ADVERTISEMENT

ಬೆಟ್ಟ ಕೊರೆವ ಅವೈಜ್ಞಾನಿಕ ಕಾಮಗಾರಿಗಳಿಂದ ಆಗುತ್ತಿರುವ ಅನಾಹುತಗಳು ಒಂದೆರೆಡಲ್ಲ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 2:53 IST
Last Updated 29 ಸೆಪ್ಟೆಂಬರ್ 2019, 2:53 IST
ಮಡಿಕೇರಿ–ಮಂಗಳೂರು ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-275ರ ಸ್ಥಿತಿ 
ಮಡಿಕೇರಿ–ಮಂಗಳೂರು ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-275ರ ಸ್ಥಿತಿ    

ಮಡಿಕೇರಿ/ಹಾಸನ: ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಕೊಡಗು ಹಾಗೂ ಹಾಸನ ಜಿಲ್ಲೆಯ ಹೆದ್ದಾರಿಗಳಲ್ಲಿ, 2 ವರ್ಷಗಳಿಂದ ಮಳೆ ಗಾಲದಲ್ಲಿ ಸಂಭವಿಸುತ್ತಿರುವ ಭೂಕುಸಿತವು ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ.

ಬೆಟ್ಟಗಳನ್ನು ಕೊರೆದು, ಹೆದ್ದಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ಕೈಗೊಂಡಿರುವುದು ಇದಕ್ಕೆ ಕಾರಣ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಅರಣ್ಯ ನಾಶವೇ ಈ ದುರಂತಕ್ಕೆ ಕಾರಣವೆಂದು ಪರಿಸರವಾದಿಗಳು, ಭೂವಿಜ್ಞಾನಿಗಳು ವಾಸ್ತವದ ಚಿತ್ರಣ ತೆರೆದಿಟ್ಟರೂ, ಮಲೆನಾಡಿನ ಬೆಟ್ಟಗಳು ಬೋಳಾಗುವುದು ನಿಂತಿಲ್ಲ.

ಕೃಷಿ ಸಾಧ್ಯವಿಲ್ಲದ ಕಡೆಯೂ ತೋಟಗಾರಿಕೆ ಬೆಳೆಗಳ ವಿಸ್ತರಣೆ, ಬೆಟ್ಟಗಳ ಮಾರ್ಪಾಡು, ಹೋಮ್‌ ಸ್ಟೇ, ರೆಸಾರ್ಟ್‌ ನಿರ್ಮಾಣ, ಹೆದ್ದಾರಿ ವಿಸ್ತರಣೆಗೆ ಜೆ.ಸಿ.ಬಿ ಯಂತ್ರದಿಂದ ಕಾಮಗಾರಿ ನಡೆಸಿರುವುದು ಬೆಟ್ಟಗಳ ಸಹ ಜತೆಗೆ ಧಕ್ಕೆಯಾಗಿದೆ ಎಂಬ ಆರೋ ಪವಿದೆ. ಬಿದ್ದ ಮಳೆ ನೀರನ್ನು ತಡೆದುಕೊಳ್ಳಲು ಸಾಧ್ಯವಾಗದೆ ಬೆಟ್ಟಗಳ ಮೇಲ್ಮೈ ಮಣ್ಣು ಜಾರಿ ಭೂಕುಸಿತದಂತಹ ದುರಂತಗಳು ಸಂಭವಿಸುತ್ತಿವೆ.

ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿದು ರಸ್ತೆಗೆ ಬಿದ್ದಿರುವುದು

2018ರಲ್ಲಿ ಮಡಿಕೇರಿಯಿಂದ ಸಂಪಾಜೆಯ ತನಕ ರಾಷ್ಟ್ರೀಯ ಹೆದ್ದಾರಿ–275ರಲ್ಲಿ 32 ಸ್ಥಳಗಳಲ್ಲಿ ಭೂಕುಸಿತವಾಗಿತ್ತು. ಪೆರುಂಬಾಡಿ – ಮಾಕುಟ್ಟ ಅಂತರ ರಾಜ್ಯ ಹೆದ್ದಾರಿಯು ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಹಾದು ಹೋಗಿದ್ದು, ಅಲ್ಲಿಯೂ ಬೆಟ್ಟಗಳು ಕುಸಿದಿದ್ದವು. ಹೆದ್ದಾರಿ ನಿರ್ಮಾಣದ ವೇಳೆ ಬೃಹತ್‌ ಯಂತ್ರಗಳು ಸದ್ದು ಮಾಡಿದ್ದವು. ಕಾಮಗಾರಿ ವೇಳೆ ತಾಂತ್ರಿಕ ವರದಿ ನಿರ್ಲಕ್ಷಿಸಿ ಕಾಮಗಾರಿ ನಡೆಸಿದ್ದೇ ಹೆದ್ದಾರಿಯಲ್ಲಿ ಬೆಟ್ಟಗಳು ನೀರಿನಂತೆ ಕರಗಲು ಕಾರಣವೆಂದು ತಜ್ಞರೂ ಅಭಿಪ್ರಾಯಪಟ್ಟಿದ್ದಾರೆ.

ಮತ್ತೆ ಕಾಡುತ್ತಿದೆ ‘ಗುಮ್ಮ’!: ಕೊಡಗು ಮೂಲಕ ಹಾದು ಹೋಗಿರುವ ಮೈಸೂರು–ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯನ್ನು ಈಗಿರುವ ಎರಡು ಪಥದ ಬದಲಿಗೆ, ನಾಲ್ಕು ಪಥವಾಗಿ ವಿಸ್ತರಿಸಲು ಯೋಜನೆ ಸಿದ್ಧವಾಗಿದೆ. ಕೇರಳ ಸಂಪರ್ಕಿಸುವ ಅಂತರ ರಾಜ್ಯ ಹೆದ್ದಾರಿಯ ವಿಸ್ತರಣೆಗೂ ಯೋಜನೆ ರೂಪಿಸಲಾಗಿದೆ. ಇದಕ್ಕೆ ‘ಕೂರ್ಗ್‌ ವೈಲ್ಡ್‌ಲೈಫ್‌ ಸೊಸೈಟಿ’ ವಿರೋಧ ವ್ಯಕ್ತಪಡಿಸಿದ್ದು, ಇಂಥ ದೊಡ್ಡ ಕಾಮಗಾರಿಯ ಭಾರ ತಡೆದುಕೊಳ್ಳುವ ಶಕ್ತಿ ಕೊಡಗಿನ ಬೆಟ್ಟಗಳಿಗೆ ಉಳಿದಿಲ್ಲ. ಬೆಟ್ಟಗಳು ಸೂಕ್ಷ್ಮವಾಗಿವೆ. ಈಗಿರುವ ರಸ್ತೆಗಳೇ ಸಾಕು. ಪರಿಸರಕ್ಕೆ ಪೂರಕವಾಗಿ ರಸ್ತೆಗಳು ಇರಬೇಕೇ ಹೊರತು ಅಪಾಯ ತಂದೊಡ್ಡಬಾರದು’ ಎಂದು ಸೊಸೈಟಿ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

‘2017ರಲ್ಲಿ ಕೊಡಗಿನಲ್ಲಿ ಬಳಂಜಿ ಸೇರಿ ಮೂರು ಜಾತಿಯ ಮರಗಳನ್ನು ಕಡಿಯಲು ಸರ್ಕಾರವೇ ಅನುಮತಿ ನೀಡಿತ್ತು. ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮರಗಳು ಕಣ್ಮರೆಯಾದವು. ನಂತರದ ಎರಡು ವರ್ಷವೂ ಕೊಡಗಿನಲ್ಲಿ ಭೂಕುಸಿತ ಸಂಭವಿಸಿತು’ ಎಂದು ಹೇಳುತ್ತಾರೆ ಪರಿಸರ ಹೋರಾಟಗಾರ ರವಿ ಚೆಂಗಪ್ಪ.

ಹಾಸನ ಜಿಲ್ಲೆಯ ಸಕಲೇಶಪುರ ಭಾಗದಲ್ಲಿ ಗುಡ್ಡ ಕತ್ತರಿಸುವಾಗ ವೈಜ್ಞಾನಿಕ ಕ್ರಮ ಅನುಸರಿಸಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಸುರಿದಿರುವುದು, ದೊಡ್ಡ ಮರಗಳಿಗೆ ಕೊಡಲಿ, ಬೃಹತ್‌ ವಾಹನಗಳ ಸಂಚಾರ, ಅದರಿಂದ ಉಂಟಾಗುವ ಕಂಪನದಿಂದ ಮಣ್ಣು ಸಡಿಲಗೊಂಡು ಭೂಕುಸಿತ ಸಂಭವಿಸುತ್ತಿದೆ. ಪಶ್ಚಿಮಘಟ್ಟ ಭಾಗದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಗಾಗಿ ಡೈನಮೈಟ್‌ ಸಿಡಿಸುವುದರಿಂದಲೂ ಕಂಪನ ಉಂಟಾಗಿ ಮಣ್ಣು ಸಡಿಲಗೊಳ್ಳುತ್ತಿದೆ.

ಮಡಿಕೇರಿಯ ಬೆಟ್ಟಗಳ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 275

2018ರಲ್ಲಿ ಹೆಚ್ಚು ಮಳೆ ಸುರಿದ ಪರಿಣಾಮ ಬೆಂಗಳೂರು – ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್‌ ರಾಷ್ಟ್ರೀಯ ಹೆದ್ದಾರಿಯ ದೋಣಿಗಾಲ್‌, ದೊಡ್ಡತಪ್ಪಲೆ, ಮಾರನಹಳ್ಳಿಯಲ್ಲಿ ಭಾರಿ ಪ್ರಮಾಣದ ಭೂಕುಸಿತದಿಂದ ವಾಹನ ಸಂಚಾರ ಬಂದ್‌ ಆಗಿತ್ತು. ಈ ವರ್ಷ ಕಳೆದ ಬಾರಿಯಂತೆ ಭಾರಿ ಪ್ರಮಾಣದ ಭೂಕುಸಿತವಾಗಿಲ್ಲ. ಆದರೂ, ಐದು ಕಡೆ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದು, ತೊಂದರೆ ಉಂಟಾಗಿತ್ತು.

ಹೇಗಿರಬೇಕು ಕಾಮಗಾರಿ?

ಕೊಡಗಿನಲ್ಲಿ ಸಂಭವಿಸಿದ್ದ ಭೂಕುಸಿತದ ಅಧ್ಯಯನ ನಡೆಸಿದ್ದ ಭೂವಿಜ್ಞಾನಿಗಳು, 2018ರ ಸೆಪ್ಟೆಂಬರ್‌ನಲ್ಲಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು. ‘ಮಾನವ ಹಸ್ತಕ್ಷೇಪ’ದಿಂದ ಭೂಕುಸಿತ ಸಂಭವಿಸಿದ್ದು ಹೆದ್ದಾರಿಗಳಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮದ ಕುರಿತೂ ಬೆಳಕು ಚೆಲ್ಲಿದ್ದರು.

ರಸ್ತೆ ನಿರ್ಮಾಣಕ್ಕೆ ತಂತ್ರಜ್ಞಾನ ಬಳಸಬೇಕು. ರಸ್ತೆ ಬದಿಯಲ್ಲಿ ಮೆಟ್ಟಿಲಿನ ಆಕೃತಿಯಲ್ಲಿ ಮಣ್ಣು ತೆರವುಗೊಳಿಸಬೇಕು. ಹೆದ್ದಾರಿ ಬದಿಯಲ್ಲಿ ಮಳೆಯ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ರಸ್ತೆ ಬದಿಯ ಇಳಿಜಾರು ಪ್ರದೇಶದಲ್ಲಿ ಹಸಿರು ಹೊದಿಕೆ ಸೃಷ್ಟಿಯಾಗಬೇಕು. ತಡೆಗೋಡೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಭೂವಿಜ್ಞಾನಿಗಳು ವರದಿಯಲ್ಲಿ ಉಲ್ಲೇಖಿಸಿದ್ದರು. ಆದರೆ, ಯಾವ ಮುನ್ನೆಚ್ಚರಿಕೆಯ ಕ್ರಮಗಳೂ ಪಾಲನೆ ಆಗುತ್ತಿಲ್ಲ ಎಂಬ ಆರೋಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.