ADVERTISEMENT

ಒಳನೋಟ | ಈರುಳ್ಳಿ: ಮುಗಿಯದ ಕಣ್ಣೀರು

ಮಹಾರಾಷ್ಟ್ರದ ಈರುಳ್ಳಿ ಪ್ರವಾಹಕ್ಕೆ ಮುಳುಗುವ ಬದುಕು l ಕಾಡುವ ಮೂಲಸೌಲಭ್ಯ ಕೊರತೆ

ಎಂ.ಜಿ.ಬಾಲಕೃಷ್ಣ
Published 25 ಫೆಬ್ರುವರಿ 2023, 21:45 IST
Last Updated 25 ಫೆಬ್ರುವರಿ 2023, 21:45 IST
ದಾವಣಗೆರೆಯ ಈರುಳ್ಳಿ ಮಾರುಕಟ್ಟೆಯಲ್ಲಿನ ಈರುಳ್ಳಿ ವಹಿವಾಟಿನ ದೃಶ್ಯ  ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಈರುಳ್ಳಿ ಮಾರುಕಟ್ಟೆಯಲ್ಲಿನ ಈರುಳ್ಳಿ ವಹಿವಾಟಿನ ದೃಶ್ಯ ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ಬೆಂಗಳೂರು: ಈರುಳ್ಳಿ ಕತ್ತರಿಸುವಾಗ ಸುರಿಯುವ ಕಣ್ಣೀರು ತಾತ್ಕಾಲಿಕ. ಆದರೆ ಈರುಳ್ಳಿ ಬೆಳೆಯುವ ರೈತರು ಸುರಿಸುತ್ತಿರುವ ಕಣ್ಣೀರು ಮಾತ್ರ ಅಲ್ಪಕಾಲದ್ದಲ್ಲ. ಅಕಾಲಿಕ ಮಳೆ, ದಿಢೀರ್‌ ಬೆಲೆ ಕುಸಿತ, ದಾಸ್ತಾನು ಮಾಡುವ ಸೌಲಭ್ಯದ ಕೊರತೆ, ಮಧ್ಯವರ್ತಿ ಹಾವಳಿಗಳು ರೈತರ ಬದುಕನ್ನು ಹಿಂಡಿಬಿಟ್ಟಿವೆ.

ಫೆಬ್ರುವರಿ ಮಧ್ಯಭಾಗದವರೆಗೆ ಈರುಳ್ಳಿ ಬೆಳೆದ ರೈತರಿಗೆ ಕ್ವಿಂಟಲ್‌ಗೆ ₹2 ಸಾವಿರದಿಂದ 2,500 ಸಿಗುತ್ತಿತ್ತು. ಶಿವರಾತ್ರಿ ಕಳೆಯುತ್ತಲೇ ದರ ₹1,400ಕ್ಕಿಂತ ಕಡಿಮೆಯಾಗಿದೆ. ಬೆಳಗಾವಿ ಎಪಿಎಂಸಿಯಲ್ಲಿ ನಾಲ್ಕು ತಿಂಗಳ ಹಿಂದೆ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರ ದರವಿತ್ತು. ಒಂದೇ ತಿಂಗಳಲ್ಲಿ ಅದು ₹ 900ರವರೆಗೂ ಕುಸಿದಿತ್ತು. ಬಳಿಕ ಮತ್ತೆ ದರ ಚೇತರಿಸಿಕೊಂಡಿತ್ತು. ರಾಜ್ಯದಲ್ಲಿ ನಾಲ್ಕೈದು ವರ್ಷಗಳಿಂದಲೂ ದರ ಏರುಪೇರು ಆಗುತ್ತಲೇ ಇದೆ. 2018–19ರಲ್ಲಿ ಈರುಳ್ಳಿ ಸರಾಸರಿ ಬೆಲೆ ಪಾತಾಳಕ್ಕೆ ಕುಸಿದಿತ್ತು. ಆಗ ರೈತರಿಗೆ ಸಿಕ್ಕಿದ್ದು ಕ್ವಿಂಟಲ್‌ಗೆ ₹ 906 ಮಾತ್ರ. 2019–20ರಲ್ಲಿ ಅದು ₹2,304ಕ್ಕೆ ನೆಗೆಯಿತು. ಈ ದರ ಹೆಚ್ಚಳ ಸ್ಥಿರವಾಗಲಿಲ್ಲ, ಮತ್ತೆ ಕುಸಿಯಿತು. 2021–22ರಲ್ಲಿ ರೈತರಿಗೆ ದೊರೆತ ಸರಾಸರಿ ದರ
₹ 1,822 ಮಾತ್ರ.

ಈರುಳ್ಳಿಗೆ ಚಿನ್ನದ ದರ ಬಂದಾಗ ಮೈತುಂಬ ಚಿನ್ನ ಹಾಕಿಸಿಕೊಳ್ಳುವ ಮಂದಿ ಚಿತ್ರದುರ್ಗದಿಂದ ತೊಡಗಿ ಬೀದರ್‌ವರೆಗೂ ಕಾಣಸಿಗುತ್ತಾರೆ. ಆದರೆ ದರ ಪಾತಾಳಕ್ಕೆ ಕುಸಿದಂತೆ ಆ ಚಿನ್ನದ ಸರವನ್ನೆಲ್ಲಾ ಅಡವಿಟ್ಟೋ, ಮಾರಾಟ ಮಾಡಿಯೋ ಜೀವನ ಸಾಗಿಸುವ ಕಷ್ಟದ ದಾರಿಯನ್ನು ಅವರು ಕಾಣುತ್ತಿದ್ದಾರೆ. ಈರುಳ್ಳಿ ದರವನ್ನು ಸ್ಥಿರವಾಗಿ ಇಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಇದುವರೆಗೂ ಯಾವುದೇ ಗಂಭೀರ ಪ್ರಯತ್ನ ನಡೆದಿಲ್ಲ ಎಂಬುದೂ ವಾಸ್ತವ.

ADVERTISEMENT

ಈರುಳ್ಳಿ ಬೆಳೆ ಕೊಯ್ಲಿಗೆ ಬಂದ ತಕ್ಷಣ ಮಾರಾಟ ಮಾಡಬೇಕಾದ ಒತ್ತಡದಲ್ಲಿ ರಾಜ್ಯದ ಕೃಷಿಕರು ಇದ್ದಾರೆ. ಇದಕ್ಕೆ ಕಾರಣ ರಾಜ್ಯದಲ್ಲಿ ಗೋದಾಮುಗಳ ಕೊರತೆ. ಮಹಾರಾಷ್ಟ್ರದಲ್ಲಿ ಇಂತಹ ಸ್ಥಿತಿ ಇಲ್ಲ. ಹೀಗಾಗಿ ಬೇಡಿಕೆ ಇದ್ದಾಗ ಕರ್ನಾಟಕದ ಮಾರುಕಟ್ಟೆಗೆ ಈರುಳ್ಳಿ ನುಗ್ಗಿಸುವುದು, ಲಾಭ ಮಾಡಿಕೊಳ್ಳುವುದು ಮಹಾರಾಷ್ಟ್ರಕ್ಕೆ ಸಾಧ್ಯವಾಗುತ್ತಿದೆ. ನಮ್ಮ ರೈತರು ಕಡಿಮೆ ಬೆಲೆಗೇ ತಮ್ಮ ಫಸಲು ಮಾರಾಟ ಮಾಡುತ್ತ ಸದಾ ಕಣ್ಣೀರಲ್ಲಿ ಕೈತೊಳೆಯುವ ಸ್ಥಿತಿ ಇದೆ.

ನಾಲ್ಕು ಕಾರಣಗಳಿಂದ ದಿಢೀರ್ ಏರಿಳಿತ: ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದಲ್ಲೇ ಈರುಳ್ಳಿ ಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದರೂ, ಈರುಳ್ಳಿಯ ಬೆಲೆ ಬಹುತೇಕ ನಿರ್ಧಾರ ವಾಗುವುದು ಬೆಂಗಳೂರಿನಲ್ಲಿ ಎಂಬುದು ವಿಶೇಷ. ಬೆಂಗಳೂರು ಯಶವಂತಪುರದ ಈರುಳ್ಳಿ ಮಾರು ಕಟ್ಟೆಯೇ ಈರುಳ್ಳಿ ಬೆಲೆಯ ದಿಢೀರ್‌ ಏರಿಳಿತದ ಕೇಂದ್ರ ಬಿಂದು. ಹುಬ್ಬಳ್ಳಿ, ಬೆಳಗಾವಿಗಳು ಇತರ ಪ್ರಮುಖ ಈರುಳ್ಳಿ ವಹಿವಾಟು ಕೇಂದ್ರಗಳು. ಬೆಲೆ ಏರಿಳಿತಕ್ಕೆ ಮುಖ್ಯವಾಗಿ ನಾಲ್ಕು ಕಾರಣಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ ಅಕಾಲಿಕ ಅಧಿಕ ಮಳೆ, ಹರಾಜಿನ ಮೂಲಕವೇ ಬೆಲೆ ನಿರ್ಧಾರ, ದಾಸ್ತಾನಿಗೆ ಸೌಲಭ್ಯ ಇಲ್ಲದಿರುವುದು, ಕೆಲವೊಮ್ಮೆ ಕೃತಕ ಅಭಾವ ಸೃಷ್ಟಿಸುವ ಪ್ರಯತ್ನ.

ಅಧಿಕ ಮಳೆಯೇ ಪ್ರಮುಖ ವೈರಿ: ಭಾರಿ ಮಳೆಯಿಂದ ರೈತರು ಕೃಷಿ ಭೂಮಿಯಲ್ಲಿ ಈರುಳ್ಳಿ ಕಳೆದುಕೊಂಡಿದ್ದನ್ನು ನಾವು ಕಳೆದ ಮೂರ್ನಾಲ್ಕು ವರ್ಷಗಳಿಂದ ನೋಡುತ್ತಲೇ ಬಂದಿದ್ದೇವೆ. ಇದೇ ಮಳೆ ಬೆಚ್ಚಗಿನ ಯಶವಂತಪುರ ಮಾರುಕಟ್ಟೆಗೂ ಚಳಿ ಹಿಡಿಯುವಂತೆ ಮಾಡುತ್ತದೆ. ಸರಿಯಾಗಿ ಒಣಗದ ಈರುಳ್ಳಿ ಬೇಗ ಕೊಳೆತುಹೋಗುವ ಸಾಧ್ಯತೆ ಇರುತ್ತದೆ. ಅಂತಹ ಈರುಳ್ಳಿ ಕಡಿಮೆ ಬೆಲೆಗೆ ಹರಾಜಾಗುತ್ತದೆ. ವರ್ತಕರೂ ಅಷ್ಟೇ, ಅಂತಹ ಈರುಳ್ಳಿಯನ್ನು ಬೇರೆ ರಾಜ್ಯ/ದೇಶಗಳಿಗೆ ಕಳುಹಿಸುವ ಬದಲು ಅಧಿಕ ಬೇಡಿಕೆ ಇರುವ ಬೆಂಗಳೂರಿನಲ್ಲಿ ಚಿಲ್ಲರೆ ವ್ಯಾಪಾರಕ್ಕೆ ಕಳುಹಿಸುತ್ತಾರೆ. ಆಗ 100 ರೂಪಾಯಿಗೆ ಐದರಿಂದ ಆರು ಕೆ.ಜಿ.ಯಷ್ಟು ಈರುಳ್ಳಿಯೂ ಮನೆ ಬಾಗಿಲಿಗೆ ಬಂದಿರುತ್ತದೆ. ಇದರ ಒಟ್ಟಾರೆ ಪರಿಣಾಮ ಎದುರಾಗುವುದು ಬೆಳೆದ ಕೃಷಿಕರಿಗೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಹರಾಜಿನ ಮೂಲಕವೇ ಬೆಲೆ ನಿರ್ಧಾರ: ಈರುಳ್ಳಿ ಬೆಳೆದ ರೈತರು ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಇಲ್ಲ.ಹೀಗಾಗಿ ಕೊಯಿಲು ಆಗುವಾಗ ಹೊಲದ ಬಳಿಗೆ ಬರುವ ವರ್ತಕರು ಹೇಳಿದ ಬೆಲೆಗೆ ಮಾರಾಟ ಮಾಡಬೇಕಾದ ಸ್ಥಿತಿ ಇದೆ.


ಅಲ್ಲಿಂದ ಈರುಳ್ಳಿಯ ಬೆಲೆ ನಿರ್ಧಾರವಾಗುವುದು ಹರಾಜಿನಲ್ಲಿ. ರಾಜ್ಯದ ರೈತರು ಬೆಳೆದ ಈರುಳ್ಳಿ ಮಾರುಕಟ್ಟೆ ತಲುಪುವ ಹೊತ್ತಿಗೇ ಮಹಾರಾಷ್ಟ್ರದಿಂದಲೂ ದಾಳಿ ಇಟ್ಟಿರುತ್ತದೆ. ಹೀಗಾಗಿ ಹರಾಜಿನಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಉತ್ತಮ ಬೆಲೆಗೆ, ಮಳೆ ಬಿದ್ದು ಸರಿಯಾಗಿ ಒಣಗದೆ ಇರುವ ಈರುಳ್ಳಿ ಕಡಿಮೆ ಬೆಲೆಗೆ ಹರಾಜಾಗುತ್ತದೆ.

ದಾಸ್ತಾನಿಗೆ ಸೌಲಭ್ಯ ಇಲ್ಲ: ಈರುಳ್ಳಿ ಕೃಷಿಕರ ಬಳಿ ದಾಸ್ತಾನಿಗೆ ಸೌಲಭ್ಯ ಇಲ್ಲ. ಯಶವಂತಪುರದಂತಹ ದೊಡ್ಡ ಮಾರುಕಟ್ಟೆಗಳಲ್ಲೂ ದಾಸ್ತಾನಿಗೆ ವ್ಯವಸ್ಥೆ ಇಲ್ಲ. ಒಂದು ವೇಳೆ ದಾಸ್ತಾನು ವ್ಯವಸ್ಥೆ ಮಾಡಿದ್ದೇ ಆದರೆ ಅದಕ್ಕೆ ಬಹಳ ವೆಚ್ಚ ಬೀಳುತ್ತದೆ, ಆ ವೆಚ್ಚವನ್ನು ಸಹ ಈರುಳ್ಳಿ ಬೆಳೆಗಾರರು ಇಲ್ಲವೇ ಗ್ರಾಹಕರ ಮೇಲೆ ಹೊರಿಸುವ ಅಗತ್ಯ ಬೀಳುತ್ತದೆ. ಹೀಗಾಗಿ ಅಂತಹ ಅಪಾಯಕ್ಕೆ ಒಡ್ಡಿಕೊಳ್ಳಲು ಹೋಗದೇ, ಬಂದ ಮಾಲನ್ನು ಬಂದಷ್ಟೇ ವೇಗವಾಗಿ ವಿಲೇವಾರಿ ಮಾಡುವ ಹಳೆಯ ವ್ಯವಸ್ಥೆಯೇ ಚಾಲ್ತಿಯಲ್ಲಿದೆ.

ಕೃತಕ ಅಭಾವ ಸೃಷ್ಟಿ: ಈರುಳ್ಳಿ ಬೆಳೆಯಲ್ಲಿ ಆಗುವ ಸ್ವಾಭಾವಿಕ ಏರಿಳಿತದ ಪರಿಸ್ಥಿತಿ ನೋಡಿಕೊಂಡು ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಾಗುವಂತೆ ನೋಡಿಕೊಳ್ಳುವುದೂ ಇದೆ. ಕೆ.ಜಿ ಈರುಳ್ಳಿಗೆ ₹ 200 ಆಗಿದ್ದ ಸಂದರ್ಭದಲ್ಲಿ ಲೋಕಾಯುಕ್ತರು ಎಪಿಎಂಸಿಗೆ ಭೇಟಿ ನೀಡಿ ಗೋದಾಮುಗಳನ್ನು ಪರಿಶೀಲಿಸಿದ್ದ ಉದಾಹರಣೆಯೂ ಇದೆ.

ಈ ಮೇಲಿನ ನಾಲ್ಕೂ ಕಾರಣಗಳನ್ನು ಗಮನಿಸಿದಾಗ ಅಂತಿಮವಾಗಿ ಕಣ್ಣೀರು ಸುರಿಸಬೇಕಾದವರು ಈರುಳ್ಳಿ ಕೃಷಿಕರು ಎಂಬುದು ಕಟು ವಾಸ್ತವ.

ಈರುಳ್ಳಿ ಕೃಷಿಕರನ್ನೇ ಈ ಬಗ್ಗೆ ಮಾತನಾಡಿಸಿದಾಗ ಅವರೂ ಒಂದಿಷ್ಟು ಬೇಡಿಕೆ, ಕೋರಿಕೆ, ಸಲಹೆ ನೀಡುತ್ತಾರೆ. ಅದರಲ್ಲಿ ಮುಖ್ಯವಾಗಿ ಕೇಳಿಬಂದುದು 1) ಸೂಕ್ತ ದಾಸ್ತಾನು ವ್ಯವಸ್ಥೆ ಕಲ್ಪಿಸಬೇಕು, ಜಿಲ್ಲೆಗೊಂದು ಬೃಹತ್‌ ದಾಸ್ತಾನು ವ್ಯವಸ್ಥೆ ಇರಬೇಕು 2) ಈರುಳ್ಳಿ ಬಿತ್ತನೆ ಬೀಜದ ಸರಿಯಾದ ತಳಿ ಆಯ್ಕೆ ಹಾಗೂ ಬಿತ್ತನೆ ಸಮಯದ ಬಗ್ಗೆ ಮಾಹಿತಿ ನೀಡಬೇಕು, 3) ಸರ್ಕಾರ ಬೆಂಬಲ ಬೆಲೆ ಪ್ರಕಟಿಸಿ ಕ್ವಿಂಟಲ್‌ ಈರುಳ್ಳಿಗೆ ನಿರಂತರವಾಗಿ ಕನಿಷ್ಠ 3,000 ದರ ಇರುವಂತೆ ನೋಡಿಕೊಳ್ಳಬೇಕು, 4) ಸ್ಥಳೀಯ ರೈತರ ಬೆಳೆಗಳನ್ನು ಸಗಟು ವ್ಯಾಪಾರಿಗಳು ಕಡ್ಡಾಯವಾಗಿ ಖರೀದಿಸುವಂತೆ ಆದೇಶಿಸಬೇಕು ಮತ್ತು 5) ಮಧ್ಯವರ್ತಿಗಳ ಹಾವಳಿಯಿಂದ ಕೃಷಿಕರನ್ನು ರಕ್ಷಿಸಬೇಕು.

ಇನ್ನಷ್ಟು ಸಮಸ್ಯೆಗಳು

*ಈರುಳ್ಳಿ ಕೃಷಿಕರಿಗೆ ಮಳೆ, ಮಾರುಕಟ್ಟೆಯ ಜತೆಗೆ ಬಿತ್ತನೆ ಬೀಜ, ಈರುಳ್ಳಿಗೆ ವಕ್ಕರಿಸುವ ರೋಗ ಬಾಧೆಯಂತಹ ಇತರ ಹಲವು ಸಮಸ್ಯೆಗಳೂ ಕಾಡುತ್ತಿವೆ. ಕಳೆದ ಎರಡು ವರ್ಷಗಳಿಂದ ಈರುಳ್ಳಿ ಬೆಳೆಗೆ ಹಾವು ಸುಳಿ ರೋಗ ಬಾಧೆ ಹೆಚ್ಚಿದೆ. ಇದರಿಂದ ರೈತರು ಈರುಳ್ಳಿ ಬೆಳೆ ಬೇಸಾಯದಿಂದ ವಿಮುಖರಾಗುತ್ತಿದ್ದಾರೆ.

*ಈರುಳ್ಳಿ ಬೆಳೆಯುವ ರೈತರಿಗೆ ಫಸಲು ತೆಗೆದ ಬಳಿಕ ಹೊಲದಲ್ಲಿ ಉಳಿಯುವ ಕಸವೇ ದೊಡ್ಡ ಹೊರೆ ಆಗಿದೆ. ಅದನ್ನು ಹೊಲದಿಂದ ತೆಗೆಸಲು ₹ 30 ಸಾವಿರದವರೆಗೂ ಖರ್ಚು ಬರುತ್ತಿದೆ ಎಂದು ರೈತರು ಅಳಲು ತೋಡಿ
ಕೊಳ್ಳುತ್ತಾರೆ.

*ಈರುಳ್ಳಿ ಬಿತ್ತನೆ ಬೀಜದ ಸರಿಯಾದ ತಳಿ ಆಯ್ಕೆ ಹಾಗೂ ಬಿತ್ತನೆ ಸಮಯದ ಬಗ್ಗೆ ಮಾಹಿತಿ ಕೊರತೆ ಇದ್ದು, ಅದನ್ನು ಪರಿಹರಿಸುವ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂಬುದು ರೈತರ ಕೊರಗು.

*ಕೆಲವೊಂದು ರೈತರು ಈರುಳ್ಳಿಯ ಸಂಗ್ರಹಣಾ ಘಟಕ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಅವರಿಗೆ ರಾತ್ರಿ ವೇಳೆ ಕಳ್ಳರ ಕಾಟ ಕಾಡುತ್ತಿದೆ. ಹೊಲದ ಸಮೀಪ ಇಂತಹ ಸಂಗ್ರಹಣಾ ಘಟಕ ಸ್ಥಾಪಿಸಿದರೆ ಅದನ್ನು ಕಾಯುವುದಕ್ಕೆ ಒಬ್ಬರು ಇರಬೇಕಾಗುತ್ತದೆ.

‘ರೈತರಿಗೆ ಈರುಳ್ಳಿ ಬಿತ್ತನೆ ಬೀಜದ ಸರಿಯಾದ ತಳಿ ಆಯ್ಕೆ ಹಾಗೂ ಬಿತ್ತನೆ ಸಮಯದ ಬಗ್ಗೆ ಮಾಹಿತಿ ಕೊರತೆ ಇದೆ. ಯಾವ ತಳಿ ಯಾವ ಹಂಗಾಮಿಗೆ ಬಿತ್ತನೆ ಮಾಡಬೇಕು, ರೋಗ ಹಾಗೂ ಕೀಟಬಾಧೆ ನಿಯಂತ್ರಣ ಮಾಡುವುದು, ಕೊಯ್ಲು ನಂತರ ಸಂಗ್ರಹಣೆ ಬಗ್ಗೆ ಮಾಹಿತಿ ಇಲ್ಲ’ ಎನ್ನುತ್ತಾರೆ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತರಕಾರಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ವಸಂತ ಗಾಣಿಗೇರ.

ಹವಾಮಾನ ವೈಪರೀತ್ಯ: ರಾಜ್ಯದಲ್ಲಿ ಕಳೆದ ಹತ್ತರಿಂದ 12 ವರ್ಷಗಳ ಹವಾಮಾನ್ಯ ಚಿತ್ರಣವನ್ನು ಕಂಡಾಗ ಭಾರಿ ಬದಲಾವಣೆ ಆಗಿರುವುದು ಕಂಡುಬರುತ್ತದೆ. ಬರಗಾಲ ಪೀಡಿತ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಚಿತ್ರದುರ್ಗ ಜಿಲ್ಲೆ ಇದಕ್ಕೊಂದು ನಿದರ್ಶನ. ಈ ಹಿಂದೆ ಇಲ್ಲಿ ನಾಲ್ಕಾರು ವರ್ಷ ಮಳೆ ಕೊರತೆ, ಒಂದು ವರ್ಷ ಸಾಧಾರಣ ಮಳೆ ಎಂಬಂತಹ ಸ್ಥಿತಿ ಇತ್ತು. ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷ ಎಂ ಬಂತೆ ಮಳೆ ಸುರಿಯುತ್ತಿದೆ. ಕೆಲವೊಮ್ಮೆ ಭಾರಿ ಮಳೆಯೂ ಆಗುತ್ತಿದೆ. ಬದಲಾದ ಹವಾಮಾನಕ್ಕೆ ತಕ್ಕಂತೆ ಕೃಷಿಕರು ತಮ್ಮ ಬೆಳೆ ಪದ್ಧತಿಯನ್ನು ಬದಲಿಸಿಕೊಂಡಿಲ್ಲ. ಸರ್ಕಾರದ ಬಳಿಯೂ ಸೂಕ್ತ ಮಾರ್ಗದರ್ಶನ ಇಲ್ಲ. ಇದರಿಂದಾಗಿ ಈರುಳ್ಳಿಯ ಬದಲಿಗೆ ಪರ್ಯಾಯ ಬೆಳೆ ಬೆಳೆಯುವ ಅವಕಾಶವನ್ನು ಕೃಷಿಕರು ಕಂಡುಕೊಳ್ಳದಂತಾಗಿದೆ.

ಕಳೆದ ವರ್ಷ ಅಕ್ಟೋಬರ್ ಮೊದಲ ವಾರ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಯರದಕಟ್ಟೆ ಗ್ರಾಮದ ಡಿ.ಕೆ.ಲೋಕೇಶ್‌ ಅವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಬೆಳೆದ ಈರುಳ್ಳಿಯನ್ನು ಟ್ರ್ಯಾಕ್ಟರ್‌ ಹರಿಸಿ ನಾಶಪಡಿಸಿದ್ದು ದೊಡ್ಡ ಸುದ್ದಿಯಾಯಿತು. ಸತತ ಮಳೆ, ಕೊಳೆತ ಈರುಳ್ಳಿ ಗೆಡ್ಡೆಯನ್ನು ಕಂಡ ಅವರಿಗೆ ಈ ದಾರಿಯ ಹೊರತು ಅನ್ಯಮಾರ್ಗವಿರಲಿಲ್ಲ.

ಈ ವರ್ಷ ಎಷ್ಟು ಈರುಳ್ಳಿಯ ಅಗತ್ಯ ಇದೆ, ಎಷ್ಟು ಪೂರೈಕೆ ಆಗಬೇಕು ಎಂಬ ಲೆಕ್ಕಾಚಾರವೂ ಯಾರ ಬಳಿಯಲ್ಲೂ ಇಲ್ಲ. ಇದರಿಂದಾಗಿಯೇ ಅಧಿಕ ಬೆಳೆ ಬೆಳೆದಾಗ ಬೆಲೆ ಕುಸಿಯುವುದು, ಇಳುವರಿ ಕಡಿಮೆಯಾದಾಗ ಬೆಲೆ ವಿಪರೀತ ಮಟ್ಟಕ್ಕೆ ಏರುವುದು ನಡೆಯುತ್ತದೆ.

ಬೆಂಗಳೂರು ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿದಿನ ಇಂತಹ ದೃಶ್ಯ ಸಾಮಾನ್ಯ –ಪ್ರಜಾವಾಣಿ ಚಿತ್ರ

ಯಶವಂತಪುರದ ಮಾರುಕಟ್ಟೆಯ ಮಹತ್ವ:
ವಿಸ್ತಾರವಾಗಿ ಬೆಳೆದಿರುವ ಈರುಳ್ಳಿ ಮಾರುಕಟ್ಟೆಯ ವಹಿವಾಟಿನ ಮೇಲೆ ಯಶವಂತಪುರ ಮಾರುಕಟ್ಟೆ ವರ್ತಕರು ಬಹುತೇಕ ಸಂಪೂರ್ಣ ಹಿಡಿದ
ಹೊಂದಿದ್ದಾರೆ. ಸುತ್ತಮುತ್ತಲ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯದಿದ್ದರೂ, ಇದು ದೇಶದ ಪ್ರಮುಖ ಈರುಳ್ಳಿ ವ್ಯಾಪಾರ ಕೇಂದ್ರ ಎನಿಸಿಬಿಟ್ಟಿದೆ.

ಎಪಿಎಂಸಿಗಳಿಗೆ ನೇರವಾಗಿ ರೈತರೇ ಈರುಳ್ಳಿ ತಂದು ಮಾರಾಟ ಮಾಡುವುದು ಕಡಿಮೆ. ಹೊಲದಲ್ಲೇ ಸ್ಥಳೀಯ ವರ್ತಕರಿಗೆ ಮಾರಾಟ ಮಾಡುವುದು ಅವರ ರೂಢಿ. ಹೊಲದಿಂದ ಖರೀದಿಸಿ ತರುವ ವ್ಯಾಪಾರಿಗಳು ಯಶವಂತಪುರದಲ್ಲಿ ಪ್ರತಿನಿತ್ಯ ಹರಾಜಿಗಿಡುತ್ತಾರೆ. ಹರಾಜಿನಲ್ಲಿ ಖರೀದಿಸುವ ಯಶವಂತಪುರದ ವರ್ತಕರು, ಬೇರೆ ಬೇರೆ ರಾಜ್ಯಗಳಿಗೆ ರವಾನಿಸುತ್ತಾರೆ.

ದಾಸ್ತಾನಿಟ್ಟು ಬೆಲೆ ಬಂದಾಗ ಮಾರಾಟ ಮಾಡುವ ಪದಾರ್ಥ ಅಲ್ಲದ ಕಾರಣ ಬೆಲೆಯಲ್ಲಿ ದಿಢೀರ್‌ ಏರಿಳಿತ ಉಂಟಾಗುತ್ತದೆ ಎಂದು ವರ್ತಕರು ಮತ್ತು ಅಧಿಕಾರಿಗಳು ಹೇಳುತ್ತಾರೆ. ಹೊಲದಿಂದ ಲಾರಿಗಳಲ್ಲಿ ತಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಹರಾಜಿಗಿಟ್ಟು ಅಲ್ಲಿಂದ ಬೇರೆಡೆಗೆ ಸಾಗಿಸಿ ಗ್ರಾಹಕರನ್ನು ತಲುಪುವಷ್ಟರಲ್ಲಿ ಕನಿಷ್ಠ ಐದಾರು ಕೈಗಳನ್ನು ದಾಟಿರುತ್ತದೆ. ಆಗ ಈರುಳ್ಳಿಯಲ್ಲಿ ಶೇ 30ರಿಂದ
ಶೇ 40ರಷ್ಟು ಕೊಳೆಯುವ ಸಾಧ್ಯತೆಯೂ ಇರುತ್ತದೆ.

ಯಶವಂತಪುರ ಮಾರುಕಟ್ಟೆಗೆ ರಾಜ್ಯ ಮಾತ್ರವಲ್ಲದೇ ಮಹಾರಾಷ್ಟ್ರದ ನಾಸಿಕ್‌ ಸುತ್ತಮುತ್ತಲ ಪ್ರದೇಶದಿಂದ ಈರುಳ್ಳಿ ಬಂದು ಸೇರುತ್ತದೆ. ಪ್ರತಿನಿತ್ಯ 1 ಸಾವಿರದಿಂದ 1,600 ಲಾರಿಗಳು ಈ ಮಾರುಕಟ್ಟೆಗೆ ಬಂದು ಹೋಗುತ್ತವೆ. ವರ್ಷಕ್ಕೆ 60 ಲಕ್ಷದಿಂದ 70 ಲಕ್ಷ ಕ್ವಿಂಟಲ್‌ ಈರುಳ್ಳಿ ವಹಿವಾಟು ಇಲ್ಲಿ ನಡೆಯುತ್ತದೆ. 2018-19ರಲ್ಲಿ 86 ಲಕ್ಷ ಕ್ವಿಂಟಲ್‌ಗೆ ಏರಿಕೆಯಾಗಿದ್ದ ಉದಾಹರಣೆಯೂ ಇದೆ. ಬೆಂಗಳೂರು ನಗರದಲ್ಲೇ ಪ್ರತಿನಿತ್ಯ 20 ಸಾವಿರ ಚೀಲ ಈರುಳ್ಳಿ ಖರ್ಚಾಗುತ್ತಿದೆ. ಜತೆಗೆ ತಮಿಳುನಾಡಿಗೆ ವರ್ಷದ 365 ದಿನವೂ ಯಶವಂತಪುರದಿಂದ ಈರುಳ್ಳಿ ಹೋಗುತ್ತದೆ. ಚೆನ್ನೈನಿಂದ ಹಡಗಿನಲ್ಲಿ ನೆರೆ ರಾಜ್ಯ, ಈಶಾನ್ಯ ರಾಜ್ಯಗಳು ಮತ್ತು ಹೊರ ದೇಶಕ್ಕೂ ಈರುಳ್ಳಿ ರಫ್ತಾಗುತ್ತದೆ. ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತಾಗುತ್ತದೆ. ಇಷ್ಟೆಲ್ಲ ವಹಿವಾಟಿನ ಕೇಂದ್ರಸ್ಥಳವಾದ ಯಶವಂತಪುರವೇ ಈರುಳ್ಳಿಯ ಬೆಲೆ ನಿರ್ಧಾರದ ಕೇಂದ್ರ ಬಿಂದು. ಇಲ್ಲಿಗೇ ನೇರವಾಗಿ ಈರುಳ್ಳಿ ತಂದು, ಮನೆಗೆ ಬರಿಗೈಲಿ ಹೋದ ಅದೆಷ್ಟೋ ರೈತರೂ ಇದ್ದಾರೆ. ಹೀಗಾಗಿ ಈರುಳ್ಳಿ ಮಾರುಕಟ್ಟೆ ಒಂದು ರೀತಿಯಲ್ಲಿ ಬೆಲೆ ನಿರ್ಧಾರದ ಜೂಜುಕಟ್ಟೆ ಎಂಬುದೂ ಸತ್ಯ.

ಪರಿಹಾರ ಅತ್ಯಲ್ಪ, ವಿಮೆಯೂ ಇಲ್ಲ: ಈ ವರ್ಷ ಮುಂಗಾರಿನಲ್ಲಿ ಭಾರಿ ಮಳೆಗೆ ರೈತರು ಬೆಳೆದ ಈರುಳ್ಳಿ ಬೆಳೆ ನಾಶವಾಯಿತು. ಕೃಷಿ ಇಲಾಖೆ ಬೆಳೆಹಾನಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸಿತ್ತು. ಅರ್ಜಿ ಸಲ್ಲಿಸಿದವರಿಗೆ ಕಂದಾಯ ಇಲಾಖೆಯಿಂದ ಪ್ರತಿ ಎಕರೆಗೆ ₹13,068 ಮಧ್ಯಂತರ ಪರಿಹಾರ ಸಿಕ್ಕಿದೆ ಎಂದು ಗದಗ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ಶೈಲೇಂದ್ರ ಬಿರಾದಾರ ಹೇಳಿದರು. ಈರುಳ್ಳಿಯ ಕಣ್ಣೀರಿಗೆ ಸರ್ಕಾರದಿಂದ ದೊರೆತ ಪರಿಹಾರ ಇಷ್ಟೇ.

ನಷ್ಟ ಭರಿಸುವ ನಿಟ್ಟಿನಲ್ಲಿ ವಿಮೆಯಾದರೂ ದೊರೆಯಿತೇ ಎಂದು ಕೇಳಿದರೆ ಅದೂ ಇಲ್ಲ. ಈಗಾಗಲೇ ಹಲವು ರೈತರು ಪ್ರತಿ ಹೆಕ್ಟೇರ್‌ಗೆ ₹3,600ರಂತೆ ಬೆಳೆ ವಿಮೆ ಕಂತು ತುಂಬಿದ್ದಾರೆ. ವಿಮೆ ಪರಿಹಾರಕ್ಕಾಗಿಯೂ ಕಾಯುತ್ತಿದ್ದಾರೆ. ಅವರಿಗೆ ಆಘಾತ ನೀಡುವ ಸುದ್ದಿಯೊಂದು ದೊರೆತಿದ್ದು, ಈರುಳ್ಳಿ ಬೆಳೆಯನ್ನು ಬೆಳೆವಿಮೆಗೆ ಇನ್ನೂ ಗುರುತಿಸಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹವಾಮಾನ ಬದಲಾವಣೆಯ ಮಹತ್ವವನ್ನು ಅರಿತುಕೊಂಡು ಬೆಳೆ ವಿಧಾನವನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಈಗ ಎದುರಾಗಿದೆ. ಈರುಳ್ಳಿಗೆ ಅಧಿಕ ಬೇಡಿಕೆ ಬಂದಾಗ ರೈತರೇ ನೇರವಾಗಿ ಈರುಳ್ಳಿ ಮಾರಾಟ ಮಾಡುವ ‌ವ್ಯವಸ್ಥೆಯೊಂದು ರೂಪುಗೊಂಡಾಗ ಮಾತ್ರ ಸದಾ ಕಣ್ಣೀರು ಹಾಕಿಸುವ ಈರುಳ್ಳಿ ಆನಂದಭಾಷ್ಪ ಸುರಿಸುವಂತೆ ಮಾಡೀತು.



ಸುರುಳಿ ರೋಗ ಬಾಧೆಯಿಂದ ಮುಕ್ತಿ ಇಲ್ಲ

ಕಳೆದ ಕೆಲ ವರ್ಷಗಳಲ್ಲಿ ಮುಂಗಾರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ ಬೆಳೆಯಲ್ಲಿ ಕಂಡುಬರುವ ಸುರುಳಿ ರೋಗಕ್ಕೆ ಕನಿಷ್ಠ ಕಾರಣ ತಿಳಿಯದೇ ಇರುವುದು ಮತ್ತು ಈ ರೋಗಕ್ಕೆ ನಿರೋಧಕ ಶಕ್ತಿ ಹೊಂದಿರುವ ತಳಿಗಳು ಇಲ್ಲದಿರುವುದು ಈ ಬೆಳೆ ಬೆಳೆಯುವ ಬಗ್ಗೆ ಚಿಂತೆಗೀಡುಮಾಡಿದೆ.

ಸುರುಳಿ ರೋಗ ಬಾಧಿತ ಗಿಡಗಳಲ್ಲಿ ಗಡ್ಡೆ ಕಟ್ಟುವ ಪ್ರಮಾಣ ಕ್ಷೀಣಿಸುವುದರಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೊಂದಿರುವ ತಳಿಯ ಲಭ್ಯ ಇಲ್ಲದಿರುವುದು, ನಿರ್ದಿಷ್ಟ ಬೆಲೆ ಸಿಗದಿರುವುದು ಹಾಗೂ ಈರುಳ್ಳಿ ಶೇಖರಣೆಗೆ ಅಗತ್ಯವಿರುವ ಶೀಥಲೀಕರಣ ಘಟಕ ಇಲ್ಲದಿರುವುದು ರೈತರ ಪಾಲಿಗೆ ದೊಡ್ಡ ಕೊರತೆ.

ಆದರೆ ನೆರೆಯ ಮಹಾರಾಷ್ಟ್ರ ಈರುಳ್ಳಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಮುಂಗಾರು ಮತ್ತು ಹಿಂಗಾರಿನಲ್ಲಿ ಉತ್ತಮವಾದ ಈರುಳ್ಳಿ ಬೆಳೆಯುತ್ತಾರೆ. ಅಲ್ಲಿ ಬೆಳೆದ ಈರುಳ್ಳಿ ಶೇಖರಣೆಗೆ ಸಾಕಷ್ಟು ಶೀಥಲೀಕರಣ ಘಟಕಗಳಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಕೊರತೆ ಉಂಟುಮಾಡಿ, ನಂತರ ಬೆಲೆ ಬಂದಾಗ ತಾವು ಶೇಖರಿಸಿದ ಈರುಳ್ಳಿ ಮಾರುಕಟ್ಟೆಗೆ ತರುವ ಸಾಧ್ಯತೆ ಇದೆ.

ಅತಿಯಾದ ಮಳೆ ತಡೆದುಕೊಳ್ಳಬಲ್ಲ ಅರ್ಕಾ ಕಲ್ಯಾಣ ತಳಿ ಇದೆಯಾದರೂ, ಅದೂ ಸುರುಳಿ ರೋಗಕ್ಕೆ ತುತ್ತಾದ ಉದಾಹರಣೆಗಳಿವೆ. ಹಾಗೆಯೇ ನಮ್ಮ ರಾಜ್ಯದಲ್ಲೂ ಅಲ್ಲಲ್ಲಿ ಕೆಲ ರೈತರು ಸಣ್ಣ ಪ್ರಮಾಣದಲ್ಲಿ ಖಾಸಗಿಯಾಗಿ ಶೀಥಲೀಕರಣ ಘಟಕಗಳನ್ನು ಮಾಡಿಕೊಂಡಿದ್ದಾರೆ. ಹಾಗೆಯೇ ಈರುಳ್ಳಿ ಬೀಜಗಳನ್ನು ಕೃಷಿ ವಿಶ್ವವಿದ್ಯಾಲಯ, ಖಾಸಗಿ ಕಂಪನಿಗಳು ಹಾಗೂ ರೈತರು ಪ್ರತಿ ವರ್ಷ ಉತ್ಪಾದಿಸುತ್ತಾರೆ. ಸಾಮಾನ್ಯವಾಗಿ ಬೀಜದ ಕೊರತೆ ಉಂಟಾಗುವುದಿಲ್ಲ. ಆದರೆ ಕೆಲವು ಬಾರಿ ಮಾರುಕಟ್ಟೆಯಲ್ಲಿ ಕಳಪೆ ಬೀಜ ಹಾಗೂ ಅವಧಿ ಮುಗಿದ ಬೀಜಗಳು ಮಾರಾಟವಾಗುವ ಸಾಧ್ಯತೆ ಇದೆ.

-ಡಾ. ಟಿ.ಆರ್.ಶಶಿಧರ, ಪ್ರಾಧ್ಯಾಪಕರು, ಮುಖ್ಯ ಸಂಶೋಧನಾ ಕೇಂದ್ರ, ಕೃಷಿ ವಿಶ್ವವಿದ್ಯಾಲಯ, ಧಾರವಾಡ


****

ನಾವು ಬೆಳೆದ ಈರುಳ್ಳಿಗೆ ಖರೀದಿದಾರರು ಮನ ಬಂದಂತೆ ಬೆಲೆ ಕೇಳುತ್ತಾರೆ. ಈರುಳ್ಳಿ ಮಾರಿದರೂ ತಕ್ಷಣಕ್ಕೆ ಹಣ ಸಿಗುವುದಿಲ್ಲ

-ದಿಲೀಪಕುಮಾರ ಕಿವಡೆ, ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡದ ಪ್ರಗತಿಪರ ರೈತ

****

ಸರ್ಕಾರದ ಸಹಾಯಧನ ಪಡೆದುಕೊಂಡು ಹೊಲದಲ್ಲೇ ಈರುಳ್ಳಿ ಸಂಗ್ರಹಣಾ ಘಟಕಗಳನ್ನು ಮಾಡುವತ್ತ ರೈತರು ಗಮನ ಹರಿಸಬೇಕು’

-ಸುರೇಶ್‌ ಕುಂಬಾರ, ಗದಗ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ

****

‘ವರ್ಷದಿಂದ ವರ್ಷಕ್ಕೆ ಕಸ ಹೆಚ್ಚಾಗುತ್ತಿದೆ. ಇದನ್ನು ಹೊಲದಿಂದ ತೆಗೆಸಲು ಮೊದಲು ₹ 10 ರಿಂದ ₹ 15 ಸಾವಿರ ಖರ್ಚು ಆಗುತ್ತಿತ್ತು. ಈಗ ₹ 30 ಸಾವಿರಕ್ಕೆ ಏರಿಕೆಯಾಗಿದೆ. ಕಾರ್ಮಿಕರ ಕೂಲಿ ಕೂಡ ಹೆಚ್ಚಾಗಿದೆ’

-ಶಿವಕುಮಾರ್‌ ಆದಾಪುರ,ಕೊಪ್ಪಳ ಜಿಲ್ಲೆಯ ತಳಕಲ್‌ ಗ್ರಾಮದ ರೈತ

****

‘ಸಗಟು ವ್ಯಾಪಾರಿಗಳು ಕಡ್ಡಾಯವಾಗಿ ಸ್ಥಳೀಯ ರೈತರ ಬೆಳೆಗಳನ್ನು ಖರೀದಿಸುವಂತೆ ಆದೇಶಿಸಬೇಕು. ಈರುಳ್ಳಿಗೆ ಬೆಂಬಲ ಬೆಲೆ ಕೊಡಬೇಕು. ಇದರಿಂದ ಮಾತ್ರ ರೈತನಿಗೆ ಉಳಿತಾಯ ಸಾಧ್ಯ’

-ಶಿವರಾಜ, ರಾಯಚೂರು ತಾಲ್ಲೂಕು ಕಡಗಂದೊಡ್ಡಿ ರೈತ

****

‘ಈರುಳ್ಳಿ ಬೆಳೆಗಾರರಿಗೆ ಕೈತುಂಬ ಆದಾಯ ತಂದುಕೊಡಬೇಕು ಎಂದಾದರೆ ಈರುಳ್ಳಿ ದರ ಸ್ಥಿರವಾಗಿರಬೇಕು, ಮಹಾರಾಷ್ಟ್ರದಲ್ಲಿ ಇರುವಂತೆ ಪ್ರತಿ ಜಿಲ್ಲೆಯಲ್ಲಿ ಈರುಳ್ಳಿ ಘಟಕಗಳು (ಗೋಡೌನ್‌) ಆರಂಭವಾಗಬೇಕು, ಸರ್ಕಾರದಿಂದ ವೈಜ್ಞಾನಿಕ ದರ ಅಥವಾ ಬೆಂಬಲ ಬೆಲೆ ಈರುಳ್ಳಿ ಬೆಳೆಗಾರರಿಗೆ ಲಭಿಸುವಂತಾಗಬೇಕು’

-ನಂದ ಬಸಪ್ಪ ಚೌದರಿ, ವಿಜಯಪುರ ಜಿಲ್ಲೆ ಬಳೂತಿ, ಗ್ರಾಮದ ರೈತ

****

ಬೆಲೆ ಕುಸಿತ ತಡೆಗೆ 'ಮೌಲ್ಯವರ್ಧನೆ' ಪರಿಹಾರ

-ಗಾಣಧಾಳು ಶ್ರೀಕಂಠ

ಈರುಳ್ಳಿ ಉತ್ಪಾದನೆ ಹೆಚ್ಚಾಗಿ, ಬೆಲೆ ಕುಸಿದು ಬೆಳೆದವರು ನಷ್ಟ ಅನುಭವಿಸುವ ಸಂದರ್ಭದಲ್ಲಿ, ವ್ಯರ್ಥವಾಗುವ ಈರುಳ್ಳಿಯನ್ನು ಒಣಗಿಸಿ ಪ್ಯಾಕ್‌ ಮಾಡಿ ಮಾರಾಟ ಮಾಡಬಹುದು.

ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಓಝರ್‌ ಎಂಬಲ್ಲಿರುವ ಶ್ರೀಸಂತ ಸೇವಾ ಶೇತ್ಕರಿ ಗಟ್‌ ಎಂಬ ರೈತ ಉತ್ಪಾದಕ ಸಂಸ್ಥೆಯಲ್ಲಿ ಒಣಗಿಸಿದ ತರಕಾರಿಗಳ ಜೊತೆಗೆ ಒಣ ಈರುಳ್ಳಿಯನ್ನೂ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಅಲ್ಲಿನ ಕೃಷಿಕರು ಈರುಳ್ಳಿಯನ್ನು ಸೋಲಾರ್‌ ಡ್ರೈಯರ್‌ನಲ್ಲಿ ಒಣಗಿಸಿ, ಕೆ.ಜಿ ಒಣ ಈರುಳ್ಳಿಗೆ ₹120 ದರ ನಿಗದಿಪಡಿಸಿ ಮಾರಾಟ ಮಾಡಿದ್ದಾರೆ. ಈರುಳ್ಳಿ ಬೆಲೆ ಕುಸಿದಾಗ, ಹೀಗೆ ಒಣಗಿಸಿ ಮಾರಾಟ ಮಾಡಿ, ನಷ್ಟವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ತಾಂತ್ರಿಕ ಮಹಾ ವಿದ್ಯಾಲಯದ ಸಂಸ್ಕರಣಾ ಮತ್ತು ಆಹಾರ ತಂತ್ರಜ್ಞಾನ ವಿಭಾಗ ಈರುಳ್ಳಿ ಒಣಗಿಸುವ (ನಿರ್ಜಲೀಕರಿಸುವ) ತಂತ್ರಜ್ಞಾನ ಮತ್ತು ಯಂತ್ರಗಳನ್ನು ಅಭಿವೃದ್ಧಿಪಡಿಸಿದೆ. ಆಸಕ್ತರು ಮುಂದೆ ಬಂದರೆ, ತಂತ್ರಜ್ಞಾನ ನೀಡುವ ಜೊತೆಗೆ, ಸಬ್ಸಿಡಿ ದರದಲ್ಲಿ ಯಂತ್ರಗಳನ್ನು ಕೊಡುವುದಾಗಿಯೂ ಹೇಳಿದೆ.

ಮೌಲ್ಯವರ್ಧನೆ ಸೂಕ್ತ : ‘ಈರುಳ್ಳಿ ಉತ್ಪಾದನೆ ಹೆಚ್ಚಾಗಿ, ಬೆಲೆ ಕುಸಿದಾಗ ಬೆಳೆಗಾರರು, ಅದನ್ನು ಒಣಗಿಸಿ ಮಾರಾಟ ಮಾಡುವುದು ಸರಿಯಾದ ಕ್ರಮ. ಇದರಿಂದ ಬೆಳೆ ನಷ್ವವನ್ನು ತಪ್ಪಿಸಬಹುದು‘ ಎನ್ನುತ್ತಾರೆ ರಾಯಚೂರು ಕೃಷಿ ವಿವಿಯ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಉದಯಕುಮಾರ್ ನಿಡೋಣಿ.

10 ರಿಂದ 11 ಕೆ.ಜಿ ಹಸಿ ಈರುಳ್ಳಿ ಒಣಗಿಸಿದರೆ, 1 ಕೆ.ಜಿ ಒಣ ಈರುಳ್ಳಿ ಸಿಗುತ್ತದೆ. ಈರುಳ್ಳಿ ಬೆಲೆ ಕಡಿಮೆ ಇದ್ದಾಗ ಮಾತ್ರ ಅದನ್ನು ಮೌಲ್ಯವರ್ಧಿಸಿ ಮಾರಾಟ ಮಾಡಿದರೆ ಲಾಭವಾಗುತ್ತದೆ. ಇಲ್ಲದಿದ್ದರೆ, ನಿಗದಿತ ಮಾರುಕಟ್ಟೆ ಕಂಡುಕೊಂಡವರು, ಯಾವುದೇ ಸಮಯದಲ್ಲೂ ಈರುಳ್ಳಿ ಒಣಗಿಸಿ ಪ್ಯಾಕ್‌ ಮಾಡಿ ಮಾರಾಟ ಮಾಡಬಹುದು‘ ಎಂದು ಅವರು ಅಭಿಪ್ರಾಯಪಡುತ್ತಾರೆ.

ಒಂದು ಕೆ.ಜಿ ಕೆಂಪು ಮತ್ತು ಗುಲಾಬಿ ಬಣ್ಣದ ಡಿಹೈಡ್ರೇಟೆಡ್‌ ಈರುಳ್ಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ₹300 ರಿಂದ ₹400 ಬೆಲೆ ಇದೆ. ಬಿಳಿ ಈರುಳ್ಳಿ ಕೆ.ಜಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹150, ₹180 ರಿಂದ ₹200 ವರೆಗೂ ಇದೆ.

ಇನ್ನಷ್ಟು ಉತ್ಪನ್ನಗಳು: ಈರುಳ್ಳಿಯನ್ನು ಕೇವಲ ಒಣಗಿಸುವುದಷ್ಟೇ ಅಲ್ಲ, ಇದನ್ನು ಪುಡಿ ಮಾಡಿ, ಪೇಸ್ಟ್ ಮಾಡಿಯೂ ಮಾರುಕಟ್ಟೆ ಮಾಡಲಾಗುತ್ತಿದೆ. ಇತ್ತೀಚೆಗೆ ಫಾಸ್ಟ್‌ಫುಡ್ ರೆಸ್ಟೊರೆಂಟ್‌ಗಳು, ಸ್ಟಾರ್‌ಹೋಟೆಲ್‌ಗಳು, ಚಾಟ್ ಸೆಂಟರ್ ಸೇರಿದಂತೆ ಹಲವು ಕಡೆಗಳಲ್ಲಿ ಈ ಡೀಹೈಡ್ರೇಟೆಡ್ ಈರುಳ್ಳಿಗೆ ಬೇಡಿಕೆ ಇದೆ. ಈರುಳ್ಳಿಯ ರಸದಿಂದ ಸೌಂದರ್ಯವರ್ಧಕ ಉತ್ಪನ್ನಗಳು, ಶ್ಯಾಂಪುವಿನಂತಹ ವಸ್ತುಗಳಲ್ಲಿ‌ ಪೂರಕ ಸಾಮಗ್ರಿಯಾಗಿ ಬಳಸಲಾಗುತ್ತಿದೆ.

ಈಗ ರೈತ ಉತ್ಪಾದಕ ಸಂಸ್ಥೆಗಳ ಕಾಲ. ಈರುಳ್ಳಿ ಬೆಳೆಗಾರರು ಇಂಥದ್ದೊಂದು ಸಂಸ್ಥೆ ಮಾಡಿಕೊಂಡು, ನಬಾರ್ಡ್ ಅಥವಾ ಸರ್ಕಾರದ ಯಾವುದೇ ಏಜೆನ್ಸಿಯ ಆರ್ಥಿಕ ನೆರವಿನೊಂದಿಗೆ ಯಂತ್ರಗಳನ್ನು ಖರೀದಿಸಿ ಈರುಳ್ಳಿ‌ ಮೌಲ್ಯವರ್ಧನೆ ಮಾಡಿ, ಪ್ಯಾಕ್ ಮಾಡಿ, ತಮ್ಮದೇ ಬ್ರ್ಯಾಂಡ್‌ನಡಿ ಮಾರಾಟ ಮಾಡಬಹುದು‌.

ಒಣ ಈರುಳ್ಳಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ, ಉತ್ತಮ ಬೆಲೆಯೂ ಇದೆ. ಮಹಾರಾಷ್ಟ್ರ, ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಈರುಳ್ಳಿ ಒಣಗಿಸಿ ಮಾಡುವ ದೊಡ್ಡ ಕಂಪನಿಗಳಿವೆ. ಇವು ವಿದೇಶಕ್ಕೂ ಒಣ ಈರುಳ್ಳಿ ರಫ್ತು ಮಾಡುತ್ತವೆ.

ಪೂರಕ ಮಾಹಿತಿ: ಬಸವರಾಜ ಸಂಪಳ್ಳಿ, ವಿಜಯಕುಮಾರ್ ಎಸ್‌.ಕೆ., ಇ.ಎಸ್.ಸುಧೀಂದ್ರ ಪ್ರಸಾದ್‌, ಸತೀಶ್ ಬೆಳ್ಳಕ್ಕಿ, ಡಿ.ಬಿ.ನಾಗರಾಜ, ನಾಗರಾಜ ಚಿನಗುಂಡಿ, ಚಂದ್ರಕಾಂತ ಮಸಾನಿ, ಪ್ರಮೋದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.