ADVERTISEMENT

ಕ್ವಿಟ್‌ ಇಂಡಿಯಾ: ಮರೆಯಬಾರದ ಮಹೋನ್ನತ ಚಳವಳಿ

ಚಳವಳಿಯ ಸಂದರ್ಭವನ್ನು ನೆನೆಯುತ್ತಾ, ಆ ಚಳವಳಿಯ ಹುತಾತ್ಮರು ಮತ್ತು ವೀರರಿಗೆ ನಮ್ಮ ಶ್ರದ್ಧಾಂಜಲಿ ಸಲ್ಲಿಸಬೇಕಿದೆ

ಡಿ.ಎಸ್.ನಾಗಭೂಷಣ
Published 9 ಆಗಸ್ಟ್ 2021, 2:29 IST
Last Updated 9 ಆಗಸ್ಟ್ 2021, 2:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಭಾರತದ ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ ಘಟ್ಟವೆನಿಸಿರುವ, ಕನ್ನಡದಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳವಳಿಯೆಂದು ಹೆಸರಾಗಿರುವ 1942ರ ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಕಾಂಗ್ರೆಸ್ ಸಮಾಜ ವಾದಿಗಳು ವಹಿಸಿದ ಧೀರೋದಾತ್ತ ಪಾತ್ರ ಮತ್ತು ಅವರು ನಿರ್ವಹಿಸಿದ ‘ಕಾಂಗ್ರೆಸ್ ಬಾನುಲಿ’ಯ ಮಹತ್ವದ ಬಗ್ಗೆ ನಟರಾಜ್ ಹುಳಿಯಾರ್ ಬಹಳಷ್ಟು ಉಪಯುಕ್ತ ಮಾಹಿತಿ ನೀಡಿದ್ದಾರೆ (ಪ್ರ.ವಾ., ಆ. 7). ಈ ಚಳವಳಿಯ ನಾಯಕರನೇಕರ ಚಾರಿತ್ರ್ಯ ಹನನದ ಜುಗುಪ್ಸೆಕರ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿರುವ ಈ ದಿನಗಳಲ್ಲಿ, ಇಂದಿನ ಯುವಜನರು ಗಮನಿಸ ಬೇಕಾದ ಈ ಮಹತ್ವದ ಮಾಹಿತಿಯನ್ನು ನೀಡಿದ ಲೇಖಕರನ್ನು ಅಭಿನಂದಿಸುತ್ತಾ ಈ ಸಂಬಂಧ ಇನ್ನಷ್ಟು ಮಾಹಿತಿಯನ್ನು ಇಲ್ಲಿ ನೀಡುತ್ತಿರುವೆ:

ಗಾಂಧೀಜಿ ‘ಮಾಡು ಇಲ್ಲವೆ ಮಡಿ’ ಎಂಬ ಕರೆಯನ್ನು ರಾಷ್ಟ್ರಕ್ಕೆ ನೀಡಿದ ಆಗಸ್ಟ್‌ 8ರ ಮಾರನೆಯ ದಿನ ಭೂಗತರಾದ ರಾಮಮನೋಹರ ಲೋಹಿಯಾ ಅವರ ಗುಂಪಿನಲ್ಲಿ ಇದ್ದ ಇತರ ಯುವ ಸಮಾಜವಾದಿಗಳೆಂದರೆ, ರಮಾನಂದನ ಮಿಶ್ರ, ಕಮಲಾದೇವಿ ಚಟ್ಟೋಪಾಧ್ಯಾಯ, ಸಾಣೆ ಗುರೂಜಿ ಮತ್ತು ಪೂರ್ಣಿಮಾ ಬ್ಯಾನರ್ಜಿ. ಇವರೆಲ್ಲ ಮಾರುವೇಷದಲ್ಲಿ ಊರುಗಳಲ್ಲಿ ಸಂಚರಿಸುತ್ತಾ ತಾವು ಮಾಡಬೇಕಿದ್ದ ಕಾರ್ಯಾಚರಣೆಗಾಗಿ ಜನಸಂಪರ್ಕ ಮತ್ತು ಹಣ ಸಂಗ್ರಹಣೆಯಲ್ಲಿ ತೊಡಗಿದ್ದರು. ಜೊತೆಗೆ ತಮ್ಮ ಗುಂಪು ಸಿದ್ಧಪಡಿಸುತ್ತಿದ್ದ ಕರಪತ್ರಗಳನ್ನು ಹಂಚುತ್ತಿದ್ದರು. ಈ ಸಂದರ್ಭದಲ್ಲಿ ಲೋಹಿಯಾ ಬರೆದ ಪ್ರಮುಖ ಕರಪತ್ರಗಳೆಂದರೆ, ‘ಕ್ರಾಂತಿಗಾಗಿ ಸಿದ್ಧತೆ’, ‘ಹೋರಾಟದ ಮುನ್ನಡೆ’ ಮತ್ತು ‘ಸ್ವಯಮಾಡಳಿತ ಹೇಗೆ?’. ಇದೆಲ್ಲದರ ಪರಿಣಾಮವೇ ‘ಕಾಂಗ್ರೆಸ್ ರೇಡಿಯೊ’ ಸ್ಥಾಪನೆ. ಇದಕ್ಕಾಗಿ ಲೋಹಿಯಾ ಕಲ್ಕತ್ತಾದಲ್ಲಿದ್ದ ಖ್ಯಾತ ಖಭೌತ ವಿಜ್ಞಾನಿ ಮೇಘಾನಂದ ಸಹಾ ಅವರಿಂದ ಉಪಕರಣಗಳ ಸಹಾಯ ಪಡೆದರಲ್ಲದೆ, ಭಾರತೀಯ ವಾಯುದಳದ ಮಜುಂದಾರ್ ಎಂಬ ಅಧಿಕಾರಿಯೊಬ್ಬರ ತಾಂತ್ರಿಕ ಸಹಕಾರವನ್ನೂ ಪಡೆದಿದ್ದರು.

ಸ್ವಾತಂತ್ರ್ಯ ಆಂದೋಲನದ ಯುವ ನಾಯಕರಾಗಿ ಕಲ್ಕತ್ತಾದಲ್ಲಿ ಬಹಳಷ್ಟು ಕಾಲ ನೆಲೆಸಿದ್ದ ಲೋಹಿಯಾ ಅವರಿಗೆ ಅಲ್ಲಿ ಹಲವು ವಲಯಗಳು ಮತ್ತು ಸ್ತರಗಳ ಸಂಪರ್ಕಗಳಿದ್ದವು. ಕಾಂಗ್ರೆಸ್ ಸಮಾಜವಾದಿ ಗುಂಪಿನ ಈ ಬಾನುಲಿಯಲ್ಲಿ, ದೇಶಭಕ್ತಿ ಗೀತೆಗಳು, ವಾರ್ತೆ, ಭಾಷಣಗಳು, ಘೋಷಣೆಗಳು ಮತ್ತು ಸಂದೇಶಗಳ ಜೊತೆಗೆ ಹೊರಗಿನಿಂದ ‘ಕಳ್ಳಸಾಗಣೆ’ ಮಾಡಿದ ಧ್ವನಿಮುದ್ರಣಗಳೂ ಇರುತ್ತಿದ್ದವು. ಅಂತಹ ಒಂದು ಮುಖ್ಯ ಧ್ವನಿಮುದ್ರಣವೆಂದರೆ, ಗಾಂಧಿಯವರ ಹುಟ್ಟಿದ ದಿನವಾದ ಅಕ್ಟೋಬರ್‌ 2ರ ಸಂದರ್ಭಕ್ಕಾಗಿ ಬ್ಯಾಂಕಾಕ್‍ನಿಂದ ಪಡೆದು ಪ್ರಸಾರ ಮಾಡಿದ ಸುಭಾಷ್‍ಚಂದ್ರ ಬೋಸ್ ಅವರ ಭಾಷಣ.

ADVERTISEMENT

ಬೋಸ್‌ ಅವರು ಕಾಂಗ್ರೆಸ್ ಅನ್ನು ಮಾತ್ರವಲ್ಲ ದೇಶವನ್ನೂ ತ್ಯಜಿಸುವಂತೆ ಗಾಂಧಿ ಮಾಡಿದ್ದರು ಎಂದು ಇಂದು ಪ್ರಚಾರ ಮಾಡುತ್ತಿರುವ ಮತ್ತು ಅದನ್ನು ನಂಬುತ್ತಿರುವ ಜನರ ಕಣ್ಣು ತೆರೆಸುವಂತಿರುವ ಈ ಭಾಷಣದ ಕೆಲವು ಸಾಲುಗಳು ಹೀಗಿವೆ: ‘ನಮಗೆ ರಾಷ್ಟ್ರೀಯ ಆತ್ಮಗೌರವ, ಆತ್ಮವಿಶ್ವಾಸವನ್ನು ಕಲಿಸಿದ, ಭಾರತೀಯರಿಗೆ ಅವರು ಸಲ್ಲಿಸಿರುವ ಸೇವೆಗಾಗಿ ಮತ್ತು ಸ್ವಾತಂತ್ರ್ಯ ಸಾಧನೆಗಾಗಿ ಇಡಲು ನಮಗೆ ಕಲಿಸಿದ ದೃಢ ಹೆಜ್ಜೆಗಳಿಗಾಗಿ ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದಂತಹ ಅಮೂಲ್ಯ ಕೊಡುಗೆ ಸಲ್ಲಿಸಿರುವ ಮಹಾನ್ ವ್ಯಕ್ತಿ ಮಹಾತ್ಮ ಗಾಂಧಿ... ಅವರು ತಮ್ಮ ದೇಶಭಕ್ತ ಸಂಗಾತಿಗಳೊಂದಿಗೆ ಸೆರೆಯಲ್ಲಿರುವ ಸದ್ಯದ ವಿಷಾದನೀಯ ಸಂದರ್ಭದಲ್ಲಿ ಅವರ ಕನಸನ್ನು ನನಸು ಮಾಡಲು ಅವರ ಅಭಿಮಾನಿಗಳು ಎಲ್ಲ ತ್ಯಾಗಗಳಿಗೆ ಸಿದ್ಧರಾಗಬೇಕಿದೆ’.

ಈ ಭಾಷಣದ ಪ್ರಸಾರ ಈ ಬಾನುಲಿಗೆ ಸಂಬಂಧಿಸಿದಂತೆ ಬ್ರಿಟಿಷ್ ಸರ್ಕಾರಕ್ಕೆ ಕೊನೆಯ ಎಚ್ಚರಿಕೆಯ ಗಂಟೆಯಂತೆ ಕೇಳಿಸಿತೆಂಬಂತೆ, ಶೀಘ್ರದಲ್ಲೇ ಈ ಜಾಗದ ಮೇಲೆ ಪೊಲೀಸರ ದಾಳಿಯಾಗಿ ಬಾನುಲಿ ಪ್ರಸಾರ ನಿಂತುಹೋಯಿತು. ಭೂಗತ ಕ್ರಾಂತಿಕಾರಿಗಳೆಲ್ಲ ಅಸ್ಸಾಂ ಪ್ರವೇಶಿಸಿ ನಂತರ ನೇಪಾಳ ಗಡಿ ದಾಟಿ ಹೋದರು. ಲೋಹಿಯಾ ಅವರು ಹಜಾರಿಭಾಗ್ ಸೆರೆಮನೆಯ ಗೋಡೆಯನ್ನು ಹಾರಿ ಪರಾರಿಯಾಗಿ ಯುವ ಕ್ರಾಂತಿಕಾರಿಯೆಂದು ದೇಶದಾದ್ಯಂತ ಪ್ರಸಿದ್ಧರಾಗಿದ್ದ ಇನ್ನೊಬ್ಬ ಕಾಂಗ್ರೆಸ್ ಸಮಾಜವಾದಿ ಜಯಪ್ರಕಾಶ ನಾರಾಯಣ ಅವರ ಜೊತೆ ಸೇರಿ, ಬಿಹಾರದ ಗಡಿ ಭಾಗಗಳಲ್ಲಿ ‘ಸ್ವರಾಜ್ಯ ಗ್ರಾಮ’ಗಳನ್ನೂ, ದಳಗಳನ್ನೂ ಸ್ಥಾಪಿಸಿದರು. ಆನಂತರ ಪೊಲೀಸರ ಕಣ್ತಪ್ಪಿಸಲಾಗದೆ ಇಬ್ಬರೂ ಬೇರೆ ಬೇರೆಯಾಗಿ ಬಂಧನ ಕ್ಕೊಳಗಾಗಿ ಲಾಹೋರ್‌ಕೋಟೆ ಸೆರೆಮನೆ ಸೇರಿ ಚಿತ್ರ ಹಿಂಸೆಗೆ ಒಳಗಾದದ್ದು ಈಗ ಚರಿತ್ರೆ.

‘ಕ್ವಿಟ್ ಇಂಡಿಯಾ’ ಚಳವಳಿಯನ್ನು ನೆನಪಿಸಿಕೊಳ್ಳು ತ್ತಿರುವ ಈ ಸಂದರ್ಭದಲ್ಲೇ ಈ ಚಳವಳಿಯ ಭಾಗವಾಗಿ ನಮ್ಮದೇ ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮಸ್ಥರು ತಮ್ಮದು ‘ಸ್ವರಾಜ್ಯ ಗ್ರಾಮ’ವೆಂದು ಘೋಷಿಸಿಕೊಂಡು ನಡೆಸಿದ ವೀರ ಹೋರಾಟವನ್ನೂ ನಾವು ನೆನೆಯಬೇಕು. ಬ್ರಿಟಿಷ್ ಆಡಳಿತಶಾಹಿಯ ವಿರುದ್ಧ 1942ರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂಬ ಘೋಷಣೆಯೊಂದಿಗೆ ನಡೆದ ಹೋರಾಟದ ಅಂತ್ಯದಲ್ಲಿ ಅಂತಿಮವಾಗಿ 5 ಜನ ಗಲ್ಲುಶಿಕ್ಷೆಗೂ ಮಹಿಳೆಯರೂ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಜನ ಜೀವಾವಧಿ ಶಿಕ್ಷೆಗೂ ಒಳಗಾಗಬೇಕಾಯಿತು ಎಂಬುದನ್ನು ನೆನೆಯುತ್ತಾ ಈ ಹುತಾತ್ಮರಿಗೆ, ವೀರರಿಗೆ ನಮ್ಮ ಶ್ರದ್ಧಾಂಜಲಿ ಸಲ್ಲಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.