ADVERTISEMENT

ಅಲುಗಾಡುತ್ತಿವೆ ಶೋಲಾ ಅರಣ್ಯಗಳೆಂಬ ಜಲಬಟ್ಟಲು

ಚಿದಂಬರ ಪ್ರಸಾದ್
Published 29 ಸೆಪ್ಟೆಂಬರ್ 2019, 2:43 IST
Last Updated 29 ಸೆಪ್ಟೆಂಬರ್ 2019, 2:43 IST
ಪಶ್ಚಿಮ ಘಟ್ಟದ ಹಲವೆಡೆ ಕುಸಿದಿರುವ ಗುಡ್ಡಗಳು
ಪಶ್ಚಿಮ ಘಟ್ಟದ ಹಲವೆಡೆ ಕುಸಿದಿರುವ ಗುಡ್ಡಗಳು   

ಮಂಗಳೂರು: ಚಾರ್ಮಾಡಿ ಘಾಟಿಯ ಏರಿಕಲ್ಲಿನ ಹುಲಿ ದನ ಬಂಡೆ, ಮಿಂಚುಕಲ್ಲಿನ ದೀರ್ಘ ಪ್ರಪಾತ, ಬಾಳೆ ಗುಡ್ಡದ ಅಮೋಘ ದೃಶ್ಯ, ಕೊಡೆ ಕಲ್ಲಿನ ಕೊರಕಲು ಶಿಲೆ, ದೊಡ್ಡೇರಿ ಬೆಟ್ಟದ ಗಡಸು ಹಾದಿ, ಹೊಸ್ಮನೆ ಬೆಟ್ಟದ ಹಸಿರು ಹೊದಿಕೆ, ರಾಮನಬೆಟ್ಟದ ಪಟ್ಟದ ಕಲ್ಲು, ಸೊಪ್ಪಿನ ಗುಡ್ಡದ ಸೊಡರು, ಕುಂಭಕಲ್ಲಿನ ಕುಂಭ, ಬಾರಿ ಮಲೆ, ಬಾಂಜಾರು ಮಲೆ, ಅಂಬಾಟಿ ಮಲೆ, ಇಳಿಮಲೆಯ ದಟ್ಟ ಶೋಲಾ ಅಡವಿ, ಬಾಳೂರು, ಮಧುಗುಂದಿ, ಮಳೆಮನೆ, ದೇವರಮನೆ, ಅಣಿಯೂರು, ದೇವಗಿರಿ ಕಣಿವೆಯ ನೀರಿನ ಹರಿವು, ಬಿದಿರು ತಳ, ಹೊರಟ್ಟಿ...

ಇವೆಲ್ಲವೂ ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ವೈವಿಧ್ಯತೆಯ ಪ್ರದೇಶಗಳಾಗಿದ್ದು, ನೇತ್ರಾವತಿಯ ಉಪನದಿಗಳಾದ ಮೃತ್ಯುಂಜಯ, ಅಣಿಯೂರು, ಸುನಾಲ, ನೆರಿಯ ಹೊಳೆಗಳ ಉಗಮ ಸ್ಥಾನವೂ ಹೌದು.

ನೀರು ಹಿಡಿದಿಡುವ ಶೋಲಾ ಅರಣ್ಯ: ಪಶ್ಚಿಮ ಘಟ್ಟದ ಬೆಟ್ಟಗಳ ಮೇಲ್ಮೈ ಪದರದ ಹುಲ್ಲುಗಾವಲು ಮತ್ತು ಕಣಿವೆಗಳ ಶೋಲಾ ಅರಣ್ಯ ನಡುವೆ ಒಂದಕ್ಕೊಂದು ಸಂಬಂಧವಿದೆ. ಎರಡು ಕಾಡುಗಳು ಸೇರುವ ಜಾಗದಲ್ಲಿ ಶೋಲಾ ಅರಣ್ಯವಿದೆ. ಬೆಟ್ಟದ ಮೇಲಿನ ಹುಲ್ಲುಗಾವಲು, ಮಳೆಗಾಲದ ಮಳೆ ನೀರನ್ನು ತನ್ನ ಒಳಪದರದ ಜಲಪಥಗಳ ಮೂಲಕ ಕೆಳಗಡೆ ಇರುವ ಶೋಲಾ ಅರಣ್ಯಕ್ಕೆ ಸರಬರಾಜು ಮಾಡುತ್ತವೆ.

ಈ ಶೋಲಾ ಅರಣ್ಯದ ಒಳ ಗಡೆ ಇರುವ ಶಿಲಾ ಪದರಗಳಲ್ಲಿ ಶೇಖರಣೆ ಯಾದ ನೀರು, ಈ ಮಳೆಗಾಲ ಮುಗಿದು, ಇನ್ನೊಂದು ಮಳೆಗಾಲದವರೆಗೆ ಹೊಳೆಗೆ ನೀರು ನಿರಂತರ ನೀರು ಹರಿಸುತ್ತದೆ. ಆ ಮೂಲಕ ಹೊಳೆಯನ್ನು ವರ್ಷ ಪೂರ್ತಿ ಜೀವಂತವಾಗಿ ಇಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಶೋಲಾ ಅರಣ್ಯದಿಂದಾಗಿಯೇ ಅಲ್ಲಿ ಒಂದಷ್ಟು ಜಲಪಾತಗಳಿದ್ದು, ಜಲಪಾತದ ನೀರು ವರ್ಷವಿಡೀ ನೇತ್ರಾವತಿಯ ಉಪನದಿಗಳಾಗಿ ಹರಿದು ಪ್ರಧಾನ ನದಿಗೆ ಸೇರುತ್ತವೆ.

ಪಶ್ಚಿಮ ಘಟ್ಟದಲ್ಲಿ ಕುಸಿಯುತ್ತಿರುವ ಗುಡ್ಡಗಳು

ವರ್ಷದಿಂದ ವರ್ಷಕ್ಕೆ ಪಶ್ಚಿಮ ಘಟ್ಟದ ಮೇಲ್ಮೈ ಪದರ ಸಡಿಲವಾಗುತ್ತಿದ್ದು, ಹುಲ್ಲುಗಾವಲು ಗಾಢತೆಯನ್ನು ಕಳೆದುಕೊಳ್ಳುತ್ತಿದೆ. ಶೋಲಾ ಅರಣ್ಯದ ಒಳಗಿನ ಶಿಲಾ ಪದರದ ಅಂತರವೂ ಹೆಚ್ಚಾಗುತ್ತಿವೆ. ಈ ರೀತಿ ಅಂತರ ಹೆಚ್ಚಾದ ಸಂದರ್ಭದಲ್ಲಿ ಧಾರಾಕಾರ ಮಳೆ ಸುರಿದಾಗ, ಧಾರಣಾ ಶಕ್ತಿಗಿಂತ ಹೆಚ್ಚು ನೀರು ಬಿರುಕಿನ ನಡುವೆ ಪ್ರವಹಿಸುತ್ತದೆ. ಇದರಿಂದಾಗಿ ಜಲಸ್ಫೋಟವಾಗಿ ಭೂಕುಸಿತ ಉಂಟಾಗುತ್ತವೆ.

ಹುಲ್ಲುಗಾವಲು ಗಾಢತೆ ಕಳೆದುಕೊಳ್ಳುತ್ತಿರುವುದು ಹಾಗೂ ಶೋಲಾ ಅರಣ್ಯದ ಶಿಲಾಪದರದ ಅಂತರ ಹೆಚ್ಚಾಗುತ್ತಿರುವುದರಿಂದ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ಕಡಿಮೆ ಆಗುತ್ತಿದೆ. ಧಾರಾಕಾರ ಮಳೆಯ ಸಂದರ್ಭದಲ್ಲಿ ಉಕ್ಕಿ ಹರಿಯುವ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು, ಮಳೆಗಾಲ ಮುಗಿಯುತ್ತಿದ್ದಂತೆಯೇ ಬತ್ತಿ ಹೋಗುತ್ತಿರುವುದಕ್ಕೂ ಇದೇ ಕಾರಣ ಎನ್ನುತ್ತಾರೆ ಪರಿಸರವಾದಿಗಳು.

ಅಣಿಯೂರು ನದಿಮೂಲ ಕುಸಿತ: ಅಣಿಯೂರು ನದಿಯ ಮೂಲ ಮಲೆಮನೆ ಬೆಟ್ಟ. ಮಲೆಮನೆ ಕಾಡು ಹಾಗೂ ಬಾಳೇರು ಕಾಡಿನ ಮಧ್ಯೆ ಇರುವ ಬೆಟ್ಟ ಪ್ರದೇಶದಲ್ಲಿ ಅಣಿಯೂರು ಹೊಳೆ ಆರಂಭವಾಗುತ್ತದೆ. ಮುಂದೆ ಸಾಗಿದಂತೆ ದೊಡ್ಡೇರಿ ಬೆಟ್ಟ, ರಾಮನಗುಡ್ಡ, ಹೊಸಮನೆಗುಡ್ಡ, ಹೊಸಮನೆ ಗುಡ್ಡದ ತೊರೆಗಳೂ ಸೇರುತ್ತವೆ.

ಆಗಸ್ಟ್ 9ರಂದು ದೊಡ್ಡೇರಿ ಬೆಟ್ಟ, ರಾಮನಗುಡ್ಡ, ಹೊಸಮನೆಗುಡ್ಡ, ಹೊಸಮನೆ ಗುಡ್ಡದಲ್ಲಿ ಏಕಕಾಲದಲ್ಲಿ ಜಲಸ್ಫೋಟ ಸಂಭವಿಸಿದಾಗ, ಸಣ್ಣ ತೊರೆಗಳೆಲ್ಲ ಬೃಹತ್ ನದಿಗಳಾಗಿ ಹರಿದಿವೆ. ಬೆಟ್ಟದ ತಗ್ಗು ಪ್ರದೇಶದಲ್ಲಿ ಅಪಾರ ಪ್ರಮಾಣದ ಕಲ್ಲು, ಮಣ್ಣು ಅಲೆಕಾನದಿಂದ ಬಾಂಜಾರುಮಲೆವರೆಗೆ ಹರಿದು ಅಲ್ಲಲ್ಲಿ ಶೇಖರಣೆಗೊಂಡಿದೆ.

ಇದೇ ವೇಳೆ ಅಣಿಯೂರು ನದಿ ಮೂಲ ಮಲೆಮನೆ ಕಾಡು ಹಾಗೂ ಬಾಳೇರು ಕಾಡು ಸುಮಾರು 35 ಕಡೆ ಪೂರ್ಣ ಪ್ರಮಾಣದಲ್ಲಿ ಕುಸಿದಿದ್ದು, ಅಣಿಯೂರು ನದಿಯೇ ಪ್ರವಾಹದ ಮೂಲವಾಗಿ ಪರಿಣಮಿಸಿತ್ತು.

ಅರಣ್ಯ ಒತ್ತುವರಿಯ ಅನಾಹುತ

ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಪಶ್ಚಿಮಘಟ್ಟದಲ್ಲಿ ಅರಣ್ಯ ನಾಶದ ಬಗ್ಗೆ ನಡೆಸಿದ ಅಧ್ಯಯನದ ಸಾರಾಂಶ ಹೀಗಿದೆ:

* ಕಳೆದ 40 ವರ್ಷಗಳಲ್ಲಿ ಪಶ್ಚಿಮ ಘಟ್ಟದಲ್ಲಿ ಭಾರಿ ಪ್ರಮಾಣದ ಅರಣ್ಯ ನಾಶವೇ ಇಂದಿನ ಅನಾಹುತಗಳಿಗೆ ಕಾರಣ. ಭಾರಿ ಪ್ರಮಾಣದ ಅರಣ್ಯ ನಾಶ, ಭೂಬಳಕೆ ಬದಲಾವಣೆ, ನಗರೀಕರಣ, ಮಿತಿಮೀರುತ್ತಿರುವ ಪ್ಲಾಂಟೇಷನ್‌ ತೋಟಗಳು, ಆ ಭಾಗದಲ್ಲಿ ಭಾರಿ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ. ಮಾನವ ಹಸ್ತಕ್ಷೇಪದಿಂದ ಈ ಭಾಗದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡೂ ಶಾಪವಾಗಿ ಕಾಡಲಿವೆ.

ಪ್ರವಾಹದಿಂದ ಹಾಳಾಗಿರುವ ಕೃಷಿ ಭೂಮಿ

* ಸ್ಥಳೀಯ ಪ್ರಭೇದದ ಮರಗಳು ದಟ್ಟವಾಗಿ ಇದ್ದಾಗ ಶೇ 50ರಷ್ಟು ಮಳೆ ನೀರು ಇಂಗುತ್ತಿತ್ತು. ಗುಂಡು ತೋಪು ಇದ್ದರೆ ಇಂಗುವಿಕೆ ಪ್ರಮಾಣ ಕೇವಲ ಶೇ 20. ಪ್ಲಾಂಟೇಶನ್‌ಗಳಿದ್ದರೆ ನೀರು ಇಂಗದೇ ಸಂಪೂರ್ಣ ಹರಿದು ಹೋಗುತ್ತದೆ. ಹೀಗಾಗಿ ಭೂಕುಸಿತ ಆಗುತ್ತದೆ.

* ಅರಣ್ಯ ಎಂದು ಘೋಷಿಸಿರುವ ಪ್ರದೇಶದಲ್ಲಿ ಕನಿಷ್ಠ ಶೇ 40ರಷ್ಟು ಅರಣ್ಯ ಇರಲೇಬೇಕು. ಆದರೆ, ಕೊಡಗಿನ ಕೆಲವು ಭಾಗದಲ್ಲಿ ಶೇ 18ಕ್ಕೂ ಕಡಿಮೆ ಇದೆ. ಇನ್ನು ಕೆಲವು ಕಡೆಗಳಲ್ಲಿ ಕಾಡಿನ ಪ್ರಮಾಣ ಶೇ 2ಕ್ಕೂ ಕಡಿಮೆ ಇದೆ.

* ಕೊಡಗು ಜಿಲ್ಲೆಯಲ್ಲಿ ಕೇವಲ 10 ವರ್ಷಗಳ (2005–15) ಅವಧಿಯಲ್ಲಿ 2,800 ಎಕರೆ ಅರಣ್ಯ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆಗೊಳಿಸಲಾಗಿದೆ.

‘ಮಾನವ ಹಸ್ತಕ್ಷೇಪ, ಕಾಳ್ಗಿಚ್ಚು ಕಾರಣ’

ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಅತಿಕ್ರಮಣ, ಜಲವಿದ್ಯುತ್ ಯೋಜನೆ, ರೆಸಾರ್ಟ್ ನಿರ್ಮಾಣದಿಂದಾಗಿ ಪಶ್ಚಿಮ ಘಟ್ಟದ ಸಮತೋಲನಕ್ಕೆ ಧಕ್ಕೆ ಆಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ನಿರಂತರ ಕಾಳ್ಗಿಚ್ಚು ಕೂಡಾ ಭೂಕುಸಿತಕ್ಕೆ ಇನ್ನೊಂದು ಕಾರಣ’ ಎಂದು ಪರಿಸರವಾದಿ ದಿನೇಶ್‌ ಹೊಳ್ಳ ಹೇಳುತ್ತಾರೆ.

ಮಣ್ಣು, ಕಲ್ಲು ಹೊತ್ತು ತಂದ ಪ್ರವಾಹ

‘ಇತ್ತೀಚಿನ ದಿನಗಳಲ್ಲಿ ಒಂದೇ ಬೆಟ್ಟಕ್ಕೆ ನಿರಂತರ 3 ರಿಂದ 4 ಸಲ ಕಾಡ್ಗಿಚ್ಚು ಉಂಟಾಗಿ, ಕಾಂಡ, ಬೇರು ಸಹಿತ ಬೆಟ್ಟದ ಮೇಲಿನ ಹುಲ್ಲು ಸಂಪೂರ್ಣ ಸುಟ್ಟು ಹೋದರೆ, ಮತ್ತೆ ಚಿಗುರಲು ಅವಕಾಶ ಇಲ್ಲದಂತಾಗುತ್ತದೆ. ಧಾರಾಕಾರ ಮಳೆ ಸುರಿಯುವ ಸಂದರ್ಭದಲ್ಲಿ ಬೆಟ್ಟದ ಮೇಲ್ಮೈ ಪದರ ಕುಸಿದು, ಶೋಲಾ ಕಾಡಿಗೆ ಸೇರುವುದರಿಂದ ಮಣ್ಣಿನ ಕುಸಿತ ಆಗುತ್ತಿದೆ’ ಎಂದು ಅವರು ಹೇಳುತ್ತಾರೆ.

‘ಜನಪ್ರತಿನಿಧಿಗಳು, ಜನರಿಗೆ ಪಶ್ಚಿಮ ಘಟ್ಟದ ಬಗ್ಗೆ ಅಭಿಮಾನ ಬೇಕು. ಘಟ್ಟ ಪ್ರದೇಶದಲ್ಲಿ ಅಸಂಬದ್ಧ ಯೋಜನೆಗಳಿಗೆ ಸರ್ಕಾರಗಳು ಅನುಮತಿ ನೀಡಬಾರದು. ಆಗ ಮಾತ್ರ, ಪಶ್ಚಿಮ ಘಟ್ಟವೂ ಉಳಿಯಲಿದೆ. ಜತೆಗೆ ನದಿ ಮೂಲಗಳು ಸುರಕ್ಷಿತವಾಗಿ ಇರಲು ಸಾಧ್ಯ’ ಎನ್ನುತ್ತಾರೆ ದಿನೇಶ ಹೊಳ್ಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.