ADVERTISEMENT

ಸಂಗತ: ಬಗೆ ಬಗೆ ರೂಪಾಂತರ, ಮೌಢ್ಯಾವತಾರ

ಕೋವಿಡ್‌ ಗಂಭೀರ ಸ್ಥಿತಿ ತಲುಪಿರುವುದರಲ್ಲಿ ಮೂಢನಂಬಿಕೆಗಳ ಪಾತ್ರವೂ ದೊಡ್ಡದಿದೆ

ಡಾ.ಕೆ.ಆರ್.ಶ್ರೀಧರ್
Published 28 ಮೇ 2021, 19:30 IST
Last Updated 28 ಮೇ 2021, 19:30 IST
   

ನಂಬಿಕೆಗಳು ಮಾನವನ ದೈನಂದಿನ ಜೀವನದ ಬುನಾದಿ. ದಿನನಿತ್ಯದ ವ್ಯವಹಾರಗಳಲ್ಲಿ, ಧರ್ಮಾಚರಣೆಗಳಲ್ಲಿ ನಾವು ಕಾಣುವ ನಂಬಿಕೆಗಳು ನಮ್ಮ ವಿಶ್ವಾಸ ಹೆಚ್ಚಿಸಲು, ಧೈರ್ಯ ಕೊಡಲು ಮತ್ತು ವ್ಯವಹಾರವನ್ನು ಸುಗಮವಾಗಿ ಸಾಗಿಸಲು ಪೂರಕ. ಆದರೆ ಆರೋಗ್ಯದ ವಿಷಯದಲ್ಲಿ ಇರುವ ನಂಬಿಕೆಗಳಿಗೆ ವೈಜ್ಞಾನಿಕ ತಳಹದಿ ಇಲ್ಲದಿದ್ದಾಗ ಅವು ಮೂಢನಂಬಿಕೆಗಳಾಗಿ ವ್ಯಕ್ತಿಯ ಆರೋಗ್ಯಕ್ಕೆ ಕುತ್ತು ತರಬಹುದು. ಕೆಲವೊಮ್ಮೆ ಪ್ರಾಣಹಾನಿಯೂ ಆಗಬಹುದು.

ವೈರಾಣು ಸೋಂಕಿನ ಬಗ್ಗೆ ಇದ್ದ ಮೂಢನಂಬಿಕೆಗಳಿಗೆ ಒಂದು ಉದಾಹರಣೆಯನ್ನು ತಿಳಿಯೋಣ. ಒಂದು ಕಾಲದಲ್ಲಿ, ಸಿಡುಬು ರೋಗವು ದೇವಿಯ ಶಾಪದಿಂದ ಉಂಟಾಗುತ್ತದೆ ಎಂದು ಜನ ತಪ್ಪಾಗಿ ಭಾವಿಸಿದ್ದರು. ಮರದ ತುಂಡಿನಲ್ಲಿ ದೇವಿಯ ಪ್ರತಿಮೆಯನ್ನು ಮಾಡಿ, ಅರಿಸಿನ ಕುಂಕುಮ ಲೇಪಿಸಿ, ಪೂಜಿಸಿ ಊರ ಹೊರಗೆ ಸಾಗಿಸಿದರೆ ದೇವಿ ಊರು ಬಿಟ್ಟು ಹೋಗುತ್ತಾಳೆ, ಅದರಿಂದ ಆ ಊರಿನ ಜನರು ಸಿಡುಬು ರೋಗದಿಂದ ಮುಕ್ತರಾಗುತ್ತಾರೆ ಎಂದುಕೊಂಡಿದ್ದರು. ಬಳಿಕ, ಸಿಡುಬು ಕಾಯಿಲೆಗೆ ಒಂದು ವೈರಾಣುವಿನ ಸೋಂಕೇ ಕಾರಣ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿ, ಅದನ್ನು ನಿವಾರಿಸಲು ಲಸಿಕೆಯನ್ನು ಕಂಡುಹಿಡಿದರು. ಇಂದು ಇಡೀ ವಿಶ್ವವೇ ಸಿಡುಬು ರೋಗದಿಂದ ಮುಕ್ತವಾಗಿದೆ.

ಕುಷ್ಠರೋಗದ ಬಗ್ಗೆಯೂ ಮೂಢನಂಬಿಕೆ ಇತ್ತು. ನಾನು ಸುಮಾರು ಹತ್ತು ವರ್ಷದವನಿದ್ದಾಗ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಬಹಳ ಜನ ಸೇರಿದ್ದರು. ಜ್ಯೋತಿಷಿಯೊಬ್ಬರ ಮುಂದೆ ಹೇಳಿಕೆ ನಡೆಯುತ್ತಿತ್ತು. ಆಗ ಒಬ್ಬ ಕುಷ್ಠರೋಗಿಯನ್ನು ಕರೆತಂದು ಜ್ಯೋತಿಷಿಯ ಮುಂದೆ ನಿಲ್ಲಿಸಿದರು. ಆ ರೋಗಿಗೆ ಮೇಲಿನಿಂದ ತೀರ್ಥ ಹಾಕಿದ ಅವರು, ‘ಇವನು 14 ದಿನ ಇಲ್ಲಿ ಊಟ ಮಾಡಿದವರ ಎಂಜಲು ಬಾಳೆ ಎತ್ತಬೇಕು. ಆಗ ಶಾಪಮುಕ್ತನಾಗಿ ಕುಷ್ಠರೋಗ ನಿವಾರಣೆಯಾಗುತ್ತದೆ’ ಎಂದರು. ಅದನ್ನು ಕೇಳಿದ ನನಗೆ ಇದೆಂಥಾ ಮೂಢನಂಬಿಕೆ ಎನಿಸಿತ್ತು.

ADVERTISEMENT

ಈಗ ಕೊರೊನಾ ಸೋಂಕಿನ ಕತೆಯೂ ಇದೇ ಆಗಿದೆ. ಕೋವಿಡ್‌ಗೆ ವಿಜ್ಞಾನಿಗಳು ಔಷಧವನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾಗಲೇ ಹಲವಾರು ಸುಳ್ಳು ಸುದ್ದಿಗಳು ಜಾಲತಾಣಗಳ ಮೂಲಕ ಹರಡಲು ಪ್ರಾರಂಭವಾದವು. ಜನ ಭಯಭೀತರಾದರು. ಸೋಂಕು ಹರಡದಂತೆ ಇರಲು ಪಾಲಿಸಬೇಕಾದ ವೈಜ್ಞಾನಿಕ ಸಲಹೆಗಳನ್ನು ಮರೆತರು. ಕೊರೊನಾ ಎಂಬುದು ಏನು ಎಂದು ಗೊತ್ತಿಲ್ಲದವರೂ ಕೊರೊನಾ ಸೋಂಕಿನಿಂದ ಮುಕ್ತರಾಗುವುದು ಹೇಗೆ ಎಂದು ಸಲಹೆಗಳನ್ನು ನೀಡಲು ಪ್ರಾರಂಭಿಸಿದರು. ಮುಗ್ಧ ಜನರು ಇವುಗಳ ಸತ್ಯಾಸತ್ಯತೆಯನ್ನು ಅರಿಯದೆ ಮೌಢ್ಯಾಚರಣೆಗಳಿಗೆ ಮಾರುಹೋದರು.

ವಿಜ್ಞಾನಿಗಳ ಅವಿರತ ಶ್ರಮದಿಂದ ಕೋವಿಡ್‌ಗೆ ಲಸಿಕೆ ಕಂಡುಹಿಡಿಯಲಾಯಿತು. ಆದರೆ ಆರಂಭದಲ್ಲಿ ಆದದ್ದೇನು? ಲಸಿಕೆಯು ಹಲವಾರು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬ ಸುಳ್ಳು ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಇದರಿಂದ ಹೆಚ್ಚಿನ ಜನ ಲಸಿಕೆ ತೆಗೆದುಕೊಳ್ಳಲಿಲ್ಲ.

ಮೊನ್ನೆ ಯಾವುದೋ ಮಠದ ಕುದುರೆಯನ್ನು ಆ ಹಳ್ಳಿಯಲ್ಲಿ ಮಧ್ಯರಾತ್ರಿ ಊರ ತುಂಬಾ ಓಡಾಡಲು ಬಿಟ್ಟರೆ ಕೊರೊನಾ ಓಡಿ ಹೋಗುತ್ತದೆಂದು ಭಾವಿಸಿ ಹಾಗೆ ಮಾಡಿದರು. ಏಕೋಏನೋ ಕುದುರೆ ಅಸುನೀಗಿತು. ಅದರಿಂದ ಜನ ಇನ್ನಷ್ಟು ಭಯಭೀತರಾಗಿದ್ದಾರೆಂದು ಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟವಾಗಿತ್ತು. ಇನ್ನೊಂದು ಉದಾಹರಣೆಯಲ್ಲಿ, ಮೂವತ್ತು ಹೋತಗಳನ್ನು ಊರ ದೇವರಿಗೆ ಬಲಿ ಕೊಟ್ಟರೆ ಆ ಹಳ್ಳಿ ಕೊರೊನಾ ಮುಕ್ತವಾಗುತ್ತದೆಂದು ಜ್ಯೋತಿಷಿಯೊಬ್ಬರು ಹೇಳಿದ್ದನ್ನು ನಂಬಿ ಅಷ್ಟೂ ಹೋತಗಳನ್ನು ಬಲಿ ಕೊಡಲು ಆ ಊರ ಜನ ಕಟ್ಟಿ ಹಾಕಿದ್ದಾರೆಂಬ ಸುದ್ದಿ ಓದಿದೆ. ಬೆಳಗಾವಿಯ ಶಾಸಕರೊಬ್ಬರು ಜ್ಯೋತಿಷಿ ಹೇಳಿದರೆಂದು ಬೀದಿ ಬೀದಿಗಳಲ್ಲಿ ಹೋಮ ಮಾಡಿಸಿ ಕೊರೊನಾ ಓಡಿಸುತ್ತಿದ್ದಾರಂತೆ! ಅದೇ ರೀತಿ ಬಳ್ಳಾರಿಯಲ್ಲಿ ಜ್ಯೋತಿಷಿಗಳ ಸಲಹೆಯಂತೆ ಟನ್‍ಗಟ್ಟಲೇ ಅನ್ನವನ್ನು ದೇವರಿಗೆ ನೈವೇದ್ಯ ಮಾಡಿ ಊರ ಸುತ್ತಲೂ ಚೆಲ್ಲಿದ್ದು ವರದಿಯಾಗಿತ್ತು.

ಸುಮಾರು ಹದಿನೈದು ದಿನಗಳ ಹಿಂದೆ ನಮ್ಮಲ್ಲಿಗೆ ಬಂದ ಒಬ್ಬ ರೋಗಿಗೆ, ‘ಕೋವಿಡ್‌ ಲಸಿಕೆ ತೆಗೆದುಕೊಂಡಿದ್ದೀರಾ?’ ಎಂದು ಕೇಳಿದೆ. ಅದಕ್ಕೆ ಅವರು ‘ಸಾರ್, ಮೊನ್ನೆ ಮೂಗಿಗೆ ಲಿಂಬೆ ಹಣ್ಣಿನ ರಸ ಬಿಟ್ಟುಕೊಂಡಿದ್ದೇನೆ, ಹಾಗಾಗಿ ಲಸಿಕೆಯ ಅಗತ್ಯವಿಲ್ಲ’ ಎಂದು ಹೇಳಿದ್ದರು. ಮೊನ್ನೆ ಅವರ ಮಗ ಬಂದು, ‘ಸಾರ್, ನನ್ನ ತಂದೆ ಕೋವಿಡ್ ಆಸ್ಪತ್ರೇಲಿದ್ದಾರೆ. ಅವರಿಗೆ ನೀವು ಕೊಟ್ಟ ಔಷಧ ಕೊಡಬಹುದಾ’ ಎಂದು ಕೇಳಿದ.

ಇನ್ನೊಂದು ಕಡೆ, ಕೊರೊನಾವನ್ನು ಓಡಿಸಬೇಕೆಂದು ಊರ ಜನರೆಲ್ಲ ಗುಂಪುಗೂಡಿ, ಜ್ಯೋತಿಷಿ ಹೇಳಿದಂತೆ ‘ಅಮ್ಮನ ಜಾತ್ರೆ’ ನಡೆಸುತ್ತಿದ್ದ ದೃಶ್ಯವನ್ನು ಟಿ.ವಿ. ಚಾನೆಲ್‍ನಲ್ಲಿ ನೋಡಿದೆ.

ಕೋವಿಡ್‌ ಗಂಭೀರ ಸ್ಥಿತಿ ತಲುಪಿರುವುದರಲ್ಲಿ ಇಂತಹ ಮೂಢನಂಬಿಕೆಗಳ ಪಾತ್ರವೂ ದೊಡ್ಡದಿದೆ. ಹೀಗಾಗಿ ಕೋವಿಡ್‌ ಮಾರ್ಗಸೂಚಿ ಪಾಲನೆ ಅನುಸರಿಸುವುದು ಅತ್ಯವಶ್ಯಕ. ಮೌಢ್ಯಾಚರಣೆಗಳಿಗೆ ಮರುಳಾಗಿ ಲಸಿಕೆ ತೆಗೆದುಕೊಳ್ಳಲು ಹಿಂಜರಿಯಬಾರದು. ಸರಿಯಾಗಿ ಮಾಸ್ಕ್ ಧರಿಸಿ. ಅಂತರ ಕಾಪಾಡಿಕೊಳ್ಳಿ. ಸ್ವಚ್ಛತೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಕೊಡಿ. ಧೈರ್ಯ ಮತ್ತು ಸಮಾಧಾನದಿಂದಿರಿ. ಆಗ ಕೊರೊನಾವನ್ನು ಹಾಗೆಯೇ ಮೌಢ್ಯಾವತಾರವನ್ನೂಹೊಡೆದೋಡಿಸಲು ಸಾಧ್ಯ.

ಲೇಖಕ: ಹಿರಿಯ ಮನೋವೈದ್ಯ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.