ADVERTISEMENT

ಸಂಗತ: ಕಲಿಸದೆ ಪದವಿ ನೀಡಬಹುದೇ?

ಏನನ್ನೂ ಕಲಿಸದೆ ಪದವಿ ನೀಡಿ ನಮ್ಮನ್ನು ವಂಚಿಸಬೇಡಿ ಎನ್ನುವ ನಿಲುವು ತಾಳಿರುವ ವಿದ್ಯಾರ್ಥಿ ಸಮೂಹವೂ ಇದೆ ಎಂಬುದನ್ನು ಮರೆಯಬಾರದು

ಎಚ್.ಕೆ.ಶರತ್
Published 2 ಆಗಸ್ಟ್ 2021, 19:30 IST
Last Updated 2 ಆಗಸ್ಟ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಮುಂಬರುವ ದಿನಗಳಲ್ಲಿ ಲಾಭದಾಯಕವಾಗಿ ನಡೆಸಬಹುದಾದ ಉದ್ಯಮವೆಂದರೆ ಅದು ಶಿಕ್ಷಣ ಸಂಸ್ಥೆ, ಅದರಲ್ಲೂ ವೃತ್ತಿಪರ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುವುದು. ಹುಸಿ ಆಶ್ವಾಸನೆಗಳನ್ನು ನೀಡುತ್ತ ಕಾಲೇಜಿನ ಕುರಿತು ಒಂದಿಷ್ಟು ಪ್ರಚಾರ ಮಾಡಿ, ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು, ಅವರಿಂದ ಶುಲ್ಕ ವಸೂಲಿ ಮಾಡಿದರೆ ಸಾಕು. ಆನಂತರ ಮಾಮೂಲಿ ನಂತೆ ಮತ್ತೊಮ್ಮೆ ಲಾಕ್‍ಡೌನ್ ಘೋಷಣೆಯಾಗಿ ಬಿಡುತ್ತದೆ. ಆಮೇಲೆ ಕಲಿಯಲು ವಿದ್ಯಾರ್ಥಿಗಳೇ ಆಸಕ್ತಿ ತೋರಲಿಲ್ಲ ಎನ್ನುವ ಸಬೂಬು ಹೇಳಿ ಅವರಿಗೆ ಪದವಿ ಪ್ರಮಾಣಪತ್ರ ನೀಡಿ ಸಾಗಹಾಕಿದರೆ ಸಾಕು. ಅಲ್ಲಿಗೆ ಎಲ್ಲವೂ ಮುಗಿಯಿತು. ಹೆಚ್ಚೇನು ಬಂಡವಾಳ ಹೂಡದಿದ್ದರೂ ಲಾಭ ಮಾತ್ರ ಅತ್ಯಧಿಕ’.

ಇನ್ನೇನು ಎಂಜಿನಿಯರಿಂಗ್ ಪದವೀಧರನಾಗಿ ಹೊರಹೊಮ್ಮಲಿರುವ ವಿದ್ಯಾರ್ಥಿಯೊಬ್ಬ ಫೇಸ್‍ಬುಕ್‍ನಲ್ಲಿ ಇತ್ತೀಚೆಗೆ ಬರೆದ ಪೋಸ್ಟ್‌ನ ಸಾರಾಂಶವಿದು. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆಯಲ್ಲಿ ಕೆಲ ಸೆಮಿಸ್ಟರ್‌
ಗಳಿಗೆ ಪರೀಕ್ಷೆಗಳನ್ನು ನಡೆಸುತ್ತಿದ್ದರೆ, ಮತ್ತೆ ಕೆಲ ಸೆಮಿಸ್ಟರ್‌ಗಳಿಗೆ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್‌ಗಳಿಗೆ ಪ್ರಮೋಟ್ ಮಾಡುವ ನಿರ್ಧಾರವನ್ನು ಕೆಲವು ವಿಶ್ವವಿದ್ಯಾಲಯ ಗಳು ಕೈಗೊಳ್ಳುತ್ತಿವೆ. ನಾನಾ ಕಾರಣಗಳಿಂದಾಗಿ ಆನ್‍ಲೈನ್ ಬೋಧನೆ ಪರಿಣಾಮಕಾರಿಯಾಗಿ ನಡೆ ಯದೆ ಇರುವುದರಿಂದ ಪರೀಕ್ಷೆ ನಡೆಸಬೇಕೋ ಬೇಡವೋ ಎನ್ನುವ ಕುರಿತೇ ಚರ್ಚೆ ಕೇಂದ್ರೀಕೃತವಾಗಿದೆ. ವಿದ್ಯಾರ್ಥಿ ಸಂಘಟನೆಗಳು ಕೂಡ ಪರೀಕ್ಷೆ ನಡೆಸುವುದು ಬೇಡವೆನ್ನುವ ಆಗ್ರಹವನ್ನು ಕಳೆದ ವರ್ಷದಿಂದಲೂ ಮಾಡುತ್ತಲೇ ಇವೆ.

ಕಲಿಕೆಯನ್ನು ಪರೀಕ್ಷೆ ಮತ್ತು ಅಂಕ ಗಳಿಕೆಯ ವೃತ್ತದೊಳಗೆ ಬಂಧಿಸಿರುವ ಹೊತ್ತಿನಲ್ಲಿ, ಪಾಸ್ ಆಗುವುದೆಂದರೆ ಕಲಿತಂತೆ ಎನ್ನುವ ಹುಸಿ ಆಶಾವಾದ ವಿದ್ಯಾರ್ಥಿಗಳ ಮನದಲ್ಲೂ ಮೂಡಿರುವುದು ಸ್ವಾಭಾ ವಿಕವೇ. ಕಲಿತೋ ಕಲಿಯದೆಯೋ ಹೇಗಾದರೂ ಸರಿ, ಒಟ್ಟಾರೆ ಉತ್ತಮ ಅಂಕಗಳನ್ನು ಪಡೆದು ಪದವಿ ಪೂರೈಸಿದರೆ ಸಾಕೆಂಬ ನಿಲುವಿಗೆ ಅಂಟಿಕೊಂಡಿರುವ ವಿದ್ಯಾರ್ಥಿಗಳು, ಕಲಿಸದೆಯೂ ತಮ್ಮನ್ನು ಮುಂದಿನ ಸೆಮಿಸ್ಟರ್‌ಗಳಿಗೆ ದೂಡುವ ವಿಶ್ವವಿದ್ಯಾಲಯಗಳ ನಿರ್ಧಾರಕ್ಕೆ ತಲೆಬಾಗುತ್ತ, ಒಂದು ವೇಳೆ ಪರೀಕ್ಷೆ ನಡೆಸಲು ಮುಂದಾದರೆ ಮಾತ್ರ ಪ್ರತಿರೋಧ ತೋರುತ್ತಿರುವುದು ಢಾಳಾಗಿಯೇ ಗೋಚರಿಸುತ್ತಿದೆ.

ADVERTISEMENT

ಈ ನಡುವೆ, ಪದವಿ ಶಿಕ್ಷಣ ಪಡೆಯುವುದೆಂದರೆ ಕೇವಲ ಅಂಕಪಟ್ಟಿಗಳನ್ನು ದಕ್ಕಿಸಿಕೊಳ್ಳುವುದಲ್ಲ ಎನ್ನುವ ಅರಿವಿರುವ ವಿದ್ಯಾರ್ಥಿ ಸಮೂಹದ ಅಳಲು ಆಲಿಸುವ ಸಂಯಮ ಯಾರಿಗೂ ಇರುವಂತೆ ತೋರುತ್ತಿಲ್ಲ.

‘ನಾವು ಪದವಿ ಪೂರೈಸುವುದು ತಡವಾದರೂ ಚಿಂತೆಯಿಲ್ಲ. ಪದವಿಗಾಗಿ ಅಧ್ಯಯನದ ಭಾಗವಾಗಿ ನಮಗೆ ಕಲಿಸಬೇಕಿರುವುದನ್ನೆಲ್ಲ ಮೊದಲು ಕಲಿಸಿ. ಆನಂತರ ನಾವು ಕಲಿತಿದ್ದೇವೆಯೋ ಇಲ್ಲವೋ ಎನ್ನುವು ದನ್ನು ಪರೀಕ್ಷಿಸಿ ನಮಗೆ ಪದವಿ ನೀಡಿ. ಏನನ್ನೂ ಕಲಿಸದೆ ಪದವಿ ನೀಡಿ ನಮ್ಮನ್ನು ವಂಚಿಸಬೇಡಿ’ ಎನ್ನುವ ನಿಲುವು ತಾಳಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರಬಹುದಾದರೂ, ಅವರ ಆಗ್ರಹಕ್ಕೂ ಮನ್ನಣೆ ದೊರಕಬೇಕಲ್ಲವೇ?

‘ನಾವು ಪಾವತಿಸಿರುವ ಶುಲ್ಕಕ್ಕೆ ಪ್ರತಿಯಾಗಿ ನಮಗೆ ಕಲಿಸಬೇಕಿರುವುದನ್ನು ಮೊದಲು ಕಲಿಸಿ. ನಮಗೆ ಪದವಿ ಪ್ರಮಾಣಪತ್ರ ನೀಡುವುದು ತಡವಾದರೂ ಪರವಾಗಿಲ್ಲ’ ಎಂದು ಆಗ್ರಹಿಸುವ ವಿದ್ಯಾರ್ಥಿ ಸಮೂಹದ ದನಿಯನ್ನೂ ಆಲಿಸುವ ಸಂಯಮ ಶೈಕ್ಷಣಿಕ ವಲಯದ ನೀತಿ ನಿರೂಪಕರಲ್ಲಿ ಇರಬೇಕಲ್ಲವೇ?

ಎಂಜಿನಿಯರಿಂಗ್‍ನಂತಹ ವೃತ್ತಿಪರ ಶಿಕ್ಷಣ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ತಮ್ಮ ಪದವಿ ವ್ಯಾಸಂಗದ ವೇಳೆ ಮೈಗೂಡಿಸಿಕೊಳ್ಳಲು ಸಾಧ್ಯವಿದ್ದ ಕೌಶಲಗಳನ್ನು, ಚೂರು ಪಾರಾದರೂ ದಕ್ಕಿಸಿಕೊಳ್ಳಲು ಸಾಧ್ಯವಿದ್ದ ಪ್ರಾಯೋಗಿಕ ಜ್ಞಾನವನ್ನು ಲಾಕ್‍ಡೌನ್ ಮತ್ತು ಪರಿಣಾಮಕಾರಿಯಲ್ಲದ ಆನ್‍ಲೈನ್ ಬೋಧನೆಯ ಕಾರಣದಿಂದ ಹೊಂದಲು ಸಾಧ್ಯವಾಗಿಲ್ಲ. ಎಂಜಿನಿಯರಿಂಗ್ ಪದವಿ ಓದಿನ ವೇಳೆ ಕಾಲೇಜಿನಲ್ಲೇ ಕಲಿಯಬಹುದಾಗಿದ್ದನ್ನು ಹೊರಗೆ ಕಲಿಯಲು ಮತ್ತಷ್ಟು ಹಣ ಹಾಗೂ ಸಮಯ ವಿನಿಯೋಗಿಸಬೇಕಿದೆ.

ಕಲಿಸದೆ ಪರೀಕ್ಷಿಸಬಾರದು ಎನ್ನುವುದು ಶಿಕ್ಷಕರಿಗೆ ಹೇಳಿಕೊಡುವ ನೈತಿಕ ಪಾಠಗಳಲ್ಲೊಂದು. ಈ ಸಂದರ್ಭದಲ್ಲಿ ‘ಕಲಿಸದೆ ಪದವಿ ನೀಡಬಹುದೇ’ ಎನ್ನುವ ಪ್ರಶ್ನೆಗೂ ಉತ್ತರ ಕಂಡುಕೊಳ್ಳಬೇಕಿದೆ. ಕಲಿಯಲೆಂದು ಪದವಿ ಕಾಲೇಜುಗಳ ಮೆಟ್ಟಿಲೇರಿದ ವಿದ್ಯಾರ್ಥಿಗಳ ಕೈಗೆ ಕಲಿಕೆಯ ಗುಣಮಟ್ಟ ಪ್ರತಿಬಿಂಬಿಸದ ಪದವಿ ಪ್ರಮಾಣಪತ್ರ ನೀಡುವುದು ಆತ್ಮಘಾತುಕ ನಡೆ ಆಗುವುದಿಲ್ಲವೇ?

ನಮಗೆ ಕಲಿಸಿ, ಕಲಿಸದೆ ನಮ್ಮನ್ನು ಕಾಲೇಜುಗಳಿಂದ ಹೊರದೂಡಬೇಡಿ ಎಂದು ಆಗ್ರಹಿಸುವ ಪ್ರಜ್ಞಾವಂತ ವಿದ್ಯಾರ್ಥಿ ಸಮೂಹದ ಬೆನ್ನು ತಟ್ಟುವ ಬದಲು, ಅವರನ್ನು ಅವರದೇ ಸಹಪಾಠಿಗಳಂತೆ ಗೇಲಿ ಮಾಡಲು ಶಿಕ್ಷಣ ವ್ಯವಸ್ಥೆಯೇ ಮುಂದಾಗಬಹುದೇ?

ವಿದ್ಯಾರ್ಥಿಗಳು ಕಲಿಯಲಿ ಬಿಡಲಿ, ಆ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳದೆ ನೂತನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ ಮಾಡಲು ಹೆಚ್ಚು ಮುತುವರ್ಜಿ ತೋರುವ ನೀತಿ ನಿರೂಪಕರು ಕಾಯಲು ಹೊರಟಿರುವುದು ಯಾರ ಹಿತ? ವಿದ್ಯಾರ್ಥಿಗಳದ್ದು ಎಂದು ಭಾವಿಸಲು ಸಕಾರಣಗಳಿವೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.