ADVERTISEMENT

ಒಳನೋಟ | ಭೂ ಕೊಳ್ಳೆಗೆ ಅರೆ ನ್ಯಾಯಿಕ ವ್ಯವಸ್ಥೆಯೇ ‘ಹೆದ್ದಾರಿ’

ಮಂಜುನಾಥ್ ಹೆಬ್ಬಾರ್‌
Published 21 ಆಗಸ್ಟ್ 2021, 20:29 IST
Last Updated 21 ಆಗಸ್ಟ್ 2021, 20:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಭೂದಾಖಲೆಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್‌, ಉಪವಿಭಾಗಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿ ಮೊದಲಾದ ಅರೆನ್ಯಾಯಿಕ ಅಧಿಕಾರಿಗಳು ನೀಡುವ ಆದೇಶಗಳೂ ಭೂ ಅಕ್ರಮಗಳಿಗೆ ದಾರಿ ಮಾಡಿಕೊಡುತ್ತಿವೆ.

ಕೆಲವೊಮ್ಮೆ ನಕಲಿ ದಾಖಲೆ ಪತ್ರ ನಂಬಿ, ಇನ್ನು ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಸರ್ಕಾರಿ ಜಮೀನನ್ನು ಖಾಸಗಿಯವರ ಹೆಸರಿಗೆ ಆದೇಶ ಮಾಡಿರುವ ಅನೇಕ ಪ್ರಕರಣಗಳು ರಾಜ್ಯದಾದ್ಯಂತ ನಡೆದಿವೆ. ಅರೆ ನ್ಯಾಯಿಕ ವ್ಯವಸ್ಥೆಯೊಳಗಿನ ಈ ಅಧಿಕಾರಿಗಳ ಆದೇಶವೇ ಅನೇಕ ಸಂದರ್ಭಗಳಲ್ಲಿ ‘ತೀರ್ಪು’ ಆಗಿ ಬಿಡುವ ಸಾಧ್ಯತೆಯೇ ಹೆಚ್ಚು. ಅಕ್ರಮಗಳನ್ನು ಪ್ರಶ್ನಿಸಿ, ಸರ್ಕಾರವೇ ನ್ಯಾಯಾಲಯಕ್ಕೆ ಹೋದರೂ ಖಾಸಗಿಯವರ ಪರವಾಗಿ ತೀರ್ಪು ಬರುವ ಸಂಭವಗಳೇ ಅಧಿಕ.

ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಕಳೆದ ಎರಡು ದಶಕಗಳಲ್ಲಿ ಜಮೀನಿನ ಬೆಲೆ ಗಗನಮುಖಿಯಾಗಿದೆ. ಹೀಗಾಗಿಯೇ ಜಮೀನು ಅಕ್ರಮವು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಎರಡು ದಶಕಗಳ ಈಚಿನವರೆಗೂ ಭೂ ದಾಖಲೆಗಳ ಸಂರಕ್ಷಣೆಗೆ ಅಷ್ಟಾಗಿ ಮಹತ್ವ ನೀಡುತ್ತಿರಲಿಲ್ಲ. 70– 80 ವರ್ಷಗಳಷ್ಟು ಹಳೆಯ ದಾಖಲೆಗಳನ್ನು ಸುರಕ್ಷಿತವಾಗಿ ಕಾಪಾಡುವುದಕ್ಕೂ ಅಗತ್ಯ ವ್ಯವಸ್ಥೆಗಳು ಇರಲಿಲ್ಲ. ಕ್ರಯಪತ್ರದ ಆಧಾರದಲ್ಲೇ ಜಮೀನಿನ ಮಾಲೀಕತ್ವಗಳು ಕೈ ಬದಲಾಗುತ್ತಿದ್ದವು. ಕ್ರಯಪತ್ರದ ಆಧಾರದಲ್ಲೇ ಪಹಣಿಯಲ್ಲೂ (ಆರ್‌ಟಿಸಿ) ಜಮೀನಿನ ಮಾಲೀಕತ್ವ ಬದಲಾಯಿಸಲಾಗುತ್ತಿತ್ತು. ಮೂಲ ಕ್ರಯಪತ್ರವನ್ನು ಅಥವಾ ಜಮೀನು ಹಂಚಿಕೆಯಾದ ಕುರಿತ ದಾಖಲೆಗಳನ್ನು ಹಾಜರುಪಡಿಸುವಂತೆ ಕಂದಾಯ ಅಧಿಕಾರಿಗಳು ಕೇಳುತ್ತಿರಲಿಲ್ಲ. ಈ ಅವಧಿಯಲ್ಲಿ ಅನೇಕ ಅಕ್ರಮಗಳು ನಡೆದಿವೆ.

ADVERTISEMENT

ನಕಲಿ ದಾಖಲೆಗಳನ್ನು ಸೃಷ್ಟಿಸುವ ವ್ಯವಸ್ಥಿತ ಜಾಲಗಳು ನಗರದಲ್ಲಿವೆ. ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿ ಯಾವುದೇ ಆದೇಶ ಮಾಡುವುದಾದರೂ ಅಧಿಕಾರಿಗಳು ಅದಕ್ಕೆ ಸರ್ಕಾರದ ಮೂಲ ದಾಖಲೆಗಳನ್ನೇ ಅವಲಂಬಿಸಬೇಕಾಗುತ್ತದೆ. ದಾಖಲೆಗಳನ್ನು ಮೈ ಎಲ್ಲ ಕಣ್ಣಾಗಿ ಪರಿಶೀಲಿಸಬೇಕಾಗುತ್ತದೆ. ಸಂದೇಹ ಬಂದಾಗ ಮೂಲದಾಖಲೆಗಳನ್ನು ಪರಿಶೀಲಿಸಿದರೆ ಅಕ್ರಮಗಳನ್ನು ತಪ್ಪಿಸಬಹುದು. ಆದರೆ, ಅನೇಕ ಅಧಿಕಾರಿಗಳೇ ದಲ್ಲಾಳಿಗಳ ಜೊತೆ ಶಾಮೀಲಾಗಿ ಸರ್ಕಾರಿ ಜಮೀನು ಖಾಸಗಿಯವರ ಪಾಲಾಗಲು ಅವಕಾಶ ಮಾಡಿಕೊಡುತ್ತಿದ್ದಾರೆ. ಇದಕ್ಕಾಗಿ ಮೂಲ ದಾಖಲೆಗಳ ಕಡತವನ್ನೇ ತಿರುಚಿದ ಪ್ರಕರಣಗಳೂ ನಡೆದಿವೆ.

ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದ ಸಾಮಾನ್ಯವಾಗಿ ಮೂರು ರೀತಿಯ ಅಕ್ರಮಗಳು ನಡೆಯುತ್ತವೆ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜಮೀನು ವಿಕ್ರಯದ ನೋಂದಣಿಗೆ ಸಂಬಂಧಿಸಿದ ಕಡತದ ಪುಟಗಳನ್ನೇ ಬದಲಾಯಿಸಿದ ಉದಾಹರಣೆಗಳಿವೆ.

ಬೆಂಗಳೂರಿನಲ್ಲಿ ಜಮೀನಿನ ಮೂಲದಾಖಲೆಗಳು ಲಭ್ಯ ಇಲ್ಲದ ಕಡೆ ಭಾರಿ ಪ್ರಮಾಣದಲ್ಲಿ ಭೂಹಗರಣಗಳು ನಡೆಯುತ್ತಿವೆ. ಹೊಸ ಜಿಲ್ಲೆ ಅಥವಾ ತಾಲ್ಲೂಕು ರಚನೆಯಾದಾಗ ಭೂದಾಖಲೆಗಳ ಕಡತಗಳು ಹೊಸ ಕಚೇರಿಗೆ ವರ್ಗಾವಣೆ ಆಗಬೇಕು. ಆದರೆ, ಅನೇಕ ದಾಖಲೆಗಳು ಹಳೆ ಕಚೇರಿಯಲ್ಲೇ ಉಳಿಯುತ್ತವೆ. ಈ ಕಡತ ವರ್ಗಾವಣೆ ಸಮರ್ಪಕವಾಗಿ ನಡೆಯದ ಕಾರಣ ಈಗಿನ ಅಧಿಕಾರಿಗಳು ಭೂದಾಖಲೆಗಳನ್ನು ಸ್ಪಷ್ಟವಾಗಿ ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಈ ಲೋಪವನ್ನು ಭೂಗಳ್ಳರು ದುರುಪಯೋಗಪಡಿಸಿಕೊಂಡು ಅಕ್ರಮ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಅನೇಕ ಪ್ರಕರಣಗಳಲ್ಲಿ ಕೆಲವು ಅಧಿಕಾರಿಗಳೂ ಭೂಗಳ್ಳರ ಜೊತೆ ಶಾಮೀಲಾಗಿದ್ದು ಗುಟ್ಟಾಗಿ ಉಳಿದಿಲ್ಲ.

‘ಬೆಂಗಳೂರಿನಲ್ಲಿ ಜಾಲ ಹೋಬಳಿ, ಬಿದರಹಳ್ಳಿ ಹೋಬಳಿಗಳಲ್ಲಿ ಇಂತಹ ಅಕ್ರಮ ಜಾಸ್ತಿ. ಜಾಲ ಹೋಬಳಿಯು ಹಿಂದೆ ದೇವನಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿತ್ತು. 1985ರಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರ್ಪಡೆಯಾಯಿತು. ಕೆಲವು ಮೂಲದಾಖಲೆಗಳು ಹೊಸ ಕಚೇರಿಗೆ ಹಸ್ತಾಂತರವಾಗಿಯೇ ಇಲ್ಲ. ಹಳೆಯ ಕಚೇರಿಗಳಲ್ಲೂ ಅವು ಲಭ್ಯವಿಲ್ಲ. ಸಾಗುವಳಿ ಚೀಟಿಗೆ ಸಂಬಂಧಿಸಿ ಅಕ್ರಮ ಸೃಷ್ಟಿಸಲು ಇದರಿಂದಾಗಿ ಅವಕಾಶ ಸಿಕ್ಕಂತಾಗಿದೆ. ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಬಳಕೆಯಾಗುವ ನೂರಾರು ಎಕರೆ ಭೂಮಿಗೆ ಸಂಬಂಧಿಸಿ ಅಕ್ರಮವಾಗಿ ಭೂ ಪರಿಹಾರ ಪಡೆಯಲು ಯತ್ನಿಸಿದ ಪ್ರಕರಣ ನಡೆಯುವುದಕ್ಕೂ ಇದೇ ಕಾರಣ. ಹಿಂದೆ ಹೊಸಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿದ್ದ ಬಿದರಹಳ್ಳಿ ಹೋಬಳಿಯ ಪ್ರದೇಶಗಳು ಬೆಂಗಳೂರು ದಕ್ಷಿಣ ತಾಲ್ಲೂಕಿಗೆ, ನಂತರ ಪೂರ್ವ ತಾಲ್ಲೂಕಿಗೆ ವರ್ಗಾವಣೆಯಾದವು. ಇಲ್ಲೂ ಮೂಲದಾಖಲೆಗಳ ಕುರಿತ ಗೊಂದಲಗಳಿವೆ. ಇದನ್ನೇ ದುರುಪಯೋಗಪಡಿಸಿಕೊಂಡು ಅಕ್ರಮ ಎಸಗಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಭೂಪರಿವರ್ತನೆ ಮಾಡದೆಯೇ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡುವುದು ಇನ್ನೊಂದು ರೀತಿಯ ಅಕ್ರಮ. ಇಂತಹ ಪ್ರಕರಣದಲ್ಲಿ ಕೃಷಿ ಜಮೀನನ್ನು ಕೃಷಿ ಉದ್ದೇಶಕ್ಕಾಗಿಯೇ ಮಾರಾಟ ಮಾಡಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವ ವ್ಯವಸ್ಥೆ ಇಲ್ಲ. ಇದು ಬೆಂಗಳೂರು ಆಸುಪಾಸಿನಲ್ಲಿ ಕಂದಾಯ ನಿವೇಶನಗಳ ಹಾವಳಿ ಹೆಚ್ಚುವುದಕ್ಕೆ ಕಾರಣವಾಗಿದೆ.

‘ಇದಕ್ಕೆಲ್ಲ ಕಡಿವಾಣ ಹಾಕಲು ಇರುವ ಏಕೈಕ ದಾರಿ ಎಂದರೆ ಎಲ್ಲ ಮೂಲದಾಖಲೆ ಹಾಗೂ ಅವುಗಳ ವಿಕ್ರಯಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸ್ಕ್ಯಾನ್‌ ಮಾಡಿಸಿ ಕಂಪ್ಯೂಟರೀಕರಣಗೊಳಿಸುವುದು. ಮುಂದಿನ ದಿನಗಳಲ್ಲಿ ಅಕ್ರಮ ತಡೆಯಲು ಇದು ಸಹಕಾರಿ. ಕೆಲ ವರ್ಷಗಳ ಹಿಂದೆ ದಾಖಲೆ ಡಿಜಿಟಲೀಕರಣ ಮಾಡುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಯಿತು. ಸರ್ಕಾರ ಹಣ ಪಾವತಿಸದ ಕಾರಣ, ಸ್ಕ್ಯಾನ್‌ ಮಾಡಿದ ದಾಖಲೆಗಳನ್ನು ಆ ಸಂಸ್ಥೆ ಹಸ್ತಾಂತರಿಸಲಿಲ್ಲ. ಭೂದಾಖಲೆಗಳ ಕಂಪ್ಯೂಟರೀಕರಣ ಮಾಡುವುದೇನೂ ಕಷ್ಟವಲ್ಲ. ಆದರೆ, ಭೂ ಅಕ್ರಮ ತಡೆಯುವ ಇಚ್ಛಾಶಕ್ತಿ ಸರ್ಕಾರಕ್ಕೂ ಇದ್ದಂತಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಭ್ರಷ್ಟಾಚಾರದ ಮೂಲವೇ ಭೂಕಬಳಿಕೆ

ಸದನ ಸಮಿತಿಯ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಏಕೆಂದರೆ ಭ್ರಷ್ಟಾಚಾರದ ತಾಣ ಈಗ ಲೋಕೋಪಯೋಗಿ ಇಲಾಖೆ ಅಥವಾ ನೀರಾವರಿ ಇಲಾಖೆಯ ಗುತ್ತಿಗೆಯಲ್ಲ. ಅದು ರಿಯಲ್ ಎಸ್ಟೇಟ್‌ ಉದ್ಯಮಕ್ಕೆ ಸ್ಥಳಾಂತರ ಆಗಿದೆ. ಹಿಂದೆಲ್ಲಾ ಕೆಲವು ಕಂಪನಿಗಳಷ್ಟೇ ರಿಯಲ್ ಎಸ್ಟೇಟ್ ನಡೆಸುತ್ತಿದ್ದವು. ಈಗ ಬಹುತೇಕ ರಾಣಕಾರಣಿಗಳು, ಅದರಲ್ಲೂ ಸಚಿವರುಗಳೇ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಕೊಂಡಿರುತ್ತಾರೆ. ಅದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬುದು ಹೆಸರಿಗಷ್ಟೇ. ಅಲ್ಲಿನ ಜಮೀನಿಗೂ ಎಕರೆಗೆ ₹25 ಕೋಟಿ ತನಕ ಬೆಲೆ ಇದೆ. ಕೆರೆಗಳು, ಗೋಮಾಳಗಳು ಈ ಭೂಕಬಳಿಕೆದಾರರ ಪಾಲಾಗುತ್ತಿವೆ. ಒತ್ತುವರಿ ತೆರವಿಗೆ ಯಾವುದೇ ಸರ್ಕಾರವೂ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈ ವ್ಯವಸ್ಥೆಯಡಿ ಪರಿಹಾರ ಸದ್ಯಕ್ಕೆ ಕಾಣುತ್ತಿಲ್ಲ.

- ವಿ.ಬಾಲಸುಬ್ರಮಣಿಯನ್,ನಿವೃತ್ತ ಐಎಎಸ್ ಅಧಿಕಾರಿ

******

ಕಂದಾಯ ಇಲಾಖೆಯ ಭ್ರಷ್ಟಾಚಾರವೇ ಕಾರಣ

ಕಂದಾಯ ಇಲಾಖೆಯ ಭ್ರಷ್ಟಾಚಾರವೇ ಭೂಕಬಳಿಕ ಮಿತಿಮೀರಿ ಬೆಳೆಯಲು ಕಾರಣ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ನ್ಯಾಯಾಲಯಗಳು ಅಕ್ರಮವನ್ನು ಸಕ್ರಮ ಮಾಡಿಕೊಡುವ ತಾಣವಾಗಿವೆ. ಈ ನ್ಯಾಯಾಲಯಗಳ ಆದೇಶಗಳನ್ನು ಬರೆದುಕೊಡುವ ಸಂಸ್ಥೆಗಳೇ ಹುಟ್ಟಿಕೊಂಡಿವೆ. ಇದರ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ. ಭೂಸುಧಾರಣೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು. ಭೂವ್ಯಾಜ್ಯಗಳ ಪರಿಹಾರಕ್ಕೆ ಇರುವ ಅಧಿಕಾರವನ್ನು ಕಂದಾಯ ಇಲಾಖೆ, ಅದರಲ್ಲೂ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ನ್ಯಾಯಾಲಯಗಳಿಂದ ಹೊರಕ್ಕೆ ತರಬೇಕು. ಭೂಕಬಳಿಕ ವಿಶೇಷ ನ್ಯಾಯಾಲಯದ ಮಾದರಿಯಲ್ಲೇ ಭೂವ್ಯಾಜ್ಯಗಳ ಪರಿಹಾರಕ್ಕೆ ವಿಶೇಷ ನ್ಯಾಯಾಲಯ ತೆರೆಯಬೇಕು.

- ರವಿಕೃಷ್ಣಾ ರೆಡ್ಡಿ,ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ

******

‘ಹೈಕೋರ್ಟ್‌ನಲ್ಲಿ ನ್ಯಾಯ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಅಗತ್ಯ’

ಯಶವಂತಪುರ ಠಾಣೆ ವ್ಯಾಪ್ತಿಯ ಗೋಕುಲ 1ನೇ ಹಂತದಲ್ಲಿರುವ ಆಂಜನೇಯ ದೇವಸ್ಥಾನ ರಸ್ತೆಯಲ್ಲಿ ನನ್ನ ಮಾಲೀಕತ್ವದ ಜಾಗವಿದೆ. ಜಯಚಂದ್ರ ಎಂಬಾತ 2013ರ ಸೆಪ್ಟೆಂಬರ್ 18ರಂದು ಅತಿಕ್ರಮ ಪ್ರವೇಶ ಮಾಡಿದ್ದ. ನಂತರ, ಆತ ಹಾಗೂ ಇತರೆ ಆರೋಪಿಗಳು, ನಕಲಿ ದಾಖಲೆಗಳನ್ನು ಸೃಷ್ಟಿಸಿ ನಕಲಿ ಕಕ್ಷಿದಾರ ಹಾಗೂ ಪ್ರತಿವಾದಿ ಹುಟ್ಟುಹಾಕಿದ್ದರು. ನ್ಯಾಯಾಲಯದಲ್ಲೂ ನಕಲಿ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯದ ದಿಕ್ಕು ತಪ್ಪಿಸಿ ತನ್ನ ಪರ ಆದೇಶ ಪಡೆದಿದ್ದರು. ನಂತರ, ಜಾಗಕ್ಕೆ ಬಂದು ನನ್ನನ್ನೇ ಸ್ಥಳದಿಂದ ಖಾಲಿ ಮಾಡಿಸಿದ್ದರು. ಅದನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಿದಾಗಲೇ, ಆರೋಪಿಗಳ ನಕಲಿ ಮೊಕದ್ದಮೆ ಜಾಲ ಹೊರಬಿತ್ತು. ಈ ಬಗ್ಗೆ ಆರಂಭದಲ್ಲಿ ಯಶವಂತಪುರ ಠಾಣೆಗೆ ದೂರು ನೀಡಿದ್ದೆ.

ಹೈಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಕ್ಕಿತು. ಸಿಐಡಿ ತನಿಖೆ ನಡೆಯುತ್ತಿದೆ. ಖಾಲಿ ಜಾಗಗಳನ್ನು ಗುರುತಿಸಿ ಕಬಳಿಸುವ ಜಾಲ ದೊಡ್ಡದಾಗಿದೆ. ಇಂಥ ಜಾಲದ ಬಗ್ಗೆ ಜನರು ಜಾಗೃತರಾಗಬೇಕು.

– ಜಯೇಷ ಸಿ. ಷಾ,ಜಾಗದ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.