ ಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಾಗೇ ಖರೀದಿಸಿದ ಬಹುತೇಕರ ಬದುಕು ಒಂದಲ್ಲ ಒಂದು ರೀತಿ ಯಾತನಾಮಯವಾಗುತ್ತಿದೆ. ಕೌಟುಂಬಿಕ ಜೀವನದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ವೈಯಕ್ತಿಕ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿವೆ. ಬಹುತೇಕ ಮಂದಿ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಖಿನ್ನತೆ, ಒಂಟಿತನ, ಉದ್ವೇಗ ಸಹಿತ ಇನ್ನಿತರೆ ಮಾನಸಿಕ ಕ್ಷೋಭೆಗಳಿಗೆ ಒಳಗಾಗುತ್ತಿದ್ದಾರೆ. ಹಲ್ಲೆ, ಹತ್ಯೆ, ಆತ್ಮಹತ್ಯೆಯಂಥ ದುರ್ಘಟನೆಗಳಿಗೂ ಇದು ಕಾರಣವಾಗುತ್ತಿದೆ...

ADVERTISEMENT

ಸಂಪರ್ಕ, ಜ್ಞಾನಾರ್ಜನೆ, ವೃತ್ತಿ ಸಂಬಂಧಿತ ಕೆಲಸಗಳಿಗೆ ಪರಿಣಾಮಕಾರಿಯಾಗಿ ಬಳಕೆಯಾಗಬೇಕಿದ್ದ ಈ ಸಾಧನವು, ಹೆಚ್ಚಾಗಿ ವ್ಯಕ್ತಿಗಳಲ್ಲಿ ಸುಪ್ತವಾಗಿ ಹುದುಗಿರುವ ವಿಲಕ್ಷಣ ಅಪೇಕ್ಷೆಗಳ ಈಡೇರಿಕೆಯ ‘ಮಂತ್ರ ದಂಡ’ವಾಗಿ ಮಾರ್ಪಟ್ಟಿದೆ. ಹೀಗಾಗಿ ಅಸಂಖ್ಯಾತ ಜನ ತಮಗರಿವಿಲ್ಲದೇ ಮನೋವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಅದರ ಜಾಲಕ್ಕೆ ಬಿದ್ದವರು ಹೊರಬರಲಾಗದೇ ವಿಲಿ ವಿಲಿ ಒದ್ದಾಡುತ್ತಿದ್ದಾರೆ.

ವಯಸ್ಸಿನ ಭೇದವಿಲ್ಲದೆ ಮೊಬೈಲ್‌ ಗೀಳು ಎಲ್ಲರನ್ನೂ ಆವರಿಸಿದೆ. ಕಳೆದ ಎಂಟು ಹತ್ತು ವರ್ಷಗಳಿಂದೀಚೆಗೆ ವೈವಿಧ್ಯಮಯ ಮೊಬೈಲ್‌ಗಳ ಮಹಾಪೂರವೇ ಮಾರುಕಟ್ಟೆಗೆ ಹರಿದು ಬಂದಿದೆ. ಆರಂಭದಲ್ಲಿ ಸರಳ ‘ಕೀಪ್ಯಾಡ್‌’ ಫೋನ್‌ಗಳು ಇದ್ದವು. ಕರೆ ಮಾಡುವುದು, ಕರೆ ಸ್ವೀಕರಿಸುವುದು, ದತ್ತಾಂಶ ಸಂಗ್ರಹಿಸುವುದು ಮತ್ತು ಸಂದೇಶ ಕಳಿಸಲು ಮಾತ್ರ ಸೀಮಿತವಾಗಿದ್ದವು. ಆಗ ಜನ ಹೆಚ್ಚು ಮೊಬೈಲ್‌ಗಳಿಗೆ ಅಂಟಿಕೊಂಡಿರಲಿಲ್ಲ.

2010–11 ರಲ್ಲಿ ‘ಸ್ಮಾರ್ಟ್‌ಪೋನ್‌ ಯುಗ’ ಆರಂಭವಾಗಿ ಅದಕ್ಕೆ ಇಂಟರ್‌ನೆಟ್ ಜತೆಯಾ ಯಿತು. ನಂತರ ಇದು ಅಲ್ಲಾವುದ್ದೀನನ ಮಾಂತ್ರಿಕ ದೀಪದಂತಾಯಿತು. ಇವುಗಳ ಬೆಲೆ ಮತ್ತು ಕರೆಗಳ ವೆಚ್ಚ ಕಡಿಮೆ ಆಗಿದ್ದರಿಂದ ಎಲ್ಲ ವರ್ಗದವರೂ ಸ್ಮಾರ್ಟ್‌ ಫೋನ್‌ ಬಳಕೆ ಮಾಡುವಂತಾಯಿತು. ಇ–ಮೇಲ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ ಇತ್ಯಾದಿ ಅತಿ ಕಡಿಮೆ ಬೆಲೆಯಲ್ಲಿ ಸಿಗುವಂತಾಯಿತು. ಪ್ರಪಂಚದ ಯಾವುದೇ ಮೂಲೆಯನ್ನು ಕ್ಷಣ ಮಾತ್ರದಲ್ಲಿ ಸಂಪರ್ಕಿಸಬಹುದಾದ ಸಾಧ್ಯತೆ ಇರುವುದರಿಂದ ಸಾಕಷ್ಟು ಪ್ರಯೋಜನಗಳೂ ಇವೆ. ಜತೆಗೆ ಇದು ಅಸಂಖ್ಯಾತ ಜನರಲ್ಲಿ ವ್ಯಸನ ವಾಗಿಯೂ ಮಾರ್ಪಾಡಾಗುತ್ತಿರುವ ಬಗ್ಗೆ ಜಗತ್ತಿನ ಮನೋವಿಜ್ಞಾನಿಗಳು ತಲೆಕೆಡಿಸಿಕೊಳ್ಳಲಾರಂಭಿಸಿದ್ದಾರೆ. ಮನೋವಿಜ್ಞಾನದಲ್ಲಿ ಹೊಸ ಶಾಖೆಯಾಗಿ ಬೆಳೆಯುತ್ತಿದೆ.

ತಂಬಾಕು ಮತ್ತು ಮದ್ಯವ್ಯಸನದಿಂದ ದೈಹಿಕ ಆರೋಗ್ಯ ಹದಗೆಟ್ಟರೆ, ಮೊಬೈಲ್ ವ್ಯಸನದಿಂದ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ವಿವೇಚನೆ ಮತ್ತು ವಿವೇಕದಿಂದ ಬಳಸುವುದನ್ನು ಕಲಿತುಕೊಳ್ಳದಿದ್ದರೆ, ಆ ವ್ಯಸನವು ಸಾರ್ವತ್ರಿಕಗೊಳ್ಳುತ್ತಾ ಹೋದರೆ ಅಪಾಯಗಳು ಏನೆಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ಅದರ ಲಕ್ಷಣಗಳು ಈಗ ಗೋಚರಿಸಲಾರಂಭಿಸಿದೆ. ಈ ವ್ಯಸನದ ಚಿಕಿತ್ಸೆಗಾಗಿ ನಿಮ್ಹಾನ್ಸ್‌ ಪ್ರತ್ಯೇಕ ಕ್ಲಿನಿಕ್‌ ಆರಂಭಿಸಿದೆ. ಮೊಬೈಲ್‌ ಮತ್ತು ತಂತ್ರಜ್ಞಾನದ ವ್ಯಸನಕ್ಕೆ ತುತ್ತಾದವರಿಗೆ ಚಿಕಿತ್ಸೆ ಮತ್ತು ಉಪಶಮನ ನೀಡುವ ಕಾರ್ಯಕ್ಕೆ ನಿಮ್ಹಾನ್ಸ್‌ ಚಾಲನೆ ನೀಡಿದೆ.

ಹದಿಹರೆಯಕ್ಕೆ ಕಾಲಿಟ್ಟ ಯುವತಿಯ ಒಂದು ದಾರುಣ ಕಥೆ ಹೀಗಿದೆ: ಪಲ್ಲವಿಗೆ (ಹೆಸರು ಬದಲಿಸಲಾಗಿದೆ) 19 ವರ್ಷ ವಯಸ್ಸು. ಜೀವನದ ಕುರಿತು ಹತ್ತಾರು ಕನಸುಗಳನ್ನು ಕಾಣುತ್ತಿದ್ದ ಆಕೆಗೆ ಪ್ರೀತಿಯ ಅಪ್ಪ ಸಂಪರ್ಕಕ್ಕೆ ಮತ್ತು ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಸ್ಮಾರ್ಟ್‌ಫೋನ್‌ ಕೊಡಿಸಿದರು. ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಆಕೆಗೆ ಅಂಟಿತು. ಪ್ರತಿನಿತ್ಯ ಏನಿಲ್ಲ ಅಂದರೂ 100 ರಿಂದ 150 ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿದ್ದಳು. ಎಲ್ಲೆಂದರಲ್ಲಿ ನಿಂತು ತೆಗೆದುಕೊಂಡ ಸೆಲ್ಫಿಯನ್ನು ತಕ್ಷಣವೇ ವಾಟ್ಸ್‌ಆ್ಯಪ್‌ ಗ್ರೂಪ್‌ಗಳು ಮತ್ತು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿ ಲೈಕ್ಸ್‌ ಮತ್ತು ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಳು.

ಲೈಕ್‌ಗಳು ಮತ್ತು ಪ್ರತಿಕ್ರಿಯೆಗಳು ಹೆಚ್ಚಿನ ಸಂಖ್ಯೆಗಳಲ್ಲಿ ಬಂದರೆ ಖುಷಿಯಾಗಿ ಮತ್ತೊಂದಷ್ಟು ಫೋಟೊಗಳನ್ನು ಹರಿಬಿಡುತ್ತಿದ್ದಳು. ಇನ್ನಷ್ಟು ಹೊಗಳಿಕೆಯ ಕಮೆಂಟ್‌ಗಳಿಗೆ ಹಾತೊರೆಯುತ್ತಿದ್ದಳು. ಒಂದು ವೇಳೆ ಹೊಗಳಿಕೆ ಪ್ರತಿಕ್ರಿಯೆ ಬರದೇ ಇದ್ದರೆ, ತಕ್ಷಣ ಮನಸ್ಸು ವ್ಯಗ್ರಗೊಂಡು, ಒತ್ತಡಕ್ಕೆ ಒಳಗಾಗಿ ಮತ್ತೆ ಮತ್ತೆ ಸೆಲ್ಫಿ ತೆಗೆದುಕೊಂಡು ಅಪ್‌ ಲೋಡ್‌ ಮಾಡುತ್ತಿದ್ದಳು. ಬೇಸರ ನೀಗಿಸಿಕೊಳ್ಳಲು ಪದೇ ಪದೇ ಸೆಲ್ಫಿ ತೆಗೆದುಕೊಳ್ಳವ ಮೂಲಕ ಒತ್ತಡಕ್ಕೂ ಒಳಗಾಗುವ ವರ್ತನೆ ಬೆಳೆಸಿಕೊಂಡಳು. ಕೊನೆಗೆ ನಿಮ್ಹಾನ್ಸ್‌ ತಜ್ಞರ ನೆರವು ಪಡೆದು ನಿರಂತರ ಕೌನ್ಸೆಲಿಂಗ್‌ ಮೂಲಕ ಪರಿಹಾರ ಕಂಡುಕೊಂಡಳು.

ಮೊದಲೇ ಬೇರೆ ಬಗೆಯ ಮನೋಸಮಸ್ಯೆಗಳಿದ್ದು, ಜತೆಗೆ ಮೊಬೈಲ್‌ ವ್ಯಸನಕ್ಕೆ ಅಂಟಿಕೊಂಡರೆ, ಅದರ ಪರಿಣಾಮ ಅತಿ ಘೋರ. ಕರೆನ್ಸಿ ಹಾಕಿಸ ಲಿಲ್ಲ, ಮೊಬೈಲ್ ತೆಗೆದುಕೊಡಲಿಲ್ಲ ಎಂಬ ಕಾರಣ ಗಳಿಗೆ ಪೋಷಕರ ಮೇಲೆ ಹಲ್ಲೆ ನಡೆಸಿರುವ, ಹತ್ಯೆ ಮಾಡಿರುವ, ಕೊನೆಗೆ ಆತ್ಮಹತ್ಯೆಗಳಲ್ಲಿ ಪರ್ಯಾವಸನಗೊಳ್ಳುವ ನಿದರ್ಶನಗಳು ಈಗಾಗಲೇ ವರದಿ ಯಾಗಿವೆ. ಮನೋ ಸಮಸ್ಯೆಗಳನ್ನು ಬಗೆಹರಿಸುವುದರ ಜತೆ ಜತೆಗೆ ಮೊಬೈಲ್‌ ವ್ಯಸನಕ್ಕೂ ಚಿಕಿತ್ಸೆ ನೀಡಬೇಕು. ಫೇಸ್‌ಬುಕ್‌ ಲೈವ್‌ ಅಥವಾ ವಿಡಿಯೊ ರೆಕಾರ್ಡ್‌ ಮಾಡಿಕೊಳ್ಳುತ್ತಲೇ ಆತ್ಮಹತ್ಯೆ ಮಾಡಿಕೊಳ್ಳುವವರು ನಿಶ್ಚಿತವಾಗಿ ಮನೋ ಸಮಸ್ಯೆ ಇದ್ದವರು ಎನ್ನುತ್ತಾರೆ ನಿಮ್ಹಾನ್ಸ್‌ನ ತಜ್ಞ ಪ್ರೊ. ಮನೋಜ್‌ ಕುಮಾರ್‌ ಶರ್ಮಾ. ಹೀಗಾಗಿ ಸ್ಮಾರ್ಟ್‌ಫೋನ್ ಬಳಕೆ ಬಗ್ಗೆ ಎಚ್ಚರ ಮೀರಿದರೆ ಅಪಾಯ ತಪ್ಪಿದ್ದಲ್ಲ.

**

ಮೊಬೈಲ್‌ನಂತಹ ಎಲೆಕ್ಟ್ರಾನಿಕ್ ಮಾಧ್ಯಮ ನಮ್ಮನ್ನು ಸಂಪೂರ್ಣ ಆವರಿಸಿದೆ. ಗೀಳಾಗಿ ಪರಿವರ್ತನೆ ಆಗುತ್ತಿದೆ. ಕೆಲವು ದೇಶಗಳು ಇದನ್ನು ಮಾನಸಿಕ ಕಾಯಿಲೆ ಎಂದು ಪರಿಗಣಿಸಿವೆ. ನಾವೂ ಎಚ್ಚೆತ್ತುಕೊಳ್ಳಬೇಕು. ಇದನ್ನು ನೋಡುವುದೇ ಮನರಂಜನೆ ಎಂದು ಭಾವಿಸುವುದು ಸರಿಯಲ್ಲ. ಇದಕ್ಕೆ ದಾಸರಾಗುವುದರಿಂದ ತಪ್ಪಿಸಿಕೊಳ್ಳಬೇಕು.
-ಡಾ.ಬಿ.ಎನ್‌. ಗಂಗಾಧರ್‌, ನಿರ್ದೇಶಕರು ನಿಮ್ಹಾನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.