ADVERTISEMENT

ಒಳನೋಟ: ಗಣಿಬಾಧಿತರ ಸಂಕಟಕ್ಕೆ ಕೊನೆ ಎಂದು?

ಅಪಾರ ಅರಣ್ಯ ನಾಶ, ಬತ್ತಿದ ಝರಿಗಳು, ಬೆಳೆ ಇಳುವರಿ ಕುಸಿತ l ಜನರಿಗೆ ಅನಾರೋಗ್ಯದ ಸಮಸ್ಯೆ

ಕೆ.ನರಸಿಂಹ ಮೂರ್ತಿ
Published 27 ಮಾರ್ಚ್ 2021, 19:31 IST
Last Updated 27 ಮಾರ್ಚ್ 2021, 19:31 IST
ಸಂಡೂರಿನ ಅದಿರಿನ ಬೆಟ್ಟಗಳ ತುದಿಯಲ್ಲಿರುವ ಕಮತೂರಿಗೆ ಹೋಗುವ ಕಚ್ಚಾ ರಸ್ತೆ
ಸಂಡೂರಿನ ಅದಿರಿನ ಬೆಟ್ಟಗಳ ತುದಿಯಲ್ಲಿರುವ ಕಮತೂರಿಗೆ ಹೋಗುವ ಕಚ್ಚಾ ರಸ್ತೆ   

ಬಳ್ಳಾರಿ/ವಿಜಯನಗರ: ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ಬಂದರೂ, ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ರಚನೆಯಾದರೂ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಬಾಧಿತರಾದವರ ಜೀವನದಲ್ಲಿ ಗಮನಾರ್ಹ ಬದಲಾವಣೆ ಆಗಿಲ್ಲ.

ಗಣಿಗಾರಿಕೆಯಿಂದ ಅತಿಯಾಗಿ ನಲುಗಿರುವ ಸಂಡೂರಿನ ಅದಿರಿನ ಬೆಟ್ಟಗಳ ತುದಿಯಲ್ಲಿರುವ ಗ್ರಾಮಗಳಿಗೆ ಡಾಂಬರು ರಸ್ತೆಯಾಗಿಲ್ಲ. ಮೂಲಸೌಕರ್ಯಗಳು ಮರೀಚಿಕೆಯಾಗಿವೆ, ಕೃಷಿ ಇಳುವರಿಯೂ ಕುಸಿದಿದೆ.

ಸಂಡೂರು: ಅತಿ ಹೆಚ್ಚು ಹಾನಿ

ADVERTISEMENT

ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯು ‘ಗಣಿಗಾರಿಕೆಯಿಂದ ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ನಾಶದಿಂದ ನಲುಗಿದ ತಾಲ್ಲೂಕು ಸಂಡೂರು’ ಎಂದು ಹೇಳಿದೆ. ಇಲ್ಲಿ 1,700 ಹೆಕ್ಟೇರ್‌ ಅರಣ್ಯ ನಾಶವಾಗಿದೆ. ಇಡೀ ಜಿಲ್ಲೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಗಣಿಗಾರಿಕೆಗೆ ಒಳಗಾಗಿದೆ. ಈಗಲೂ 4,684 ಹೆಕ್ಟೇರ್‌ನಲ್ಲಿ ಗಣಿಗಾರಿಕೆ ನಡೆಯುತ್ತಿದೆ.

ಅನೇಕರು ಆಸ್ತಮ, ಉಸಿರಾಟದ ತೊಂದರೆ, ಚರ್ಮ ರೋಗಗಳಿಂದ ಬಳಲುತ್ತಿದ್ದಾರೆ. ಅದಿರು ಸಾಗಣೆಗೆ ಕೆಲವೇ ಕಂಪನಿಗಳು ಕನ್ವೇಯರ್‌ ಬೆಲ್ಟ್‌ ಅಳವಡಿಸಿವೆ. ಟಿಪ್ಪರ್‌, ಅದಿರು ಲಾರಿಗಳ ಅಬ್ಬರ, ಶಬ್ದ ಮಾಲಿನ್ಯ, ಅಪಘಾತ, ಸಾವು ನೋವು ಸಾಮಾನ್ಯ. ಸಂಡೂರಿನ ನಂದಿಹಳ್ಳಿ, ಭುಜಂಗನಗರ, ನಾರಾಯಣಪುರ, ಸುಶೀಲಾ ನಗರ, ಸಿದ್ದಾಪುರದ ಜನ ಪ್ರಾಣ ಕೈಯಲ್ಲಿ ಹಿಡಿದೇ ಓಡಾಡುತ್ತಾರೆ.

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅತಿಯಾದ ಗಣಿಗಾರಿಕೆಯಿಂದ ಬಾಧಿತವಾಗಿರುವ ಪ್ರದೇಶಗಳಲ್ಲಿ ಸುಪ್ರೀಂ ಕೋರ್ಟ್‌ ಆದೇಶದಂತೆ ಪರಿಹಾರ ಮತ್ತು ಪುನರ್ವಸತಿ (ಆರ್‌ ಅಂಡ್‌ ಆರ್‌) ಯೋಜನೆ ಅನುಷ್ಠಾನಕ್ಕಾಗಿ ರಚಿಸಲಾಗಿರುವ ಗಣಿ ಪರಿಸರ ಪುನಶ್ಚೇತನ ನಿಗಮದ ಪ್ರಸ್ತಾವಕ್ಕೆ ಇನ್ನೂ ಕೋರ್ಟ್‌ ಅನುಮತಿ ನೀಡಿಲ್ಲ. ಯೋಜನೆಗೆ ಜಿಲ್ಲಾಡಳಿತ ಸಲ್ಲಿಸಿದ್ದ ಕ್ರಿಯಾಯೋಜನೆ ಮೂರು ಬಾರಿ ತಿರಸ್ಕೃತಗೊಂಡಿತ್ತು.

ಇದರ ನಡುವೆಯೇ, ‘ಒಂದು ಕ್ರಾಂತಿಕಾರಿ ಹೆಜ್ಜೆ’ ಎಂದು ಪ್ರತಿಪಾದಿಸಿ ಕೇಂದ್ರ ಸರ್ಕಾರವು 2015ರಲ್ಲಿ ದೇಶದಾದ್ಯಂತ ಜಾರಿಗೆ ತಂದ ‘ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ (PMKKKY) ಅಡಿ ಸ್ಥಾಪನೆಯಾದ ಪ್ರತಿಷ್ಠಾನದ ಮೂಲಕ ಬಾಧಿತರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಲು ಇನ್ನೂ ಹಲವು ವರ್ಷಗಳು ಬೇಕು ಎಂಬ ಪರಿಸ್ಥಿತಿ ಇದೆ. ವಿಶೇಷ ಎನ್ನಿಸುವಂಥ ಸುಸ್ಥಿರ ಕಾರ್ಯಕ್ರಮಗಳೇ ರೂಪುಗೊಂಡಿಲ್ಲ.

ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನಲ್ಲಿ ₹ 1,401 ಕೋಟಿ ಇದ್ದು, ಜಿಲ್ಲೆಯಾದ್ಯಂತ ನೀಡಲಾಗಿರುವ ಮೂಲಸೌಕರ್ಯಗಳ ಪಟ್ಟಿ ದೊಡ್ಡದಿದೆ. ಆದರೆ ಇದುವರೆಗೆ ₹ 444 ಕೋಟಿಯಷ್ಟೇ ಬಳಕೆಯಾಗಿದ್ದು, ₹ 917 ಕೋಟಿ ಉಳಿದಿದೆ.

ಕುಡಿಯುವ ನೀರು, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯರು ಮತ್ತು ಅಂಗವಿಕಲರ ಕಲ್ಯಾಣ, ಕೌಶಲ ಅಭಿವೃದ್ಧಿ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಶೇ 60 ಅನುದಾನ ನಿಗದಿಪಡಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ನೀರಾವರಿ, ಇಂಧನ ಮತ್ತು ಜಲಾನಯನವನ್ನು ಇತರೆ ಆದ್ಯತೆಗಳೆಂದು ಗುರುತಿಸಿ ಉಳಿದ ಅನುದಾನ ಬಳಸಲಾಗುತ್ತಿದೆ. ಒಟ್ಟಾರೆ ಅನುದಾನದಲ್ಲಿ ಶೇ 15 ಆಡಳಿತಾತ್ಮಕ ಉದ್ದೇಶಗಳಿಗೆ ಬಳಸಲಾಗುತ್ತಿದೆ.

‘ಈ ಕ್ಷೇತ್ರಗಳಿಗೆ ಸಂಬಂಧಪಟ್ಟ ಇಲಾಖೆಗಳ ಸಹಜ ಅನುದಾನ ಬಳಕೆಯಾಗುತ್ತಿರುವ ರೀತಿಯಲ್ಲೇ ಜಿಲ್ಲಾ ಖನಿಜ ನಿಧಿಯ ಅನುದಾನವನ್ನು ಹೆಚ್ಚುವರಿ ಅನುದಾನದಂತೆ ಬಳಸಲಾಗುತ್ತಿದೆಯೇ ಹೊರತು, ಅದನ್ನೊಂದು ವಿಶೇಷ ಅನುದಾನವೆಂಬಂತೆ ಬಳಸುತ್ತಿಲ್ಲ’ ಎಂಬ ಸಂಕಟ ಬಾಧಿತರಲ್ಲಿದೆ.

ಪಟ್ಟಿ ದೊಡ್ಡದು: ನಿಧಿಯಡಿ ಯುವಜನ–ಮಹಿಳೆಯರಿಗೆ ವೃತ್ತಿ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವವರಿಗೆ ತರಬೇತಿ ನೀಡಲಾಗುತ್ತಿದೆ. ಹಾಲು ಉತ್ಪಾದಕರ 101 ಮಹಿಳಾ ಸಂಘಗಳ ಸ್ಥಾಪನೆ ಪೂರ್ಣವಾಗಿಲ್ಲ. ಪರಿಸರ ಸಂರಕ್ಷಣೆಗಾಗಿ ನೆಡುತೋಪುಗಳಿಗಾಗಿ ಲಕ್ಷಾಂತರ ಸಸಿಗಳನ್ನು ನೆಡಲಾಗಿದೆ. ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರ ನೇಮಕ, ಅಂಗನವಾಡಿಗಳಿಗೆ ಮೂಲಸೌಕರ್ಯ, ಆಸ್ಪತ್ರೆಗಳಿಗೆ ವೈದ್ಯ, ಸಿಬ್ಬಂದಿ ನೇಮಕ, ಐಸಿಯು, ಚಿಕಿತ್ಸಾ ಪರಿಕರ, ಸಂಚಾರಿ ಆರೋಗ್ಯ ಘಟಕ, ಆಂಬುಲೆನ್ಸ್‌ಗಳನ್ನು ನೀಡಲಾಗಿದೆ. ಶುದ್ಧ ನೀರಿನ ಘಟಕ, ಗ್ರಂಥಾಲಯ, ಕಂಪ್ಯೂಟರ್, ಕಾಂಕ್ರಿಟ್‌ ರಸ್ತೆ ಸೌಕರ್ಯಗಳು ದೊರಕಿವೆ. ಕೋವಿಡ್‌ ನಿಯಂತ್ರಣಕ್ಕೂ ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯನ್ನು ಬಳಸಲಾಗಿದೆ.

ಸಂಘಕ್ಕೆ ಪ್ರಶಸ್ತಿ

ಶೇಂಗಾ ಚಿಕ್ಕಿ ತಯಾರಿಕೆ ತರಬೇತಿ ಪಡೆದು ಸ್ವಾವಲಂಬನೆ ಸಾಧಿಸಿದ ಕೂಡ್ಲಿಗಿಯ ಊರಮ್ಮದೇವಿ ಮಾಜಿ ದೇವದಾಸಿಯರ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ವಿಶೇಷ.

ಬಳ್ಳಾರಿ ಬಿಟ್ಟರೆ ಕಲಬುರ್ಗಿ, ಚಿತ್ರದುರ್ಗ, ಬಾಗಲಕೋಟೆ, ಕೊಪ್ಪಳ, ರಾಯಚೂರು, ರಾಮನಗರ ಜಿಲ್ಲೆಗಳಲ್ಲಿ ಹೆಚ್ಚು ನಿಧಿ ಸಂಗ್ರಹವಾಗಿದೆ. ಈ ಜಿಲ್ಲೆಗಳಲ್ಲಿ ₹ 678 ಕೋಟಿ ಸಂಗ್ರಹವಾಗಿದೆ. ಎಲ್ಲೆಡೆ ಮೂಲಸೌಕರ್ಯ ಅಭಿವೃದ್ಧಿಗೇ ಹೆಚ್ಚು ಒತ್ತು ನೀಡಲಾಗಿದೆ.

ಪರಿಣಾಮ ಏನು?: ‘ಖನಿಜ ಪ್ರತಿಷ್ಠಾನದ ನಿಧಿಯ ಬಳಕೆಯಿಂದ ಜನರ ಬದುಕಿನಲ್ಲಿ ಆದ ಪರಿಣಾಮಗಳೇನು’ ಎಂದು ಅಧಿಕಾರಿಗಳನ್ನು ಕೇಳಿದರೆ, ‘ಮಾರ್ಗಸೂಚಿ ಅನ್ವಯ ನಿಧಿ ಬಳಕೆ ಮಾಡುತ್ತಿದ್ದೇವೆ. ಕಾಮಗಾರಿಗಳು ಜಾರಿಯಲ್ಲಿವೆ’ ಎಂಬ ಉತ್ತರ ದೊರಕುತ್ತದೆ. ನಿಧಿ ಬಳಕೆ ಮತ್ತು ಪರಿಣಾಮ, ಬದಲಾವಣೆ ಕುರಿತ ಅಧ್ಯಯನ ಇದುವರೆಗೆ ಯಾವ ಜಿಲ್ಲೆಯಲ್ಲೂ ನಡೆದಿಲ್ಲ.

***

ಅಕ್ರಮ ಗಣಿಗಾರಿಕೆ ಸಂಪೂರ್ಣವಾಗಿ ನಿಂತಿದೆ. ಆದರೆ, ಪರಿಸರ ಪುನಶ್ಚೇತನ ಕಾರ್ಯ ಕೈಗೊಂಡಿಲ್ಲ. ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ.

– ಎಸ್‌.ಆರ್‌. ಹಿರೇಮಠ, ಮುಖ್ಯಸ್ಥ, ಜನಸಂಗ್ರಾಮ ಪರಿಷತ್ತು

ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶ ಬಿಟ್ಟು ಬೇರೆಡೆ ಅರಣ್ಯೀಕರಣ ನಡೆಯುತ್ತಿದೆ. ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗುತ್ತಿದೆ.

– ಸಿದ್ದರಾಮಪ್ಪ ಚಳಕಾಪುರೆ, ಡಿಸಿಎಫ್‌, ಬಳ್ಳಾರಿ–ವಿಜಯನಗರ

ಖನಿಜ ನಿಧಿ ಬಳಕೆಯೇ ಆಗಿಲ್ಲ

ಡಿ.ವಿ.ಗಿರೀಶ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ, ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದ್ದು ಪರಿಸರದ ಮೇಲೆ ದುಷ್ಪರಿಣಾಮ ಬೀರಿದೆ. ಈಗ ಎರಡೂ ಕಡೆ ಗಣಿಗಾರಿಕೆ ಬಂದ್‌ ಆಗಿದೆ.

ಕುದುರೆಮುಖ ಪ್ರದೇಶದಲ್ಲಿ ಗಣಿಗಾರಿಕೆಯಿಂದ ವನಸಂಪತ್ತು, ವನ್ಯಜೀವಿ ಸಂಕುಲ, ಜಲಮೂಲಗಳು ಅಪಾಯದ ಸುಳಿಗೆ ಸಿಕ್ಕಿದ್ದವು. ಇದು ಭಾರಿ ಮಳೆಯಾಗುವ ಪ್ರದೇಶವಾಗಿದ್ದು, ಸಡಿಲಾದ ಮಣ್ಣು ಮಳೆಗೆ ಕೊಚ್ಚಿ ಭದ್ರಾ ನದಿ ಸೇರಿತು. ಖನಿಜಯುಕ್ತ ಮಣ್ಣುಮಿಶ್ರಿತ ನೀರು ಹರಿದು ಭದ್ರಾ ಜಲಾಶಯದಲ್ಲಿ ಹೂಳು ತುಂಬಿಕೊಂಡಿದೆ. ಇದರಿಂದ ಅಣೆಕಟ್ಟೆಯ ಜಲಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ.

ಕೆಮ್ಮಣ್ಣುಗುಂಡಿ ಭಾಗದಲ್ಲಿ ಗಣಿಗಾರಿಕೆಯಿಂದ ಭದ್ರಾ ನದಿ ಜಲಮೂಲದ ಹಲವು ಹಳ್ಳಗಳು ನಾಶವಾಗಿವೆ. ಭದ್ರಾ, ತುಂಗಾ ನದಿಗಳ ಪಾತ್ರಕ್ಕೂ ಹಾನಿಯಾಗಿದೆ. ಜಂಬದ ಹಳ್ಳದಲ್ಲಿ ಬೇಸಿಗೆಯಲ್ಲಿ ನೀರು ಹರಿಯಲ್ಲ. ಅಜ್ಜಂಪುರ, ಕಡೂರು ಭಾಗದಲ್ಲಿ ನೀರಿನ ಬವಣೆ ಎದುರಾಗಿದೆ.

ಗಣಿಗಾರಿಕೆ ನಡೆಸಿದ ಈ ಎರಡೂ ಪ್ರದೇಶಗಳ ಪುನಶ್ಚೇತನಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ. ಈ ಪ್ರದೇಶದಲ್ಲಿ ಒಂದೂ ಗಿಡ ನೆಟ್ಟಿಲ್ಲ. ಜಿಲ್ಲೆಯಲ್ಲಿ ಖನಿಜ ಪ್ರತಿಷ್ಠಾನ ನಿಧಿಯನ್ನು ಬಳಕೆ ಮಾಡಿಯೇ ಇಲ್ಲ.

– ಡಿ.ವಿ.ಗಿರೀಶ್‌, ಟ್ರಸ್ಟಿ, ಭದ್ರಾ ವೈಲ್ಡ್‌ಲೈಫ್‌ ಕನ್ಸರ್ವೆಷನ್‌ ಟ್ರಸ್ಟ್‌, ಚಿಕ್ಕಮಗಳೂರು(ನಿರೂಪಣೆ: ಧನ್ಯಪ್ರಸಾದ್‌ ಬಿ.ಜೆ.)

‘ಮುಂಜಾಗ್ರತೆ ಮುಖ್ಯ’

ಸಂಜಯ್‌ ಗುಬ್ಬಿ

‘ಗಣಿಗಳಿಂದ ಸಮುದಾಯಗಳಿಗೆ, ವನ್ಯಜೀವಿಗಳ ಆವಾಸಸ್ಥಾನ, ನೀರಿನ ಸೆಲೆ ಮತ್ತು ಪರಿಸರಕ್ಕೆ ಆಗುವ ಹಾನಿಯನ್ನು ಸರಿಪಡಿಸಲು ಬಹುಮುಖ ಕಾರ್ಯಗಳು ಬೇಕಾಗುತ್ತವೆ. ಇವುಗಳೆಲ್ಲ ಒಂದೆರಡು ವರ್ಷಗಳಲ್ಲಿ ಆಗುವ ವಿಚಾರಗಳಲ್ಲ, ದಶಕಗಳೇ ಬೇಕು. ಹೀಗಾಗಿ, ಗಣಿಗಳನ್ನು ಪ್ರಾರಂಭಿಸುವ ವೇಳೆಯಲ್ಲೇ ಕೆಲ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಉದಾಹರಣೆಗೆ ಮಣ್ಣಿನ ಮೇಲ್ಪದರವನ್ನು ಸಂರಕ್ಷಿಸಿ, ಅದನ್ನು ಗಣಿಯ ಗುತ್ತಿಗೆ ಮುಗಿದ ನಂತರ ಪುನಃ ಸ್ಥಾಪಿಸಬೇಕು. ಇದರಿಂದ ಗಣಿಗಳು ತೆರವಾದ ನಂತರ ಅಲ್ಲಿ ಸಸ್ಯ ಸಂಪತ್ತು ಪುನರ್ ಸ್ಥಾಪನೆಗೊಳ್ಳಲು ಸಹಾಯವಾಗುತ್ತದೆ ಎನ್ನುತ್ತಾರೆ ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ.

‘ಸಂಡೂರು, ಕೊಪ್ಪಳ, ಕಂಪ್ಲಿ, ಹೊಸಪೇಟೆ, ರಾಮನಗರ, ತುಮಕೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಆಗುತ್ತಿರುವ ಚಿರತೆ ಸಂಘರ್ಷಕ್ಕೆ ಗಣಿಗಾರಿಕೆ ಕೂಡ ಒಂದು ಕಾರಣ. ಗಣಿಗಾರಿಕೆಗೆ ಪೂರ್ವಭಾವಿಯಾಗಿ ಸಮುದಾಯಗಳಲ್ಲಿ ಸಂಘರ್ಷವನ್ನು ತಡೆಗಟ್ಟುವ ವಿಧಾನಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆರಂಭಿಸಲು ನಿಧಿಯನ್ನು ಬಳಸಬೇಕು. ಹಿಂದಿನ ಗಣಿ ಪ್ರದೇಶಗಳಲ್ಲಿ ನೀಲಗಿರಿ, ಅಕೇಶಿಯಾ ಮರಗಳನ್ನು ಬೆಳೆಸುವುದನ್ನು ನಿಲ್ಲಿಸಬೇಕು. ಸ್ಥಳೀಯ ವೃಕ್ಷ ಸಂಪತ್ತನ್ನು ಬೆಳೆಸಬೇಕು.

‘ಹಿಂದಿನ ದಶಕಗಳಲ್ಲಿ, ಅದರಲ್ಲೂ ವಿಶೇಷವಾಗಿ ಪಶ್ಚಿಮ ಘಟ್ಟಗಳಲ್ಲಿ ಆಗಿರುವ ಹಾನಿಯನ್ನು ಸರಿಪಡಿಸಲು ಸರ್ಕಾರ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯನ್ನು ಬಳಸಲು ಮುಂದಾಗಬೇಕು. ಕುದುರೆಮುಖ ಮತ್ತು ಕೆಮ್ಮಣ್ಣುಗುಂಡಿಗಳಲ್ಲಿ ಗಣಿಗಾರಿಕೆ ನಿಂತು ಹದಿನೈದು ವರ್ಷಗಳಾದರೂ ಅಲ್ಲಿನ ಸಸ್ಯ ಮತ್ತು ವನ್ಯಜೀವಿ ಸಂಪತ್ತು ಇನ್ನೂ ಚೇತರಿಸಿಕೊಂಡಿಲ್ಲ’ ಎಂದು ಅವರು ಹೇಳಿದ್ದಾರೆ

(ನಿರೂಪಣೆ: ಓಂಕಾರ ಮೂರ್ತಿ, ಮೈಸೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.