ADVERTISEMENT

ಒಳನೋಟ: ಖನಿಜ ನಿಧಿ ಹೇರಳ, ಕೆಲಸ ವಿರಳ

ತೆವಳುತ್ತಿದೆ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಕಾರ್ಯ l ಬ್ಯಾಂಕ್‌ಗಳಲ್ಲೇ ಇದೆ ಕೋಟ್ಯಂತರ ಹಣ

ಬಸವರಾಜ ಹವಾಲ್ದಾರ
Published 27 ಮಾರ್ಚ್ 2021, 20:15 IST
Last Updated 27 ಮಾರ್ಚ್ 2021, 20:15 IST
ಗಣಿಗಾರಿಕೆಗೆ ಗುಡ್ಡವೊಂದನ್ನು ಬಗೆದಿರುವ ನೋಟ (ಸಂಗ್ರಹ) ಪ್ರಜಾವಾಣಿ ಚಿತ್ರ;ತಾಜುದ್ದೀನ್‌ ಆಜಾದ್
ಗಣಿಗಾರಿಕೆಗೆ ಗುಡ್ಡವೊಂದನ್ನು ಬಗೆದಿರುವ ನೋಟ (ಸಂಗ್ರಹ) ಪ್ರಜಾವಾಣಿ ಚಿತ್ರ;ತಾಜುದ್ದೀನ್‌ ಆಜಾದ್   

ಹುಬ್ಬಳ್ಳಿ: ಇಲ್ಲಿನ ಕಥೆ ಬೇರೆ ಇಲಾಖೆಗಳ ರೀತಿಯದ್ದಲ್ಲ. ಇಲ್ಲಿ ಹೇರಳ ಹಣಕಾಸು ನಿಧಿ ಲಭ್ಯವಿದೆ. ಮಾಡಬೇಕಾದ ಕೆಲಸಗಳೂ ಸಾಕಷ್ಟಿವೆ. ಆದರೆ ಕೆಲಸಗಳಾಗುತ್ತಿಲ್ಲ. ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳು ತೆವಳುತ್ತಾ ಸಾಗುತ್ತಿವೆ...

ಗಣಿಗಾರಿಕೆಯಿಂದ ನಲುಗಿಹೋಗಿರುವ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ, ಪರಿಸರ ಸಂರಕ್ಷಣೆ ಕೈಗೊಳ್ಳಲು ಸ್ಥಾಪಿಸಲಾಗಿರುವ ಖನಿಜ ನಿಧಿಯ ಕಥೆ ಇದು. 2015ರಿಂದ ಕಳೆದ ತಿಂಗಳ ಕೊನೆಯವರೆಗೆ ಜಿಲ್ಲೆಗಳ ಖನಿಜ ನಿಧಿಯಲ್ಲಿ ಲಭ್ಯವಿರುವ ಒಟ್ಟು ಮೊತ್ತ ₹2,399 ಕೋಟಿ. ಆದರೆ ಕೋವಿಡ್‌ ಅವಧಿ ಯಲ್ಲಿ ಆಗಿರುವ ವೆಚ್ಚವೂ ಸೇರಿದಂತೆ ಬಳಕೆಯಾಗಿರುವುದು ₹ 827.62 ಕೋಟಿ ಮಾತ್ರ. ಅಂದರೆ ಶೇ 35ಕ್ಕಿಂತ ಕಡಿಮೆ. ಬ್ಯಾಂಕ್‌ ಖಾತೆಗಳಲ್ಲಿ ಉಳಿದಿರುವ ಮೊತ್ತ 1,475.50 ಕೋಟಿ.

ಬಳ್ಳಾರಿ, ಚಿಕ್ಕಮಗಳೂರು, ಕಲಬುರ್ಗಿ, ಚಿತ್ರ ದುರ್ಗ, ರಾಮನಗರ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಗುಡ್ಡಗಳು ಕಾಣೆಯಾಗಿವೆ. ಅಲ್ಲಿ ಸಾವಿರಾರು ಅಡಿ ಆಳದ ಕಂದಕಗಳು ನಿರ್ಮಾಣವಾಗಿವೆ. ಕಲುಷಿತ ನೀರು ಸೇವನೆ ಹಾಗೂ ದೂಳಿನಿಂದಾಗಿ ಜನರು ಅಸ್ತಮಾ, ಅಲರ್ಜಿ, ಚರ್ಮ ರೋಗ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ADVERTISEMENT

ಇದುವರೆಗೆ 7,230 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. 1,690 ಕಾಮಗಾ ರಿಗಳು ಪೂರ್ಣಗೊಂಡಿದ್ದರೆ, 1,571 ಪ್ರಗತಿಯಲ್ಲಿವೆ. 3,504 ಕಾಮಗಾರಿಗಳು ಇನ್ನೂ ಆರಂಭವಾಗಬೇಕಿವೆ. ಕೆಲವು ಆರಂಭಕ್ಕೆ ಮುನ್ನವೇ ರದ್ದಾಗಿವೆ. ಕ್ರಿಯಾ ಯೋಜನೆ ಸಿದ್ಧವಿದ್ದರೂ, ಅನುಷ್ಠಾನ ಕಾರ್ಯ ತೆವಳುತ್ತಾ ಸಾಗಿದೆ.

ಅದಿರು ಸಾಗಿಸುತ್ತಿರುವ ಲಾರಿಗಳು ಎಬ್ಬಿಸಿರುವ ದೂಳು (ಸಂಗ್ರಹ ಚಿತ್ರ)

ಸರ್ಕಾರದ ಬೇರೆ ಇಲಾಖೆಗಳಲ್ಲಿ ಅನುದಾನದ ಕೊರತೆಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಗುತ್ತಿಗೆದಾರರ ಬಿಲ್‌ ಪಾವತಿಯಾಗುತ್ತಿಲ್ಲ. ಆದರೆ ಖನಿಜ ನಿಧಿ ಪ್ರತಿಷ್ಠಾನದಲ್ಲಿ ಅನುದಾನ ಹೇರಳವಾಗಿದೆ. ಅದರ ಸದುಪಯೋಗ ಆಗುತ್ತಿಲ್ಲ. ‘ಹಲ್ಲಿದ್ದರೆ ಕಡಲೆಯಿಲ್ಲ, ಕಡಲೆಯಿದ್ದರೆ ಹಲ್ಲಿಲ್ಲ’ ಎನ್ನುವ ಸ್ಥಿತಿಯಿದೆ.

ಸಮನ್ವಯದ ಕೊರತೆ: ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಮಾರ್ಗಸೂಚಿ ಅನ್ವಯ ಈ ನಿಧಿ ಯನ್ನು ಕುಡಿಯುವ ನೀರು, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೌಶಲ ಅಭಿವೃದ್ಧಿಗೆ ಶೇ 60ರಷ್ಟು, ಮೂಲಸೌಕರ್ಯ, ನೀರಾವರಿ, ಪರಿಸರ ಗುಣಮಟ್ಟ ಹೆಚ್ಚಳಕ್ಕೆ ಶೇ 40ರಷ್ಟು ಖರ್ಚು ಮಾಡಲು ಅವಕಾಶ ನೀಡಲಾಗಿದೆ.

18 ಇಲಾಖೆಗಳಿಗೆ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಕೆ ಹಾಗೂ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನೀಡಲಾಗುತ್ತದೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಈ ನಿಧಿ ನಿಗದಿತ ಅವಧಿಯಲ್ಲಿ ಬಳಕೆಯಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.ಇಲಾಖೆಗೆ ಬಿಡುಗಡೆಯಾದ ಅನುದಾನದ ಜೊತೆಗೆ ಖನಿಜ ನಿಧಿ ಬಳಕೆಯ ಕಾಮಗಾರಿಗೂ ಕ್ರಿಯಾ ಯೋಜನೆ ರೂಪಿಸಬೇಕು. ಅದಕ್ಕೆ ಸಮಿತಿಯಿಂದ ಅನುಮತಿ ಪಡೆದು, ಟೆಂಡರ್ ಕರೆಯ ಬೇಕು. ಕಾಮಗಾರಿಯ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವ ಹೊಣೆ ಆಯಾ ಇಲಾಖೆಯ ಅಧಿಕಾರಿಗಳದ್ದು.

ಕೋವಿಡ್‌ ಪರಿಹಾರಕ್ಕೆ ಬಳಕೆ: ಆರೋಗ್ಯ ಕ್ಷೇತ್ರಕ್ಕೆ ನಿಧಿ ಬಳಕೆ ಮಾಡಿಕೊಳ್ಳಬಹುದಾಗಿದ್ದರೂ ಇಲ್ಲಿಯವರೆಗೆ ಆದ್ಯತೆ ಸಿಕ್ಕಿರಲಿಲ್ಲ. ಕೋವಿಡ್‌–19 ನಿಂದಾಗಿ ವರ್ಷವೊಂದರಲ್ಲೇ ಬಾಧಿತರ ಚಿಕಿತ್ಸೆ, ವೈದ್ಯಕೀಯ ಸಾಮಗ್ರಿಗಳ ಖರೀದಿಗಾಗಿ ಜನವರಿ ಅಂತ್ಯಕ್ಕೆ ₹118 ಕೋಟಿ ಖರ್ಚು ಮಾಡಲಾಗಿದೆ. ಮಾರ್ಚ್‌ ಮಧ್ಯದವರೆಗೆ ಖರ್ಚಿನ ಪ್ರಮಾಣ ₹200 ಕೋಟಿ ಸಮೀಪಿಸಿದೆ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು.

ನಿಧಿ ಬಳಕೆ ಹೇಗೆ?: ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಆಡಳಿತ ಸಮಿತಿ ಇರುತ್ತದೆ.ಸಮಿತಿಯಲ್ಲಿ ಶಾಸಕರು, ಸಂಸದರು ಸೂಚಿಸಿದ ಕಾಮಗಾರಿಗಳ ಪ್ರಕಾರ ಕ್ರಿಯಾಯೋಜನೆ ರೂಪಿಸಲಾಗುತ್ತದೆ. ಆರು ತಿಂಗಳಿಗೊಮ್ಮೆ ನಡೆಯುವ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆ ಸಮಿತಿಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗುತ್ತದೆ.

ವೈಯಕ್ತಿಕ ಫಲಾನುಭವಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಕಾಣೆಯಾಗಿದೆ. ಇದುವರೆಗೆ 800 ಕೋಟಿ ವೆಚ್ಚವಾಗಿದ್ದರೂ, ಗಣಿಗಾರಿಕೆಯ ಪ್ರದೇಶಗಳಲ್ಲಿ ಅಭಿವೃದ್ಧಿಯ ಕುರುಹುಗಳು ಎದ್ದುಕಾಣುತ್ತಿಲ್ಲ.

ಅನುದಾನ ಬಳಕೆ ತೃಪ್ತಿದಾಯಕವಾಗಿಲ್ಲ

ಬಾಗಲಕೋಟೆ: ರಾಜ್ಯದಲ್ಲಿ ಆಯಾ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿ (ಡಿಎಂಎಫ್) ಸಂಗ್ರಹವಾಗಿರುವ ಹಣ ಇದುವರೆಗೂ ತೃಪ್ತಿದಾಯಕವಾಗಿ ಬಳಕೆಯಾಗಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ
ನಿರಾಣಿ.

ಅಚ್ಚರಿಯೆಂದರೆ, ಡಿಎಂಎಫ್ ಬಳಕೆ ನಿಟ್ಟಿನಲ್ಲಿ ನೀತಿ–ನಿಯಮ ರೂಪಿಸಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರಚಿಸಲಾದ ಸಮಿತಿಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾ ಖೆಗೇ ಪ್ರಾತಿನಿಧ್ಯವಿಲ್ಲ. ನಮ್ಮ ನಿಧಿ ಹೇಗೆ ವಿನಿಯೋಗವಾಗಬೇಕು ಎಂಬುದನ್ನು ನಾವು ನಿರ್ಧರಿಸಲಾಗದ ಪರಿಸ್ಥಿತಿ. ಅದನ್ನು ತಪ್ಪಿಸಲು ಏಪ್ರಿಲ್ ಮೊದಲ ವಾರ ಈ ಸಮಿತಿಗಳನ್ನು ಪುನರ್‌ ರಚಿಸಲಾಗುವುದು. ಗಣಿ ಮತ್ತು ಭೂ ವಿಜ್ಞಾನ ಸಚಿವರೇ ಸಮಿತಿಯ ಅಧ್ಯಕ್ಷರು ಆಗಿರುತ್ತಾರೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಉಪಾಧ್ಯಕ್ಷರು ಆಗಿರಲಿದ್ದಾರೆ. ಡಿಎಂಎಫ್ ದುರ್ಬಳಕೆ ತಪ್ಪಿಸಲು ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗುವುದು ಎನ್ನುತ್ತಾರೆ ನಿರಾಣಿ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯದ ಕಬ್ಬಿಣದ ಅದಿರು ಗಣಿ ಕಂಪನಿಗಳಿಂದ ಸಂಗ್ರಹಿಸಿರುವ ಅಂದಾಜು ₹18 ಸಾವಿರ ಕೋಟಿ ಬಳಕೆಗೆ ನ್ಯಾಯಾಲಯದಿಂದ ಅನುಮತಿ ಪಡೆ ಯಲು ಪ್ರಯತ್ನ ಆರಂಭಿಸಲಾಗಿದೆ. ಆ ನಿಟ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಲು ರಾಜ್ಯದ ಹಿರಿಯ ವಕೀಲರ ತಂಡ ಶೀಘ್ರ ದೆಹಲಿಗೆ ತೆರಳಲಿದೆ ಎಂದು ಮಾಹಿತಿ ನೀಡಿದರು.

ಆ ಹಣವನ್ನು ರಾಜ್ಯದಲ್ಲಿ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗಣಿ ಬಾಧಿತ ಪ್ರದೇಶಗಳ ಪುನರ್‌ನಿರ್ಮಾಣಕ್ಕೆ ಹಾಗೂ ಬಾಧಿತ ಜನರ ಪುನರ್ವಸತಿಗೆ ಬಳಕೆ ಮಾಡಿಕೊಳ್ಳಲಾಗುವುದು. ನ್ಯಾಯಾಲಯದ ಕಣ್ಗಾವಲಿನಲ್ಲಿಯೇ ಆ ಹಣ ಬಳಕೆ ಮಾಡಲಾಗುತ್ತದೆ ಎಂದರು.

ರಾಜ್ಯದ ಪಾಲಿಗೆ ದೊರೆಯಲಿರುವ ಈ ಹಣವನ್ನು ಪುನರ್‌ನಿರ್ಮಾಣ ಕಾರ್ಯಕ್ಕೆ ಖರ್ಚು ಮಾಡಲು ಕನಿಷ್ಠ ನಾಲ್ಕರಿಂದ ಐದು ವರ್ಷ ಬೇಕಾಗುತ್ತದೆ. ಆ ಅವಧಿಯಲ್ಲಿ ಸಿಗಲಿರುವ ಬಡ್ಡಿ ಹಾಗೂ ಮತ್ತೆ ಸಂಗ್ರಹವಾಗುವ ತೆರಿಗೆಯನ್ನು ಆಧರಿಸಿ ₹25 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು. ಆ ಹಣದಲ್ಲಿ ಯಾವ ಯಾವ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುದರ ಬಗ್ಗೆ ನ್ಯಾಯಾಲಯವೇ ನಿರ್ದೇಶನ ನೀಡಲಿದೆ ಎಂದರು.

(ಬಾಗಲಕೋಟೆವರದಿ:ವೆಂಕಟೇಶ್‌ ಜಿ.ಎಚ್)

ಪರಿಸರ ರಕ್ಷಣೆಗೆ ದೊರೆಯದ ಆದ್ಯತೆ

ಹುಬ್ಬಳ್ಳಿ: ಗಣಿಗಾರಿಕೆ ನಡೆಯುವ ಪ್ರದೇಶದ ಹಲವು ನದಿಗಳ ಜಲಮೂಲಗಳಾಗಿದ್ದ ಹಳ್ಳಗಳು ಮುಚ್ಚಿ ಹೋಗಿವೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗುಡ್ಡಗಳು ಬೋಳಾಗಿವೆ. ಪರಿಸರ ರಕ್ಷಣೆಗೆ ಸಿಗಬೇಕಾದ ಆದ್ಯತೆ ಸಿಕ್ಕಿಲ್ಲ.

ಮನುಷ್ಯನ ಖನಿಜ ದಾಹಕ್ಕೆ ಸಾವಿರಾರು ಎಕರೆ ಪ್ರದೇಶಗಳಲ್ಲಿನ ಅರಣ್ಯ ನಾಶವಾಗಿದೆ. ವನ್ಯಜೀವಿಗಳು ಆಹಾರಕ್ಕಾಗಿ ಪರದಾಡುವ ಸ್ಥಿತಿ ಇದೆ. ಪರಿಸರ ರಕ್ಷಣೆಗೆ ಬದಲಾಗಿ ಕೌಶಲ ಅಭಿವೃದ್ಧಿ ತರಬೇತಿ, ತ್ರಿಚಕ್ರ ವಾಹನ, ಕೃತಕ ಕಾಲು ವಿತರಣೆ, ರಸ್ತೆ ದುರಸ್ತಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಅರಣ್ಯ ಪ್ರದೇಶ ಪುನರುಜ್ಜೀವನ, ಜಲಮೂಲಗಳ ರಕ್ಷಣೆಯ ಕಾರ್ಯದತ್ತ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.