ADVERTISEMENT

ಒಳನೋಟ: ಬಿಟಿಪಿಎಸ್‌; ಹೊಸ ತಂತ್ರಜ್ಞಾನ ಅಳವಡಿಕೆ ಇಲ್ಲ

ಕೆ.ನರಸಿಂಹ ಮೂರ್ತಿ
Published 17 ಏಪ್ರಿಲ್ 2021, 21:16 IST
Last Updated 17 ಏಪ್ರಿಲ್ 2021, 21:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಳ್ಳಾರಿ: ತಾಲ್ಲೂಕಿನ ಕುಡಿತಿನಿಯಲ್ಲಿರುವ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಕಲ್ಲಿದ್ದಲನ್ನು ಸುಟ್ಟಾಗ ಬರುವ ಹೊಗೆಯಲ್ಲಿರುವ ಮಾರಕ ಸಲ್ಫರ್‌ ಅನ್ನು ತೆಗೆಯುವ ತಂತ್ರಜ್ಞಾನFlue gas desulfurization ಘಟಕವನ್ನು ಇನ್ನೂ ಅಳವಡಿಸಿಲ್ಲ. ಈ ಘಟಕವನ್ನು ಅಳವಡಿಸಿದರೆ ಪರಿಸರ ಮತ್ತು ಜೀವಸಂಕುಲದ ಆರೋಗ್ಯದ ಮೇಲೆ ಬೀರಬಹುದಾದ ದುಷ್ಪರಿಣಾಮ ಕಡಿಮೆಯಾಗುತ್ತದೆ ಎಂಬ ಪ್ರತಿಪಾದನೆ ಇದೆ.

‘ಘಟಕದಿಂದ ಬರುವ ಬೂದಿಯಲ್ಲಿ ಶೇ 20ರಷ್ಟು ಬೃಹತ್‌ ಚಿಮಣಿಗಳ ಮೂಲಕ ವಾತಾವರಣ ಸೇರುತ್ತದೆ. ಶೇ 80ರಷ್ಟನ್ನು ಚಿಮಣಿಗಳ ತಳಭಾಗದಲ್ಲೇ ಸಂಗ್ರಹಿಸಿ ಬೂದಿ ಕಣಜದಲ್ಲಿ ಶೇಖರಿಸಲಾಗುತ್ತಿದೆ. ಬೂದಿಯ ಶೇ 50ರಷ್ಟನ್ನು ತೇವಗೊಳಿಸಿ, ಉಳಿದಿದ್ದನ್ನು ಇರುವಂತೆಯೇ ಸಂಗ್ರಹಿಸಲಾಗುತ್ತಿದೆ. ಈ ವಿಧಾನದಿಂದ ಯಾರಿಗೂ ಹೆಚ್ಚಿನ ತೊಂದರೆ ಇಲ್ಲ’ ಎನ್ನುತ್ತವೆ ಬಿಟಿಪಿಎಸ್‌ ಮೂಲಗಳು.

ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಹಾರುಬೂದಿಯಿಂದ ಸಂರಕ್ಷಿಸಿಕೊಳ್ಳುವ ಸಾಮಗ್ರಿಗಳನ್ನು ಸಮರ್ಪಕವಾಗಿ ವಿತರಿಸುವುದಿಲ್ಲ ಎಂಬಆರೋಪಗಳಿವೆ. ಆದರೆ ಅಧಿಕಾರಿಗಳು ಅದನ್ನು ಅಲ್ಲಗಳೆಯುತ್ತಾರೆ.

ADVERTISEMENT

‘ಹಾರುಬೂದಿ ಸಾಗಣೆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸದೇ ಇರುವುದರಿಂದ, ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಬಿಟಿಪಿಎಸ್–ತಿಮ್ಮಲಾಪುರ ರಸ್ತೆ ಮತ್ತು ಅದರ ಅಂಚಿನಲ್ಲಿರುವ ಅಂಬೇಡ್ಕರ್‌ ಕಾಲೊನಿಯ ನಿವಾಸಿಗಳಿಗೆ ಹೆಚ್ಚಿನ ತೊಂದರೆಯಾಗುತ್ತಿತ್ತು. ಈಗ ಬೂದಿ ಸಾಗಣೆ ಪ್ರಮಾಣ ಕಡಿಮೆಯಾಗಿರುವುದಿಂದ ಸಮಸ್ಯೆಯೂ ಕಡಿಮೆಯಾಗಿದೆ’ ಎಂದು ಬಿಟಿಪಿಎಸ್‌ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಹೇಳುತ್ತಾರೆ.

ತಲಾ 500 ಮೆಗಾವಾಟ್‌ ಸಾಮರ್ಥ್ಯದ ಎರಡು ಘಟಕಗಳ ಪೈಕಿ ಒಂದು ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದರ ದುರಸ್ತಿ ಕಾರ್ಯ ನಡೆದಿದೆ. 700 ಮೆಗಾವಾಟ್‌ ಸಾಮರ್ಥ್ಯದ ಮೂರನೇ ಘಟಕವೂ ಕಾರ್ಯನಿರ್ವಹಿಸುತ್ತಿದೆ. ಮೊದಲ ಎರಡು ಘಟಕಗಳಿಂದ ದಿನವೂ 1.20 ಕೋಟಿ ಯೂನಿಟ್ ಹಾಗೂ ಮೂರನೇ ಘಟಕದಿಂದ 1.6 ಕೋಟಿ ಯೂನಿಟ್‌ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ರಾಜ್ಯದ ವಿವಿಧ ಭಾಗಗಳ 10ರಿಂದ 15 ಖಾಸಗಿ ಕಂಪನಿಗಳುಸಿಮೆಂಟ್ ಮತ್ತು ಇಟ್ಟಿಗೆ ತಯಾರಿಸಲು ಹಾರುಬೂದಿಯನ್ನು ಖರೀದಿಸುತ್ತವೆ.

‘ಕುಡಿತಿನಿಯ ಎಸಿಸಿ ಸಿಮೆಂಟ್ ಕಾರ್ಖಾನೆಗೆ ಹಾಗೂ ಜಿಲ್ಲೆಯ ಹಲವು ಸ್ಥಳಗಳಿಗೆ, ಸೇಡಂ, ಬಾಗಲಕೋಟೆಗೂ ಬೂದಿಯನ್ನು ಸರಬರಾಜು ಮಾಡಲಾಗುತ್ತಿದೆ. ಕೆಪಿಸಿಎಲ್‌ ಬೇಡಿಕೆಗೆ ಅನುಗುಣವಾಗಿ ಸ್ಥಾವರದಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತದೆ’ ಎಂದು ಬಿಟಿಪಿಎಸ್‌ ಕಾರ್ಯನಿರ್ವಾಹಕ ನಿರ್ದೇಶಕ ನರೇಂದ್ರಕುಮಾರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.