ADVERTISEMENT

ಒಳನೋಟ: ಗ್ರಾಮೀಣರಿಗೆ ಸಿಗದ ಆರೋಗ್ಯ ಭಾಗ್ಯ

ಆರೋಗ್ಯ ಕೇಂದ್ರಗಳು ಬಲು ದೂರ l ಹಲವೆಡೆ ಸಿಬ್ಬಂದಿ ಕೊರತೆ l ಸಾರಿಗೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 22 ಮೇ 2021, 19:45 IST
Last Updated 22 ಮೇ 2021, 19:45 IST
ಲಾಕ್‌ಡೌನ್‌ನಿಂದ ಜನರ ಓಡಾಟ ಇಲ್ಲದಿರುವುದರಿಂದ ಹೂವಿನಹಡಗಲಿ ತಾಲ್ಲೂಕಿನ ಹೊಳಲು ಆರೋಗ್ಯ ಕೇಂದ್ರ ಜನರಿಲ್ಲದೆ ಬಿಕೋ ಎನ್ನುತ್ತಿರುವುದು
ಲಾಕ್‌ಡೌನ್‌ನಿಂದ ಜನರ ಓಡಾಟ ಇಲ್ಲದಿರುವುದರಿಂದ ಹೂವಿನಹಡಗಲಿ ತಾಲ್ಲೂಕಿನ ಹೊಳಲು ಆರೋಗ್ಯ ಕೇಂದ್ರ ಜನರಿಲ್ಲದೆ ಬಿಕೋ ಎನ್ನುತ್ತಿರುವುದು   

ವಿಜಯನಗರ/ ಬೆಳಗಾವಿ: ‘ನಮ್ಮ ಊರು ಸುತ್ತ ಯಾವುದೇ ದವಾಖಾನಿ ಇಲ್ರಿ. ಏನೇ ತುರ್ತು ಇದ್ರೂ 20 ಕಿ.ಮೀ ದೂರದಾಗ ಇರುವ ಹೊಳಲು ಹೋಬಳಿಗೆ ಹೋಗಬೇಕ್ರಿ. ಅಲ್ಲೂ ಡಾಕ್ಟರ್‌ ಸಿಗ್ತಾರ ಅನ್ನೋ ಖಾತ್ರಿ ಇಲ್ಲ. ಇದ್ರೂ ಚಿಕಿತ್ಸೆ ಸಿಗೋದ ಅನುಮಾನ. ಹಂಗಾಗಿ ಬೇರೆ ಊರಿನ ದೊಡ್ಡ ಖಾಸಗಿ ಆಸ್ಪತ್ರೆಗೆ ಹೋಗ್ತಾರ್‍ರಿ’

ಇದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಅಂಚಿನಲ್ಲಿರುವ ಹರವಿ ಗ್ರಾಮದ ಬಸವರಾಜ ಅವರ ಮಾತು.

ಹೂವಿನಹಡಗಲಿ ತಾಲ್ಲೂಕೊಂದೇ ಅಲ್ಲ, ಇದು ರಾಜ್ಯದ ನೂರಾರು ಹಳ್ಳಿಗಳಲ್ಲಿ ಇರುವಂತಹ ಸ್ಥಿತಿಯ ಚಿತ್ರಣದ ಒಂದು ಉದಾಹರಣೆಯಷ್ಟೆ. ಗ್ರಾಮೀಣ ಜನರಿಗೆ ಸಮರ್ಪಕ ಆರೋಗ್ಯ ಸೇವೆಯು ಮರೀಚಿಕೆಯಾಗಿಯೇ ಉಳಿದಿರುವುದನ್ನು ಇಂತಹ ಹಳ್ಳಿಗಳಲ್ಲಿನ ಸ್ಥಿತಿಯು ಸಾರಿ ಹೇಳುತ್ತಿದೆ.

ADVERTISEMENT

ಅವಳಿ ಜಿಲ್ಲೆಗಳಾದ ಬಳ್ಳಾರಿ–ವಿಜಯನಗರ, ಹಾವೇರಿ–ಗದಗ ಜಿಲ್ಲೆಗಳಲ್ಲೂ ಇಂತಹುದೇ ಸಮಸ್ಯೆ ಇದೆ. ಉತ್ತಮ ಚಿಕಿತ್ಸಾ ಸೌಲಭ್ಯ ಸಿಗದ ಕಾರಣ ಈ ಜಿಲ್ಲೆಯವರು ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವ ಅನಿವಾರ್ಯ ಇದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಹಳ್ಳಿ ಕೊಟ್ಟಲಗಿಯ ಸ್ಥಿತಿ ನೋಡಿ, ಅಲ್ಲಿನ ಜನರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕೆಂದರೆ 20 ಕಿ.ಮೀ. ಪ್ರಯಾಣಿಸಬೇಕು. ಕೋವಿಡ್ ಲಾಕ್‌ಡೌನ್‌ ಕಾರಣದಿಂದ ಸಾರಿಗೆ ವ್ಯವಸ್ಥೆ ಇಲ್ಲ. ದ್ವಿಚಕ್ರವಾಹನದಲ್ಲಿ ಹೋಗಲು ಪೊಲೀಸರ ಭಯ.

ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪಲು ಅವರುಪಡುವ ಪಡಿಪಾಟಲು ಒಂದೆರಡಲ್ಲ. ಸ್ವಂತ ವಾಹನ ಇಲ್ಲದವರು ಪರರ ಸಹಾಯ ಪಡೆಯಬೇಕು. ಲಾಕ್‌ಡೌನ್‌ ಇಲ್ಲದ ಸಾಮಾನ್ಯ ದಿನಗಳಲ್ಲೂ ಯಾವಾಗಲೋ ಒಮ್ಮೆ ಬರುವ ಬಸ್‌ ಹಿಡಿದು ಆಸ್ಪತ್ರೆತಲುಪಬೇಕು. ಹೇಗೋ ಬಂದು ಸೇರಿದರೆ, ಸಿಬ್ಬಂದಿಕೊರತೆ. ಪರಿಣಾಮ ತಕ್ಷಣಕ್ಕೆ ಚಿಕಿತ್ಸೆ ದೊರೆಯುವುದಿಲ್ಲ. ಸಾಮಾನ್ಯ ಚಿಕಿತ್ಸೆಯಷ್ಟೇ ಅಲ್ಲಿ ಲಭ್ಯ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸರ್ಕಾರದ ಯೋಜನೆಗಳಾದ ಪೋಲಿಯೊ, ಟಿ.ಬಿ. ಮಾತ್ರೆ ವಿತರಣೆ, ದಡಾರದಂತಹ ಚುಚ್ಚುಮದ್ದು ಕೊಡುವುದಕ್ಕೆ ಸೀಮಿತವಾಗಿವೆ. ತಜ್ಞ ವೈದ್ಯರಿಲ್ಲ. ಕೆಲವೆಡೆ ವೈದ್ಯರೇ ಇಲ್ಲ. ಕೆಲವು ಆರೋಗ್ಯ ಕೇಂದ್ರಗಳಲ್ಲಿ ಆಂಬುಲೆನ್ಸ್‌ಗಳಿವೆ. ಆದರೆ, ನಿರ್ವಹಣೆ ಅಷ್ಟಕಷ್ಟೇ. ತುರ್ತು ಸಂದರ್ಭಗಳಲ್ಲಿ ಸಕಾಲಕ್ಕೆ ಬರುವ ಸಾಧ್ಯತೆ ತೀರ ಕಮ್ಮಿ. ಬಂದರೂ ದೂರದ ಊರುಗಳಿಗೆ ಕ್ರಮಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಅಮೂಲ್ಯ ಅವಧಿಯಲ್ಲಿ ಜೀವ ಹಾನಿ ಸಾಧ್ಯತೆಯೂ ಇರುತ್ತದೆ. ಲಾಕ್‌ಡೌನ್‌ ಘೋಷಿಸಿದ ಬಳಿಕ ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಜನ ಆರೋಗ್ಯ ಕೇಂದ್ರಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ವೈದ್ಯರಿದ್ದಲ್ಲಿ ಸಣ್ಣಪುಟ್ಟ ರೋಗಗಳಿಗಷ್ಟೇ ಚಿಕಿತ್ಸೆ ಸಾಧ್ಯ. ಸ್ವಲ್ಪ ಗಂಭೀರ ಸ್ವರೂಪದ ತೊಂದರೆಗಳಿದ್ದರೂ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಹೋಗುವಂತೆ ಶಿಫಾರಸು ಮಾಡುತ್ತಾರೆ. ಇನ್ನು ರಾತ್ರಿ ವೇಳೆ ಯಾರೊಬ್ಬರೂ ಸಿಗುವುದಿಲ್ಲ. ರಾತ್ರಿ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ದೇವರೇ ಕಾಪಾಡಬೇಕು.

ಈಗಂತೂ ಕೋವಿಡ್ ಪರೀಕ್ಷೆ ಭೀತಿಯಿಂದ ಮಂದಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗುವುದಕ್ಕೆ ಹಿಂಜರಿಯುತ್ತಿದ್ದಾರೆ. ತಾವಾಗಿಯೇ ಮಾತ್ರೆ ಖರೀದಿಸಿ ಸೇವಿಸುವುದು ಅಥವಾ ಲಭ್ಯವಿರುವ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.

ಆಂಬುಲೆನ್ಸ್‌ ಸಿಕ್ಕರೆ ಅದೃಷ್ಟ

ಬೆಳಗಾವಿ ಜಿಲ್ಲೆಯ ಕಕಮರಿ ಆಸ್ಪತ್ರೆಯಲ್ಲಿ ವೈದ್ಯರು ಸೇರಿ ಆರು ಮಂದಿ ಸಿಬ್ಬಂದಿ ಇರಬೇಕಿತ್ತು. ಆದರೆ, ಮೂವರಷ್ಟೆ ಇದ್ದಾರೆ. ಹೀಗಾಗಿ, ಬಹುತೇಕರು ಗ್ರಾಮದಲ್ಲೇ ಲಭ್ಯವಿರುವ ಖಾಸಗಿ ವೈದ್ಯರ ಬಳಿಗೆ ಹೋಗುತ್ತಾರೆ. ಈ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕೊಟ್ಟಲಗಿ ಮತ್ತು ರಾಮತೀರ್ಥ ಗ್ರಾಮದವರು ತುರ್ತು ಅಥವಾ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ 30 ಕಿ.ಮೀ. ದೂರದ ಅಥಣಿ ಅಥವಾ 70 ಕಿ.ಮೀ. ದೂರದ ವಿಜಯಪುರಕ್ಕೆ ಹೋಗಬೇಕು. ಬೆಳಗಾವಿ ಜಿಲ್ಲಾಸ್ಪತ್ರೆಗೆ ಬರಬೇಕಾದರೆ 140 ಕಿ.ಮೀ. ಕ್ರಮಿಸಬೇಕು! ಆಂಬುಲೆನ್ಸ್‌ ಸಿಕ್ಕರೆ ಅದೃಷ್ಟ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನಲ್ಲಿ 158 ಹಳ್ಳಿಗಳಿವೆ. ಆದರೆ, ಅಲ್ಲಿರುವುದು ಕೇವಲ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು. ಎಲ್ಲ ಕೇಂದ್ರಗಳಲ್ಲೂ ವೈದ್ಯರು, ನರ್ಸ್‌ಗಳ ಕೊರತೆ ಇದೆ. ಒಬ್ಬ ವೈದ್ಯರು ಮೂರ್ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಿ ರೋಗಿಗಳನ್ನು ನೋಡುವ ಸ್ಥಿತಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.