ADVERTISEMENT

ಒಳನೋಟ: ವಿ.ವಿ.ಗಳ ಹುದ್ದೆ ಭರ್ತಿಗೆ ನಿರ್ಲಕ್ಷ್ಯ

ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಗುಲಬರ್ಗಾ ವಿ.ವಿ, ಹಂಪಿ ಕನ್ನಡ ವಿ.ವಿ.

ಮನೋಜ ಕುಮಾರ್ ಗುದ್ದಿ
Published 11 ಸೆಪ್ಟೆಂಬರ್ 2021, 20:22 IST
Last Updated 11 ಸೆಪ್ಟೆಂಬರ್ 2021, 20:22 IST
ಗುಲ್ಬರ್ಗಾ ವಿಶ್ವವಿದ್ಯಾಲಯ
ಗುಲ್ಬರ್ಗಾ ವಿಶ್ವವಿದ್ಯಾಲಯ   

ಕಲಬುರ್ಗಿ: ರಾಜ್ಯ ಸರ್ಕಾರ ಈ ಭಾಗದ ಉನ್ನತ ಶೈಕ್ಷಣಿಕ ಸಂಸ್ಥೆಗಳ ಬೆಳವಣಿಗೆಗೆ ಒತ್ತು ನೀಡುತ್ತಿಲ್ಲ ಎಂಬುದನ್ನು ಗುಲಬರ್ಗಾ ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿ.ವಿ., ಇನ್ನಷ್ಟೇ ಆರಂಭವಾಗಬೇಕಿರುವ ರಾಯಚೂರು ವಿ.ವಿ.ಯನ್ನು ನೋಡಿದಾಗ ಸ್ಪಷ್ಟವಾಗಿ ಗೋಚರಿಸುತ್ತದೆ.

ಈ ಭಾಗದಲ್ಲಿ ಹಳೆಯದಾದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬಹಳ ವರ್ಷಗಳಿಂದ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಯ ನೇಮಕಾತಿ ನಡೆದಿಲ್ಲ. ಪ್ರೊ.ಎಸ್‌.ಆರ್‌. ನಿರಂಜನ ಅವರು ಕುಲಪತಿಯಾಗಿದ್ದ ಸಂದರ್ಭದಲ್ಲಿ 169 ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಉನ್ನತ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆಯ್ಕೆ ಪ್ರಕ್ರಿಯೆ ನಡೆಸಬೇಕು ಎನ್ನುವಷ್ಟರಲ್ಲಿ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆಗಳು ಬಂದಿದ್ದರಿಂದ ಮುಂದಕ್ಕೆ ಹಾಕಲಾಯಿತು.

ಉನ್ನತ ಶಿಕ್ಷಣ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಅವರು ಈಚೆಗೆ ವಿ.ವಿ.ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಕುಲಪತಿ ಪ್ರೊ. ದಯಾನಂದ ಅಗಸರ ಅವರಿಗೆ ಹುದ್ದೆ ಭರ್ತಿಯ ಬಗ್ಗೆ ಯಾವ ಭರವಸೆಯೂ ಸಿಗಲಿಲ್ಲ. ಬದಲಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಿ ಎಂದು ಸಚಿವರು ಸಲಹೆ ನೀಡಿದರು!

ADVERTISEMENT

ರಾಯಚೂರು ವಿಶ್ವವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭವಾಗಲು ಸಿದ್ಧತೆ ನಡೆಸಿದೆ. ಆದರೆ, ಸ್ವಂತ ಕಟ್ಟಡವಿಲ್ಲ. ಬೋಧನಾ ಕೊಠಡಿಗಳು, ವಸತಿ ನಿಲಯ, ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಬೇರೊಂದು ಕಟ್ಟಡದಲ್ಲಿ ತಾತ್ಕಾಲಿಕವಾಗಿ ತರಗತಿ ನಡೆಸಬೇಕಿದೆ.

ಐಐಐಟಿಗೆ ಶಾಶ್ವತ ನೆಲೆಯಿಲ್ಲ: ರಾಯಚೂರಿಗೆ ಮಂಜೂರಾಗಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯು ಇನ್ನೂ ಹೈದರಾಬಾದ್‌ ಐಐಟಿ ಕಾಲೇಜಿನಲ್ಲಿ ಉಳಿದಿದೆ. ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಇದುವರೆಗೂ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ.

ತಾತ್ಕಾಲಿಕ ನೆಲೆಯಾಗಿ ರಾಯಚೂರಿನ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಕ್ಯಾಂಪಸ್‌ನಲ್ಲಿ ಕೆಲವು ಕಟ್ಟಡಗಳನ್ನು ಮೀಸಲಿಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ರಾಯಚೂರು ಹೊರವಲಯ ಸಿಂಗನೋಡಿ ಗ್ರಾಮದ ಬಳಿ 65 ಎಕರೆ ಭೂಮಿಯನ್ನು ಐಐಐಟಿ ಶಾಶ್ವತ ಕ್ಯಾಂಪಸ್‌ಗಾಗಿ ಮೀಸಲಿರಿಸಲಾಗಿದೆ. ವಿದ್ಯುತ್‌, ರಸ್ತೆ ಹಾಗೂ ನೀರಿನ ಸಂ‍ಪರ್ಕ ಕಲ್ಪಿಸಿದ ಬಳಿಕವೇ ಕೇಂದ್ರದಿಂದ ಅನುದಾನ ದೊರೆಯಲಿದೆ. ಇದು ವರೆಗೂ ನೂತನ ಕ್ಯಾಂಪಸ್‌ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ.

ವಿಜಯನಗರ ಜಿಲ್ಲೆ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯ 25 ವರ್ಷ ಪೂರೈಸಿದೆ. ಆದರೆ, ಆರ್ಥಿಕ ಮುಗ್ಗಟ್ಟಿನಿಂದ ರಚನಾತ್ಮಕ ಕೆಲಸ ನಡೆಯುತ್ತಿಲ್ಲ.

ವಿಶ್ವವಿದ್ಯಾಲಯಕ್ಕೆ ಪ್ರತಿವರ್ಷ ಸರಾಸರಿ ₹ 5 ಕೋಟಿ ಅಭಿವೃದ್ಧಿ ಅನುದಾನ ಬರುತ್ತದೆ. ಆದರೆ, ಅದು ಸಿಬ್ಬಂದಿ ವೇತನ ಪಾವತಿಗಷ್ಟೇ ಸೀಮಿತವಾಗಿದೆ. ಕೋವಿಡ್‌ ಲಾಕ್‌ ಡೌನ್‌ ನಂತರ ಪರಿಸ್ಥಿತಿ ಹದಗೆಟ್ಟಿದೆ. ಕೋವಿಡ್‌ ನೆಪದಲ್ಲಿ ಅನುದಾನಕ್ಕೆ ಕತ್ತರಿ ಬಿದ್ದಿದ್ದು, ಸಕಾಲಕ್ಕೆ ವಿದ್ಯುತ್‌ ಬಿಲ್‌ ಭರಿಸಲು ಕೂಡ ಸಾಧ್ಯವಾಗುತ್ತಿಲ್ಲ.

ನಾಡಿನ ಏಕೈಕ ಭಾಷಾ ವಿಶ್ವವಿದ್ಯಾಲಯಕ್ಕೆ ಸರ್ಕಾರ ಈ ವರ್ಷದ ಆರಂಭದಲ್ಲಿ ₹ 3.25 ಕೋಟಿ ಅನುದಾನ ಬಿಡುಗಡೆ ಮಾಡಿತು. ಅದು ಕಾಯಂ ನೌಕರರು, ಗುತ್ತಿಗೆ ಆಧಾರಿತ ನೌಕರರ ವೇತನ ಭರಿಸಲು ಖರ್ಚಾಗಿದೆ. ಅನುದಾನ ಕಡಿತದಿಂದ ವಿಶ್ವವಿದ್ಯಾಲಯ ಆರ್ಥಿಕ ಕೊರತೆ ಎದುರಿಸುತ್ತಿದೆ. ವಿವಿಧ ವಿಭಾಗಗಳಲ್ಲಿ ಪ್ರಾಧ್ಯಾಪಕರು ನಿವೃತ್ತರಾಗಿದ್ದಾರೆ.

ವಿ.ವಿಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಅನುಮೋದನೆ ನೀಡಬೇಕು. ಇಲ್ಲದಿದ್ದರೆ ನ್ಯಾಕ್ ಸಮಿತಿಯಲ್ಲಿ ಉತ್ತಮ ಗ್ರೇಡ್ ಸಿಗುವುದಿಲ್ಲ

– ಡಾ.ದಯಾನಂದ ಅಗಸರ, ಗುಲಬರ್ಗಾ ವಿ.ವಿ. ಕುಲಪತಿ

ರಾಯಚೂರು ವಿ.ವಿ.ಗೆ ಸಿಬ್ಬಂದಿ ನೇಮಕಾತಿಗೆ ಉನ್ನತ ಶಿಕ್ಷಣ ಇಲಾಖೆ ಅನುಮೋದನೆ ನೀಡ ಬೇಕು. ಕೆಕೆಆರ್‌ಡಿಬಿ ₹ 30 ಕೋಟಿ ಒದಗಿಸಿದರೆ ಕಟ್ಟಡ ಶುರು ಮಾಡಬಹುದು.

– ಡಾ. ಹರೀಶ್ ರಾಮಸ್ವಾಮಿ, ರಾಯಚೂರು ವಿ.ವಿ. ಕುಲಪತಿ

– ಪೂರಕ ಮಾಹಿತಿ: ಶಶಿಕಾಂತ ಎಸ್. ಶೆಂಬೆಳ್ಳಿ, ಸತೀಶ್‌ ಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.