ADVERTISEMENT

ಒಳನೋಟ: ಕೃಷಿಯಲ್ಲೂ ಬಾಲಕಾರ್ಮಿಕರು

ಗಣೇಶ ಚಂದನಶಿವ
Published 10 ಜುಲೈ 2021, 21:07 IST
Last Updated 10 ಜುಲೈ 2021, 21:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ:ತಾಲ್ಲೂಕಿನ ಆಲಗೂಡ (ಬಿ), ಮಾಲಗತ್ತಿ, ಅಜಾದಪುರ, ಭೂಪಾಲ–ತೆಗನೂರ, ತೆಗನೂರ, ಕಿಣ್ಣಿ ಸುಲ್ತಾನ ಗ್ರಾಮಗಳಲ್ಲಿ ಬಹುಪಾಲು ರೈತರು ಚೆಂಡು ಹೂ, ಗುಲಾಬಿ ಬೆಳೆದಿದ್ದಾರೆ. ಈ ಹೂವುಗಳನ್ನು ಕೀಳಲು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ.

ಬೆಳಿಗ್ಗೆ ಎರಡು ತಾಸು ಈ ಕೆಲಸ ಮಾಡಿದರೆ ಅವರಿಗೆ ತಲಾ ₹50ರಿಂದ ₹80 ಕೂಲಿ ನೀಡಲಾಗುತ್ತಿದೆ. ‘ದೊಡ್ಡವರು ₹250 ಕೂಲಿ ಕೇಳುತ್ತಾರೆ. ಮಕ್ಕಳು ಬೆಳಿಗ್ಗೆ ಬೇಗ ಬಂದು ಕೆಲಸ ಮಾಡಿ ಮತ್ತೆ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರೊಂದಿಗೆ ನಮ್ಮ ಇಬ್ಬರು ಮಕ್ಕಳೂ ಸೇರಿಕೊಳ್ಳುತ್ತಾರೆ. ನಮ್ಮೂರಲ್ಲಿ ಸುಮಾರು 35 ಮಕ್ಕಳು ಸ್ವಯಂ ಪ್ರೇರಣೆಯಿಂದ ತೋಟಗಳಿಗೆ ಹೋಗುತ್ತಿದ್ದಾರೆ. ಶಾಲೆಗಳು ಆರಂಭವಾದರೆ ನಾವು ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ’ ಎನ್ನುತ್ತಾರೆ ಆಲಗೂಡಿನ ರೈತರೊಬ್ಬರು.

ಕಲ್ಯಾಣ ಕರ್ನಾಟಕದ ಬಹುಪಾಲು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಹತ್ತಿ ಬಿಡಿಸಲು, ಹೂವು ಕೀಳಲು, ಕಳೆ ತೆಗೆಯಲು ಹಾಗೂ ರಾಶಿ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಬಡತನದ ಕಾರಣದಿಂದ ಪಾಲಕರೇ ಮಕ್ಕಳನ್ನು ಕೂಲಿಗೆ ಕರೆದೊಯ್ಯುತ್ತಾರೆ.

ADVERTISEMENT

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹತ್ತಿ ಬಿಡಿಸುವ ಹಂಗಾಮಿನಲ್ಲಿ ಮಕ್ಕಳನ್ನು ವಾಹನಗಳಲ್ಲಿ ಜಮೀನುಗಳಿಗೆ ಕರೆದೊಯ್ಯಲಾಗುತ್ತದೆ.‘ದೊಡ್ಡವರಿಗೆ₹200ರಿಂದ ₹300 ಕೂಲಿ ಕೊಡಬೇಕು. ಮಕ್ಕಳಿಗೆ ₹100 ಕೊಟ್ಟರೂ ಸಾಕು. ನೆಲಮಟ್ಟದಲ್ಲಿರುವ ಹತ್ತಿ ಕಾಯಿಗಳನ್ನು ಮಕ್ಕಳು ಸುಲಭವಾಗಿ ಬಿಡಿಸುತ್ತಾರೆ. ಅವರಿಗೆ ಆದ್ಯತೆ ನೀಡಲು ಇದೂ ಕಾರಣ’ ಎನ್ನುತ್ತಾರೆ ರೈತರು.

ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ– 1986ಕ್ಕೆ 2016ರಲ್ಲಿ ತಿದ್ದುಪಡಿ ಮಾಡಲಾಗಿದೆ. 14 ವರ್ಷದೊಳಗಿನ ಮಕ್ಕಳು ಯಾವುದೇ ಕ್ಷೇತ್ರದಲ್ಲಿ ದುಡಿಯುವಂತಿಲ್ಲ. ಈ ಕಾಯ್ದೆ ಜಾರಿಯ ನಂತರ, ಕೃಷಿಯಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸುವುದು ಆರಂಭವಾಗಿದೆ.

ಜಮೀನು ಮಾಲೀಕರ ವಿರುದ್ಧ ಪ್ರಕರಣ
ರಾಯಚೂರು ಜಿಲ್ಲೆಯಲ್ಲಿ ಬಾಲಕಾರ್ಮಿಕ ಕಲ್ಯಾಣ ಸಮಿತಿಯವರು ಕೃಷಿ ಜಮೀನಿನ ಮೇಲೆ ದಾಳಿ ನಡೆಸಿ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. 2020ರ ಜನವರಿ 1ರಿಂದ 2021ರ ಜನವರಿ 31ರ ಅವಧಿಯಲ್ಲಿ ಬಾಲಕಾರ್ಮಿಕರನ್ನು ಸಾಗಿಸುತ್ತಿದ್ದ 47 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 255 ಬಾಲಕಾರ್ಮಿಕರನ್ನು ಪತ್ತೆ ಮಾಡಲಾಗಿದೆ. ಜಮೀನು ಮಾಲೀಕರ ವಿರುದ್ಧ 11 ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿವೆ. ಆರೋಪ ಸಾಬೀತಾದರೆ, ಕನಿಷ್ಠ 6 ತಿಂಗಳಿಂದ ಗರಿಷ್ಠ 2 ವರ್ಷದವರೆಗೂ ಜೈಲು ಶಿಕ್ಷೆ, ಕನಿಷ್ಠ ₹ 20 ಸಾವಿರದಿಂದ ಗರಿಷ್ಠ ₹ 50 ಸಾವಿರವರೆಗೂ ದಂಡ ವಿಧಿಸಲು ಅವಕಾಶ ಇದೆ.

ಕಾಫಿ ತೋಟಗಳಲ್ಲೂ ಬಳಕೆ ಅವ್ಯಾಹತ
ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಉತ್ತರ ಭಾರತದಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಭಾಷಾ ತೊಡಕು ಸೇರಿದಂತೆ ಹಲವು ಕಾರಣಗಳಿಂದ ಅವರ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದು, ದುಡಿಮೆಗೆ ದೂಡಲಾಗುತ್ತಿದೆ.

‘ತೋಟದ ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸಿರುವ ಬಗ್ಗೆ ಸಹಾಯವಾಣಿಗೆ ಕರೆಗಳು ಬರುತ್ತವೆ. ತೋಟಗಳಿಗೆ ತೆರಳಿ ಪರಿಶೀಲಿಸಿದ್ದೇವೆ. ಕೋವಿಡ್‌ನಿಂದಾಗಿ, ಈಗ ಶಾಲೆ ಇಲ್ಲ. ಮಕ್ಕಳಿಂದ ಕೆಲಸ ಮಾಡಿಸಲ್ಲ ಎಂದು ಮಕ್ಕಳ ಜತೆಗಿರುವವರು ಸಬೂಬು ಹೇಳಿ ನುಣುಚಿಕೊಳ್ಳುತ್ತಾರೆ’ ಎಂದು ಚಿಕ್ಕಮಗಳೂರು ಮಕ್ಕಳ ಸಹಾಯವಾಣಿ ಸಂಯೋಜಕ ಪ್ರದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊಡಗಿನಲ್ಲಿ ಶಿಕ್ಷಣ ಇಲಾಖೆಯು ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ. ಜತೆಗೆ ಕಾರ್ಮಿಕ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾರ್ಮಿಕರ ಮಕ್ಕಳೂ ಕಾರ್ಮಿಕರೇ ಆಗುವ ಸ್ಥಿತಿಯಿದೆ’ ಎಂದು ಸಿದ್ದಾಪುರದ ಕಾರ್ಮಿಕ ಮುಖಂಡ ಭರತ್‌ ಆಪಾದಿಸಿದರು.

*
ಪೋಷಕರ ಕಷ್ಟ ನೋಡಲಾಗುತ್ತಿಲ್ಲ. ಸ್ವಂತ ಊರು ತೊರೆದು ಬಂದ ಮೇಲೆ ಬದುಕು ನಡೆಸಲು ದುಡಿಮೆ ಅನಿವಾರ್ಯ. ಪೋಷಕರೊಂದಿಗೆ ನಾನೂ ಕೆಲಸಕ್ಕೆ ಹೋಗುತ್ತಿದ್ದೇನೆ.
–ಬಾಲಕಾರ್ಮಿಕ, ಕೊಡಗು

*
ರಾಯಚೂರು ಜಿಲ್ಲೆಯಲ್ಲಿ ಕೃಷಿಯಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ಬಹಳಷ್ಟು ಕಡೆಗಳಲ್ಲಿ ನಡೆಯುತ್ತಿದೆ. ಜಾಗೃತಿ–ಕಾನೂನು ಕ್ರಮ ಕೈಗೊಂಡರೂ ಇದು ಕಡಿಮೆಯಾಗುತ್ತಿಲ್ಲ.
–ಮಂಜುನಾಥರೆಡ್ಡಿ, ಬಾಲಕಾರ್ಮಿಕ ತಡೆ ಯೋಜನಾ ನಿರ್ದೇಶಕ, ರಾಯಚೂರು

**

ಪೂರಕ ಮಾಹಿತಿ: ನಾಗರಾಜ ಚಿನಗುಂಡಿ, ಬಿ.ಜಿ.ಪ್ರವೀಣಕುಮಾರ್‌, ಆದಿತ್ಯ ಕೆ.ಎ., ಧನ್ಯಪ್ರಸಾದ ಬಿ.ಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.