ADVERTISEMENT

ಒಳನೋಟ | ನಕಲಿ ವ್ಯಾಜ್ಯದ ತಾಯಿ ಬೇರು ‘ಫ್ರಾಂಕಿಂಗ್‌’

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 19:45 IST
Last Updated 21 ಆಗಸ್ಟ್ 2021, 19:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಉಪಯೋಗಿಸದೇ ಇರುವ ಖಾಸಗಿ ಜಮೀನಿನ ಮೇಲೆ ‘ನಕಲಿ ವ್ಯಾಜ್ಯ’ ಸೃಷ್ಟಿಸಿ ಭೂಮಿ ಕಬಳಿಸಲು ನಕಲಿ ಛಾಪಾಕಾಗದ, ಅದನ್ನು ಸಿಂಧುಗೊಳಿಸಲು ಬಳಸುವ ಉಬ್ಬಚ್ಚುಯಂತ್ರ ಹಾಗೂ ಉಪನೋಂದಣಾಧಿಕಾರಿಗಳ ಮುದ್ರೆಗಳನ್ನೇ ಅಕ್ರಮದ ಭಾಗಿದಾರರು ಬಳಸುತ್ತಿದ್ದಾರೆ.

‘ಪ್ರಜಾವಾಣಿ’ ವರದಿ ಆಧರಿಸಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರು (ಐಜಿಆರ್‌) ಸಲ್ಲಿಸಿದ ದೂರು ಆಧರಿಸಿಯೇ, ಇದರ ಜಾಲ ಬೆನ್ನು ಹತ್ತಿದ ಸಿಐಡಿ ಈಗ ಅಕ್ರಮದ ಕೂಟವನ್ನೇ ಬಯಲಿಗೆ ಎಳೆದಿದೆ.

ಯಾವುದೇ ಜಮೀನು ತನ್ನದು ಎಂದು ಪ್ರತಿಪಾದಿಸಲು ಮೂಲ ದಾಖಲೆ ಅಗತ್ಯ. ಕಳೆದ 20 ವರ್ಷದಿಂದೀಚೆಗೆ ನೋಂದಣಿ ಮತ್ತು ಜಮೀನು ಸಂಬಂಧಿತ ಕ್ರಯ–ವಿಕ್ರಯ, ಅಡಮಾನದ ವಿವರಗಳು ಭೂಮಿ ತಂತ್ರಾಂಶದ ಮೂಲಕವೇ ನಡೆಯುತ್ತವೆ. ನಕಲಿ ವ್ಯಾಜ್ಯ ಸೃಷ್ಟಿಸುವವರು 40–50 ವರ್ಷಗಳ ಹಿಂದೆ ಕ್ರಯ, ದಾನ ಪತ್ರ ಮಾಡಿದಂತೆ ದಾಖಲೆ ಸೃಷ್ಟಿಸಿ, ಭೂಕಬಳಿಕೆ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖವಾಗಿ ಬಳಕೆಯಾಗುತ್ತಿರುವುದು ಉಬ್ಬಚ್ಚು ಯಂತ್ರ (ಫ್ರಾಂಕಿಂಗ್‌).

ADVERTISEMENT
ಫ್ರಾಕಿಂಗ್ ಅಕ್ರಮದ ಕುರಿತು ಗಾಂಧಿನಗರ ಉಪನೋಂದಣಾಧಿಕಾರಿ ನೀಡಿದ ದೂರಿನಲ್ಲಿ ‘ಪ್ರಜಾವಾಣಿ’ ವರದಿಯ ಉಲ್ಲೇಖ

ಉದಾಹರಣೆಗೆ, 1965ರಲ್ಲಿನ ಜಮೀನು ವ್ಯವಹಾರದ ದಾಖಲೆ ಸೃಷ್ಟಿಸಲು ಆಗ ಚಾಲ್ತಿಯಲ್ಲಿದ್ದ ಛಾಪಾ ಕಾಗದದ (ಅತ್ಯಂತ ಹಳೆಯದಂತೆ ಕಾಣಿಸುವ) ದಾಖಲೆ ಸೃಷ್ಟಿಮಾಡಲಾಗುತ್ತದೆ. ಇ–ಸ್ಟಾಂಪಿಂಗ್‌ಗೆ ಸರಿಸಮಾನವಾದ ಮಾನ್ಯತೆ ಹೊಂದಿರುವ ಫ್ರಾಂಕಿಂಗ್ ಯಂತ್ರದಿಂದ ಮುದ್ರಿತವಾಗಿರುವ ಪತ್ರಗಳನ್ನು ಸಿದ್ಧಪಡಿಸಲಾಗುತ್ತದೆ. ಬೆಂಗಳೂರು ಸೇರಿದಂತೆ ಹಲವು ಕಡೆಗಳ ಉಪನೋಂದಣಾಧಿಕಾರಿ ಕಚೇರಿಗಳಿಗೆ ಉಬ್ಬಚ್ಚು ಯಂತ್ರಕ್ಕಾಗಿಯೇ ನಿರ್ದಿಷ್ಟ ಸಂಖ್ಯೆಯನ್ನು (ಗಾಂಧಿನಗರ–ಪಿಬಿ 6924, ಯಲಹಂಕ –ಪಿಬಿ 6944) ನೀಡಲಾಗಿದೆ. ಹೀಗೆ ಸೃಷ್ಟಿಸಲಾದ ಉಬ್ಬಚ್ಚುಯಂತ್ರದ ದಾಖಲೆಯನ್ನು ಆಯಾ ದಿನ ಉಬ್ಬಚ್ಚು(ಫ್ರಾಂಕಿಂಗ್‌) ಮಾಡಿರುವ ಬಗ್ಗೆ ಕ್ರಮ ಸಂಖ್ಯೆ ನಮೂದಿಸಿ, ಇದಕ್ಕಾಗಿಯೇ ಮೀಸಲಾದ ಪುಸ್ತಕದಲ್ಲಿ ಉಬ್ಬಚ್ಚು ಪತ್ರದ ಸಂಖ್ಯೆ, ಮೊತ್ತ ಹಾಗೂ ದಿನಾಂಕವನ್ನು ದಾಖಲು ಮಾಡಲಾಗುತ್ತದೆ.

ಇದೇ ರೀತಿ ಯಲಹಂಕ, ಕೆಂಗೇರಿ, ಶಿವಾಜಿನಗರ, ಗಾಂಧಿನಗರಗಳ (ಬೆಂಗಳೂರಿನಲ್ಲಿ ಪ್ರಮುಖವಾಗಿ ಆಸ್ತಿ ನೋಂದಣಿಯಾಗುವ ಕಚೇರಿಗಳು) ಫ್ರಾಂಕಿಂಗ್‌ ಯಂತ್ರ ಬಳಸಿ ಕ್ರಯಪತ್ರ, ಕರಾರು ಪತ್ರ, ತಕರಾರು ದಾವೆಗೆ ದಾಖಲು ಪತ್ರ, ಉಯಿಲು, ಜಿಪಿಎ, ಆಸ್ತಿ ಪರಭಾರೆ ಒಪ್ಪಂದ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಲಾಗುತ್ತಿದೆ. ಇದನ್ನು ಬಳಸಿಕೊಂಡು, ತಮ್ಮ ಆಸ್ತಿ ದಾಖಲೆಯ ಗೊಡವೆಗೇ ಹೋಗದ ಬಡವರು, ಮಧ್ಯಮವರ್ಗದವರು, ವಿದೇಶಗಳಲ್ಲಿರುವವರ ಆಸ್ತಿ ಕಬಳಿಸಲಾಗುತ್ತಿದೆ. ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಟ್ಟಿದ್ದಾರೆ ಎಂದು 10–20 ವರ್ಷಗಳ ಹಿಂದಿನ ದಾಖಲೆ ಸೃಷ್ಟಿಸಲಾಗುತ್ತಿದೆ. ಇದನ್ನೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಮೂಲ ಆಸ್ತಿದಾರರಿಗೆ ಗೊತ್ತಿಲ್ಲದಂತೆಯೇ ಲಪಟಾಯಿಸಲಾಗುತ್ತಿದೆ.

ಇಂಥ ಅಕ್ರಮ ನಡೆಯುತ್ತಿರುವ ಬಗ್ಗೆ ವೈಟ್‌ಫೀಲ್ಡ್‌ನ ಎಂ. ಮಂಜುಳಾ ದೂರು ನೀಡಿದ್ದರು. ಇದನ್ನು ಪರಿಶೀಲಿಸಿದಾಗ ಯಲಹಂಕ, ಕೆಂಗೇರಿ, ಶಿವಾಜಿನಗರದ ಮೊಹರು ಹಾಗೂ ಉಪನೋಂದಣಾಧಿಕಾರಿ ಸಹಿ ಇರುವ ನಕಲಿ ದಾಖಲೆಗಳು ಪತ್ತೆಯಾಗಿದ್ದವು. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆಗಿತ್ತು. ಯಾವುದೋ ಜಾಗದಲ್ಲಿ ಸೃಷ್ಟಿಸುವ ಉಬ್ಬಚ್ಚುಯಂತ್ರದ ದಾಖಲೆಗಳನ್ನು ನೋಂದಣಾಧಿಕಾರಿ ಕಚೇರಿಯ ಮೊಹರು ಮತ್ತು ಸಹಿಯನ್ನು ನಕಲು ಮಾಡಿ ಅಧಿಕೃತ ದಾಖಲೆಯಾಗಿಸಿ ಕೋರ್ಟ್‌ಗೆ ಸಲ್ಲಿಸಲಾಗುತ್ತದೆ. ಅಕ್ರಮದ ಭಾಗಿದಾರರು, ಕಂದಾಯ ಇಲಾಖೆ ಅಧಿಕಾರಿಗಳು, ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಹಾಗೂ ವಕೀಲರು ಹೀಗೆ ಒಂದು ಕೂಟ ಇದರಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.