ADVERTISEMENT

ಒಳನೋಟ: ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಯೋಜನಾ ವರದಿಯೇ ಇಲ್ಲ

ನವಲಿ ಜಲಾಶಯ: ಸಮೀಕ್ಷಾ ಕಾರ್ಯಕ್ಕೆ ತಡೆ

ಸಿದ್ದನಗೌಡ ಪಾಟೀಲ
Published 11 ಸೆಪ್ಟೆಂಬರ್ 2021, 20:32 IST
Last Updated 11 ಸೆಪ್ಟೆಂಬರ್ 2021, 20:32 IST
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ದೃಶ್ಯ - –ಪ್ರಜಾವಾಣಿ ಚಿತ್ರ
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ದೃಶ್ಯ - –ಪ್ರಜಾವಾಣಿ ಚಿತ್ರ   

ಕೊಪ್ಪಳ: ಕೊಪ್ಪಳ, ರಾಯಚೂರು, ಅವಿಭಜಿತ ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯ ನಿರ್ಮಾಣಗೊಂಡು ಏಳು ದಶಕ ಸಮೀಪಿಸುತ್ತಿದೆ. ಹೂಳು ತುಂಬಿಕೊಂಡಿರುವುದರಿಂದ ಕರ್ನಾಟಕದ ಪಾಲಿನ ಪೂರ್ತಿ ನೀರು ಲಭ್ಯವಾಗುತ್ತಿಲ್ಲ. ಕನಕಗಿರಿ ತಾಲ್ಲೂಕಿನ ನವಲಿ ಬಳಿ 35 ಟಿಎಂಸಿ ಅಡಿ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿ ಹಲವು ವರ್ಷಗಳಾದರೂ ಯೋಜನಾ ವರದಿ ಇನ್ನೂ ಸಿದ್ಧಗೊಂಡಿಲ್ಲ.

ಈ ನಡುವೆ ಸುತ್ತಲಿನ ಗ್ರಾಮಸ್ಥರ ವಿರೋಧದಿಂದಾಗಿ ಯೋಜನೆಯ ಅನುಷ್ಠಾನ ಮತ್ತಷ್ಟು ವಿಳಂಬವಾಗಲಿದೆ ಎಂಬುದು ನೀರಾವರಿ ತಜ್ಞರ ಕಳವಳಕ್ಕೆ ಕಾರಣವಾಗಿದೆ.

135ಟಿಎಂಸಿ ಅಡಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ 35 ಟಿಎಂಸಿ ಅಡಿಗೂ ಹೆಚ್ಚು ಪ್ರಮಾಣದ ಹೂಳು ತುಂಬಿದೆ. ಇಷ್ಟೊಂದು ಪ್ರಮಾಣದ ಹೂಳು ತೆಗೆಯುವುದು ತುಂಬಾ ವೆಚ್ಚದಾಯಕ. ರಾಜ್ಯದ ಪಾಲಿನ 30 ಟಿಎಂಸಿ ಅಡಿ ನೀರು ಖೋತಾ ಆಗುತ್ತಿದೆ. ಅದಕ್ಕಾಗಿ ಸರ್ಕಾರ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಿದೆ.

ADVERTISEMENT

15 ಗ್ರಾಮ ಮುಳುಗಡೆ: ಜಲಾಶಯ ನಿರ್ಮಾಣವಾಗುವುದರಿಂದ ಗುಡೂದೂರು, ಮಲ್ಲಾಪುರ, ಕರಡೋಣಿ, ಈಚನಾಳ, ಬುನ್ನಟ್ಟಿ, ಯತ್ನಟ್ಟಿ, ಗೊಲ್ಲರಹಟ್ಟಿ, ಪುರ, ಬುಕನಟ್ಟಿ, ಉಮಲೋಟಿ, ನೀರಲೂಟಿ, ಕಾಟಾಪುರ, ಮಲ್ಲಿಗೆವಾಡ, ಚಿಕ್ಕಖೇಡ, ಹಿರೇಖೇಡ ಸೇರಿದಂತೆ15 ಗ್ರಾಮಗಳು ಮುಳುಗಡೆಯಾಗಲಿವೆ ಎಂದು ಅಂದಾಜಿಸಲಾಗಿದೆ. ವಿಸ್ತೃತ ಯೋಜನಾ ವರದಿಯ ನಂತರ ಗ್ರಾಮಗಳ ಮುಳುಗಡೆ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ.

ಏರುತ್ತಿರುವ ಯೋಜನಾ ವೆಚ್ಚ: ಜಲಾಶಯ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಕಳೆದ ಬಜೆಟ್‌ನಲ್ಲಿ₹ 14.30 ಕೋಟಿ ಮೀಸಲಿರಿಸಿದ್ದು, ₹ 13.30 ಕೋಟಿ ಅನುದಾನ ಬಿಡುಗಡೆಯಾಗಿದೆ.ಸಿದ್ದರಾಮಯ್ಯ ಸರ್ಕಾರ ಇದ್ದಾಗ ಈ ಜಲಾಶಯದ ಯೋಜನಾ ವೆಚ್ಚ ₹ 5,800 ಕೋಟಿ ಎಂದು ಅಂದಾಜಿಸಲಾಗಿತ್ತು. ಈಗ ಯೋಜನಾ ವೆಚ್ಚ ₹12 ಸಾವಿರ ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸಮಾನಾಂತರ ಜಲಾಶಯ ಕಣ್ಣೊರೆಸುವ ತಂತ್ರ. ಮಸ್ಕಿ ಉಪ ಚುನಾವಣೆ ಗೆಲ್ಲಲು ಬಿಜೆಪಿ ಏನೇನೋ ಕಸರತ್ತು ಮಾಡಿತ್ತು. ಚುನಾವಣೆಯಲ್ಲಿ ಸೋತ ನಂತರ ಅಪಸ್ವರ ಎಬ್ಬಿಸುತ್ತಿದ್ದಾರೆ.

– ಚಾಮರಸ ಮಾಲಿಪಾಟೀಲ, ಅಧ್ಯಕ್ಷ, ರಾಜ್ಯ ರೈತ ಸಂಘ

ನೀರಿನ ಸದ್ಬಳಕೆಗೆ ನವಲಿ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಏನೇ ತಾಂತ್ರಿಕ ಮತ್ತು ಜನರ ಸಮಸ್ಯೆಗಳಿದ್ದರೂ ಅದನ್ನು ಸರ್ಕಾರದ ಗಮನಕ್ಕೆ ತಂದು ಸಮೀಕ್ಷೆ ಕಾರ್ಯ ನಡೆಸಲಾಗುವುದು.

– ಮಲ್ಲಿಕಾರ್ಜುನ ಗುಂಗೆ, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ನೀರಾವರಿ ನಿಗಮ ನಿಯಮಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.