ADVERTISEMENT

ಸಂಗತ | ಬ್ರಾಹ್ಮಣ, ಬ್ರಾಹ್ಮಣ್ಯ: ಅವಿನಾಭಾವ ಸಂಬಂಧ

ಬ್ರಾಹ್ಮಣ ಅನ್ನುವುದು ಜಾತಿವಾಚಕ ಅಲ್ಲ, ಅದೊಂದು ‘ವರ್ಣ’ವಾಚಕ

ಗ.ನಾ.ಭಟ್ಟ
Published 21 ಜೂನ್ 2021, 20:24 IST
Last Updated 21 ಜೂನ್ 2021, 20:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಜಾತಿಗಳಲ್ಲಿರುವ ಬ್ರಾಹ್ಮಣ್ಯ ತೊಲಗಿಸಿ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ಲೇಖನದಲ್ಲಿ (ಪ್ರ.ವಾ., ಜೂನ್‌ 20) ಮೂಡ್ನಾಕೂಡು ಚಿನ್ನಸ್ವಾಮಿ, ಅರವಿಂದ ಚೊಕ್ಕಾಡಿ ಮತ್ತು ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್ ದಾಸ್ ಅವರು ಬ್ರಾಹ್ಮಣ್ಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಖ್ಯವಾಗಿ ಮೂಡ್ನಾಕೂಡು ಅವರ ‘ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ’ ಕುರಿತಾದ ಹೇಳಿಕೆ ಎಷ್ಟು ಗೊಂದಲದಿಂದ ಕೂಡಿದೆಯೆಂದರೆ, ವೃಕ್ಷದಿಂದ ಬೀಜವೋ ಬೀಜದಿಂದ ವೃಕ್ಷವೋ?, ಶಬ್ದದಿಂದ ಅರ್ಥವೋ ಅರ್ಥದಿಂದ ಶಬ್ದವೋ? ಎಂದು ಕೇಳುವಂತಿದೆ. ವೃಕ್ಷಬೀಜ ನ್ಯಾಯದಂತೆ ಬೀಜ ಮೊದಲೋ ವೃಕ್ಷ ಮೊದಲೋ ಎಂಬ ಪ್ರಶ್ನೆಗೆ ನಾವಿನ್ನೂ ಉತ್ತರ ಕಂಡುಕೊಂಡಿಲ್ಲ. ಹಾಗೆಯೇ ಶಬ್ದಾರ್ಥಗಳಲ್ಲಿ ಶಬ್ದ ಮೊದಲೋ ಅರ್ಥ ಮೊದಲೋ ಎಂಬ ಪ್ರಶ್ನೆಗೂ ಉತ್ತರವಿಲ್ಲ. ಯಾಕೆ ಅಂದರೆ ಅವು ಒಂದನ್ನೊಂದು ಬಿಟ್ಟಿರಲಾರವು, ಒಟ್ಟಿಗೇ ಇರುತ್ತವೆ. ಹಾಗೆಯೇ ‘ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ’ ಕೂಡಾ ಒಂದನ್ನೊಂದು ಬಿಟ್ಟಿರಲಾರವು, ಅವು ಒಟ್ಟಿಗೇ ಇರುತ್ತವೆ. ಮೂಡ್ನಾಕೂಡು ಅವರಿಗೆ ಈ ಒಂದು ಪ್ರಾಥಮಿಕ ತಿಳಿವಳಿಕೆಯೂ ಇಲ್ಲದಿದ್ದುದು ಒಂದು ಚೋದ್ಯವೆನಿಸುತ್ತದೆ.

‘ಬ್ರಾಹ್ಮಣ’ ಅನ್ನುವುದು ಒಂದು ಜಾತಿವಾಚಕ ಅಲ್ಲ. ಅದು ಒಂದು ‘ವರ್ಣ’ವಾಚಕ. ‘ಬ್ರಾಹ್ಮಣ್ಯ’ ಅನ್ನುವುದು ವೇದ, ಉಪನಿಷತ್ತು, ದಂಡನೀತಿ, ಅರ್ಥಶಾಸ್ತ್ರ, ಧರ್ಮಶಾಸ್ತ್ರ ಮೊದಲಾದ ಮಹಾವಿದ್ಯೆ ಗಳನ್ನು (ಅಧ್ಯಾತ್ಮ ವಿದ್ಯೆ) ಒಳಗೊಂಡಿದೆ. ಅದನ್ನು ಓದಿದವರೆಲ್ಲ ಅಂದು ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತಿದ್ದರು. ಆ ನೆಲೆಯಲ್ಲಿ ಬ್ರಾಹ್ಮಣ್ಯವನ್ನು ಬಿಟ್ಟು ಬ್ರಾಹ್ಮಣರಿಲ್ಲ, ಬ್ರಾಹ್ಮಣರನ್ನು ಬಿಟ್ಟು ಬ್ರಾಹ್ಮಣ್ಯವಿಲ್ಲ. ಇವೆರಡೂ ಅವಿನಾಭಾವ ಸಂಬಂಧದಿಂದ ಕೂಡಿದ್ದು, ಇದನ್ನು ಒಡೆಯಲು ಯಾಕೆ ಪ್ರಯತ್ನಿಸುತ್ತೀರಿ?

ADVERTISEMENT

ಸ್ವಲ್ಪ ಇತಿಹಾಸ, ಪುರಾಣ, ವೇದೋಪನಿಷತ್ತುಗಳನ್ನು ತೆಗೆದು ನೋಡಿ. ಕುರಿ ಮೇಯಿಸಿಕೊಂಡು ಬದುಕುತ್ತಿದ್ದ, ತಂದೆಯೇ ಯಾರೆಂದು ಗೊತ್ತಿಲ್ಲದಿದ್ದ ಸತ್ಯಕಾಮ ಜಾಬಾಲ ಒಬ್ಬ ಋಷಿಯಾದದ್ದು, ಬ್ರಾಹ್ಮಣನಾದದ್ದು ಬ್ರಾಹ್ಮವಿದ್ಯೆಯ ಬಲದಿಂದ. ಇದನ್ನು ಯಾಕೆ ತಾವು ಮುಚ್ಚಿಡುತ್ತೀರಿ? ಶೂದ್ರನಾಗಿ ಹುಟ್ಟಿದ ವಿದುರ ಹೇಗೆ ಬ್ರಾಹ್ಮಣ್ಯವನ್ನು ಸಂಪಾದಿಸಿದ? ಕ್ಷತ್ರಿಯನಾಗಿಯೂ ಆಚಾರ್ಯ ಪದವಿಗೇರಿದ ಭೀಷ್ಮನನ್ನು ಏನೆಂದು ಗುರುತಿಸುತ್ತೀರಿ? ಆತ ಋಷಿ ಸದೃಶ ವ್ಯಕ್ತಿ ಆಗಿದ್ದ ಅಲ್ಲವೇ? ಬ್ರಾಹ್ಮಣನಾಗಿ ಹುಟ್ಟಿದ್ದ ದ್ರೋಣ ಯಾಕೆ ಅಂದು ಗೌರವವನ್ನು ಸಂಪಾದಿಸಿರ ಲಿಲ್ಲ? ಹಾಗೆಯೇ ಇನ್ನೊಬ್ಬ ವ್ಯಕ್ತಿ- ಬ್ರಾಹ್ಮಣನಾಗಿ ಹುಟ್ಟಿ, ವೇದವಿದ್ಯಾಸಂಪನ್ನನಾಗಿದ್ದ ರಾವಣ ಹೇಗೆ ಅಧಃಪತನಕ್ಕೆ ಹೋದ ಎಂದು ತಿಳಿಸುವಿರಾ?

ಬ್ರಾಹ್ಮಣರನ್ನು ಬೈಯುವುದಕ್ಕೆ ನೀವೆಲ್ಲ ಡಾ. ಭೀಮರಾವ್ ಅಂಬೇಡ್ಕರ್‌ ಅವರನ್ನು ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದೀರಿ. ಇಲ್ಲಿಯೂ ತಾವು ಅದನ್ನೇ ಮಾಡಿದ್ದೀರಿ. ಅಂಬೇಡ್ಕರ್ ಎಲ್ಲಿಯೂ ‘ಬ್ರಾಹ್ಮಣ್ಯ’ವನ್ನು ನಾಶ ಮಾಡಬೇಕೆಂದು ಹೇಳಿಲ್ಲ. ಆದರೂ ತಾವು ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು, ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ. ‘ಬ್ರಾಹ್ಮಣ್ಯವನ್ನು ನಾಶ ಮಾಡಬೇಕೆಂಬ ಕೂಗು ಅಂಬೇಡ್ಕರ್ ಕಾಲದಿಂದಲೂ ಇದೆ. ಬ್ರಾಹ್ಮಣ್ಯವು ವೈರಾಣುವಿನ ರೀತಿ ಎಲ್ಲ ಕ್ಷೇತ್ರಗಳನ್ನೂ ಆವರಿಸಿದೆ’ ಎಂದು ಮೂಡ್ನಾಕೂಡು ಅವರು ಹೇಳಿದ್ದಾರೆ. ಇದು ಸತ್ಯಕ್ಕೆ ಬಹಳ ದೂರವಾದುದು. ಅಂಬೇಡ್ಕರ್ ಹೇಳಿದ್ದನ್ನೇ ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ‘ರೈಟಿಂಗ್‌ ಆ್ಯಂಡ್‌ ಸ್ಪೀಚಸ್‌’ ಎಂಬ ತಮ್ಮ ಕೃತಿಯಲ್ಲಿ ಅಂಬೇಡ್ಕರ್ ಹೇಳಿದ್ದು- ‘ನಿಮ್ಮ ಮೇಲೆ ಒತ್ತಾಯದಿಂದ ನಾನು ದೃಢಪಟ್ಟು ಹೇಳಬಯಸುವುದೇನೆಂದರೆ, ಮನುವು ಜಾತಿಯ ನಿಯಮವನ್ನು ಸೃಷ್ಟಿಸಲೂ ಇಲ್ಲ, ಹಾಗೆ ಮಾಡಲು ಅವನಿಗೆ ಸಾಧ್ಯವೂ ಇರಲಿಲ್ಲ. ಮನುವಿಗಿಂತ ಬಹಳ ಹಿಂದೆಯೇ ಜಾತಿಪದ್ಧತಿಯಿತ್ತು. ರೂಢಿಯಲ್ಲಿದ್ದ ಅದನ್ನು ಮನು ಬರೀ ಎತ್ತಿಹಿಡಿದ ಮತ್ತು ತಾತ್ವಿಕ ಚೌಕಟ್ಟನ್ನಿತ್ತ ಮಾತ್ರ.

ಆದರೆ ಸತ್ಯವಾಗಿಯೂ ಖಂಡಿತ ವಾಗಿಯೂ ಅವನು ಈಗಿರುವ ಹಿಂದೂ ಸಮಾಜ ವ್ಯವಸ್ಥೆಯನ್ನು ನಿರ್ಮಿಸಿದವನೂ ಅಲ್ಲ, ಹಾಗೆ ಮಾಡಲು ಅವನಿಗೆ ಶಕ್ಯವೂ ಇರಲಿಲ್ಲ. ಜಾತಿಯ ಹುಟ್ಟು, ಬೆಳವಣಿಗೆ, ಹಬ್ಬುವಿಕೆ ಎಂಬುದು ಒಬ್ಬ ವ್ಯಕ್ತಿಯ ಬುದ್ಧಿವಂತಿಕೆಗೂ ಒಂದು ವರ್ಗದ ಶಕ್ತಿಗೂ ಮೀರಿ ನಿಂತ ಮಹಾನ್ ವ್ಯವಸ್ಥೆ. ಹಾಗೆಯೇ ಬ್ರಾಹ್ಮಣನು ಈ ವ್ಯವಸ್ಥೆಯನ್ನು ಸೃಷ್ಟಿ ಮಾಡಿದನೆಂಬುದೂ ಸುಳ್ಳು. ಮನುವಿನ ಬಗ್ಗೆ ಹೇಳಲು ಹೆಚ್ಚೇನೂ ಉಳಿದಿಲ್ಲ. ಈ ದುರ್ವಾದವು ಮೋಸದ್ದು; ಕಿಡಿಗೇಡಿತನದ್ದು. ತರ್ಕವಿಲ್ಲದ ಅವಿವೇಕ ಮತ್ತು ದುರುದ್ದೇಶದಿಂದ ಕೂಡಿದ್ದು ಎಂದಷ್ಟೇ ಹೇಳುವೆ. ಬ್ರಾಹ್ಮಣರು ಎಷ್ಟೋ ತಪ್ಪುಗಳನ್ನು ಮಾಡಿದ ಅಪರಾಧಿಗಳಿರಬಹುದು. ಇದ್ದಾರೆಂದೇ ಹೇಳಲು ನನಗೆ ಧೈರ್ಯವಿದೆ. ಆದರೆ ಜಾತಿಯನ್ನು ಅವರು ಬ್ರಾಹ್ಮಣೇತರ ಪ್ರಜಾವರ್ಗದ ಮೇಲೆ ಹೇರುವುದೆಂಬುದು ಬ್ರಾಹ್ಮಣರ ಶಕ್ತಿಗೆ ಮೀರಿದ್ದಾಗಿತ್ತು’.

ಕೊನೆಯದಾಗಿ ಎರಡು ಮಾತು- ಮಾತು ಮಾತಿಗೆ ಜಾತಿ ಜಾತಿ ಎಂದು ಕೂಗೆಬ್ಬಿಸುತ್ತೀರಲ್ಲ! ಹೂವುಗಳಲ್ಲಿ ಎಷ್ಟು ಜಾತಿಗಳಿವೆ ಎಂದು ಹೇಳುವಿರಾ? ನಾವು ಉಣ್ಣುವ ಅಕ್ಕಿಯಲ್ಲಿ ಎಷ್ಟು ಜಾತಿಗಳಿವೆ? ಒಂದೇ ಜಾತಿಯ ಮರದಿಂದ ಅಡವಿಯಾಗಿದೆಯೇ? ಅಲ್ಲಿ ಎಷ್ಟು ಜಾತಿಯ ಮರಗಳಿಲ್ಲ ಹೇಳುವಿರಾ? ವಿವಿಧತೆಯಲ್ಲಿ ಏಕತೆ ಅನ್ನುವುದೇ ನಮ್ಮ ದೇಶದ ಹಿರಿಮೆ. ಬಹಳ ದೂರ ಹೋಗುವುದು ಬೇಡ. ನಮ್ಮ ಶರೀರವನ್ನೇ ನೋಡಿ. ಮಣ್ಣು, ನೀರು, ಶಾಖ, ಗಾಳಿ, ರಿಕ್ತತೆ- ಹೀಗೆ ಪರಸ್ಪರ ವಿರುದ್ಧ ಸ್ವಭಾವಗಳಿಂದ ಕೂಡಿದ ಈ ಪಂಚಭೂತಗಳು ಹೇಗೆ ಒಟ್ಟಿಗೆ ಬಾಳುತ್ತಿವೆ? ಇದರಿಂದಾದರೂ ನಾವು ಕಲಿಯಬೇಡವೆ?

ಲೇಖಕ: ನಿವೃತ್ತ ಸಂಸ್ಕೃತ ಶಿಕ್ಷಕ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.