ADVERTISEMENT

ಒಳನೋಟ | ತೂಕದಲ್ಲಿ ವಂಚನೆ: ಅಂಕೆ ಇಲ್ಲದ ‘ಅಳತೆ’

ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿರುವ ಕಾನೂನು ಮಾಪನಶಾಸ್ತ್ರ ಇಲಾಖೆ

ಮಂಜುನಾಥ್ ಹೆಬ್ಬಾರ್‌
Published 5 ಅಕ್ಟೋಬರ್ 2019, 20:00 IST
Last Updated 5 ಅಕ್ಟೋಬರ್ 2019, 20:00 IST
ತೂಕ ಮಾಪನ
ತೂಕ ಮಾಪನ    

ಬೆಂಗಳೂರು: ಯಶವಂತಪುರದ ವೇ ಬ್ರಿಡ್ಜ್‌ನಲ್ಲಿ ಅಧಿಕಾರಿಯೊಬ್ಬರು ಮಾರುತಿ ಕಾರಿನ ತೂಕ ಮಾಡಿಸಿದರು. ಕಾರು 7 ಕ್ವಿಂಟಲ್‌ ಇದೆ ಎಂದು ಮಾಪಕದಲ್ಲಿ ತೋರಿಸಿತು. ಅಚ್ಚರಿಗೆ ಒಳಗಾದ ಅಧಿಕಾರಿ, ‘ನಾನು ತೂಕ ಮಾಡಿಸಿದ್ದು ಲಾರಿಯೇ’ ಎಂದು ಪ್ರಶ್ನಿಸಿದರು. ಆಗ ಅಲ್ಲಿನ ಸಿಬ್ಬಂದಿ ಪುನಃ ಕಾರಿನ ತೂಕ ಮಾಡಿದರು. ಆಗ ಕಾರು 80 ಕೆ.ಜಿ. ತೂಗಿತು. ‘ನಾನೇ 80 ಕೆ.ಜಿ.ಇದ್ದೇನಲ್ಲ’ ಎಂದು ಅಧಿಕಾರಿ ಪ್ರಶ್ನಿಸಿದರು. ಮತ್ತೊಮ್ಮೆ ತೂಗಿದಾಗ 1,500 ಕೆ.ಜಿ. ಬಂತು. ‘ಏನಪ್ಪ ಇದು ಮೋಸ’ ಎಂದು ಅಧಿಕಾರಿ ಗದರಿದಾಗ ಅಲ್ಲಿನ ಸಿಬ್ಬಂದಿ ಓಟ ಕಿತ್ತರು.

ತೂಕದ ಮೋಸಕ್ಕೆ ಒಂದು ಉದಾಹರಣೆ ಇದು. ಸಣ್ಣಪುಟ್ಟ ಆಭರಣ ಮಳಿಗೆಗಳಿಂದ ವೇ ಬ್ರಿಡ್ಜ್‌ಗಳ ತನಕ ಎಲ್ಲೆಡೆ ತೂಕದಲ್ಲಿ ವಂಚನೆ ಆಗುತ್ತಿದೆ. ಅಧಿಕಾರಿ-ಸಿಬ್ಬಂದಿಗಳ ಅಪ್ರಾಮಾಣಿಕತೆ, ಮಧ್ಯವರ್ತಿಗಳ ಹಾವಳಿ, ತಯಾರಿಕಾ ಕಂಪನಿ ಮತ್ತು ಮಾರಾಟ ಜಾಲದ ಬಹುದೊಡ್ಡ ಮಾಫಿಯಾ ಮುಂದೆ ಮಂಡಿಯೂರಿದಂತಿರುವ ಕಾನೂನು ಮಾಪನ ಶಾಸ್ತ್ರ ಇಲಾಖೆ, ಗ್ರಾಹಕರ ಹಿತ ಕಾಯುವಲ್ಲಿ ಬಹುತೇಕ ವಿಫಲವಾಗಿದೆ. ಅಪವಾದ ಎಂಬಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಕೆಲ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವ, ಎತ್ತಂಗಡಿ ಮಾಡಿಸುವ, ಸುಳ್ಳು ಆರೋಪಗಳ ಮೇಲೆ ಅಮಾನತು ಮಾಡಿರುವ ನಿದರ್ಶನಗಳಿವೆ.

ನೀಡುವ ಹಣಕ್ಕೆ ತಕ್ಕ ಮೌಲ್ಯ ಪಡೆಯುವುದು ಗ್ರಾಹಕರ ಹಕ್ಕು. ಈ ಹಕ್ಕನ್ನು ಜಾರಿಗೊಳಿಸುವ ಪರಮಾಧಿಕಾರ ಇರುವುದು ಈ ಇಲಾಖೆಗೆ. ಇಲಾಖೆಗೆ ‘2009ರ ಕಾನೂನು ಮಾಪನಶಾಸ್ತ್ರ ಕಾಯ್ದೆ’ ಶಕ್ತಿ ತುಂಬಿದೆ. ಆದರೆ, ಇದರ ಪ್ರಯೋಜನ ಗ್ರಾಹಕರಿಗೆ ಸಿಗುತ್ತಿದೆಯೇ? ಈ ಪ್ರಶ್ನೆಗೆ ಸಮಾಧಾನಕರ ಉತ್ತರ ಸಿಗುವುದಿಲ್ಲ. ಮಾಲ್‌ಗಳಲ್ಲಿನ ತೂಕ ವ್ಯತ್ಯಾಸದಿಂದ ಹೆದ್ದಾರಿಗಳಲ್ಲಿನ ಟೋಲ್‌ಗಳಲ್ಲಿ ನಿಯಮ ಮೀರಿ ಸುಂಕ ವಸೂಲಿ ಮಾಡುವವರೆಗೆ, ರಿಯಲ್‌ ಎಸ್ಟೇಟ್‌ ಅವ್ಯವಹಾರದಿಂದ ಪೆಟ್ರೋಲ್‌–ಡೀಸೆಲ್ ಅಳತೆಯಲ್ಲಿ ಬಳಕೆದಾರರ ಲೂಟಿ ಆಗುತ್ತಿದ್ದರೂ ಸಂಬಂಧವೇ ಇಲ್ಲ ಎನ್ನುವಂತಿದೆ ಈ ಇಲಾಖೆ.

ADVERTISEMENT

ಕ್ವಿಂಟಲ್‌ಗಟ್ಟಲೆ ತೂಕದ ವಾಹನಗಳನ್ನು ತೂಗುವ ತಕ್ಕಡಿ ಇರಲಿ, ಮಿಲಿಗ್ರಾಂ ಲೆಕ್ಕದಲ್ಲಿ ಚಿನ್ನ ತೂಗುವ ಯಂತ್ರವೇ ಇರಲಿ, ಅಳತೆಯಲ್ಲೂ ರವೆಯಷ್ಟು ವ್ಯತ್ಯಾಸವಾದರೂ ಗ್ರಾಹಕರಿಗೆ ನ್ಯಾಯ ಒದಗಿಸಬೇಕಾದ ಇಲಾಖೆ ಇದು. ಎಲ್ಲೆಲ್ಲಿ ಬಳಕೆದಾರರು ಇರುತ್ತಾರೋ ಅಲ್ಲೆಲ್ಲಾ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಈ ಇಲಾಖೆ ಮನೆಮಾತಾಗಬೇಕಿತ್ತು. ಪರಿಚಯ ಬಿಡಿ, ಇಂತಹದ್ದೊಂದು ಇಲಾಖೆ ಇದೆ ಎಂದೇ ಬಹುಪಾಲು ಜನರಿಗೆ ತಿಳಿದೇ ಇಲ್ಲ ಎಂಬುವಷ್ಟು ಅಜ್ಞಾತವಾಗಿ ಉಳಿದಿದೆ ಈ ಇಲಾಖೆ.

ಪ್ರಮಾಣಪತ್ರ ದಂಧೆ: ಯಾವುದೇ ತಕ್ಕಡಿಗೆ ಕ್ಯಾಲಿಬರೇಷನ್‌ ಬಗ್ಗೆ ಪ್ರಮಾಣೀಕರಿಸುವ ಅಧಿಕಾರವೇನಾ ದರೂ ಇದ್ದರೆ ಅದು ಈ ಇಲಾಖೆ ಅಧಿಕಾರಿಗಳಿಗೆ ಮಾತ್ರ. ಆದರೆ, ಮಾಪಕಗಳನ್ನು ದುರಸ್ತಿ ಮಾಡುವ ಕೆಲವು ಕಂಪನಿಗಳು ‘ಕ್ಯಾಲಿಬರೇಷನ್‌ ಪ್ರಮಾಣಪತ್ರ’ ನೀಡುವ ಮೂಲಕ ಗ್ರಾಹಕರನ್ನು ವಂಚಿಸುತ್ತಿವೆ. ಪ್ರತಿ ಪ್ರಮಾಣಪತ್ರಕ್ಕೂ ₹5 ಸಾವಿರದಿಂದ ₹2 ಲಕ್ಷದವರೆಗೂ ಶುಲ್ಕ ವಸೂಲಿ ಮಾಡುತ್ತವೆ. ಅಸಲಿಯತ್ತು ಏನೆಂದರೆ, ಈ ಪ್ರಮಾಣಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ.

ಇಂತಹ ಕಂಪನಿಗಳ ಜೊತೆ ಶಾಮೀಲಾಗಿರುವ ಅಧಿಕಾರಿಗಳು ನಕಲಿ ಪ್ರಮಾಣಪತ್ರ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವುದೇ ಇಲ್ಲ. ಈ ಬಗ್ಗೆ ತಿಳಿವಳಿಕೆ ಹೊಂದಿರದ ಗ್ರಾಹಕರು ಖಾಸಗಿ ಕಂಪನಿಗಳು ನೀಡುವ ‘ಕ್ಯಾಲಿಬರೇಷನ್‌ ಪ್ರಮಾಣಪತ್ರ’ ಕಾನೂನುಬದ್ಧವೆಂದು ಭಾವಿಸಿ ವಂಚನೆಗೆ ಒಳಗಾಗುತ್ತಿದ್ದಾರೆ. ಇಂತಹ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಿದ್ದರೂ ಅದು ಜಾರಿಯಾಗದಂತೆ ನೋಡಿಕೊಳ್ಳುವ ಚಾಣಾಕ್ಷರು ಇಲಾಖೆಯಲ್ಲೇ ಇದ್ದಾರೆ.

ಮೂಟೆಗಳಲ್ಲಿ ತರುತ್ತಾರೆ ಆಟೊ ಮೀಟರ್‌

ಆಟೊರಿಕ್ಷಾ ಮೀಟರ್‌ಗಳನ್ನು ಪ್ರಮಾಣೀಕರಿಸುವುದು ಇಲಾಖೆ ಅಧಿಕಾರಿಗಳ ಕೆಲಸ. ಯಾವ ಮಾಪಕವನ್ನು ಪ್ರಮಾಣೀಕರಿಸಲಾಗಿದೆ, ಮಾಲೀಕ ಯಾರು ಎಂಬ ವಿವರಗಳನ್ನು ಪ್ರಮಾಣಪತ್ರದಲ್ಲಿ ದಾಖಲಿಸಲೇಬೇಕು. ಆದರೆ, ನಡೆಯುತ್ತಿರುವುದೇ ಬೇರೆ. ಮಧ್ಯವರ್ತಿಗಳು ಮೀಟರ್‌ಗಳನ್ನು ಮೂಟೆಗಳಲ್ಲಿ ತುಂಬಿಸಿ ಅಧಿಕಾರಿಗಳ ಬಳಿಗೆ ತರುತ್ತಾರೆ. ಅದರ ಸಾಚಾತನವನ್ನು ಎಷ್ಟರಮಟ್ಟಿಗೆ ಪರಿಶೀಲಿಸುತ್ತಾರೊ ಗೊತ್ತಿಲ್ಲ. ಆದರೆ, ಮೀಟರ್‌ ಸರಿಯಾಗಿದೆ ಎಂಬ ಪ್ರಮಾಣಪತ್ರ ನಿರಾಯಾಸವಾಗಿ ಸಿಗುತ್ತದೆ. ಅಚ್ಚರಿ ಎಂದರೆ ಅದರಲ್ಲಿ ಆ ಆಟೊದ ನೋಂದಣಿ ಸಂಖ್ಯೆಯಾಗಲೀ, ಮಾಲೀಕನ ಹೆಸರು ನಮೂದಾಗುವುದೇ ಇಲ್ಲ.

ಪ್ರತಿ ತೂಕದ ಯಂತ್ರವನ್ನು ಗರಿಷ್ಠ ಎಷ್ಟು ತೂಕದ ವಸ್ತುವನ್ನು ತೂಗಲು ಬಳಸಲಾಗುತ್ತದೆ ಎಂಬ ಆಧಾರದಲ್ಲಿ ಅದರ ಮಾಪಕವನ್ನು ಹೊಂದಿಸಬೇಕು. ಉದಾಹರಣೆಗೆ ಚಿನ್ನವನ್ನು ತೂಗುವ ಯಂತ್ರವಾದರೆ ಪ್ರತಿ ಮಿಲಿಗ್ರಾಂ ಮುಖ್ಯವಾಗುತ್ತದೆ. ಏಕೆಂದರೆ, 1 ಮಿಲಿಗ್ರಾಂ ನಷ್ಟವಾದರೂ ಗ್ರಾಹಕರು ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಾರೆ. ಅಂತೆಯೇ ಕೆ.ಜಿ.ಗಟ್ಟಲೆ ತೂಗುವ ಯಂತ್ರವಾದರೆ ಅದರ ಪ್ರತಿ ಗ್ರಾಂ ಕೂಡಾ ಮುಖ್ಯವಾಗುತ್ತದೆ. ಅದಕ್ಕೆ ತಕ್ಕಂತೆ ತೂಕದ ನಿಖರತೆಯನ್ನು ನಿಗದಿಪಡಿಸಬೇಕಾಗುತ್ತದೆ. ಈ ವಿಚಾರದಲ್ಲೂ ಅನೇಕ ಕಡೆ ಮೋಸ ನಡೆಯುತ್ತಿದೆ.

* ಇಲಾಖೆಯ ಹೊಣೆ ವಹಿಸಿ ಒಂದು ವಾರ ಆಗಿದೆ. ಸಮಸ್ಯೆಗಳಿರುವುದು ಗಮನಕ್ಕೆ ಬಂದಿದೆ. ಬಗೆಹರಿಸಲು ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ

– ವಿ.ಮಂಜುಳಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾನೂನು ಮಾಪನ ಶಾಸ್ತ್ರ ಇಲಾಖೆ

ಸರ್ಕಾರ ಏನು ಮಾಡಬೇಕು?

* ಇಲಾಖೆಯ ಹೆಸರನ್ನು ‘ಗ್ರಾಹಕರ ಹಕ್ಕುಗಳ ರಕ್ಷಣಾ ಇಲಾಖೆ’ ಎಂದು ಬದಲಿಸಿ, ಗ್ರಾಹಕ ಸ್ನೇಹಿಯಾಗಲು ಕಾಯ್ದೆಗೆ ತಿದ್ದುಪಡಿ ತರಬೇಕು.

* ಇಲಾಖೆಗೆ ಅಗತ್ಯ ಸಿಬ್ಬಂದಿ ನೇಮಿಸಿ ಬಲ ತುಂಬಬೇಕು.

* ಐಪಿಎಸ್‌/ಐಎಎಸ್‌ ಅಧಿಕಾರಿಗಳನ್ನು ಮುಖ್ಯಸ್ಥರ ಹುದ್ದೆಗೆ ನೇಮಿಸಬೇಕು. ನಿಯಂತ್ರಕರನ್ನು ಕನಿಷ್ಠ 2 ವರ್ಷ ವರ್ಗಾವಣೆ ಮಾಡಬಾರದು.

* ‘ಇ–ಮಾಪನ್‌’ನಲ್ಲಿ ಕಾಗದರಹಿತ ವ್ಯವಸ್ಥೆ ಜಾರಿಗೆ ತರಬೇಕು.

* ಗ್ರಾಹಕರ ದೂರುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.