ADVERTISEMENT

ಒಳನೋಟ: ನೆಲೆ ಕಲ್ಪಿಸಿದ ನೆಲ ಕುಸಿದೊಡೆ...

ಸದಾಶಿವ ಎಂ.ಎಸ್‌.
Published 31 ಜುಲೈ 2021, 19:59 IST
Last Updated 31 ಜುಲೈ 2021, 19:59 IST
ಭೂಕುಸಿತಕ್ಕೆ ಒಳಗಾಗಿ ರಸ್ತೆ ಸಂಪರ್ಕ ಕಡಿದುಕೊಂಡಿರುವ ಯಲ್ಲಾಪುರ ತಾಲ್ಲೂಕಿನ ಕಳಚೆಯಲ್ಲಿ ರೋಗಿಯೊಬ್ಬರನ್ನು ಜೋಳಿಗೆಯಲ್ಲಿ ಹೊತ್ತುಕೊಂಡು ಬರುತ್ತಿರುವುದು – ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್.
ಭೂಕುಸಿತಕ್ಕೆ ಒಳಗಾಗಿ ರಸ್ತೆ ಸಂಪರ್ಕ ಕಡಿದುಕೊಂಡಿರುವ ಯಲ್ಲಾಪುರ ತಾಲ್ಲೂಕಿನ ಕಳಚೆಯಲ್ಲಿ ರೋಗಿಯೊಬ್ಬರನ್ನು ಜೋಳಿಗೆಯಲ್ಲಿ ಹೊತ್ತುಕೊಂಡು ಬರುತ್ತಿರುವುದು – ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್.   

ಕಾರವಾರ: ರಾತ್ರಿ ಬೆಳಗಾಗುವಷ್ಟರಲ್ಲಿ ಈ ಪುಟ್ಟ ಹಳ್ಳಿಯಲ್ಲಿ ಭೀಕರ ಪರಿಸ್ಥಿತಿ ತಲೆದೋರಿ, ನಿವಾಸಿಗಳು ಸಂಕಟದಲ್ಲಿದ್ದರು.

‘ಸಾರ್... ತೋಟ, ಮನೆ ಎಲ್ಲವೂ ಹೋಯ್ತು. ಮಕ್ಳು–ಮರಿ ಇದಾರೆ. ಎಲ್ಲಿಗೆ ಹೋಗೋದು, ಏನು ಮಾಡ್ಬೇಕು ಗೊತ್ತಾಗ್ತಿಲ್ಲ. ನಾವು ಇಷ್ಟು ವರ್ಷಗಳಿಂದ ಪೂಜಿಸ್ಕೊಂಡು ಬಂದಿದ್ದ ಊರೇ ಈಗ ಕುಸಿದು ಬಿದ್ದಿದೆ. ನಮ್ಮನ್ನ ನೀವೇ ಮೇಲೆತ್ತಬೇಕು...’

ಭೀಕರ ಭೂ ಕುಸಿತಕ್ಕೆ ಒಳಗಾಗಿರುವ ಯಲ್ಲಾಪುರ ತಾಲ್ಲೂಕಿನ ಕಳಚೆಯಲ್ಲಿ ಪರಿಶೀಲನೆಗೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿದ್ದಾಗ, ಎದುರಾದ ಕುಟುಂಬದ ಹಿರಿಯರೊಬ್ಬರು ಹೀಗೆ ಅಂಗಲಾಚುತ್ತ ಗದ್ಗದಿತರಾದರು.

ADVERTISEMENT

ಅವರ ಹಿಂದೆಯೇ ರೋಗಿಯೊಬ್ಬರನ್ನು ಜೋಳಿಗೆಯಲ್ಲಿ ಮಲಗಿಸಿ ಮರದ ಕೋಲುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿದ್ದವರು ಜೊತೆಯಾದರು. ಈ ಸೇವೆಯಲ್ಲಿ ನಿರತರಾಗಿದ್ದವರು ನಾಲ್ಕಾರು ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯ ಸಮಾಜಸೇವಕರು. ಅವರು ಸುಮಾರು 10 ಕಿಲೋಮೀಟರ್ ಈ ರೀತಿ ಸಾಗಿದರೆ ಮಾತ್ರ ವಾಹನದ ಬಳಿ ತಲುಪಲು ಸಾಧ್ಯವಿತ್ತು.

‘ನಾವಿದ್ದ ಮನೆ ಕುಸಿದು ಬೀಳುವ ಹಂತದಲ್ಲಿದೆ. ಅಲ್ಲಿರಲು ಸಾಧ್ಯವಿಲ್ಲ. ಯಲ್ಲಾಪುರದಲ್ಲಿ ಬಾಡಿಗೆ ಮನೆ ಹುಡುಕಿದ್ದೇನೆ. ಕುಟುಂಬ ಸಮೇತ ಅಲ್ಲಿಗೆ ಹೋಗ್ತಿದೇನೆ. ಊರಿನ ಸ್ಥಿತಿ ನೋಡಲೂ ನಮ್ಮ ಕೈಲಿ ಆಗ್ತಿಲ್ಲ...’ ಎಂದು ವ್ಯಥೆಪಟ್ಟವರು ಬ್ಯಾಂಕ್ ಉದ್ಯೋಗಿ ಸುನೀಲ್.

ಇಂಥ ಹತ್ತಾರು ನಿದರ್ಶನಗಳು ಇಲ್ಲಿವೆ. ಇಲ್ಲಿ ರಾತ್ರಿ ಬೆಳಗಾಗುವಷ್ಟರಲ್ಲಿ ಸಿರಿವಂತರು ಬಡವರು ಎಲ್ಲರೂ ಒಂದೇ ಸ್ಥಿತಿಗೆ ತಲುಪಿದ್ದಾರೆ. ನೆಲೆ ಕಲ್ಪಿಸಿದ್ದನೆಲ ಬಾಯ್ತೆರೆದು ಸರ್ವಸ್ವವನ್ನೂ ಕಬಳಿಸಿದೆ.

ಅಡಿಕೆ ತೋಟದ ನಡುವೆ ಇರುವ ಒಂಟಿ ಮನೆಗಳನ್ನು ನೋಡಿದರೆ ಬಹುತೇಕ ಎಲ್ಲೆಡೆ ಮೌನ ಆವರಿಸಿತ್ತು. ಭೂಕುಸಿತ ಮತ್ತು ಭಾರಿ ಮಳೆಯಿಂದ ಬೆಟ್ಟದ ಕೆಳಗೆ ಉಂಟಾಗಿದ್ದ ಕಂದಕದ ಬಳಿ ‘ಆಚೆತೋಟ’ದ ಮನೆಯಲ್ಲಿ ವೆಂಕಟ್ರಮಣ ಭಟ್ ಕುಟುಂಬವೊಂದಿತ್ತು. ಅವರ ಮನೆಯ ಅಂಗಳ, ಗೋಡೆಗಳು ಬಿರುಕು ಬಿಟ್ಟಿವೆ. ಯಾರನ್ನಾದರೂ ಸಂಪರ್ಕಿಸಲು ದಾರಿಯೂ ಇಲ್ಲದ ಸ್ಥಿತಿ ಅವರದ್ದಾಗಿತ್ತು.

ಭೂಕುಸಿತವಾದ ಇಡೀ ಪ್ರದೇಶವನ್ನು ವೀಕ್ಷಿಸಿ ಪುನಃ ಬೆಟ್ಟದ ಮೇಲ್ಭಾಗದ ತಳಕೆಬೈಲ್‌ಗೆ ತಲುಪಿದಾಗ ಸಂಜೆಯಾಗಿತ್ತು. ರಾಜ್ಯ ಹೆದ್ದಾರಿ 6ರಲ್ಲಿ ಭೂ ಕುಸಿತವಾಗಿ ಅಲ್ಲಿ ರಸ್ತೆ ಸಂಪರ್ಕ ಕಡಿತವಾಗಿದೆ.

‌ಮೊಬೈಲ್ ಫೋನ್ ಬ್ಯಾಟರಿ ಚಾರ್ಜ್ ಮಾಡಲಾದರೂ ಬೇಕು ಎಂದು ಜನರೇಟರ್ ಅನ್ನು ತಲೆಹೊರೆಯಲ್ಲಿ ಹೊತ್ತುಕೊಂಡು ಸಾಗುತ್ತಿದ್ದ ವೆಂಕಟ್ರಮಣ ಹೆಗಡೆ ಎದುರಾದರು. ಅವರ ಮಗ ದೂರದ ಊರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಇಲ್ಲಿನ ವಿದ್ಯಮಾನಗಳ ಬಗ್ಗೆ, ತಮ್ಮ ಯೋಗಕ್ಷೇಮದ ವಿಚಾರ ತಿಳಿಸಲು ಮೊಬೈಲ್ ಅನಿವಾರ್ಯ. ವಿದ್ಯುತ್ ಸಂಪರ್ಕ ಸರಿಯಾಗಲು ಅದೆಷ್ಟು ದಿನಗಳೇ ಬೇಕೋ ಏನೋ. ಹಾಗಾಗಿ ಯಲ್ಲಾಪುರದಿಂದ ಬಾಡಿಗೆಗೆ ಜನರೇಟರ್ ತಂದಿದ್ದಾಗಿ ಹೇಳಿ ಕಳಚೆಯತ್ತ ಹೆಜ್ಜೆ ಹಾಕಿದರು.

ಮತ್ತೆ ನಿರಾಶ್ರಿತರಾದರು

90ರ ದಶಕದಲ್ಲಿ ಕೊಡಸಳ್ಳಿ ಜಲಾಶಯ ನಿರ್ಮಾಣಕ್ಕೆಂದು ಜಮೀನು ಕಳೆದುಕೊಂಡ ಕೆಲವರು, ಕಳಚೆಯಲ್ಲಿ ಬದುಕು ಕಟ್ಟಿಕೊಂಡಿದ್ದರು. ಮೊದಲಿನ ಊರು ಬಿಟ್ಟು ಬಂದ ನೋವು ಮರೆತು ಹೊಸ ನೆಲೆಯಲ್ಲಿ ಜೀವನ ನಡೆಸುತ್ತಿದ್ದರು. ಆದರೆ, ಜುಲೈ 22 ಮತ್ತು 23ರಂದು ಕಳಚೆಯಲ್ಲಿ ಆದ ಭೂಕುಸಿತವು, ಅವರಲ್ಲಿ ಹಲವರನ್ನು ನಿರಾಶ್ರಿತರನ್ನಾಗಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.