ADVERTISEMENT

ಸಂಗತ: ಪರೀಕ್ಷಾ ಭಯದಿಂದ ಮಕ್ಕಳ ಆತ್ಮಹತ್ಯೆ– ಪರೀಕ್ಷೆ, ನಕಲು, ನಿರ್ವಹಣೆ ಸವಾಲು

ಡಾ.ಎಚ್.ಬಿ.ಚಂದ್ರಶೇಖರ್
Published 22 ನವೆಂಬರ್ 2022, 7:10 IST
Last Updated 22 ನವೆಂಬರ್ 2022, 7:10 IST
ಸಂಗತ
ಸಂಗತ   

ಈ ಬಾರಿಯ ಮಕ್ಕಳ ದಿನಾಚರಣೆಯ ಹಿಂದಿನ ಕೆಲ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆದ ಎರಡು ಪ್ರಕರಣಗಳು ಪೋಷಕರಲ್ಲಿ ತಲ್ಲಣ ಸೃಷ್ಟಿಸಿವೆ. ನವೆಂಬರ್ 8ರಂದು ಒಬ್ಬ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ನಕಲು ಮಾಡುವುದು ಶಿಕ್ಷಕರ ಗಮನಕ್ಕೆ ಬಂದು, ಅವರು ಅವನನ್ನು ತರಗತಿಯಿಂದ ಹೊರಗೆ ಕಳುಹಿಸಿ, ಅರ್ಧ ಗಂಟೆ ಕಾಯಲು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆ ವಿದ್ಯಾರ್ಥಿಗೆ ಏನು ಅನ್ನಿಸಿತೋ ಏನೋ ಹತ್ತಿರದ ಅಪಾರ್ಟ್‌ಮೆಂಟ್‌ ಏರಿ ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನ ದೊಡ್ಡಬಾಣಸವಾಡಿ ಶಾಲೆಯೊಂದರ 10ನೇ ತರಗತಿಯ ಒಬ್ಬ ವಿದ್ಯಾರ್ಥಿನಿಯು ಕಿರುಪರೀಕ್ಷೆಯಲ್ಲಿ ನಕಲು ಮಾಡುವಾಗ ಶಿಕ್ಷಕರಿಗೆ ಸಿಕ್ಕಿಬಿದ್ದಳು. ಶಿಕ್ಷಕರು ಅವಳನ್ನು ಎಲ್ಲರ ಎದುರು ಅವಮಾನಿಸಿದರು. ನೊಂದ ಆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಳು. ಆಕೆ ಪೋಷಕರಿಗೆ ಬರೆದ ಪತ್ರದಲ್ಲಿ ‘ಶಾಲೆಯಲ್ಲಿ ನಡೆದ ಘಟನೆಯನ್ನು ಮರೆಯಲು ಸಾಧ್ಯ ಆಗ್ತಾ ಇಲ್ಲ ಮತ್ತು ಅಪರಾಧಿ ಪ್ರಜ್ಞೆಯಿಂದ ಹೊರಬರಲು ಆಗ್ತಾ ಇಲ್ಲ’ ಎಂದು ತಿಳಿಸಿದ್ದಳು.

‘ಪರೀಕ್ಷೆ, ಕಿರು ಪರೀಕ್ಷೆಗಳಲ್ಲಿ ನಕಲು ಮಾಡುವುದು ತಪ್ಪು. ಇಂತಹ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯಿಂದ ಡಿಬಾರ್ ಮಾಡಿ ಹೊರಗೆ ಕಳಿಸುವುದು ಶಿಕ್ಷಕರ ತಪ್ಪಲ್ಲ. ಇಷ್ಟು ಚಿಕ್ಕ ವಿಷಯಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ಮಕ್ಕಳನ್ನು ಸರಿಯಾಗಿ ಬೆಳೆಸಬೇಕು’ ಎಂಬ ಅಭಿಪ್ರಾಯವನ್ನು ಹೆಚ್ಚಿನವರು ವ್ಯಕ್ತಪಡಿಸುತ್ತಾರೆ. ಈ ವಾದ ಏನಾದರೂ ಇರಲಿ, ಕೆಲವು ಮಕ್ಕಳು ಸೂಕ್ಷ್ಮವಾಗಿ ಇರುತ್ತಾರೆ ಎಂಬುದೂ ಸತ್ಯ. ಮಕ್ಕಳಲ್ಲಿನ ವೈಯಕ್ತಿಕ ಭಿನ್ನತೆಯನ್ನು ನಾವು ಒಪ್ಪಿಕೊಳ್ಳಲೇಬೇಕು.

ADVERTISEMENT

ಕಿರುಪರೀಕ್ಷೆ ಅಥವಾ ಪರೀಕ್ಷೆಗಳಲ್ಲಿ ಮಕ್ಕಳು ನಕಲು ಮಾಡುವಾಗ ಸಿಕ್ಕಿಹಾಕಿಕೊಂಡರೆ ಅದನ್ನೇ ಒಂದು ಮಹಾ ಅಪರಾಧ ಎಂದು ಬಿಂಬಿಸುವುದು ಸರಿಯಲ್ಲ. ಬೆಳವಣಿಗೆಯ ಹಾದಿಯಲ್ಲಿ ಮಕ್ಕಳು ತಪ್ಪು ಮಾಡುವುದು ಸಹಜ. ಈ ರೀತಿ ಸ್ವಲ್ಪ ಹಾದಿ ತಪ್ಪುವ ಮಕ್ಕಳನ್ನು ಸಂತೈಸಿ, ತಿಳಿವಳಿಕೆ ನೀಡಿ, ಅವರಿಗೆ ಸೂಕ್ತ ರೀತಿಯಲ್ಲಿ ಆಪ್ತ ಸಮಾಲೋಚನೆ ಮಾಡುವುದು ಸರಿಯಾದ ಕ್ರಮವಾಗಿದೆ.

ಸಾಮಾನ್ಯವಾಗಿ ಸ್ನೇಹಿತರು, ಸಹಪಾಠಿಗಳ ಎದುರು ಮಕ್ಕಳಿಗೆ ಅವಮಾನವಾಗುವಂತೆ ನಡೆದುಕೊಳ್ಳಬಾರದು. ಮಕ್ಕಳು ನಕಲು ಮಾಡುವಂತಹ ತಪ್ಪುಗಳನ್ನು ಮಾಡಿದ ಸಂದರ್ಭದಲ್ಲಿ ಖಾಸಗಿಯಾಗಿ ಅವರೊಂದಿಗೆ ಆಪ್ತ ಸಮಾಲೋಚನೆ ಮಾಡಬೇಕು. ಎಲ್ಲರೆದುರು ಅವಮಾನಿತರಾದ ಸನ್ನಿವೇಶದಲ್ಲಿಮಕ್ಕಳಲ್ಲಿ ತೀವ್ರವಾದ ಹತಾಶೆ, ನೋವು, ಖಿನ್ನತೆಯ ಭಾವನೆಗಳು ಆವರಿಸಿ, ಮನಸ್ಸು ಜರ್ಜರಿತ
ವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಅವರ ಮಾನಸಿಕ ಸ್ಥಿತಿ ತುಂಬಾ ಸೂಕ್ಷ್ಮವಾಗಿರುತ್ತದೆ.

ಅನಪೇಕ್ಷಿತ ಘಟನೆಗಳು ನಡೆದ ನಂತರದ ಕೆಲವು ಗಂಟೆ ಮಕ್ಕಳು ಒಂಟಿಯಾಗಿ ಇರಲು ಬಿಡದೆ ಶಿಕ್ಷಕರು ಅಥವಾ ಸಿಬ್ಬಂದಿ ಜೊತೆಯಾಗಿದ್ದು ಅವರೊಂದಿಗೆ ಸಮಯ ಕಳೆಯಬೇಕು. ಅವರನ್ನು ಆಪ್ತವಾಗಿ ನಡೆಸಿಕೊಂಡು, ಸೂಕ್ತ ತಿಳಿವಳಿಕೆ ನೀಡಿ, ಸಾಂತ್ವನ ಹೇಳಬೇಕು. ಪೋಷಕರನ್ನು ಶಾಲೆ– ಕಾಲೇಜಿಗೆ ಕರೆಸಿಕೊಂಡು ಅವರಿಗೂ ಮಕ್ಕಳೊಂದಿಗೆ ಯಾವ ರೀತಿಯಲ್ಲಿ ಒಡನಾಡಬೇಕು ಎಂದು ತಿಳಿಸಬೇಕು.

ಚಿಕ್ಕ ವಯಸ್ಸಿನಿಂದ ಪೋಷಕರಿಂದ ಭಾವನಾತ್ಮಕ ಭದ್ರತೆ ದೊರೆಯದ ಮಕ್ಕಳು ಮಾನಸಿಕವಾಗಿ ದುರ್ಬಲರಾಗಿರುವ ಸಂಭವ ಹೆಚ್ಚಾಗಿರುತ್ತದೆ. ಒಂದೆಡೆ, ಪೋಷಕರಿಂದ ಅತಿಯಾದ ಶೈಕ್ಷಣಿಕ ಸಾಧನೆಯ ನಿರೀಕ್ಷೆ, ಇನ್ನೊಂದೆಡೆ, ಶಾಲೆಯಲ್ಲಿ ಶಿಕ್ಷಕರ ನಿರೀಕ್ಷೆಗಳು, ಮತ್ತೊಂದೆಡೆ, ಸಹಪಾಠಿಗಳೊಂದಿಗಿನಸ್ಪರ್ಧೆಗಳನ್ನು ಮಕ್ಕಳು ಎದುರಿಸುತ್ತಾರೆ. ಇಂತಹ ಸನ್ನಿವೇಶಗಳು ದುರ್ಬಲ ಮನಸ್ಸಿನ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತವೆ.

ವಿದ್ಯಾರ್ಥಿಗಳು ಪರೀಕ್ಷೆ, ಕಿರು ಪರೀಕ್ಷೆಗಳಲ್ಲಿ ನಕಲು ಮಾಡುವುದು, ತರಗತಿಯಲ್ಲಿ ಅಶಿಸ್ತು ತೋರುವಂತಹ ತಪ್ಪುಗಳನ್ನು ಮಾಡಿದಾಗ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿ ಅವರೊಂದಿಗೆ ಯಾವ ರೀತಿಯಲ್ಲಿ ವರ್ತಿಸಬೇಕು ಎಂಬ ಕುರಿತು ಮಾರ್ಗಸೂಚಿ
ಗಳನ್ನು ರೂಪಿಸುವುದು ಮಕ್ಕಳ ಹಿತದೃಷ್ಟಿಯಿಂದ ಅಗತ್ಯವಾದ ಕ್ರಮ.

ಆನೆಗಳು ತಮ್ಮ ಮರಿಗಳನ್ನು ಪೋಷಣೆ ಮಾಡಿದಂತೆ ಮನುಷ್ಯರೂ ತಮ್ಮ ಮಕ್ಕಳನ್ನು ಪೋಷಣೆ ಮಾಡಬೇಕು ಎಂದು ಹೇಳಲಾಗುತ್ತದೆ. ಇದನ್ನು ‘ಎಲಿಫೆಂಟ್ ಪೇರೆಂಟಿಂಗ್’ ಎಂದು ಕರೆಯಲಾಗುತ್ತದೆ.

ಆನೆಗಳು ತಮ್ಮ ಮರಿಗಳನ್ನು ಬಹಳ ಜತನದಿಂದ ಕಾಪಾಡಿ, ಬೆಳೆಸುತ್ತವೆ. ಆನೆಗಳು ಗರ್ಭದಲ್ಲಿ ಸುಮಾರು ಎರಡು ವರ್ಷ ಮರಿಗಳನ್ನು ಹೊತ್ತು, ಜನನದ ನಂತರ ಅವುಗಳಿಗೆ ಉತ್ತಮ ಆಹಾರ ನೀಡಿ, ಅವಶ್ಯವಾದ ಉಪಯುಕ್ತ ಕೌಶಲಗಳನ್ನು ಕಲಿಸುತ್ತವೆ. ಮರಿಗಳಿಗೆ ಇಡೀ ಹಿಂಡು ಬೆಂಬಲವಾಗಿ ನಿಲ್ಲುತ್ತದೆ. ಮರಿಗಳು ತೊಂದರೆಯಲ್ಲಿದ್ದಾಗ, ತಾಯಿ ಆನೆ ಪ್ರೀತಿಯಿಂದ ನೆರವಿಗೆ ಧಾವಿಸಿ, ಆಸರೆ ನೀಡುತ್ತದೆ. ಮನುಷ್ಯರೂ ಮಕ್ಕಳ ಪಾಲನೆಯ ವಿಷಯದಲ್ಲಿ ಆನೆಗಳನ್ನು ಅನುಸರಿಸಬೇಕು. ಮಕ್ಕಳು ಸಂಕಷ್ಟ, ದುಃಖದಲ್ಲಿದ್ದಾಗಭಾವನಾತ್ಮಕ ಬೆಂಬಲ ನೀಡಿ, ಪ್ರೀತಿಯಿಂದ ರಕ್ಷಿಸಬೇಕು.

ತಮ್ಮ ಮಕ್ಕಳು ಶೈಕ್ಷಣಿಕ ಅಥವಾ ಕ್ರೀಡೆಗಳಲ್ಲಿ ತೋರುವ ಸಾಧನೆ, ಸಾಮರ್ಥ್ಯಗಳನ್ನೂ ಪೋಷಕರು ಪ್ರೋತ್ಸಾಹಿಸಬೇಕು. ಪ್ರೀತಿ, ಸಹನೆಯಿಂದ ಭಾವನಾತ್ಮಕವಾಗಿ ಅವರನ್ನು ಬೆಸೆಯಬೇಕು. ಆನೆಯ ಪೋಷಣೆ, ಪಾಲನೆಯ ರೀತಿಯನ್ನು ಪೋಷಕರು ಮತ್ತು ಶಿಕ್ಷಕರು ಅಳವಡಿಸಿಕೊಳ್ಳುವ ಮೂಲಕ ಮಕ್ಕಳನ್ನು ರಕ್ಷಿಸಿಕೊಂಡು, ಅವರನ್ನು ಆಪ್ತವಾಗಿ ಬೆಳೆಸಲು ಕಲಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.