ADVERTISEMENT

ಒಳನೋಟ: ಬಾಲ ಕಾರ್ಮಿಕರ ಸಮೀಕ್ಷೆ ಈಗ ಶುರು

ಗುರು ಪಿ.ಎಸ್‌
Published 10 ಜುಲೈ 2021, 20:55 IST
Last Updated 10 ಜುಲೈ 2021, 20:55 IST
ಬಾಲ್ಯವಿವಾಹ (ಸಾಂದರ್ಭಿಕ ಚಿತ್ರ)
ಬಾಲ್ಯವಿವಾಹ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ನಂತರ ಬಾಲ್ಯವಿವಾಹ ಪ್ರಕರಣಗಳು ಮತ್ತು ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿರುವ ದೂರುಗಳಿದ್ದರೂ ಈ ಬಗ್ಗೆ ನಿಖರ ಅಂಕಿ–ಅಂಶಗಳು ಲಭ್ಯವಿಲ್ಲ. ಈ ಕುರಿತು ವಿಚಾರಿಸಿದರೂ ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ‘ಹೊಣೆ ವರ್ಗಾವಣೆ’ ಮಾಡುತ್ತಾರೆ.

ಪೌರಾಡಳಿತ ನಿರ್ದೇಶನಾಲಯ ನಡೆಸಿದ ಸಮೀಕ್ಷೆಯ ಪ್ರಕಾರ, 6ರಿಂದ 14 ವರ್ಷ ವಯೋಮಾನದ 56,605 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಆ ಪೈಕಿ, ಗ್ರಾಮೀಣ ಭಾಗದಲ್ಲಿ 33,329 ಹಾಗೂ ನಗರ ಪ್ರದೇಶಗಳಲ್ಲಿ 8,715 ಮಕ್ಕಳು ಅರ್ಧದಲ್ಲಿಯೇ ಶಾಲೆ ಬಿಟ್ಟಿದ್ದಾರೆ. ಬಿಬಿಎಂಪಿ ಹೊರತು ಪಡಿಸಿದ ಅಂಕಿ–ಅಂಶ ಇದು. ಈ ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ಶಾಲೆ ಬಿಟ್ಟಿರುವ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ.

ಹೀಗೆ ಶಾಲೆ ಬಿಟ್ಟಿರುವ, ಶಾಲೆ ಮೆಟ್ಟಿಲನ್ನೇ ತುಳಿಯದ ಮಕ್ಕಳ ಪೈಕಿ ಅನೇಕರು ಬಾಲ ಕಾರ್ಮಿಕರಾಗಿರುವ ಸಾಧ್ಯತೆಯನ್ನು ಶಿಕ್ಷಣ ಇಲಾಖೆ ಅಲ್ಲಗಳೆಯುವುದಿಲ್ಲ.

ADVERTISEMENT

ಸಮೀಕ್ಷೆಗೆ ಸೂಚನೆ: ‘ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಈ ಬಗ್ಗೆ ಸಮೀಕ್ಷೆಗೆ ಶಿಕ್ಷಣ ಇಲಾಖೆ ಸೂಚಿಸಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಲಾಗಿದ್ದು, ಜುಲೈ 5ರಂದು ಸಮೀಕ್ಷೆ ಆರಂಭವಾಗಿದೆ’ ಎಂದು ಕಾರ್ಮಿಕ ಇಲಾಖೆಯ ಆಯುಕ್ತ ಅಕ್ರಂ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಹೋಟೆಲ್‌, ಕಾರ್ಖಾನೆ ಹಾಗೂ ಅಂಗಡಿ–ಮುಂಗಟ್ಟುಗಳು ಮುಚ್ಚಿದ್ದವು. ಅಲ್ಲದೆ, ನಮ್ಮ ಇಲಾಖೆಯ ಸಿಬ್ಬಂದಿ ಕೋವಿಡ್ ಕರ್ತವ್ಯದಲ್ಲಿ ಮತ್ತು ಆಹಾರ ಕಿಟ್‌ ವಿತರಣೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆಸಲಾಗಿಲ್ಲ. ಸಮೀಕ್ಷೆಯ ನಂತರ ಸ್ಪಷ್ಟ ಅಂಕಿ–ಅಂಶ ಸಿಗಬಹುದು’ ಎಂದರು.

ಕೃಷಿಯಲ್ಲಿ ಹೆಚ್ಚು: ‘ಈ ಬಾರಿ ಕೃಷಿ ಕ್ಷೇತ್ರದಲ್ಲಿ ಹೆಚ್ಚಾಗಿ ಮಕ್ಕಳು ದುಡಿಯುತ್ತಿರುವ ಸಾಧ್ಯತೆ ಇದೆ. ಸಮೀಕ್ಷೆಯ ನಿಖರ
ಅಂಕಿ–ಅಂಶಗಳಿಗಾಗಿ ನಾವೂ ಕಾಯುತ್ತಿದ್ದೇವೆ’ ಎಂದು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನ ನಿರ್ದೇಶಕ ನಾಗಸಿಂಹ ಜಿ. ರಾವ್ ಹೇಳಿದರು.

‘1992ರ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಭಾರತ ಸಹಿ ಹಾಕಿತ್ತು. ಅದರ ಪ್ರಕಾರ, ಐದು ವರ್ಷಗಳಲ್ಲಿ ಬಾಲಕಾರ್ಮಿಕ ಪದ್ಧತಿ ತೊಲಗಬೇಕಿತ್ತು. ಆದರೆ, 30 ವರ್ಷಗಳಾದರೂ ಆಗಿಲ್ಲ’ ಎಂದು ಬೇಸರಿಸಿದರು.

‘ಈ ಒಡಂಬಡಿಕೆಗೆ ಇತ್ತೀಚೆಗೆ ಹದಿಹರೆಯದವರ ಕಾಯ್ದೆಯನ್ನೂ ಸೇರಿಸಲಾಗಿದೆ. ಇದರಲ್ಲಿ, ಮಕ್ಕಳೂ ಮನೆ ಕೆಲಸಗಳಿಗೆ ಸಹಕರಿಸಬಹುದು ಎಂದು ಹೇಳಲಾಗಿದೆ. ಮನೆಗೆಲಸದ ಹೆಸರಲ್ಲಿ ಮಕ್ಕಳನ್ನು ದುಡಿಮೆಗೆ ಹಚ್ಚಲು ಈ ಕಾಯ್ದೆಯು ಪೋಷಕರಿಗೆ ಸ್ವಾತಂತ್ರ್ಯ ನೀಡಿದೆ. ಇಂಥ ಪ್ರಕರಣಗಳಲ್ಲಿ ಯಾರೂ ದೂರು ನೀಡದ ಕಾರಣ ಸ್ಪಷ್ಟ ಅಂಕಿ–ಅಂಶ ಸಿಗುವುದೇ ಇಲ್ಲ’ ಎನ್ನುತ್ತಾರೆ ಅವರು.

‘ಭೌತಿಕ ತರಗತಿ ಆರಂಭವಾದ ನಂತರ ಎಷ್ಟು ಮಕ್ಕಳು ಶಾಲೆಗೆ ಗೈರಾಗುತ್ತಾರೆ ಎಂಬುದನ್ನು ಗಮನಿಸಬೇಕು. ಶಾಲೆ ಆರಂಭವಾಗಿ ಮೂರ್ನಾಲ್ಕು ತಿಂಗಳು ಸಮಯ ನೀಡಬೇಕು. ಆನಂತರವೂ ವಿದ್ಯಾರ್ಥಿಗಳು ಬಂದಿಲ್ಲವೆಂದರೆ ಅವರನ್ನು ಶಾಲೆಯಿಂದ ದೂರ ಉಳಿದವರು ಎನ್ನಬಹುದು’ ಎನ್ನುತ್ತಾರೆ ಚೈಲ್ಡ್‌ ರೈಟ್‌ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ ಶರ್ಮಾ.

ಕಾನೂನು ಸರಳವಾಗಬೇಕು: ಕಾರ್ಖಾನೆಯಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡುಬಂದರೆ ಅದರ ಮಾಲೀಕರಿಗೆ ಶಿಕ್ಷೆ ಕೊಡಿಸಬಹುದು. ಆದರೆ ಕೃಷಿ, ಮನೆಗೆಲಸದಲ್ಲಿ ತೊಡಗಿದ್ದ ಮಕ್ಕಳ ರಕ್ಷಣೆ ಅಷ್ಟು ಸುಲಭವಲ್ಲ ಎನ್ನುತ್ತಾರೆ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು.

ಕೃಷಿ ಮತ್ತು ಅಪಾಯಕಾರಿಯಲ್ಲದ ಮನೆಗೆಲಸಗಳಲ್ಲಿ 14ರಿಂದ 18 ವರ್ಷದೊಳಗಿನ ಮಕ್ಕಳನ್ನೂ ತೊಡಗಿಸಿಕೊಳ್ಳಲು ಅವಕಾಶ ಇದೆ. ಆದರೆ ಇದಕ್ಕೂ ನಿಬಂಧನೆಗಳಿವೆ. ಇಂತಿಷ್ಟು ಗಂಟೆಗಳ ದುಡಿಮೆಯ ನಂತರ ಒಂದು ಗಂಟೆ ವಿರಾಮ, ಕನಿಷ್ಠ ವೇತನದ ಜೊತೆಗೆ ಮಕ್ಕಳ ಮೇಲ್ವಿಚಾರಣೆಗೆ ಯಾರಾದರೂ ಇರಬೇಕು ಎಂದೆಲ್ಲ ನಿಯಮಗಳು ಹೇಳುತ್ತವೆ. ಆದರೆ, ಪಾಲನೆಯಾಗುತ್ತಿಲ್ಲ.

ಕುಟುಂಬವೇ ನಡೆಸುವ ವ್ಯಾಪಾರದಲ್ಲೂ ಮಕ್ಕಳು ಮನೆಯವರಿಗೆ ನೆರವಾಗಲು ಅವಕಾಶ ಇದೆ. ಆದರೆ ಕುಟುಂಬ ಎಂದರೆ ಯಾರ್‍ಯಾರು ಎಂಬ ಪ್ರಶ್ನೆ ಎದುರಾಗುತ್ತದೆ.

‘ಇಂಥ ಮಕ್ಕಳ ರಕ್ಷಣೆಗೆ ಹೋದರೆ ಕಾನೂನಿನ ಅವಕಾಶ ಮುಂದಿಟ್ಟು ವಾದಿಸುತ್ತಾರೆ. ಅದನ್ನೂ ಮೀರಿ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲು ಮುಂದಾದರೆ, ಪಾಲಕರೇ ಬಂದು ತಾವೇ ಕೆಲಸಕ್ಕೆ ಕಳುಹಿಸಿದ್ದಾಗಿ, ಮಾಲೀಕರ ಪರ ಹೇಳಿಕೆ ನೀಡಿ ಮಕ್ಕಳನ್ನು ಬಿಡಿಸಿಕೊಂಡು ಹೋಗುತ್ತಾರೆ’ ಎನ್ನುತ್ತಾರೆ ರೆನ್ನಿ ಡಿಸೋಜ.

ಮಕ್ಕಳ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿಗೆ ಬೇರೆಬೇರೆ ನಿಯಮಾವಳಿಗಳಿವೆ. ಕೆಲವು ನಿಯಮ ಪರಸ್ಪರ ತಾಳೆಯಾಗದಿರುವುದರಿಂದ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ಕಷ್ಟವಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಒಂದಿಷ್ಟು ದಂಡ ವಿಧಿಸಲು ಮಾತ್ರ ಸಾಧ್ಯವಾಗುತ್ತದೆ. ಎಲ್ಲವನ್ನೂ ಸಮನ್ವಯಗೊಳಿಸುವಂಥ, ಸರಳ ನಿಯಮಾವಳಿ ರೂಪಿಸುವ ಅಗತ್ಯವಿದೆ.

ತಪ್ಪಿತಸ್ಥರಿಗೆ ಶಿಕ್ಷೆಯಾಗಬಹುದು, ಕುಟುಂಬಕ್ಕೆ ಪರಿಹಾರವೂ ಬರಬಹುದು. ಆದರೆ ಯಾತನೆ ಅನುಭವಿಸಿದ ಮಗುವಿಗೆ ಸಿಗುವುದೇನು? ಭವಿಷ್ಯ ರೂಪಿಸಿಕೊಳ್ಳಲು ಅಂಥ ಮಕ್ಕಳಿಗೆ ಇರುವ ಹಾದಿ ಯಾವುದು ಎಂಬ ಪ್ರಶ್ನೆಗಳಿಗೆ ಬಹುತೇಕ ಸಂದರ್ಭಗಳಲ್ಲಿ ಉತ್ತರ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.