ADVERTISEMENT

ಒಳನೋಟ: ಕೋವಿಡ್‌ ಕಾಲದಲ್ಲಿ ರಾಜಕಾರಣಿಗಳ ಮೇಲೆ ನಿರೀಕ್ಷೆ ಹೆಚ್ಚು; ಸ್ಪಂದನೆ ಕಡಿಮೆ

ವಿ.ಎಸ್.ಸುಬ್ರಹ್ಮಣ್ಯ
Published 1 ಮೇ 2021, 21:37 IST
Last Updated 1 ಮೇ 2021, 21:37 IST
ಶಾಸಕ ವೇದವ್ಯಾಸ ಕಾಮತ್ ಅವರ ಸೇವಾಂಜಲಿ ಟ್ರಸ್ಟ್‌ ಮೂಲಕ ರೈಲು ನಿಲ್ದಾಣದಲ್ಲಿ ಉಳಿದಿದ್ದ ಜನರಿಗೆ ಊಟದ ವ್ಯವಸ್ಥೆ ಮಾಡಲಾಯಿತು.
ಶಾಸಕ ವೇದವ್ಯಾಸ ಕಾಮತ್ ಅವರ ಸೇವಾಂಜಲಿ ಟ್ರಸ್ಟ್‌ ಮೂಲಕ ರೈಲು ನಿಲ್ದಾಣದಲ್ಲಿ ಉಳಿದಿದ್ದ ಜನರಿಗೆ ಊಟದ ವ್ಯವಸ್ಥೆ ಮಾಡಲಾಯಿತು.   

ಕೋವಿಡ್‌ ಎರಡನೇ ಅಲೆ ಜನರನ್ನು ಹೈರಾಣಾಗಿಸಿದೆ. ಸೋಂಕಿತರಿಗೆ ಆಸ್ಪತ್ರೆಯ ಹಾಸಿಗೆ, ಐಸಿಯು, ವೆಂಟಿಲೇಟರ್‌ ಕೂಡ ದೊರೆಯದ ಸ್ಥಿತಿ ಇದೆ. ಚಿಕಿತ್ಸೆಗಾಗಿ ಪರದಾಟ ಒಂದೆಡೆಯಾದರೆ, ಕರ್ಫ್ಯೂ ಜಾರಿಯಿಂದಾಗಿ ತುತ್ತು ಅನ್ನಕ್ಕೂ ಕೈಚಾಚಬೇಕಾದ ಸ್ಥಿತಿ ಮತ್ತೊಂದೆಡೆ. ಇಂತಹ ಸಂಕಷ್ಟದ ಕಾಲದಲ್ಲಿ ಕೆಲವು ಜನಪ್ರತಿನಿಧಿಗಳು ತಮ್ಮ ಆರೋಗ್ಯದ ಕಾಳಜಿಯನ್ನು ಮರೆತು ಜನರಿಗೆ ನೆರವಾಗುತ್ತಿದ್ದಾರೆ. ಆದರೆ, ಚುನಾಯಿತ ಪ್ರತಿನಿಧಿಗಳಲ್ಲಿ ಬಹುಪಾಲು ಮಂದಿ ಜನರ ಕೈಗೆ ಸಿಗುತ್ತಿಲ್ಲ. ಕೆಲವರು ಕ್ಷೇತ್ರದಾದ್ಯಂತ ಓಡಾಡುತ್ತಾ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಆದರೆ, ಇಂಥವರ ಸಂಖ್ಯೆ ತೀರಾ ಕಡಿಮೆ. ಮನೆಯೊಳಗೆ ಸೇರಿಕೊಡಿರುವವರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾದವರ ಸಂಖ್ಯೆಯೇ ಹೆಚ್ಚಾಗಿದೆ ಎಂಬುದು ಜನರ ಆಕ್ಷೇಪವಾಗಿದೆ.

***

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಈಗ ನಿತ್ಯವೂ ಸುಮಾರು 20,000 ಹೊಸ ಕೋವಿಡ್‌ ಪ್ರಕರಣಗಳು ದೃಢಪಡುತ್ತಿವೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 28 ಶಾಸಕರು ಮತ್ತು ಮೂವರು ಸಂಸದರಿದ್ದಾರೆ. ಇವರಲ್ಲಿ ಬೆರಳೆಣಿಕೆಯ ಮಂದಿ ಮಾತ್ರ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಹೆಚ್ಚಿನವರು ಸರ್ಕಾರದ ವತಿಯಿಂದ ನಡೆಯುತ್ತಿರುವ ಕೆಲಸಗಳ ಮೇಲುಸ್ತುವಾರಿಯಿಂದಲೂ ದೂರ ಉಳಿದಿದ್ದಾರೆ. ಕೆಲವರು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ ಆ್ಯಪ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದ್ದಾರೆ.

ADVERTISEMENT

ಶಾಸಕರಲ್ಲಿ ಹೆಚ್ಚು ಮಂದಿ ತಮ್ಮ ಕ್ಷೇತ್ರಗಳ ಜನರ ದೂರವಾಣಿ ಕರೆಯನ್ನೂ ಸ್ವೀಕರಿಸುವುದಿಲ್ಲ ಎಂಬ ಆರೋಪಗಳು ಇವೆ.ಎರಡನೇ ಅಲೆಯ ಅಬ್ಬರಕ್ಕೆ ಬೆದರಿರುವ ಬಹುತೇಕರು ಮನೆಯಿಂದ ಹೊರಕ್ಕೆ ಕಾಲಿಡಲೂ ಅಂಜುತ್ತಿದ್ದಾರೆ.

ಕೆಲವರಷ್ಟೇ ಸಕ್ರಿಯ: ಬೆಂಗಳೂರಿನ ಶಾಸಕರ ಪೈಕಿ ಯಲಹಂಕದ ಎಸ್‌.ಆರ್‌. ವಿಶ್ವನಾಥ್‌, ಹೆಬ್ಬಾಳದ ಬೈರತಿ ಸುರೇಶ್, ದಾಸರಹಳ್ಳಿಯ ಆರ್‌.ಮಂಜುನಾಥ್‌, ಬಿಟಿಎಂ ಬಡಾವಣೆಯ ರಾಮಲಿಂಗಾರೆಡ್ಡಿ, ಜಯನಗರದ ಸೌಮ್ಯಾ ರೆಡ್ಡಿ, ಎನ್‌.ಎ. ಹ್ಯಾರಿಸ್‌ ಸೇರಿದಂತೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಂಕಷ್ಟದಲ್ಲಿರುವ ಜನರಿಗೆ ನೆರವು ಒದಗಿಸುವ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ.

ಎಸ್‌.ಆರ್‌. ವಿಶ್ವನಾಥ್‌ ತಮ್ಮ ನೇತೃತ್ವದ ವಿಶ್ವವಾಣಿ ಫೌಂಡೇಷನ್‌ ಮೂಲಕ ಸೇವೆ ಒದಗಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಖಾಸಗಿ ವೈದ್ಯರನ್ನು ನಿಯೋಜಿಸಲು ತಮ್ಮ ಸಂಸ್ಥೆಯ ಮೂಲಕ ಹಣ ವೆಚ್ಚ ಮಾಡುತ್ತಿದ್ದಾರೆ. ಬೈರತಿ ಸುರೇಶ್‌ ಕೂಡ ಸ್ವಂತ ಹಣ ವ್ಯಯಿಸಿ ಜನರಿಗೆ ನೆರವು ನೀಡುವ ಕೆಲಸ ಮಾಡುತ್ತಿದ್ದಾರೆ. ರಾಮಲಿಂಗಾ ರೆಡ್ಡಿ ಮತ್ತು ಅವರ ಮಗಳು ಸೌಮ್ಯಾ ರೆಡ್ಡಿ ಖಾಸಗಿ ಕಂಪನಿಗಳ ಸಭಾಂಗಣಗಳನ್ನು ಪಡೆದುಕೊಂಡು ಕೋವಿಡ್‌ ಆರೈಕೆ ಕೇಂದ್ರಗಳನ್ನು ಆರಂಭಿಸಿ, ಸೋಂಕಿತರ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ.

ಸಚಿವರೂ ಆಗಿರುವ ಕೆ.ಆರ್‌. ಪುರ ಶಾಸಕ ಬೈರತಿ ಬಸವರಾಜ, ಸಂಕಷ್ಟದಲ್ಲಿರುವ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿ ಸ್ಪಂದಿಸಿದ್ದಾರೆ. ಶಾಸಕ ಮಂಜುನಾಥ್‌ ದಾಸರಹಳ್ಳಿ ಕ್ಷೇತ್ರದಲ್ಲೂ ಕೋವಿಡ್‌ ಆರೈಕೆ ಕೇಂದ್ರಗಳನ್ನು ಆರಂಭಿಸಿದ್ದಾರೆ. ಹ್ಯಾರಿಸ್‌ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕೆಲವೆಡೆ ವಿದ್ಯಾರ್ಥಿ ನಿಲಯಗಳನ್ನು ಬಳಸಿಕೊಂಡು ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆದಿದ್ದಾರೆ.

ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್‌, ಮೈಸೂರು ಜಿಲ್ಲಾ ಉಸ್ತುವಾರಿಯಾಗಿದ್ದು ಅಲ್ಲಿನ ಕೋವಿಡ್ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ವಾರಕ್ಕೆ ಎರಡು ದಿನ ಕ್ಷೇತ್ರದಲ್ಲಿ ಓಡಾಡಿ ಆಸ್ಪತ್ರೆ, ಕೇರ್ ಸೆಂಟರ್‌ಗಳ ವ್ಯವಸ್ಥೆ ಮಾಡುತ್ತಿದ್ದಾರೆ.

ನಗರದ ವ್ಯಾಪ್ತಿಯ ಮೂವರು ಸಂಸದರ ಪೈಕಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ರೆಮ್‌ಡಿಸಿವಿರ್‌ ಕೊರತೆ ಸಂಬಂಧ ಮೈಲಾನ್‌ ಕಂಪನಿಗೆ ಭೇಟಿ ನೀಡಲು ಒಮ್ಮೆ ನಗರಕ್ಕೆ ಬಂದು ಹೋಗಿದ್ದಾರೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆಮ್ಲಜನಕ ಕೊರತೆ ನೀಗಿಸುವ ಸಂಬಂಧ ಕೇಂದ್ರದ ಜತೆ ಪತ್ರ ವ್ಯವಹಾರ ಮಾಡಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್‌, ‘ಸೇನೆಯನ್ನು ಬಳಸಿಕೊಂಡು ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲೂ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಿ’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.

‘ಕಲ್ಯಾಣ’ ಮರೆತ ಪ್ರತಿನಿಧಿಗಳು
ಕಲಬುರ್ಗಿ:
2020ರ ಮಾರ್ಚ್‌ನಲ್ಲಿ ಕಾಣಿಸಿಕೊಂಡ ಕೋವಿಡ್‌ ಸೋಂಕಿನಿಂದಾಗಿ ದೇಶದಲ್ಲೇ ಮೊದಲ ಸಾವುಕಲಬುರ್ಗಿಯಲ್ಲಿ ಸಂಭವಿಸಿತ್ತು. ಆ ನಂತರ ಘೋಷಿಸಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು ಜನರಿಗೆ ಆಹಾರದ ಕಿಟ್‌ಗಳನ್ನು ಪೈಪೋಟಿಗೆ ಬಿದ್ದವರಂತೆ ಹಂಚಿದ್ದರು. ಈ ಬಾರಿಯೂ 14 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಆದರೆ ಬಡ ಕೂಲಿಕಾರ್ಮಿಕರ ನೆರವಿಗೆ ಯಾರೂ ಬಂದಿಲ್ಲ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅಧಿಕಾರಿಗಳ ಸಭೆ ನಡೆಸಿದ್ದನ್ನು ಬಿಟ್ಟರೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಸ್ವತಃ ವೈದ್ಯರಾಗಿರುವ ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವ, ಪಟ್ಟಣದಲ್ಲಿ 30 ಬೆಡ್‌ಗಳನ್ನು ಕೋವಿಡ್ ರೋಗಿಗಳಿಗಾಗಿ ವ್ಯವಸ್ಥೆ ಮಾಡಿದ್ದಾರೆ. ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಅಫಜಲಪುರ ಶಾಸಕ ಎಂ.ವೈ. ಪಾಟೀಲ, ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಅಷ್ಟಾಗಿ ಸಕ್ರಿಯರಾಗಿಲ್ಲ.ಆಳಂದ ಶಾಸಕ ಸುಭಾಷ್ ಗುತ್ತೇದಾರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್, ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅವರಿಗೆ ಕೋವಿಡ್‌ ಸೋಂಕು ತಗುಲಿದ್ದು, ಆರೈಕೆಯಲ್ಲಿದ್ದಾರೆ.

ಬೀದರ್‌ ಸಂಸದ ಭಗವಂತ ಖೂಬಾ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ್ದು, ಸೋಂಕಿತರ ಆರೋಗ್ಯ ವಿಚಾರಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವಪ್ರಭು ಚವಾಣ್ ಕೋವಿಡ್ ನಿಯಂತ್ರಣ ಸಂಬಂಧ ಜನಪ್ರತಿನಿಧಿಗಳ ಸಭೆ ನಡೆಸಿದ್ದಾರೆ. ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ, ಬೀದರ್‌ನ ಶಾಸಕರಾದ ರಹೀಂ ಖಾನ್, ಶಾಸಕ ಬಂಡೆಪ್ಪ ಕಾಶೆಂಪೂರ ಸಭೆಗಳಿಗಷ್ಟೇ ಸೀಮಿತರಾಗಿದ್ದಾರೆ.

ವಿಧಾನಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದಕುಮಾರ ಅರಳಿ ಕೋವಿಡ್ ಸೋಂಕಿಗೆ ಚಿಕಿತ್ಸೆ, ವಿಶ್ರಾಂತಿ ಪಡೆಯುತ್ತಿದ್ದಾರೆ. ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಐಸೊಲೇಶನ್‍ನಲ್ಲಿ ಇದ್ದಾರೆ.

ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಕ್ಷೇತ್ರದಲ್ಲೇ ಇದ್ದು, ಅಧಿಕಾರಿಗಳ ಸಭೆ ನಡೆಸಿದ್ದಾರೆ. ಶಹಾಪುರದ ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಎರಡು ತಿಂಗಳ ಹಿಂದೆ ಕೋವಿಡ್ ದೃಢಪಟ್ಟಿತ್ತು. ಗುಣಮುಖರಾದ ನಂತರ ವಿಶ್ರಾಂತಿಯಲ್ಲಿದ್ದು, ತಿಂಗಳ ಅವಧಿಯಲ್ಲಿ ಅಧಿಕಾರಿಗಳ ಸಭೆಯನ್ನೂ ನಡೆಸಿಲ್ಲ.

ಗುರುಮಠಕಲ್‌ ಶಾಸಕನಾಗನಗೌಡ ಕಂದಕೂರ ಸಕ್ರಿಯರಾಗಿಲ್ಲ. ಅವರ ಪುತ್ರ ಜನರಿಗೆ ನೆರವಾಗುತ್ತಿದ್ದಾರೆ. ಸುರಪುರ ಶಾಸಕ ನರಸಿಂಹ ನಾಯಕ (ರಾಜೂಗೌಡ) ಅವರಿಗೆ ಕೋವಿಡ್‌ ತಗುಲಿದ್ದು, ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ಕೆ.ರಾಘವೇಂದ್ರ ಹಿಟ್ನಾಳ, ಬಸವರಾಜ ದಡೇಸಗೂರ್ ಸುಮ್ಮನಿದ್ದರು.ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಗುರುವಾರ ನಡೆಸಿದ ಸಭೆಯಲ್ಲಿ ಮಾತ್ರ ಇವರೆಲ್ಲ ಪ್ರತ್ಯಕ್ಷರಾದರು. ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

‘ಸಹಾಯ’ಕ್ಕೆ ಜನಪ್ರತಿನಿಧಿಗಳು
ಮಂಗಳೂರು:
ಕೋವಿಡ್ ಎರಡನೇ ಅಲೆ ವ್ಯಾಪಕವಾಗುತ್ತಿದ್ದಂತೆ ಕರಾವಳಿ ಜಿಲ್ಲೆಗಳ ಜನಪ್ರತಿನಿಧಿಗಳು ಚುರುಕಾಗಿದ್ದಾರೆ.

ದಕ್ಷಿಣ ಕನ್ನಡದ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರು, ಎಂಆರ್‌ಪಿಎಲ್‌, ಎಂಸಿಎಫ್‌, ಬಿಎಸ್‌ಎಫ್‌, ಕೆಐಒಸಿಎಲ್‌ ಸೇರಿದಂತೆ ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳು, ಕಂಪನಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ, ಆಂಬುಲೆನ್ಸ್‌ಗಳ ವ್ಯವಸ್ಥೆ, ವೆಂಟಿಲೇಟರ್‌ ಹಾಸಿಗೆಗಳ ವ್ಯವಸ್ಥೆ ಮಾಡಲು ಸೂಚನೆ ನೀಡಿರುವ ಪರಿಣಾಮ, ಎಲ್ಲ ಕಂಪನಿಗಳು ವ್ಯವಸ್ಥೆ ರೂಪಿಸಲು ಒಪ್ಪಿಕೊಂಡಿವೆ.

ಸಂಸದರ ಕಚೇರಿಯನ್ನು ವಾರ್‌ ರೂಂ ಆಗಿ ಪರಿವರ್ತಿಸಲಾಗಿದೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹಾಯವಾಣಿ ತೆರೆದು, ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ, ಔಷಧ, ಆಯುಷ್ಮಾನ್‌ ಭಾರತ ಕರ್ನಾಟಕ ಕಾರ್ಡ್‌ ವ್ಯವಸ್ಥೆಗೆ ಪ್ರತ್ಯೇಕ ಮೊಬೈಲ್‌ ಸಂಖ್ಯೆ ನೀಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೋವಿಡ್–19 ದೃಢಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೂ, ವಿಡಿಯೊ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಗುಣಮುಖರಾಗಿ ಹೊರಬಂದ ಮರುದಿನವೇ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ, ತಮ್ಮ ಕ್ಷೇತ್ರದ ಜನರನ್ನು ಬೆಂಗಳೂರಿನಿಂದ ವಿಶೇಷ ಬಸ್‌ ಮೂಲಕ ಕರೆತಂದು, ಅವರಿಗೆ ಶಾಲೆಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡಿದ್ದಾರೆ. ಊಟ, ಉಪಾಹಾರ, ಆರೋಗ್ಯ ತಪಾಸಣೆ ವ್ಯವಸ್ಥೆ ಒದಗಿಸಿದ್ದಾರೆ. ಸಚಿವರೂ ಆಗಿರುವ ಸುಳ್ಯ ಶಾಸಕ ಎಸ್. ಅಂಗಾರ, ಸುಳ್ಯದಲ್ಲಿಯೇ ಬಿಡಾರ ಹೂಡಿದ್ದು, ಆಸ್ಪತ್ರೆಗಳ ವ್ಯವಸ್ಥೆಯ ಕುರಿತು ನಿರಂತರ ನಿಗಾ ವಹಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್, ಕೆಲದಿನಗಳ ವಿಶ್ರಾಂತಿಯ ನಂತರ ತಮ್ಮ ಕ್ಷೇತ್ರಕ್ಕೆ ಮರಳಿದ್ದಾರೆ. ಜನರ ಜೊತೆಗೆ ಸಂಪರ್ಕದಲ್ಲಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌, ತಮ್ಮ ಸೇವಾಂಜಲಿ ಟ್ರಸ್ಟ್‌ ಮೂಲಕ ರಸ್ತೆ ಬದಿ ನಿವಾಸಿಗಳು, ರೈಲು ನಿಲ್ದಾಣದಲ್ಲಿರುವ ಕಾರ್ಮಿಕರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮಂಗಳೂರಿನ ನಂದಿಗುಡ್ಡೆ, ಬೋಳೂರು ಸ್ಮಶಾನದಲ್ಲಿ ಕೋವಿಡ್‌–19ನಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಉಚಿತ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್‌ ಶೆಟ್ಟಿ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಲು ಮೊಬೈಲ್‌ ಆ್ಯಪ್‌ ರೂಪಿಸಿದ್ದಾರೆ.

ಮೂಲ್ಕಿ–ಮೂಡುಬಿದಿರೆ ಕ್ಷೇತ್ರದ ಉಮಾನಾಥ ಕೋಟ್ಯಾನ್‌, ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌, ಪುತ್ತೂರು ಕ್ಷೇತ್ರದ ಸಂಜೀವ ಮಠಂದೂರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕಾರಿಗಳ ಸಭೆ, ಆಸ್ಪತ್ರೆಗಳ ಭೇಟಿಯಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಶಾಸಕರು ತಂತ್ರಜ್ಞಾನ ಸದ್ಬಳಕೆಯ ಜತೆಗೆ ಸ್ವತಃ ಕ್ಷೇತ್ರಕ್ಕಿಳಿದು ಜನರ ಸಮಸ್ಯೆಗೆ ಸ್ಪಂದಿಸಲು ಪ್ರಯತ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.