ADVERTISEMENT

ಒಳನೋಟ: ನಿತ್ಯ 1.60 ಲಕ್ಷ ಮಂದಿಯ ಹಸಿವು ತಣಿಸುತ್ತಿದೆ ಇಂದಿರಾ ಕ್ಯಾಂಟೀನ್‌

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 19:31 IST
Last Updated 3 ಏಪ್ರಿಲ್ 2021, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಕೋವಿಡ್‌ ಕಾಣಿಸಿಕೊಂಡ ಬಳಿಕ ನಗರದಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದರೂ ಈಗಲೂ ನಿತ್ಯ 1.60 ಲಕ್ಷ ಮಂದಿಯ ಹಸಿವನ್ನು ಇವು ತಣಿಸುತ್ತಿವೆ.

ನಗರದಲ್ಲಿ 2018ರ ಆಗಸ್ಟ್‌ ವೇಳೆಗೆ ಈ ಕ್ಯಾಂಟೀನ್‌ಗಳಲ್ಲಿ ನಿತ್ಯ ಆಹಾರ ಸೇವಿಸುವವರ ಸಂಖ್ಯೆ 2.28 ಲಕ್ಷದವರೆಗೆ ಏರಿಕೆಯಾಗಿತ್ತು. ಕ್ರಮೇಣ ಈ ಸಂಖ್ಯೆ ಇಳಿಮುಖವಾಗುತ್ತಾ ಸಾಗಿತ್ತು. ಕೋವಿಡ್‌ ಸಂದರ್ಭದಲ್ಲಿ 2020ರ ಮಾರ್ಚ್‌ ತಿಂಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ಪೂರೈಕೆ ಆರಂಭಿಸಿದಾಗ ದಿನವೊಂದಕ್ಕೆ 3.10 ಲಕ್ಷ ಜನರು ಊಟ ಪಡೆದ ಉದಾಹರಣೆಗಳಿವೆ.

‘ಕೋವಿಡ್‌ ಕಾಣಿಸಿಕೊಂಡ ಬಳಿಕ ಬಹುತೇಕ ವಲಸೆ ಕಾರ್ಮಿಕರು ಊರಿಗೆ ಮರಳಿದರು. ಶಾಲಾ ಕಾಲೇಜುಗಳು ತಿಂಗಳಾನುಗಟ್ಟಲೆ ಪುನರಾರಂಭವಾಗಿರಲಿಲ್ಲ. ಹಾಗಾಗಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಆಹಾರ ನೀಡುವುದು ಸ್ಥಗಿತಗೊಳಿಸಿದ ಬಳಿಕ ನಿತ್ಯ ಆಹಾರದ ಬೇಡಿಕೆ ಕಡಿಮೆ ಆಗಿತ್ತು. ಜನಜೀವನ ಸಹಜಸ್ಥಿತಿಗೆ ಮರಳಿದ ಬಳಿಕ ನಿತ್ಯವೂ ಸರಾಸರಿ 1.60 ಲಕ್ಷ ಮಂದಿ ಕ್ಯಾಂಟೀನ್‌ಗಳಲ್ಲಿ ಆಹಾರ ಸೇವಿಸುತ್ತಿದ್ದಾರೆ’ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ಸಬ್ಸಿಡಿ ಕಡಿತ: ಇಕ್ಕಟ್ಟಿನಲ್ಲಿ ಗುತ್ತಿಗೆದಾರರು

ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಎಂದು ಸರ್ಕಾರ ಆರಂಭದಲ್ಲಿ ಪ್ರತಿ ಊಟಕ್ಕೆ ₹ 32 ನಿಗದಿ ಮಾಡಿತ್ತು. ಅದರಲ್ಲಿ ಗ್ರಾಹಕರಿಂದ ₹10 ಪಡೆಯುತ್ತಿದ್ದ ಕ್ಯಾಂಟೀನ್‌ ಗುತ್ತಿಗೆದಾರರಿಗೆ ಸರ್ಕಾರವು ಸಬ್ಸಿಡಿ ರೂಪದಲ್ಲಿ ₹ 22 ನೀಡುತ್ತಿತ್ತು. ಇದರಲ್ಲಿ ಸಿಬ್ಬಂದಿ ವೆಚ್ಚ, ಆಹಾರ ಸಾಮಗ್ರಿ ಖರೀದಿ, ಪೂರೈಕೆ ವೆಚ್ಚಗಳೆಲ್ಲವನ್ನು ಗುತ್ತಿಗೆದಾರರು ಸರಿದೂಗಿಸಿಕೊಳ್ಳಬೇಕಾಗುತ್ತಿತ್ತು. 2020ರ ಆಗಸ್ಟ್‌ನಿಂದ ಪ್ರತಿ ಊಟದ ದರವನ್ನು ₹ 30.30ಕ್ಕೆ ಇಳಿಸಲಾಗಿದೆ. ಗ್ರಾಹಕರಿಂದ ಪಡೆಯುವ ಮೊತ್ತವನ್ನು ಕಳೆದರೆ ಪ್ರತಿ ಊಟಕ್ಕೆ ಸರ್ಕಾರದಿಂದ ಸಿಗುವ ಸಬ್ಸಿಡಿ ಮೊತ್ತ ₹ 20.30ಕ್ಕೆ ಇಳಿಕೆಯಾಗಿದೆ. ₹ 45 ಕೋಟಿಗೂ ಅಧಿಕ ಮೊತ್ತವನ್ನು ಪಾಲಿಕೆಯು ಗುತ್ತಿಗೆದಾರರಿಗೆ ಕೊಡಬೇಕಿದೆ.

‘ಊಟಕ್ಕೆ ನೀಡುವ ಸಬ್ಸಿಡಿ ಮೊತ್ತವನ್ನು ಕಡಿಮೆ ಮಾಡಲಾಗಿದೆ. ಇನ್ನೊಂದೆಡೆ, 10 ತಿಂಗಳುಗಳಿಂದ ಬಿಲ್‌ಗಳನ್ನು ಬಿಬಿಎಂಪಿ ಬಾಕಿ ಇರಿಸಿಕೊಂಡಿದೆ. ಗಾಯದ ಮೇಲೆ ಬರೆ ಎಳೆದಂತೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಇವೆಲ್ಲದರ ನಡುವೆ ಕ್ಯಾಂಟೀನ್‌ಗಳನ್ನು ನಿರ್ವಹಿಸುವುದೇ ದುಸ್ತರವಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಗುತ್ತಿಗೆದಾರರು.

'ನಮಗೆ 2020ರ ಮೇ ತಿಂಗಳಿನಿಂದ ಹಣ ಬಾಕಿ ಇದೆ. ಕಾಲ ಕಾಲಕ್ಕೆ ಹಣ ಬಿಡುಗಡೆಯಾದರೆ ನಷ್ಟವಾಗದಂತೆ ಕ್ಯಾಂಟೀನ್‌ಗಳನ್ನು ಹೇಗೋ ನಿರ್ವಹಿಸಿಕೊಂಡು ಹೋಗಬಹುದು. ತಿಂಗಳಾನುಗಟ್ಟಲೆ ಹಣ ಬಿಡುಗಡೆ ಮಾಡದಿದ್ದರೆ ಕ್ಯಾಂಟೀನ್‌ಗಳನ್ನು ನಡೆಸುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಷೆಫ್‌ಟಾಕ್‌ ಸಂಸ್ಥೆಯ ಗೋವಿಂದ ಪೂಜಾರಿ.

ಬಿಸಿಯೂಟಕ್ಕಿಂತ ವೆಚ್ಚ ತುಸು ದುಬಾರಿ

ಶಾಲೆಗಳಲ್ಲಿ ನೀಡುವ ಬಿಸಿಯೂಟ ಹಾಗೂ ಹಾಸ್ಟೆಲ್‌ಗಳಲ್ಲಿ ನೀಡುವ ಊಟಗಳಿಗೆ ಹೋಲಿಸಿದರೆ ಇಂದಿರಾ ಕ್ಯಾಂಟೀನ್‌ಗೆ ಸರ್ಕಾರ ಖರ್ಚು ಮಾಡುವ ಮೊತ್ತ ತುಸು ಹೆಚ್ಚೇ ಇದೆ. ಶಾಲಾ ಬಿಸಿಯೂಟ ತಯಾರಿಸುವುದಕ್ಕೆ ಸರ್ಕಾರ ಪ್ರತಿ ವಿದ್ಯಾರ್ಥಿಗೆ ಒಂದು ಹೊತ್ತಿಗೆ ₹7.45 ನೀಡುತ್ತದೆ. ಜೊತೆಗೆ ಪ್ರತಿ ವಿದ್ಯಾರ್ಥಿಗೆ ತಲಾ 150 ಗ್ರಾಂ ಅಕ್ಕಿ ಪೂರೈಸುತ್ತದೆ. ಹಾಸ್ಟೆಲ್‌ಗಳಲ್ಲಿ ಸರ್ಕಾರ ಒಬ್ಬ ವಿದ್ಯಾರ್ಥಿಗೆ ಒಂದು ದಿನಕ್ಕೆ (ಮೂರು ಹೊತ್ತಿನ ಊಟೋಪಹಾರ) ತಲಾ ₹ 50 ವೆಚ್ಚ ಮಾಡುತ್ತದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಒಬ್ಬ ವ್ಯಕ್ತಿಯ ಎರಡು ಹೊತ್ತಿನ ಊಟ ಹಾಗೂ ಒಂದು ಹೊತ್ತಿನ ಉಪಾಹಾರಕ್ಕೆ ಸರ್ಕಾರ ₹ 30.30 ಪೈಸೆ ನೀಡುತ್ತಿದೆ. ಇದರ ಜೊತೆಗೆ ₹ 25 (ಎರಡು ಹೊತ್ತಿನ ಊಟಕ್ಕೆ ತಲಾ ₹ 10 ಹಾಗೂ ಉಪಾಹಾರಕ್ಕೆ ₹ 5ರಂತೆ) ಅನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತದೆ. ಅಂದರೆ ಎರಡು ಹೊತ್ತಿನ ಊಟ ಹಾಗೂ ಒಪ್ಪೊತ್ತಿನ ಉಪಾಹಾರಕ್ಕೆ ₹ 55.30 ವೆಚ್ಚವಾಗುತ್ತಿದೆ. ಇದರಲ್ಲಿ ಕ್ಯಾಂಟೀನ್‌ ನಿರ್ವಹಣೆ, ಆಹಾರ ಪೂರೈಕೆ, ಸಿಬ್ಬಂದಿಯ ಸಂಬಳಗಳೆಲ್ಲವೂ ಸೇರಿವೆ.

4 ಅಡುಗೆಮನೆ, 4 ಕ್ಯಾಂಟೀನ್‌, 6 ಸಂಚಾರ ಕ್ಯಾಂಟೀನ್‌ ಸ್ಥಗಿತ

ಬಿಬಿಎಂಪಿ ವ್ಯಾಪ್ತಿಯ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು ಒಟ್ಟು 18 ಅಡುಗೆಮನೆಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ನಾಲ್ಕು ಅಡುಗೆಮನೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ನಗರದಲ್ಲಿ ನಾಲ್ಕು ಕ್ಯಾಂಟೀನ್‌ಗಳನ್ನೂ ಮುಚ್ಚಲಾಗಿದೆ. ಒಟ್ಟು 24 ಸಂಚಾರ ಕ್ಯಾಂಟೀನ್‌ಗಳ ಪೈಕಿ 6 ಕ್ಯಾಂಟೀನ್‌ಗಳು ಸ್ಥಗಿತಗೊಂಡಿವೆ.

‘ಕ್ಯಾಂಟೀನ್‌ಗಳನ್ನು ಮುಚ್ಚಲು ಗ್ರಾಹಕರ ಸಂಖ್ಯೆ ಕುಸಿತದ ಜೊತೆ ಬೇರೆ ಕಾರಣಗಳೂ ಇವೆ. ಕೆಲವು ಕಡೆ ಅಕ್ಕಪಕ್ಕದಲ್ಲಿ ಕ್ಯಾಂಟೀನ್‌ಗಳು ಇದ್ದಿದ್ದರಿಂದ ಒಂದನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ಸ್ಥಳಗಳು ಕ್ಯಾಂಟೀನ್‌ ನಿರ್ಮಾಣಕ್ಕೆ ಸೂಕ್ತವಾಗಿರಲಿಲ್ಲ. ಬೇಡಿಕೆ ಕುಸಿತದ ಕಾರಣ 6 ಸಂಚಾರ ಕ್ಯಾಂಟೀನ್‌ಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಕುಡಿಯುವ ನೀರಿನ ಬಿಲ್‌ ಪಾವತಿಸಿಲ್ಲ ಎಂಬ ಕಾರಣಕ್ಕೆ 12 ಅಡುಗೆ ಮನೆಗಳಿಗೆ ಇತ್ತೀಚೆಗೆ ನೀರಿನ ಸಂಪರ್ಕ ಕಡಿತಗೊಳಿಸಲಾಗಿತ್ತು. ‘ಈ ಅಡುಗೆಮನೆಗಳಿಗೆ ಜಲಮಂಡಳಿ ವಾಣಿಜ್ಯ ದರವನ್ನು ವಿಧಿಸುತ್ತಿತ್ತು. ಇದು ದುಬಾರಿ ಎಂಬ ಕಾರಣಕ್ಕೆ ಗುತ್ತಿಗೆದಾರರೇ ಜಲಮಂಡಳಿಯ ನೀರನ್ನು ನಿರಾಕರಿಸಿದ್ದರು’ ಎನ್ನುತ್ತಾರೆ ಅಧಿಕಾರಿಗಳು.

ಬಿಬಿಎಂಪಿಗೆ ₹ 221 ಕೋಟಿ ಬಾಕಿ

ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ವಾಗ್ದಾನ ನೀಡಿದ್ದ ಸರ್ಕಾರ, ಆ ಮಾತನ್ನು ಉಳಿಸಿಕೊಂಡಿಲ್ಲ. 2017ರಿಂದ 2021ರ ಜನವರಿ ವರೆಗೆ ಬಿಬಿಎಂಪಿಗೆ ₹221 ಕೋಟಿಯನ್ನು ಬಾಕಿ ಉಳಿಸಿಕೊಂಡಿದೆ.

ಕ್ಯಾಂಟೀನ್‌ಗಳನ್ನು ಆರಂಭಿಸಿದ ಮೊದಲ ವರ್ಷ ಬಿಬಿಎಂಪಿಯು ಕಟ್ಟಡ ಕಾಮಗಾರಿಗಳಿಗೆ ₹ 108 ಕೋಟಿ ವೆಚ್ಚ ಮಾಡಿತ್ತು (ಭದ್ರತಾ ವ್ಯವಸ್ಥೆ ಹಾಗೂ ಆವರಣ ಗೋಡೆಗಳಿಗೆ ಮಾಡಿದ್ದ ₹ 24.37 ಕೋಟಿ ಖರ್ಚು ಸೇರಿದೆ). ಆಹಾರ ಪೂರೈಕೆಗೆ ₹ 46.58 ಕೋಟಿ ಖರ್ಚಾಗಿತ್ತು. ಆದರೆ, ಬಿಬಿಎಂಪಿಗೆ ಸರ್ಕಾರ ಮೊದಲ ವರ್ಷ ಬಿಡುಗಡೆ ಮಾಡಿದ್ದು ₹ 100 ಕೋಟಿ ಮಾತ್ರ. 2018–19ನೇ ಸಾಲಿನಲ್ಲಿ ಆಹಾರ ಪೂರೈಕೆಗೆ ಬಿಬಿಎಂಪಿ ₹ 95.20 ಕೋಟಿ ವೆಚ್ಚ ಮಾಡಿತ್ತು. ಆ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಸರ್ಕಾರ ಬಜೆಟ್‌ನಲ್ಲಿ ₹ 145 ಕೋಟಿ ಕಾಯ್ದಿರಿಸಿದ್ದರೂ ಬಿಡುಗಡೆ ಮಾಡಿದ್ದು
₹ 115.38 ಕೋಟಿಯನ್ನು ಮಾತ್ರ.

‘ಕ್ಯಾಂಟೀನ್‌ಗಳ ನಿರ್ವಹಣೆಗಾಗಿ ಬಿಬಿಎಂಪಿಗೆ ನೀಡಬೇಕಾದ ₹ 220.96 ಕೋಟಿಯನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಕೋವಿಡ್‌ನಿಂದಾಗಿ ಬಿಬಿಎಂಪಿ ಸಂಪನ್ಮೂಲ ಕ್ರೋಡೀಕರಣಕ್ಕೆ ಹಿನ್ನಡೆಯಾಗಿದೆ. ಹಾಗಾಗಿ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು’ ಎಂದು ಕೋರಿ ಪಾಲಿಕೆಯ ಈ ಹಿಂದಿನ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ (ಪಾಲಿಕೆಯ ಈಗಿನ ಆಡಳಿತಾಧಿಕಾರಿ) ಅವರಿಗೆ 2021ರ ಜ.12ರಂದು ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.