ADVERTISEMENT

ಸಂಗತ: ಪ್ರಸ್ತುತ ಸಮಾಜದಂತೆ ಚಿತ್ರರಂಗದಲ್ಲೂ ಈಗ ಕಲುಷಿತ ಗಾಳಿ

ಅರುಚಿಯೇ ಅಭಿಜಾತ ಅಭಿರುಚಿಯೇ?

​ಪ್ರಜಾವಾಣಿ ವಾರ್ತೆ
Published 27 ಮೇ 2021, 19:30 IST
Last Updated 27 ಮೇ 2021, 19:30 IST
Sangat 28-05-21
Sangat 28-05-21   

ನಾವೀಗ ತುಂಬಾ ಬದಲಾದ ಕಾಲಘಟ್ಟದಲ್ಲಿ ಇದ್ದೇವೆ. ಬದಲಾವಣೆಯೇ ಬದುಕು ಎನ್ನುವುದನ್ನು ನಾವು ಒಪ್ಪಿಕೊಳ್ಳಬಹುದಾದರೂ ಅಂಥ ರೂಪಾಂತರಕ್ಕೂ ಮಿತಿ ಎಂಬುದು ಒಂದಿರುವುದಿಲ್ಲವೇನು?

ನಾನು ಬೆಳಿಗ್ಗೆ ವಾಯುವಿಹಾರಕ್ಕೆ ಹೋದಾಗಲೆಲ್ಲಾ, ಆರೇಳು ದಶಕಗಳನ್ನು ದಾಟಿದವರು ‘ಕಾಲ ಕುಲಗೆಟ್ಟು ಹೋಯ್ತು’ ಎಂದೇ ಬಹಳ ಕೆಟ್ಟದಾಗಿ ಟೀಕಿಸುತ್ತಾರೆ. ವಾಸ್ತವವಾಗಿ ಇದು ನಿಜವೇ? ಕಾಲ ಕೆಟ್ಟಿದೆಯೋ... ಇಲ್ಲಾ... ಜನರೇ ಕೆಟ್ಟು ಹೋಗಿದ್ದಾರೋ?! ಯಾವುದು ಸರಿ?

ಇಂದಿನ ದಿನಮಾನಗಳು ಹದಗೆಟ್ಟಿವೆ ಎಂದೇ ಒಪ್ಪಿಕೊಳ್ಳೋಣ. ಹಾಗಿದ್ದರೆ ಹಿಂದೆಯೂ ಇಂಥ ದಿನಗಳು ಇದ್ದಿರಲಿಲ್ಲವೇನು? ಆಗ ಹಿರಿಯರು ಅನ್ನಿಸಿಕೊಂಡವರು ಕಿರಿಯರ ಬಗ್ಗೆ ಹೀಗೇ ಆಡಿಕೊಂಡಿದ್ದರೇನು? ಇಂತಹ ಚರ್ಚೆಗಳು ಯಾವತ್ತೂ ಕುತೂಹಲಕರವೆ. ಎಲ್ಲೆಡೆ ಈಗ ಕಲುಷಿತ ಗಾಳಿ! ಪ್ರಸ್ತುತ ಸನ್ನಿವೇಶಗಳೇ ಹಾಗೆ, ಸಮಾಜದಲ್ಲೂ ಅಷ್ಟೇ...

ADVERTISEMENT

ಇದಕ್ಕೆ ನಿದರ್ಶನವಾಗಿ ಕನ್ನಡ ಚಿತ್ರಗೀತೆಗಳನ್ನೇ ತೆಗೆದುಕೊಳ್ಳೋಣ. ಬಸ್ಸಿನಲ್ಲಿ ಪ್ರಯಾಣಿಸುತ್ತಿರಲಿ, ಆಟೊದಲ್ಲಿ ಹೋಗುತ್ತಿರಲಿ, ಹೋಟೆಲ್‌ಗಳಲ್ಲಾಗಲಿ, ಬೀದಿಯ ಉತ್ಸವಗಳಲ್ಲಾಗಲಿ, ಸಾಂಸ್ಕೃತಿಕ ಸಮಾರಂಭಗಳಲ್ಲಾಗಲಿ ನಮ್ಮ ಅಭಿರುಚಿಗೆ ಸರಿ ಎನ್ನಿಸದ ಎಷ್ಟೋ ಕಲುಷಿತ ಗೀತೆಗಳು, ಅಶ್ಲೀಲ ಹಾಡುಗಳು ಮೂಡಿ ಬರುತ್ತಿರುತ್ತವೆ. ನಾವು ಸುಮ್ಮನೆ ಕೇಳಿಸಿಕೊಳ್ಳುತ್ತೇವೆ.

‘ಅಪ್ಪ ಲೂಸಾ? ಅಮ್ಮ ಲೂಸಾ?’ ಎಂದೋ ‘ಅಲ್ಲಾಡ್ಸು ಅಲ್ಲಾಡ್ಸು’ ಎಂದೋ ‘ನೈನ್ಟಿ ಹೊಡಿ’ ಎಂದೋ ‘ಎಣ್ಣೆ ನಂದು, ಸೋಡಾ ನಿಂದು’ ಎಂದೋ... (ಇಂಥ ಸಮೃದ್ಧ ಹಾಡುಗಳು ಈಗಿನವರಿಗೆ ಬಹಳಪ್ರಿಯ!) ಎಲ್ಲೆಲ್ಲೂ ಮೊಳಗುತ್ತಿರುತ್ತವೆ.

‘ಹಳೇ ಪಾತ್ರೆ... ಹಳೇ ಪೇಪರ್‌...’ ಎಂದೋ ‘ಪೌಡರ್ ಹಾಕ್ಕೋ... ತಲೆ ಬಾಚ್ಕೋ...’ ಎಂದೋ ನಮಗಿಷ್ಟ ಇರಲಿ ಇಲ್ಲದಿರಲಿ ಸುತ್ತಮುತ್ತಅನುರಣಿಸುತ್ತಿರುತ್ತವೆ.

ಅರವತ್ತು, ಎಪ್ಪತ್ತರ ದಶಕಗಳ ಕನ್ನಡ ಚಿತ್ರಗೀತೆಗಳು ಹೀಗಿರಲಿಲ್ಲ. ಅಲ್ಲಿ ಶುದ್ಧ ಸಾಹಿತ್ಯವಿತ್ತು. ಅಪ್ಪಟ ಸಂಗೀತವಿತ್ತು. ಅಭಿರುಚಿಯೂ ಇತ್ತು. ಈಗ ಎಲ್ಲವೂ ತಲೆಕೆಳಗಾಗಿವೆ. ಮನೋಧೈರ್ಯವೇ ಬದಲಾಗಿ ಹೋಗಿದೆ. ಯಾರದು ಸರಿ? ಯಾರದು ತಪ್ಪು?

ಹಿಂದೆ ಗೀತ ರಚನಕಾರರ ಬಗೆಗೆ ಬಹಳ ಶ್ರೇಷ್ಠ ಭಾವನೆ ಇತ್ತು. ಅವರೆಲ್ಲಾ ಆದರ್ಶ ಕವಿಗಳಾಗಿದ್ದರು. ಡಾ. ಎಸ್.ಕೆ.ಕರೀಂ ಖಾನ್, ಹುಣಸೂರುಕೃಷ್ಣಮೂರ್ತಿ, ಸು.ರಾ.ಸೀತಾರಾಮ ಶಾಸ್ತ್ರಿ, ಜಿ.ವಿ.ಅಯ್ಯರ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಸೋಸಲೆ ಅಯ್ಯಾ ಶಾಸ್ತ್ರಿ, ನಂಜು ಕವಿ, ಚಿ.ಸದಾಶಿವಯ್ಯಮುಂತಾದವರು ಸಂಪೂರ್ಣ ಸಾಹಿತ್ಯಕ್ಕೆ ಒತ್ತು ಕೊಟ್ಟಿದ್ದರು. ಸ್ವಲ್ಪಮಟ್ಟಿಗೆ ಆರ್.ಎನ್.ಜಯಗೋಪಾಲ್, ಗೀತಪ್ರಿಯ, ವಿಜಯನಾರಸಿಂಹ, ಚಿ.ಉದಯಶಂಕರ್ ಅವರು ಕೂಡ ಅರವತ್ತರ ದಶಕದ ಹಿರಿಯರನ್ನು ಅನುಸರಿಸಿದರು, ಗೀತೆಗಳ ಭಾಷೆಯನ್ನು ಸರಳಗೊಳಿಸಿದರು. ಅವರು ಎಂದೂ ಅಭಿರುಚಿಯನ್ನು ಹಾಳು ಮಾಡಲಿಲ್ಲ.

ನನ್ನ ದೃಷ್ಟಿಯಲ್ಲಿ ಗೀತ ರಚನಕಾರ ಕೂಡ ಕವಿಯೆ. ಅವನೊಬ್ಬ ಆಶು ಕವಿ. ಆ ಗಳಿಗೆಗೆ ಸ್ಪಂದಿಸಬೇಕು, ನಾಳೆಯೋ ನಾಡಿದ್ದೋ ಬರೆದು ಕೊಡುತ್ತೇನೆ ಎಂದರೆ ಚಿತ್ರರಂಗದಲ್ಲಿನ ವೇಗೋತ್ಕರ್ಷ ನಿಲ್ಲುವುದಿಲ್ಲ. ‘ಇನ್‍ಸ್ಟೆಂಟೇನಿಯಸ್ ಪೊಯೆಮ್’ ಮೂಡಿಸಿ ಕೊಡಬೇಕು. ಹಾಗೆಂದು ಯಾರೂ ಏನೇನನ್ನೋ ಬರೆಯಲಿಲ್ಲ, ಬರೆಯುತ್ತಿರಲಿಲ್ಲ.

ಆಗೆಲ್ಲಾ ಗೀತರಚನಕಾರರೆಂದರೆ ಸಾಂಸ್ಕೃತಿಕ ರಾಯಭಾರಿಗಳು ಇದ್ದಂತೆ ಅಥವಾ ಅಭಿರುಚಿಯ ರಾಯಭಾರಿಗಳಂತೆ. ಆಗಿನ ಕವಿಗಳಿಗೆ ಈ ನೈತಿಕ ಜವಾಬ್ದಾರಿ ಇರುತ್ತಿತ್ತು. ಅದನ್ನು ಅವರು ಯಾವತ್ತೂ ಉಲ್ಲಂಘಿಸಲಿಲ್ಲ. ಲಕ್ಷ್ಮಣ ರೇಖೆಯನ್ನು ದಾಟಲಿಲ್ಲ. ಅವರೆಲ್ಲಾ ದ್ವಂದ್ವಾರ್ಥ ಗೀತೆಗಳನ್ನು ಬರೆದವರಲ್ಲ.

ಈಗ ಹಾಗಿಲ್ಲ. ಆಗ ನಿರ್ದೇಶಕರು ಸುಪ್ರೀಂ. ಅಭಿಜಾತವಾದ ಅಭಿರುಚಿ ಅವರೆಲ್ಲರಿಗೂ ಇದ್ದುದರಿಂದ ಕೆಟ್ಟ ಹಾಡುಗಳು ಬರಲಿಲ್ಲ! ಸಿನಿಮಾದಲ್ಲಿ ಸರಳ, ಸುಂದರ, ಸುಮಧುರವಾದ, ರಸಿಕ ಪ್ರೇಕ್ಷಕರಿಗೆ ಸುಲಿದ ಬಾಳೆಯ ಹಣ್ಣಿನಂತೆ ಸುಲಭವಾಗಿ ಅರ್ಥವಾಗಬಲ್ಲ ಗೀತೆಗಳನ್ನೇ ರಚಿಸಿ ಕೊಟ್ಟರು. ತನ್ಮೂಲಕ ಕನ್ನಡ ಚಲನಚಿತ್ರರಂಗದ ಸುವರ್ಣ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದ ಸಾಂಸ್ಕೃತಿಕ ಶ್ರೇಷ್ಠ ಅಧ್ಯಾಯವೇ ದಾಖಲಾಗಿದೆ.

ಈಗ ಹಾಗಲ್ಲ. ಏನಿದ್ದರೂ ನಿರ್ಮಾಪಕರೇ ಸುಪ್ರೀಂ! ಎಷ್ಟೋ ವೇಳೆ ಹೀರೊ ಆಜ್ಞಾಪಿಸುವಷ್ಟು ಚಿತ್ರರಂಗ ಬದಲಾಗಿದೆ. ಹೀಗಾಗಿ ಕಳಪೆಯ ಬರವಣಿಗೆಯು ನಾಯಿಕೊಡೆಗಳ ರೀತಿ ಹುಟ್ಟುತ್ತಿದೆ. ಈಗ ಮಾತೆತ್ತಿದರೆ ಗಾಂಧಿನಗರದಲ್ಲಿ ಮೂರು ಮಂತ್ರಗಳು ಪ್ರಸಿದ್ಧ: ‘ಸಾರ್.. ಜನ ಕೇಳ್ತಾರೆ ಸಾರ್. ಅವರು ಕೇಳಿದ್ದನ್ನು ನಾವು ಕೊಡಬೇಕು, ಕೊಡ್ತೇವೆ! ನಾವೇನೂ ಕಲೆ, ಸಾಹಿತ್ಯ, ಸಂಗೀತ ಉದ್ಧಾರ ಮಾಡಲು ಬಂದಿಲ್ಲ ಸಾರ್’. ಇದು ಅಪ್ಪಟ ಸತ್ಯ. ಸನ್ನಿವೇಶಗಳು ಹೀಗೆ ಹದಗೆಟ್ಟಿವೆ!

ಮತ್ತೊಂದು; ‘ಗಲ್ಲಾಪೆಟ್ಟಿಗೆ ತುಂಬಬೇಕಲ್ಲ ಸಾರ್. ಎಲ್ಲೆಲ್ಲಿಂದಲೋ ಸಾಲಸೋಲ ಮಾಡ್ಕೊಂಡು ನಾವು ಹಣ ತಂದಿರ್ತೇವೆ, ಅದು ವಾಪಸ್ ಬರಬೇಕಲ್ಲ ಸಾರ್’.

ಮೂರನೆಯದು: ಈ ಹೊತ್ತಿನ ಟ್ರೆಂಡ್! ಎಲ್ಲಾ ಭಾಷೆಯ ಕಲಬೆರಕೆಯ ಹಾಡು. ಅರ್ಥ ಇರಲೇಬೇಕೆಂದಿಲ್ಲ. ಇದು ನಡೆಯುತ್ತಿರುವ ಕಥೆ...

ಈಗ ಹೇಳಿ ಸಿನಿ ರಸಿಕರೇ, ಈ ಎಲ್ಲವೂ ಎಷ್ಟು ಸರಿ? ಇದು ಹೀಗೇ ಮುಂದುವರಿಯಬೇಕೆ? ಬೇಡವೇ? ಬದಲಾಗಬೇಕೆ? ಹೌದೆಂದಾದರೆ ಇದಕ್ಕೆ ಕಾಯಕಲ್ಪ ಇಲ್ಲವೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.