ADVERTISEMENT

ಸಂಗತ: ಕೋವಿಡ್ ಪರಿಸ್ಥಿತಿ, ಕುಬ್ಲರ್ ಮನಃಸ್ಥಿತಿ

ರೋಗನಿರೋಧಕಗಳು ನಮ್ಮ ಮನದೊಳಗೆ ಹುಟ್ಟಿವೆ; ಹೀಗಾಗಿ, ಅಪಾಯ ಕಾಲ ಬುಡದಲ್ಲಿದ್ದರೂ ನಮ್ಮಲ್ಲಿ ಗಾಬರಿಯೇ ಕಾಣಿಸುತ್ತಿಲ್ಲ!

ಡಾ.ಮುರಳೀಧರ ಕಿರಣಕೆರೆ
Published 29 ಏಪ್ರಿಲ್ 2021, 19:44 IST
Last Updated 29 ಏಪ್ರಿಲ್ 2021, 19:44 IST
   

ಒಂದೆಡೆ, ರೂಪಾಂತರಿ ಕೊರೊನಾ ರೋಗಾಣುಗಳ ಅಂಕೆಗೆ ನಿಲುಕದ ಪ್ರಬಲ ದಾಳಿ, ಮತ್ತೊಂದೆಡೆ, ತತ್ಸಂಬಂಧದ ಘೋರ ಫಲಿತಾಂಶದ ಅರಿವಿದ್ದರೂ ಅತೀವ ನಿರ್ಲಕ್ಷ್ಯ. ಪರಿಣಾಮ, ಪರಿಸ್ಥಿತಿಯಿಂದು ತುಂಬಾ ಬಿಗಡಾಯಿಸಿದೆ. ಅತಿ ಕ್ಷಿಪ್ರವಾಗಿ ಎಲ್ಲೆಡೆ ಪಸರಿಸುತ್ತಾ ಸಾಮುದಾಯಿಕ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಸಾಂಕ್ರಾಮಿಕವೊಂದರ ಕುರಿತಾಗಿ ಯಾವ ತೀವ್ರತೆಯಲ್ಲಿ ಭಯ ಇರಬೇಕಾಗಿತ್ತೋ ಅದು ಕಾಣಿಸುತ್ತಿಲ್ಲ.

ಭೀತಿಯಿದ್ದಿದ್ದರೆ ಒಂದಿಷ್ಟಾದರೂ ಶಿಸ್ತಿರುತ್ತಿತ್ತು. ಅಪಾಯದಿಂದ ರಕ್ಷಿಸಿಕೊಳ್ಳುವ ಮಾರ್ಗೋಪಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಒತ್ತಡವಿರುತ್ತಿತ್ತು. ಆದರೆ ಈಗ ಅವ್ಯಾವುವೂ ಆಗುತ್ತಿಲ್ಲ. ಸುತ್ತಮುತ್ತಲ ದುರಂತ ಘಟನೆಗಳು ಯಾವ ಸ್ಪಂದನೆಗಳನ್ನೂ ತಾರದ ರೀತಿಯಲ್ಲಿ ಮನಸ್ಸು ಜಡ್ಡುಗಟ್ಟಿದೆ. ವಿಶ್ವದಾದ್ಯಂತ ಮೂವತ್ತು ಲಕ್ಷಕ್ಕೂ ಅಧಿಕ ಮಂದಿ ಕೋವಿಡ್‍ಗೆ ಬಲಿಯಾಗಿರುವ ಅಂಕೆ ಸಂಖ್ಯೆಯೂ ಗಾಬರಿ ಮೂಡಿಸುತ್ತಿಲ್ಲ! ಹಲವರಲ್ಲಿ ಅದೇ ಅಶಿಸ್ತು, ಉಪೇಕ್ಷೆ, ಬೇಜವಾಬ್ದಾರಿ ವರ್ತನೆ ಎಗ್ಗಿಲ್ಲದೆ ಮುಂದುವರಿದಿದೆ.

ಕೊರೊನಾ ಪ್ರಾಯೋಜಿತ ಈ ದುಷ್ಕಾಲದಲ್ಲಿ ಮನೋವಿಜ್ಞಾನಕ್ಕೆ ಸಂಬಂಧಿಸಿದ ‘ಕುಬ್ಲರ್-ರಾಸ್ ಮಾದರಿ’ ತುಂಬಾ ಪ್ರಸ್ತುತವಾಗಿ ಕಾಣುತ್ತಿದೆ. ಈ ನಮೂನೆಯಲ್ಲಿನ ಐದನೆಯ ಹಂತದ ಮನಃಸ್ಥಿತಿ ನಿರ್ಮಾಣವೇ ಸದ್ಯದ ಸಂಕಟಗಳಿಗೆ ಮೂಲ. ಹೌದು, ಯಾವುದೇ ತರದ ವೇದನೆ, ದುಃಖದ ಘಟನೆಗಳನ್ನು ಮನಸ್ಸು ಆ ಕ್ಷಣದಲ್ಲಿ ಒಪ್ಪಿಕೊಳ್ಳುವುದಿಲ್ಲ. ವಾಸ್ತವಕ್ಕೆ ಹೊಂದಿಕೊಳ್ಳುವ ಮುನ್ನ ನಿರಾಕರಣೆ, ಕೋಪ, ಚೌಕಾಶಿ, ಖಿನ್ನತೆ ಮತ್ತು ಒಪ್ಪಿಕೊಳ್ಳುವಿಕೆ ಎಂಬ ಐದು ಹಂತಗಳನ್ನು ಹಾದು ಹೋಗುತ್ತದೆ ಎಂದು ಕುಬ್ಲರ್ ರಾಸ್ ಎಂಬ ಸ್ವಿಸ್- ಅಮೆರಿಕನ್ ಮನೋವೈದ್ಯೆ ಪ್ರತಿಪಾದಿಸಿದ್ದಾರೆ. ಆಕೆಯ ಪ್ರಸಿದ್ಧ ಪುಸ್ತಕ ‘ಆನ್ ಡೆತ್ ಆ್ಯಂಡ್ ಡೈಯಿಂಗ್’ನಲ್ಲಿ ಈ ಅಂಶಗಳು ವಿವರವಾಗಿ ಪ್ರಸ್ತಾಪಿತವಾಗಿವೆ.

ADVERTISEMENT

ಸಾವಿನ ಸನಿಹದ ವ್ಯಥೆಯ ಮಜಲುಗಳ ಬಗ್ಗೆ ಕುಬ್ಲರ್ ಹೇಳಿದ್ದರೂ ಇದು ಆಘಾತ, ಅಪಘಾತ, ದುರಂತ, ಆಪ್ತರ ಅಗಲಿಕೆ, ರೋಗ- ರುಜಿನಗಳಂತಹ ಸನ್ನಿವೇಶಗಳಿಗೂ ಅನ್ವಯವಾಗುವಂತಿದೆ. ಹಾಗಂತ ಅವಘಡಗಳು ಎದುರಾದಾಗಲೆಲ್ಲಾ ಮನಸ್ಸು ಈ ಐದು ಹಂತಗಳನ್ನು ಕ್ರಮವಾಗಿ ಹಾದು ಹೋಗುತ್ತದೆ ಎಂದಲ್ಲ. ಸಾಮಾನ್ಯವಾಗಿ ಹೀಗೆ ನಡೆಯುತ್ತದೆಯಷ್ಟೆ. ಕೆಲವೊಮ್ಮೆ ಮುಂದಿನ ಹಂತಕ್ಕೆ ದಾಟಿದ ಮನಸ್ಸು ಮತ್ತೆ ಹಿಂದಿನ ಸ್ಥಿತಿಗೆ ಮರಳಬಹುದು. ಒಂದೆರಡು ಮಜಲುಗಳು ಕಾಣಿಸದಿರಲೂಬಹುದು. ಹಾಗೆಯೇ ವಿವಿಧ ಹಂತಗಳಿಂದ ಹೊರಬರಲು ನಿರ್ದಿಷ್ಟ ಸಮಯವೆಂಬುದಿಲ್ಲ. ದುಃಖದ ತೀವ್ರತೆ, ವಾತಾವರಣ, ವ್ಯಕ್ತಿಯ ಮನೋಬಲವನ್ನು ಅವಲಂಬಿಸಿ ಕೆಲವು ನಿಮಿಷಗಳಿಂದ ಹಲವು ವರ್ಷಗಳೂ ಆಗಬಹುದು!

ಕೊರೊನಾ ವಿಷಯದಲ್ಲಿ ವರ್ಷದ ಹಿಂದೆ ಆಗಿದ್ದೂ ಹೀಗೆಯೆ. ಈ ಪಿಡುಗು ನಮ್ಮ ದೇಶಕ್ಕೂ ಹರಡುತ್ತದೆ ಎಂಬುದನ್ನು ನಾವು ಮೊದಲು ನಿರಾಕರಿಸಿದೆವು. ದೂರದ ಚೀನಾದಲ್ಲಿರುವುದು ಇಲ್ಲಿಗೆ ಹೇಗೆ ತಾನೇ ಬರಲು ಸಾಧ್ಯ ಎಂಬ ಮನೋಭಾವ. ನೋಡನೋಡುತ್ತಿದ್ದಂತೆ ನಮ್ಮ ನಾಡಿಗೂ ಕಾಲಿಟ್ಟಾಗಲೆ ನಿಜವಾದ ಬಿಸಿ ತಟ್ಟಿದ್ದು. ಆಮೇಲದು ತಿರುಗಿದ್ದು ಆಕ್ರೋಶದತ್ತ.

ವಿದೇಶದಲ್ಲಿ ಇದ್ದವರನ್ನು ದೇಶದೊಳಕ್ಕೆ ಯಾಕೆ ಬಿಟ್ಟುಕೊಳ್ಳಬೇಕಿತ್ತು? ಲಾಕ್‍ಡೌನ್‍ನಿಂದ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ, ಆರ್ಥಿಕ ಸಂಕಷ್ಟ, ಅಗತ್ಯ ವಸ್ತುಗಳು ಸಿಗುತ್ತಿಲ್ಲ... ಸಿಟ್ಟು ಹಲವು ವಿಧಗಳಲ್ಲಿ ವ್ಯಕ್ತವಾಯಿತು. ದಿನಕಳೆದಂತೆ ಚಿತ್ತವು ಚೌಕಾಶಿಯ ಹಂತಕ್ಕೇರಿತ್ತು. ಮಾಸ್ಕ್ ಹಾಕೋಣ, ಹೊರಹೋಗುವುದನ್ನು ಕಡಿಮೆ ಮಾಡೋಣ, ಕಾರ್ಯಕ್ರಮಗಳುಬೇಡ, ಹೇಗಾದರೂ ಈ ಮಹಾಸೋಂಕಿನಿಂದ ಬಚಾವಾದರೆ ಸಾಕು... ಹೀಗೆ ವಿವಿಧ ನಮೂನೆಯ ಹೊಂದಾಣಿಕೆಗಳ ಬೆನ್ನಲ್ಲೇ ಶೀತ-ಜ್ವರ ಬಂದರೂ ಸಾಕು ತಮಗೆ ಕೊರೊನಾ ಬಂತೆಂದು ಗಾಬರಿ ಬಿದ್ದರು. ಕೆಲವು ಸೋಂಕಿತರು ಖಿನ್ನತೆಗೆ ಜಾರಿ ಆತ್ಮಹತ್ಯೆಯ ದಾರಿ ಹಿಡಿದರು. ಇನ್ನು ಕೆಲವರು, ಮನೆಯ ಹೊಸಲು ದಾಟದೆ ಮಂಕಾದರು. ದಿನ ಸರಿಯುತ್ತಿದ್ದಂತೆ ಭಯ, ಖಿನ್ನತೆಯಿಂದ ಹೊರಬಂದು ವಾಸ್ತವವನ್ನು ಒಪ್ಪಿಕೊಂಡು ಕೊರೊನಾದೊಂದಿಗೆ ಬದುಕಲು ಅಣಿಯಾದರು.

ಕುಬ್ಲರ್-ರಾಸ್ ಮಾದರಿಯಂತೆ ನಿರಾಕರಣೆಯ ಹಂತದಿಂದ ಸಾಗಿಬಂದು ಪರಿಸ್ಥಿತಿಯನ್ನು ಒಪ್ಪಿಕೊಂಡು ತುಸು ಎಚ್ಚರಿಕೆಯಿಂದ ಜೀವನ ಮುನ್ನಡೆಸುತ್ತಿದ್ದಂತೆ ಒಂದನೇ ಅಲೆ ದುರ್ಬಲವಾಯಿತು. ಸಾಂಕ್ರಾಮಿಕದ ವಿರುದ್ಧ ಜಯಿಸಿದ ಸಂಭ್ರಮ ಎಲ್ಲೆಡೆ!

ಈಗ ಕೊರೊನಾದ ಎರಡನೇ ಹೆದ್ದೆರೆ ಪ್ರಬಲವಾಗಿ ಎರಗುತ್ತಿದೆ. ಸೋಂಕಿತರ ಸಂಖ್ಯೆ ಊಹೆಗೂ ನಿಲುಕದ ರೀತಿಯಲ್ಲಿ ಹಬ್ಬುತ್ತಿದೆ. ಆದರೆ ಐದನೆಯ ಮಜಲಿನಲ್ಲಿ ನೆಲೆನಿಂತ ಮನಸ್ಸು ಮುನ್ನೆಚ್ಚರಿಕೆಗಳನ್ನು ಮರೆತು ಪರಿಸ್ಥಿತಿಗೆ ಹೊಂದಿಕೊಂಡಿದೆ. ವೈರಾಣುಗಳನ್ನು ಹೆಡೆಮುರಿ ಕಟ್ಟಬೇಕಾದರೆ ಶರೀರದೊಳಗೆ ಪ್ರತಿಕಾಯಗಳು ಸೃಷ್ಟಿಯಾಗಬೇಕು. ಆದರೆ ಈಗ ರೋಗನಿರೋಧಕಗಳು ಹುಟ್ಟಿರುವುದು ಮನದೊಳಗೆ. ಹಾಗಾಗಿ ಅಪಾಯ ಕಾಲ ಬುಡದಲ್ಲಿದ್ದರೂಗಾಬರಿಯೇ ಕಾಣಿಸುತ್ತಿಲ್ಲ. ತಜ್ಞರು ಮತ್ತು ಸರ್ಕಾರ‌ವು ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಎಷ್ಟೇ ಗಂಟಲು ಹರಿದುಕೊಂಡರೂ ಇದು ತಮಗಲ್ಲವೆಂಬಂತೆ ಬೇಕಾಬಿಟ್ಟಿ ನಡೆಯೇ ಕಾಣುತ್ತಿದೆ. ದಂಡ, ಶಿಕ್ಷೆಗೂ ಕ್ಯಾರೇ ಎನ್ನುತ್ತಿಲ್ಲ.

ಇಂತಹ ವರ್ತನೆಯಿದ್ದಾಗ ಕೊರೊನಾದಂತಹ ಸಾಂಕ್ರಾಮಿಕಗಳಿಗೆ ತಡೆ ಹಾಕುವುದು ಖಂಡಿತ ಅಸಾಧ್ಯ. ಎಲ್ಲಾ ಮುಂಜಾಗ್ರತೆಗಳನ್ನು ಒಳಗೊಂಡ ಕುಬ್ಲರ್‌ರ ಐದನೇ ಹಂತದ ಮನಃಸ್ಥಿತಿ ಮಾತ್ರ ಇಂದಿನ ಗಂಭೀರ ಪರಿಸ್ಥಿತಿಯಿಂದ ನಮ್ಮನ್ನು ಮೇಲೆತ್ತಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.