ADVERTISEMENT

ಸಂಗತ: ಶತ್ರುವನ್ನು ಜಯಿಸಲು ರಕ್ಷಣಾತಂತ್ರ

ಆತ್ಮಸೈರಣೆಯ ಅನನ್ಯ ಮಾದರಿಗಳನ್ನು ಪಶುಪಕ್ಷಿಗಳು ನಮ್ಮ ಮುಂದಿಟ್ಟಿವೆ

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 15 ಜುಲೈ 2021, 2:04 IST
Last Updated 15 ಜುಲೈ 2021, 2:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರೊನಾ ತಂದಿತ್ತ ಭೀಕರತೆಯಲ್ಲಿ ದೇಶವು ಒಂದು ಬಗೆಯ ಆತಂಕದ ಚಿಪ್ಪಿನೊಳಗೆ ಸ್ತಬ್ಧಗೊಂಡಿದೆ. ನೋವು, ಹತಾಶೆ ಹೆಪ್ಪುಗಟ್ಟಿದ್ದರೂ ಧುತ್ತನೆ ಬಂದೆ ರಗಿದ ಸಂಕಟ, ಸಂಕಷ್ಟಗಳನ್ನು ಸಂಯಮದಲ್ಲಿ ಸಹಿಸಿ ಕೊಂಡೇ ಆಪತ್ತನ್ನು ದಾಟಬೇಕಾದ ಸಂದರ್ಭವಿದು.

ನೈಸರ್ಗಿಕ ವಿಕೋಪಗಳು, ಸಾಂಕ್ರಾಮಿಕ ರೋಗ ಗಳೆಲ್ಲವೂ ನಿರಂತರವಾದ ಸಹಜ ವಿದ್ಯಮಾನಗಳು. ಇಲ್ಲಿ ಅವತರಿಸಿದ ಜೀವಚರಗಳ ಪ್ರತಿಯೊಂದು ಕ್ಷಣವೂ ಆತಂಕಮಯವೇ. ಹಾಗೆ ನೋಡಿದರೆ ಮನುಷ್ಯರೇ ಹೆಚ್ಚು ಸುರಕ್ಷಿತ. ಬಹುತೇಕ ಇತರ ಜೀವಿಗಳು ತತ್ತಿಯ ಹಂತ ಅಥವಾ ಜನ್ಮವೆತ್ತುತ್ತಿದ್ದಂತೆ ಜೀವಭಯ, ಎದುರಾಗುವ ಅಳಿವು-ಉಳಿವಿನ ಹೋರಾಟದಲ್ಲಿ ಕೊನೆಗೆ ಯೋಗ್ಯ ಜೀವಿಗಳಿಗಷ್ಟೇ ಉಳಿವು. ಅಲ್ಲಿ ಬದುಕೆಂದರೆ ಅಕ್ಷರಶಃ ಹೋರಾಟ, ಹೊಂದಾಣಿಕೆ, ಮಾರ್ಪಾಟು. ಅಷ್ಟಿದ್ದೂ ಅವೆಂದಿಗೂ ರೋಗ, ಶತ್ರು, ಸಾವು-ನೋವುಗಳ ಬಗ್ಗೆ ನಮ್ಮಷ್ಟು ಭಯಭೀತವಾಗಿಲ್ಲ. ಯಾರನ್ನೂ ದೂರುತ್ತಾ ಕೂರುವು ದಿಲ್ಲ. ಅಲ್ಲೊಂದು ನಿಸ್ವಾರ್ಥ ಬದುಕಿನ ನಿರಂತರ ತುಡಿತವಿದೆ, ಹೋರಾಟವಿದೆ, ಸೈರಣೆಯ ತತ್ವವಿದೆ.

ಸಸ್ಯ, ಪ್ರಾಣಿಗಳೆಲ್ಲಾ ತಮ್ಮ ಜೀವರಕ್ಷಣೆಗಾಗಿ ವಿಶಿಷ್ಟ ತಂತ್ರೋಪಾಯಗಳನ್ನು ಅಳವಡಿಸಿಕೊಂಡಿರು ತ್ತವೆ. ಸನ್ನಿವೇಶವನ್ನು ಅಗತ್ಯಗಳಿಗೆ ಅನುಗುಣವಾಗಿ ಪಳಗಿಸಲು, ಶತ್ರುಗಳಿಂದ ಪಾರಾಗಲು, ರೋಗವನ್ನು ಹಿಮ್ಮೆಟ್ಟಿಸಲು ಜೀವಿಗಳು ಮಾಡಿಕೊಳ್ಳುವ ಮಾರ್ಪಾಟುಗಳೇ ರಕ್ಷಣಾತಂತ್ರಗಳು. ನಿರಂತರವಾಗಿ ಬದಲಾಗುವ ಪಾರಿಸರಿಕ ಒತ್ತಡಗಳನ್ನು ಸದೃಢವಾಗಿ ಮೀರಿ ನಿಲ್ಲಲು ಅಗತ್ಯವಾದ ಶಾರೀರಿಕ, ಮಾನಸಿಕ ಮತ್ತು ವರ್ತನಾ ಮಾರ್ಪಾಟುಗಳು ಪ್ರಮುಖವಾದವು. ಕೆಲವಂತೂ ಜೀವಜಗತ್ತಿನ ಸೋಜಿಗವೂ ರೋಚಕವೂ ಆಗಿದ್ದು, ಬುದ್ಧಿಶಾಲಿ ಮನುಷ್ಯ ಹೆಕ್ಕಿಕೊಳ್ಳಬಹುದಾದ, ದಕ್ಕಿಸಿಕೊಳ್ಳಬಹುದಾದ ತುಣುಕುಗಳಾಗಿವೆ...

ADVERTISEMENT

ಮರಗಪ್ಪೆಯು ದೇಹದಲ್ಲಿ ಶೀತನಿರೋಧಕ ವ್ಯವಸ್ಥೆಯನ್ನು ಹೊಂದಿದ್ದು, ಚಳಿಗಾಲದಲ್ಲಿ ಪ್ರಮುಖ ಅಂಗಗಳಾದ ಹೃದಯ ಮತ್ತು ಮೆದುಳಿನ ಚಟುವಟಿಕೆ ಗಳನ್ನು ಸ್ತಬ್ಧಗೊಳಿಸಿರುತ್ತದೆ. ಘನೀಕರಣ ಪ್ರಕ್ರಿಯೆಯಲ್ಲಿ ಕೋಶಗಳು ಸ್ಫೋಟಗೊಳ್ಳುವುದನ್ನು ತಡೆಯಲು ಕೋಶಗಳಿಗೆ ಹೆಚ್ಚುವರಿ ಗ್ಲೂಕೋಸನ್ನು ಪಂಪ್ ಮಾಡುತ್ತದೆ. ಸಮುದ್ರಸೌತೆಯಂತೂ ಕರುಳಿನಂತಹ ಒಳಾಂಗಗಳನ್ನೇ ಗುದದ್ವಾರದ ಮೂಲಕ ಶತ್ರುವಿನತ್ತ ಎಸೆದು ಪಾರಾಗುವುದಲ್ಲದೆ, ಕಳೆದುಕೊಂಡ ಅಂಗ ಗಳನ್ನು ಆರು ವಾರಗಳಲ್ಲಿ ಪುನರುತ್ಪತ್ತಿ ಮಾಡಿಕೊಳ್ಳು ತ್ತದೆ! ಇನ್ನು ಕಡಲಚಿಳ್ಳೆ (ಸೀಅನಿಮೋನ್) ಮತ್ತು ಬಾಕ್ಸರ್ ಏಡಿಗಳ ಕೂಡುಜೀವನ ವಿಧಾನದಲ್ಲಿ ಅನಿಮೋನ್ ಬಾಕ್ಸಿಂಗ್ ಕೈಚೀಲಗಳನ್ನೇ ರಕ್ಷಾಕವಚ ವನ್ನಾಗಿ ಬಳಸಿಕೊಳ್ಳುವುದಿದೆ. ಜೀವಭಕ್ಷಕಗಳಿಂದ ಪಾರಾಗಲು ಕಟಲ್‍ಫಿಷ್ ಶತ್ರುವಿನೊಟ್ಟಿಗೆ ಹೋರಾಡು ವುದಕ್ಕಿಂತ ಹೆಚ್ಚಾಗಿ ಅವಿತುಕೂರುವ ತಂತ್ರವನ್ನು ಆಯ್ಕೆ ಮಾಡಿಕೊಳ್ಳುತ್ತದೆ.

ಮಲೇಷ್ಯನ್ ಸ್ಫೋಟಕ ಇರುವೆಯು ತನ್ನ ಕಾಲೊನಿಯನ್ನು ರಕ್ಷಿಸಲು ವೀರಯೋಧನಂತೆ ಸೆಣ ಸಾಡಿ ಹುತಾತ್ಮನಾಗುತ್ತದೆ! ಎರಡು ವಿಷಗ್ರಂಥಿಗಳನ್ನು ಹೊಟ್ಟೆಯೊಡೆದು ಸ್ಫೋಟಿಸಿಕೊಂಡು ನುಸುಳು ಕೋರರ ಮೇಲೆ ದಾಳಿ ಮಾಡಿ ಪ್ರಾಣತ್ಯಾಗದಲ್ಲಿ ತನ್ನ ಬಳಗವನ್ನು ಸಂರಕ್ಷಿಸಿಕೊಳ್ಳುವ ಅಪೂರ್ವ ಮಾದರಿ ಇದೆ. ಘರ್ಷಣಾ ದುಂಬಿಯು (ಬಂಬಾರ್ಡರ್ ಬೀಟಲ್) ಗುದದಿಂದ ಹಾನಿಕಾರಕ ವಿಷಪದಾರ್ಥವನ್ನು ಚಿಮ್ಮಿಸಿ ಎದುರಾಳಿಗಳನ್ನು ಹಿಮ್ಮೆಟ್ಟಿಸುತ್ತದೆ. ಇನ್ನು, ಟೆಕ್ಸಾಸ್ ಕೋಡಿನ ಹಲ್ಲಿಯು ಭಯ-ಅಪಾಯದ ಸುಳಿವಿದ್ದಾಗ ಕಣ್ಣಲ್ಲಿ ವಿಷ ಸ್ಫುರಿಸುತ್ತದೆ. ಮೈಬಣ್ಣ ಬದಲಿಸುವುದು, ಎದೆಗೊಟ್ಟು ಹೋರಾಡುವುದೆಲ್ಲಾ ಆಗದಿದ್ದಾಗ ಕೊನೆಯ ಹೋರಾಟಾಸ್ತ್ರವಾಗಿ ಕಣ್ಣಿಂದ ರಕ್ತ ಕಾರಿ ಶತ್ರುವನ್ನು ಹಿಮ್ಮೆಟ್ಟಿಸುತ್ತದೆ!

ಐಬೀರಿಯನ್ ರಿಬ್ಬಡ್ ನೆವ್ಟ್ ಎಂಬ ಉಭಯ ವಾಸಿಯು ವಿಷದ್ರವ್ಯದೊಟ್ಟಿಗೆ ತನ್ನ ಪಕ್ಕೆಗಳನ್ನೇ ಈಟಿಯಂತೆ ಶತ್ರುವಿನತ್ತ ಎಸೆದು ಪಲಾಯನಗೈಯುತ್ತದೆ. ರೇಫಿಷ್ ತನ್ನ ಭಕ್ಷಕರೆಡೆಗೆ ಆಘಾತಕಾರಿ ಕರೆಂಟ್ ಶಾಕ್ ನೀಡುತ್ತದೆ. ಆಮೆ ಹೊರಡಿಸುವ ವಾಸನೆ, ಸುತ್ತಿಗೆತಲೆ ಮೀನಿನ ಬಲವಾದ ಹೊಡೆತಗಳು ಭಕ್ಷಕಗಳಿಂದ ತಮ್ಮನ್ನು ಬಚಾವು ಮಾಡಿಕೊಳ್ಳಲು ಅವಕ್ಕೆ ಸಾಕಾಗುತ್ತವೆ. ಹ್ಯಾಗ್‍ಫಿಷ್ ತನ್ನ ಶತ್ರುವಿನ ಕಿವಿರುಗಳ ಮೇಲೆ ಅಂಟುದ್ರವವನ್ನು ಸ್ರವಿಸಿ ಅದನ್ನು ತೆರೆಯದಂತೆ ಉಸಿರುಗಟ್ಟಿಸುತ್ತದೆ. ಮೊನಾರ್ಕ್ ಚಿಟ್ಟೆಯ ದೇಹವೇ ಕಹಿಯಾಗಿ, ಕೊಂದು ತಿನ್ನುವ ಹಕ್ಕಿಗಳಿಂದ ಅದು ತಿರಸ್ಕೃತ! ಸೈಬೀರಿಯಾದ ಕೊಕ್ಕರೆ, ಆರ್ಕಟಿಕ್ ಟರ್ನ್, ಸಾಲ್ಮೋನಾ ಮೀನುಗಳಂತಹವು ಆತಂಕಮಯ ಪರಿಸರದಿಂದ ಸುರಕ್ಷಾತಾಣಕ್ಕೆ ತಾತ್ಕಾಲಿಕ ವಲಸೆ ಕೈಗೊಳ್ಳುತ್ತವೆ.

ಏಕಕೋಶಜೀವಿ, ಬ್ಯಾಕ್ಟೀರಿಯಾ, ಶೈವಲಗಳೆಲ್ಲ ಅನಾನುಕೂಲದ ವಾತಾವರಣವಿರುವಾಗ ಮುದುರು ವಿಕೆಯ ಮೊರೆ ಹೋಗುತ್ತವೆ. ಕೆಲವು ಮೃದ್ವಂಗಿ, ಮೀನುಗಳು ವೈಶಾಖನಿದ್ದೆಯಲ್ಲಿ (ಈಸ್ಟಿವೇಶನ್) ಅಡಗಿಕೊಂಡು ಜೈವಿಕ ಚಟುವಟಿಕೆಗಳನ್ನು ಅಮಾನತಿನಲ್ಲಿಟ್ಟಿರುತ್ತವೆ. ಎಕ್ಕೆಗಿಡದ ರಸದಲ್ಲಿರುವ ರಾಸಾಯನಿಕ ಗಳು ಮೇಯುವ ಜಾನುವಾರುಗಳ ನಾಲಿಗೆ, ಕರುಳಲ್ಲಿ ಉರಿತವಾಗಿ ಕಾಡುತ್ತವೆ. ಕೆಲವು ಸಸ್ಯಗಳನ್ನು ಆವರಿಸಿ ರುವ ಮುಳ್ಳು, ಕೂದಲುಗಳೂ ಸ್ವರಕ್ಷಣಾತಂತ್ರದ ಭಾಗ ವಾಗಿರುತ್ತವೆ.

ನಿಜ, ಪ್ರಕೃತಿಯ ಪಾಠದಲ್ಲಿ ಮನುಷ್ಯ ಕಲಿಯ ಬೇಕಾದ್ದು ಬಹಳಷ್ಟಿದೆ. ತಮ್ಮತಮ್ಮ ಪ್ರಾಣ ಉಳಿಸಿ ಕೊಳ್ಳಲು ಜೀವಿಗಳು ತೋರುವ ವಿಶಿಷ್ಟ ಸಿದ್ಧತೆ, ಮಾರ್ಪಾಟು, ಹೋರಾಟ, ಆತ್ಮಸೈರಣೆ ಅಥವಾ ಪಲಾಯನ ತಂತ್ರಗಳಿಂದ ನಾವೂ ಪ್ರೇರಣೆ-ಸ್ಫೂರ್ತಿಯನ್ನು ಪಡೆಯಬಹುದಾಗಿದೆ. ಬುದ್ಧಿಶಾಲಿಗಳಾದ ನಾವು ಕೊರೊನಾದ ಸಂದಿಗ್ಧವನ್ನು ಮೀರುವಲ್ಲಿ ಧೃತಿ ಗೆಡದೆ ಮಾಸ್ಕ್, ಸ್ಯಾನಿಟೈಸರ್, ಅಂತರ ಕಾಯ್ದುಕೊಳ್ಳು ವಿಕೆ, ಅನಗತ್ಯ ತಿರುಗಾಟದ ನಿಯಂತ್ರಣ, ಲಸಿಕೆ ಪಡೆಯುವಂತಹ ರಕ್ಷಣಾತಂತ್ರಗಳಿಗೆ ಮೊರೆ ಹೋಗಿಯೇ ವೈರಾಣು ಶತ್ರುವನ್ನು ಜೈಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.