ADVERTISEMENT

ಸಂಗತ: ಕಾವ್ಯದ ರಿಂಗಣ, ಟೀಕೆಗಳ ಬಾಣ!

ಸದನ ಲವಲವಿಕೆಯಿಂದ ಕೂಡಿರಬೇಕಾದರೆ, ಉತ್ತಮ ಚಿಂತನೆಗಳ ಜೊತೆಗೆ ಕಾವ್ಯ– ಸಾಹಿತ್ಯದಿಂದ ಒಡಗೂಡಿದ ಮಾತುಗಾರಿಕೆಯನ್ನು ಜನಪ್ರತಿನಿಧಿಗಳು ರೂಢಿಸಿಕೊಳ್ಳಬೇಕು

ಮಲ್ಲಿಕಾರ್ಜುನ ಹೆಗ್ಗಳಗಿ
Published 23 ಸೆಪ್ಟೆಂಬರ್ 2021, 20:23 IST
Last Updated 23 ಸೆಪ್ಟೆಂಬರ್ 2021, 20:23 IST
Sangatha 24092021
Sangatha 24092021   

ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು
ಉರಿ ಉರಿವುತಿದೆ ದೇಶ ನಾವಿ
ನ್ನಿರಲು ಬಾರದೆನುತ್ತ ಜನ ಬೇ
ಸರದ ಬೇಗೆಯಲಿರದಲೇ ಭೂಪಾಲ ಕೇಳೆಂದ|

ಕವಿ ಕುಮಾರವ್ಯಾಸನ ಈ ಪದ್ಯವನ್ನು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ವಿಧಾನಸಭೆಯಲ್ಲಿ ಬೆಲೆ ಏರಿಕೆ ಮೇಲೆ ನಡೆದ ಚರ್ಚೆಯ ಸಂದರ್ಭದಲ್ಲಿ ಹೇಳಿ ಸರ್ಕಾರವನ್ನು ಚುಚ್ಚಿದರು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು...

‘ಮಾಲೆಗಾರ ಸಿಳೀಮುಖನ ಪಶು
ಪಾಲಕನವೋಲ್ ಪ್ರಜೆಯ ರಕ್ಷಿಸಿ
ಮೇಲೆ ತೆಗೆವೈ ಧನವನುಳಿದಂಗಾರಕಾರಕನ
ವೋಲು ಕಡದುರು ವ್ಯಾಘ್ರನಂತೆ ವಿ
ತಾಳಿಸಲು ಪ್ರಜೆ ನಸಿಯಲರಸಿನ
ಬಾಳಿಕೆಗೆ ಸಂದೇಹವರಿಯಾ ರಾಯ ಕೇಳೆಂದ’

ADVERTISEMENT

ಕುಮಾರವ್ಯಾಸನ ಈ ಪದ್ಯವನ್ನು ಲಘುದಾಟಿಯಲ್ಲಿ ಹೇಳುವ ಮೂಲಕ ಉತ್ತರ ನೀಡಿದರು. ‘ಹೂವಾಡಿಗನು ಹೂವಿನ ಗಿಡವನ್ನು ರಕ್ಷಿಸುತ್ತಾನೆ. ಹೂವಿಗೆ ನೋವು ಕೊಡದಂತೆ ದುಂಬಿ ಜೇನು ಹೀರುತ್ತದೆ. ಪಶುಪಾಲಕನು ಗೋವನ್ನು ರಕ್ಷಿಸಿ ಹಾಲನ್ನು ಮಾತ್ರ ಕರೆದುಕೊಳ್ಳುತ್ತಾನೆ. ರಾಜನು ಪ್ರಜೆಗಳನ್ನು ರಕ್ಷಿಸದಿದ್ದರೆ ರಾಜನ ಅಸ್ತಿತ್ವ ಸಂಶಯಕ್ಕೊಳಗಾಗುತ್ತದೆ’ ಎಂಬುದು ಇದರ ತಾತ್ಪರ್ಯ.

ಸದನದಲ್ಲಿ ಕಾವ್ಯ ರಿಂಗಣಿಸಿದ್ದರಿಂದ ಜಡಗಟ್ಟಿದ ಮಾತಿನ ಮನೆಯಲ್ಲಿ ಉತ್ಸಾಹದ ಅಲೆ ಹರಡಿದ್ದಂತೂ ನಿಜ. ಸದನ ಸದಾ ಲವಲವಿಕೆಯಿಂದ ನಡೆಯಲು ಸೊಗಸಾದ ಮಾತುಗಾರಿಕೆ ಬೇಕು. ಇದು ಕಾವ್ಯ ಮತ್ತು ಸಾಹಿತ್ಯದ ಉಲ್ಲೇಖದಿಂದ ಮಾತ್ರ ಸಾಧ್ಯ.

ಶಾಸಕರಾಗಿದ್ದ ಕೆ.ಪಿ.ನಾಡಗೌಡ ಸದನದಲ್ಲಿ ಮಹಾಕವಿ ರನ್ನನ ‘ಗದಾಯುದ್ಧ’ ಕಾವ್ಯವನ್ನು ನಿರರ್ಗಳವಾಗಿ ಹೇಳುತ್ತಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ನಾಡಗೌಡರ ಕಾವ್ಯಾಸಕ್ತಿ ಕಂಡು ವಿಧಾನಸಭೆಯ ಸಭಾಭವನದಲ್ಲಿ ಶಾಸಕರಿಗಾಗಿ ಗದಾಯುದ್ಧ ಕಾವ್ಯದ ಮೇಲೆ ಉಪನ್ಯಾಸ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ನಾಡಗೌಡರು ‘ಮುಧೋಳ ರನ್ನ ಮಹಾಕವಿಯ ಹುಟ್ಟೂರು. ನಾನು ಅಲ್ಲಿಯ ಶಾಸಕ. ಮಹಾಕವಿ ನನ್ನನ್ನು ಸದಾ ಎಚ್ಚರಿಸುತ್ತಿರುತ್ತಾನೆ’ ಎಂದು ಹೇಳಿದ್ದರು.

ಕಂಪನಿಗಳ ಗಂಭೀರವಾದ ವ್ಯಾವಹಾರಿಕ ಸಭೆ ಗಳಲ್ಲಿಯೂ ಕಾವ್ಯದ ತುಣುಕು, ಸುಂದರ ನುಡಿಗಟ್ಟು, ಸಾಹಿತ್ಯದ ಝಲಕ್‌ ಇಡೀ ಸಭೆಯನ್ನು ಉತ್ಸಾಹದಿಂದ ಇಡುತ್ತದೆ. ಅಜೀಂ ಪ್ರೇಮ್‍ಜಿ ತಮ್ಮ ಕಂಪನಿಯ ಸಭೆಗಳಲ್ಲಿ ಕವಿಗಳನ್ನು ಆಮಂತ್ರಿಸಿ ಸ್ವಲ್ಪಕಾಲಮಾತನಾಡಿಸುತ್ತಾರೆ. ಈಗ ಹಲವು ಕಂಪನಿಗಳು ಈ ವಿಧಾನ ಅನುಸರಿಸತೊಡಗಿವೆ.

ಉಪಮುಖ್ಯಮಂತ್ರಿಯಾಗಿದ್ದ ಎಂ.ಪಿ.ಪ್ರಕಾಶ್ ಅವರು ಬರವಣಿಗೆಯಲ್ಲೂ ಆಸಕ್ತಿ ಹೊಂದಿದವರಾಗಿದ್ದರು. ಬರೀ ಚುನಾವಣೆ, ಅಧಿಕಾರ, ಹಣ ಗಳಿಕೆಯಲ್ಲಿ ರಾಜಕಾರಣಿಗಳು ಕಳೆದುಹೋಗುತ್ತಾರೆ. ಅವರು ಓದಿನ ಮೂಲಕ ತಮ್ಮ ವ್ಯಕ್ತಿತ್ವದ ಕ್ಷಿತಿಜವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಮ್ಮ ಕೃತಿಯೊಂದರಲ್ಲಿ ಹೇಳಿದ್ದಾರೆ. ಪ್ರಕಾಶ್ ಅವರು ಸದನದಲ್ಲಿ ನಾಟಕಗಳ ರಸವತ್ತಾದ ಸನ್ನಿವೇಶಗಳನ್ನು ಹೇಳಿ ರಂಜಿಸುತ್ತಿದ್ದರು. ಷೇಕ್ಸ್‌ಪಿಯರ್‌ನ ಜೂಲಿಯಸ್ ಸೀಜರ್ ನಾಟಕದ ಸನ್ನಿವೇಶವನ್ನು ರೋಮಾಂಚನಕಾರಿಯಾಗಿ ಹೇಳಿದ್ದರು. ರೋಮನ್ ಚಕ್ರಾಧಿಪತ್ಯದ ಅವಿವೇಕದ ಆಡಳಿತ ಕುರಿತು ಹೇಳಬಂದ ಕವಿಯೊಬ್ಬನನ್ನು ಬ್ರುಟಸ್ ಕತ್ತು ಹಿಡಿದು ಹೊರಗೆ ತಳ್ಳುತ್ತಾನೆ, ಯಾವ ಪ್ರಭುತ್ವಕ್ಕೂ ಭಿನ್ನ ಧ್ವನಿಯನ್ನು ಸಹಿಸಲಾಗದು ಎಂದಿದ್ದರು.

ಜೆ.ಎಚ್.ಪಟೇಲ್, ವೀರಪ್ಪ ಮೊಯಿಲಿ, ದೇವರಾಜ ಅರಸು ಸದನದಲ್ಲಿ ರಸವತ್ತಾಗಿ ಮಾತನಾಡುತ್ತಿದ್ದರು. ವಾಜಪೇಯಿ ತಾವೇ ಬರೆದ ಕವನಗಳನ್ನು ಲೋಕಸಭೆಯಲ್ಲಿ ವಾಚನ ಮಾಡಿ ಸುಂದರ ವಾತಾವರಣ ಸೃಷ್ಟಿಸುತ್ತಿದ್ದರು. ನೆಹರೂ ಕವಿತೆ ಬರೆಯದಿದ್ದರೂ ಕಾವ್ಯಗಳನ್ನು ಆಸ್ವಾದಿಸುತ್ತಿದ್ದರು. ಚೀನಾದ ಮಹಾನಾಯಕ ಮಾವೊ ತ್ಸೆ ತುಂಗ್, ಇಂಗ್ಲೆಂಡ್ ಪ್ರಧಾನಿಯಾಗಿದ್ದ ಚರ್ಚಿಲ್ ತಮ್ಮ ಕಾವ್ಯದ ಮೂಲಕವೇ ಸದನವನ್ನು ಸೆಳೆಯುತ್ತಿದ್ದರು.

ಕಲೆ ಸದಾ ಪ್ರತಿಪಕ್ಷದಂತೆ ಕೆಲಸ ಮಾಡುತ್ತದೆ. ಕಾವ್ಯ ಮತ್ತು ಪ್ರಭುತ್ವ ಒಂದಾಗಿ ಸಾಗಲಾರವು. ಆದರೆ ಕಾವ್ಯವು ಪ್ರಭುತ್ವಕ್ಕೆ ದಾರಿ ತೋರಿಸಬಲ್ಲದು. ಕಲೆ-ಸಾಹಿತ್ಯ ಪ್ರಭುತ್ವದ ಜಡತ್ವ ಕಳೆದು ಚಲನೆ ನೀಡುತ್ತವೆ. ಕವಿಗೆ ಅರಸುಗಿರಸುಗಳ ಹಂಗಿಲ್ಲ, ಅವನು ಅಗ್ನಿಮುಖಿ ಎಂದು ಕುವೆಂಪು ಹಾಡಿದ್ದು ಇದೇ ಕಾರಣಕ್ಕೆ.

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಅವರು ಜನಕವಿ ಎಂದೇ ಹೆಸರಾಗಿದ್ದ ನಾರಾಯಣ ಸುರ್ವೇ ಅವರ ಕವನಗಳನ್ನು ಸದನದಲ್ಲಿ ಆಗಾಗ ಹೇಳುತ್ತಿದ್ದರು. ಸುರ್ವೇ ಅವರಿಗೆ ಉನ್ನತ ಸಾಹಿತ್ಯ ಪ್ರಶಸ್ತಿಯೊಂದು ಪ್ರಕಟವಾಯಿತು. ಮುಂಬೈ ಮುನಿಸಿಪಲ್ ಸ್ಕೂಲಿನಲ್ಲಿ ಸಿಪಾಯಿಯಾಗಿ ಸುರ್ವೇ ಕೆಲಸ ಮಾಡುತ್ತಿದ್ದರು. ಅವರನ್ನು ಅಭಿನಂದಿಸಲು ಪವಾರ್ ಸ್ಕೂಲಿಗೆ ತೆರಳಿದರು. ಸುರ್ವೇ ಮುಖ್ಯಮಂತ್ರಿಯ ಸ್ವಾಗತಕ್ಕೆ ಸಿಪಾಯಿ ಸಮವಸ್ತ್ರದಲ್ಲಿ ಸಜ್ಜಾಗಿ ನಿಂತಿದ್ದರು. ಭಾವುಕರಾದ ಪವಾರ್ ‘ನೀವು ಸರಸ್ವತಿ ಪುತ್ರ. ನಿಮ್ಮ ಚರಣ ಮುಟ್ಟಿ ನಮಸ್ಕರಿಸಿ ಧನ್ಯನಾಗುವೆ’ ಎಂದು ಸಾಷ್ಟಾಂಗ ನಮಸ್ಕಾರ ಹಾಕಿದ್ದರು. ಈ ಘಟನೆಮಹಾರಾಷ್ಟ್ರದಲ್ಲಿ ಮನೆಮಾತಾಗಿದೆ.

ವಿಧಾನ ಪರಿಷತ್ತಿಗೆ ಕಲೆ, ಸಾಹಿತ್ಯ ಕ್ಷೇತ್ರದ ಗಣ್ಯರನ್ನು ನಾಮಕರಣ ಮಾಡುವುದಕ್ಕೆ ಅವಕಾಶವಿದೆ. ಆದರೆ ಈ ಸ್ಥಾನಗಳು ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಪಾಲಾಗುತ್ತಿರುವುದು ವಿಷಾದದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.