ADVERTISEMENT

ಒಳನೋಟ: ಘೋಷಣೆಯಲ್ಲೇ ಉಳಿದ ಉದ್ಯೋಗ ಸೃಷ್ಟಿ ಯೋಜನೆಗಳು

ಬಾಗಿಲು ಹಾಕಿರುವ ಬಿದರಿ ಕಲೆ ತರಬೇತಿ ಕೇಂದ್ರ l ಕಡತದಲ್ಲಿಯೇ ಉಳಿದ ‘ಸೋಲಾರ್ ಕ್ಲಸ್ಟರ್‌’ ಯೋಜನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 20:22 IST
Last Updated 11 ಸೆಪ್ಟೆಂಬರ್ 2021, 20:22 IST
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರ ಹತ್ತಿರ ಆಟಿಗೆ ಕ್ಲಸ್ಟರ್‌ಗಾಗಿ ಮೀಸಲಿಟ್ಟ ಜಾಗದ ನೋಟ
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರ ಹತ್ತಿರ ಆಟಿಗೆ ಕ್ಲಸ್ಟರ್‌ಗಾಗಿ ಮೀಸಲಿಟ್ಟ ಜಾಗದ ನೋಟ   

ರಾಯಚೂರು:ಬೀದರ್‌, ಯಾದಗಿರಿ, ಕೊಪ್ಪಳ, ಕಲಬುರ್ಗಿ ಹಾಗೂ ರಾಯಚೂರು ಜಿಲ್ಲೆಗಳ ಅಭಿವೃದ್ಧಿಗಾಗಿ ಸರ್ಕಾರ ಬಜೆಟ್‌ನಲ್ಲಿಘೋಷಿಸಿದ ಯೋಜನೆಗಳು ನನೆಗುದಿಗೆ ಬಿದ್ದಿವೆ.

ಬೀದರ್‌ನಲ್ಲಿ ‘ಬಿದರಿ ಕಲೆಯ ಗ್ಯಾಲರಿ’ ಸ್ಥಾಪಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮೂರು ವರ್ಷಗಳ ಹಿಂದೆಯೇ ಭೂಮಿಕೆ ಸಿದ್ಧಪಡಿಸಲಾಗಿತ್ತು. ಇದಕ್ಕಾಗಿ ₹ 10 ಕೋಟಿ ಬಿಡುಗಡೆಯಾಗಿತ್ತು. ಆದರೆ, ಜಾಗದ ವಿವಾದ ಪರಿಹಾರವಾಗದ ಕಾರಣ ನನೆಗುದಿಗೆ ಬಿದ್ದಿದೆ.

ನೌಬಾದ್‌ನಲ್ಲಿ ಆರಂಭಿಸಿದ್ದ ಬಿದರಿ ಕಲೆ ತರಬೇತಿ ಕೇಂದ್ರವು ಬಾಗಿಲು ಮುಚ್ಚಿ 16 ವರ್ಷಗಳಾಗಿವೆ. ಬಿದರಿ ಕಲೆ ನಂಬಿಕೊಂಡಿರುವ ಕುಶಲಕರ್ಮಿಗಳ ಸಮಸ್ಯೆ ಆಲಿಸುವವರೇ ಇಲ್ಲದಂತಾಗಿದೆ.

ADVERTISEMENT

ಜಗದೀಶ ಶೆಟ್ಟರ್ ಕೈಗಾರಿಕಾ ಸಚಿವರಾಗಿದ್ದಾಗ ಕೊಪ್ಪಳದಲ್ಲಿ ವರ್ಷದ ಹಿಂದೆ ಆಟಿಗೆ ಕ್ಲಸ್ಟರ್‌ ಸ್ಥಾಪನೆಗೆ ಚಾಲನೆ ನೀಡಿದ್ದರು.ಸುಮಾರು 25 ಸಾವಿರ ನೇರ ಉದ್ಯೋಗ ಸೃಷ್ಟಿಸುವುದಾಗಿಯೂ ಹೇಳಿದ್ದರು. ಆದರೆ, ಈ ಯೋಜನೆ ಇನ್ನೂ ಭೂಮಿ ಸಮತಟ್ಟು ಮಾಡುವ ಹಂತದಲ್ಲೇ ಇದೆ.

ಹೆಚ್ಚಾಗಿ ಬಿಸಿಲನ್ನೇ ಸಂಪನ್ಮೂಲ ಮಾಡಿಕೊಂಡು ಕಲಬುರ್ಗಿ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ‘ಸೋಲಾರ ಪಾರ್ಕ್‌’ ಸ್ಥಾಪಿಸುವ ಯೋಜನೆಯನ್ನು ರೂಪಿಸಲಾಗಿತ್ತು.ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಇದ್ದಾಗ ‘ಸೋಲಾರ್‌ ಕ್ಲಸ್ಟರ್‌’ ಯೋಜನೆ ಘೋಷಿಸಿದ್ದರು.ಈ ಯೋಜನೆ ಈಗಲೂ ಕಡತಗಳಲ್ಲೇ ಉಳಿದುಕೊಂಡಿದೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ಹೂಡಿಕೆ ಮತ್ತು ತಯಾರಿಕಾ ವಲಯ (ನಿಮ್ಝ್)ವನ್ನು ಕಲಬುರ್ಗಿ ಮತ್ತು ತುಮಕೂರು ಜಿಲ್ಲೆಯ ವಸಂತ ನರಸಾಪುರ ಏಕಕಾಲಕ್ಕೆ ಘೋಷಿಸಿತ್ತು. ತುಮಕೂರು ಜಿಲ್ಲೆಯ ಯೋಜನೆ ಕಾರ್ಯಗತಗೊಂಡಿದೆ. ಆದರೆ, ಕಲಬುರ್ಗಿ ಯೋಜನೆ ಟೇಕಾಫ್ ಆಗಲೇ ಇಲ್ಲ.

ಯಾದಗಿರಿಯಲ್ಲಿ ‘ಫಾರ್ಮಾ ಪಾರ್ಕ್‌’ ಸ್ಥಾಪಿಸುವ ಯೋಜನೆಯೂ ಕಾರ್ಯಗತಗೊಂಡಿಲ್ಲ. ‘ಯಾದಗಿರಿಯಲ್ಲಿ ₹ 100 ಕೋಟಿ ವೆಚ್ಚದಲ್ಲಿ ಫಾರ್ಮಾ ಪಾರ್ಕ್‌ ಸ್ಥಾಪಿಸಲಾಗುವುದು. ಆದರೆ, ರಾಜ್ಯ ಸರ್ಕಾರವು ಮೂಲಸೌಕರ್ಯಗಳನ್ನು ಒದಗಿಸಬೇಕಿದೆ’ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾಈಚೆಗೆ ಹೇಳಿಕೆ ನೀಡಿದ್ದಾರೆ.

ರಾಯಚೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಪ್ರಸ್ತಾವ ಏಳು ದಶಕದಿಂದ ಇದ್ದಲ್ಲೇ ಇದೆ. ಜವಾಹರಲಾಲ್‌ ನೆಹರೂ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಒಮ್ಮೆ ಚೆನ್ನೈನತ್ತ ಪ್ರಯಾಣಿಸುತ್ತಿದ್ದ ವಿಮಾನವು 1957 ಫೆ. 26ರಂದುರಾಯಚೂರಿನ ಯರಮರಸ್‌ ಬಯಲು ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಅಂದಿನಿಂದಲೂ ವಿಮಾನ ನಿಲ್ದಾಣಕ್ಕಾಗಿ 402 ಎಕರೆ ಜಾಗ ಕಾದಿರಿಸಲಾಗಿದೆ.

ಕುಶಲಕರ್ಮಿಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಉದ್ದೇಶವಿದೆ ಎಂದು ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಆದರೆ, ಆ ಕೆಲಸ ಆಗಿಲ್ಲ

– ರಾಜಕುಮಾರ ನಾಗೇಶ್ವರ, ಬಿದರಿ ಕುಶಲಕರ್ಮಿ, ಬೀದರ್‌

ರಾಯಚೂರಿನಲ್ಲಿ ವಿಮಾನ ನಿಲ್ದಾಣ ಯಾವಾಗಲೋ ಆಗಬೇಕಿತ್ತು. ಜಿಲ್ಲೆ ಬಗ್ಗೆ ಸರ್ಕಾರಕ್ಕೆ ನಿರ್ಲಕ್ಷ್ಯ ಧೋರಣೆ; ಇಲ್ಲಿನ ರಾಜಕಾರಣಿಗಳಿಗೂ ಇಚ್ಛಾಶಕ್ತಿ ಇಲ್ಲ

– ಅಶೋಕಕುಮಾರ್‌ ಜೈನ್‌, ಸಾಮಾಜಿಕ ಕಾರ್ಯಕರ್ತ, ರಾಯಚೂರು

ಕೊಪ್ಪಳದ ಆಟಿಕೆ ಕ್ಲಸ್ಟರ್, ಯಾದಗಿರಿ ಜಿಲ್ಲೆ ಕಡೇಚೂರಿನ ಫಾರ್ಮಾ ಪಾರ್ಕ್ ಶೀಘ್ರವೇ ಆರಂಭವಾದರೆ ಈ ಭಾಗದ ನಿರುದ್ಯೋಗಿ ಯುವಕ– ಯುವತಿಯರಿಗೆ ಉದ್ಯೋಗ ಸಿಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುತ್ತೇವೆ

- ಪ್ರಶಾಂತ ಮಾನಕರ, ಹೈ–ಕ ವಾಣಿಜ್ಯೋದ್ಮ ಸಂಸ್ಥೆಯ ಅಧ್ಯಕ್ಷ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.